Homeಅಂಕಣಗಳುಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

ಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -14

ಕೇವಲ ಮೂರು ನಾಲ್ಕು ವರ್ಷ ಕಳೆಯುವುದರೊಳಗೆ ಕಾಫಿಯ ಬೆಲೆ ಮೂರು ದಶಕಗಳ ಹಿಂದಿನ ಕಾಫಿ ಬೆಲೆಗೆ ಬಂದು ನಿಂತಿತ್ತು. ಕಾಫಿ ಕೊಳ್ಳುವ ಸಂಸ್ಥೆಗಳ ಸಂಖ್ಯೆ ಕೇವಲ ಕೆಲವೇ ಇದ್ದವು. ಸ್ಥಳೀಯ ವ್ಯವಹಾರಸ್ಥರು, ಕಾಫಿ ಕೊಳ್ಳುವುದನ್ನು ನಿಲ್ಲಿಸಿದ್ದರು. ಕೆಲವರು ಸಾಲದಲ್ಲಿ ಮುಳುಗಿ ಊರುಬಿಟ್ಟಿದ್ದರು.

ಕಾಫಿ ವಲಯ ನಿರಂತರ ಸಂಕಷ್ಟಕ್ಕೊಳಗಾಗಿತ್ತು. ಪ್ರಾಕೃತಿಕ ಬದಲಾವಣೆಗಳಿಂದ ಮಳೆಗಾಲದಲ್ಲಿಯೂ ಉಷ್ಣಾಂಶದ ಏರಿಕೆ ಕಂಡು ಬರತೊಡಗಿತು. ಇದು ಅರೆಬಿಕಾ ಕಾಫಿಯ ಬಹುಮುಖ್ಯ ಶತ್ರುವಾದ ಕಾಂಡ ಕೊರಕ ಕೀಟಗಳಿಗೆ ಅತ್ಯುತ್ತಮ ಸ್ಥಿತಿ. ಇದರಿಂದಾಗಿ ಅರೆಬಿಕಾ ತೋಟಗಳು ನಾಶವಾಗತೊಡಗಿದವು. ಜೊತೆಗೆ ಶುಂಠಿ ಮತ್ತಿತರ ಕೃಷಿಗಳಿಗೆ ಬಳಸಿದ ಅತಿಯಾದ ವಿಷಗಳ ಪರಿಣಾಮವೋ ಕೆಲವು ಜಾತಿಯ ಕೀಟಾಹಾರಿ ಇರುವೆಗಳು ನಾಶವಾಗಿ ಅದುವರೆಗೆ ಯಾವುದೇ ರೋಗವಿಲ್ಲದ ಸುರಕ್ಷಿತ ಬೆಳೆಯಾಗಿದ್ದ ರೊಬಸ್ಟ ಕಾಫಿಗೂ ಕಾಯಿ ಕೊರಕವೆಂಬ ಮಾರಿಯೊಂದು ಪ್ರಾರಂಭವಾಗಿ ಮೊದಲೇ ಬೆಳೆ ಇಳಿಕೆಯಿಂದಾದ ಸಂಕಷ್ಟಕ್ಕೆ ಮತ್ತೊಂದು ಸಮಸ್ಯೆ ಸೇರಿತ್ತು.

ಇಷ್ಟುವರ್ಷಗಳ ನಂತರವೂ 10102021 ರಂದು ಕಾರ್ಮಿಕ ಸಂಘಟನೆಗಳಿಂದ ಕಾಫಿ ಉದ್ಯಮ ಉಳಿಸಿ ಚಳುವಳಿ

ಎಷ್ಟೋ ತೋಟಗಳು ಕೆಲಸ ನಿಲ್ಲಿಸಬೇಕಾದ ಪರಿಸ್ಥಿತಿ ತಲೆದೋರಿತು. ನೂರಾರು ಸಣ್ಣ ಬೆಳೆಗಾರರು ಅಕ್ಷರಶಃ ಕೆಲಸ ನಿಲ್ಲಿಸಿದರು. ಇಲ್ಲವೇ ಸಿಕ್ಕಿದ ಫಸನ್ನು ಕೊಯ್ದು ಸುಮ್ಮನಾದರು. ಮದ್ಯಮ ಗಾತ್ರದ ತೋಟಗಳವರೂ ಕಾಟಾಚಾರಕ್ಕೆಂಬತೆ ಕೆಲಸ ಮಾಡಿಸಬೇಕಾದ ಸ್ಥಿತಿಯಿತ್ತು. ಮೊದಲ ಬಾರಿಗೆ ಕಾಫಿ ವಲಯದಲ್ಲಿ ಕಾರ್ಮಿಕರು ಮತ್ತು ಮಾಲಿಕರು ಒಟ್ಟಾಗಿ “ಕಾಫಿ ಉದ್ಯಮ ಉಳಿಸಿ” ಎಂದು ಬೀದಿಗಿಳಿದರು. ಎಷ್ಟೋ ಜನರು ಕೆಲಸವಿಲ್ಲದೆ  ನಗರ ಸೇರಿದರು. (ಪರಿಸ್ಥಿತಿಯ ವ್ಯಂಗ್ಯವೆಂದರೆ, ಈ ಘಟನೆ ನಡೆದದ್ದು 2003-04 ರಲ್ಲಿ ಈಗ ನಾನಿದನ್ನು ಬರೆಯುತ್ತಿರುವ 2021-22 ರಲ್ಲಿಯೂ  ಅಂದರೆ ಹದಿನೆಂಟು ವರ್ಷಗಳ ನಂತರವೂ ಅದೇ ಪರಿಸ್ಥಿತಿ,  ಕಾರ್ಮಿಕರು ಕಾಫಿ ಉದ್ಯಮ ಉಳಿಸಿ ಎಂದು ತಮ್ಮ ಮತ್ತು ಬೆಳೆಗಾರರ ಪರವಾಗಿ ಹೋರಾಟಕ್ಕಿಳಿಯುತ್ತಿದ್ದಾರೆ.- ಪೋಟೋ ನೋಡಿ)

ಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

ಎಲ್ಲ ಕಡೆಗಳಲ್ಲಿ ಇರುವಂತೆಯೇ ಪ್ರಜ್ಞಾವಂತರು, ಪ್ರಯೋಗಶೀಲರು ಇಲ್ಲಿಯೂ ಇದ್ದಾರೆ. ಆದರೆ ಇಲ್ಲಿನ ಪ್ರಾಕೃತಿಕ ಮತ್ತು ಸಾಮಾಜಿಕ ಜೊತೆಯಲ್ಲಿ ಕೃಷಿ ವೈವಿದ್ಯಗಳ ಮಿತಿಯೇನೆಂದು ಅರಿಯದ ಹೊರಗಿನ ಜನರು ಕೆಲವರು, ಇವರೆಲ್ಲ ಸುಖಜೀವಿಗಳು, ಐಷಾರಾಮಿಗಳು, ಪ್ರಕೃತಿಯ ಶೋಷಣೆ ಮಾಡಿಯೇ ಬದುಕಲು ಬಯಸುವವರು ಎಂಬಂತಹ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಮಲೆನಾಡಿನಲ್ಲಿ ಸತತ ಮಳೆ ಕಡಿಮೆಯಾಗಿ ನೀರಿಗೆ ಕೊರತೆ ಉಂಟಾದಾಗ ಹಲವು ಪ್ರಯತ್ನಗಳು ನಡೆದವು. ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯವರಾದ ರಾಮಚಂದ್ರ ಎಂಬವರು ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸ್ಟೈಪೆಂಡರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದವರು. ನಂತರ ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕೃಷಿಕರೂ ಕೂಡಾ. ಸಕಲೇಶಪುರ ತಾಲ್ಲೂಕಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ ರಂಗ ಚಟುವಟಿಕೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು, ಸಾಕ್ಷರತಾ ಆಂದೋಲನದಲ್ಲಿ ನಿರಂತರ ತೊಡಗಿಸಿಕೊಂಡವರು. ನಾವೆಲ್ಲ ಜೊತೆಯಾಗಿ ಕೆಲಸಮಾಡುತ್ತಿದ್ದೆವು.

ಅವರು ಜಲ ಸಂರಕ್ಷಣೆ ಮತ್ತು ನೀರಿಂಗಿಸುವ ವಿಚಾರದ ಕಾರ್ಯಾಗಾರಗಳನ್ನು ಆಯೋಜಿಸಿದರು. ಖ್ಯಾತ ಪರಿಸರ ತಜ್ಞ ಶ್ರೀ ಪಡ್ರೆಯವರನ್ನೂಕರೆಸಿ ಶಿಬಿರಗಳನ್ನು ನಡೆಸಿದರು. ಸಕಲೇಶಪುರ ತಾಲ್ಲೂಕಿನಾದ್ಯಂತ ಹಲವು ಕಡೆಗಳಲ್ಲಿ ಜಲ ಸಾಕ್ಷರತೆಯ ಕಾರ್ಯಕ್ರಮಗಳಾದವು. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಇದೇ ರೀತಿಯ ಪ್ರಯತ್ನಗಳು ನಡೆದವು.

ಈ ಎಲ್ಲ ವಿಚಾರಗಳ ಬಗ್ಗೆ ಪ್ರತಿಕೆಗಳಲ್ಲಿ ಹಲವಾರು ಜನರು ಲೇಖನಗಳನ್ನು ಬರೆದರು. ಕಾಫಿ ವಲಯದ ಸಮಸ್ಯೆಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಯಿತು.

ಹಾರ್ಲೆ ಎಸ್ಟೇಟಿನಲ್ಲಿ ಸುವರ್ಣ ಸಂಭ್ರಮ

ಬೆಂಗಳೂರು ದೂರದರ್ಶನ ಕೇಂದ್ರದವರು ಕಾಫಿ ಬೆಳೆಯ ಬಗ್ಗೆ ಒಂದು ಸಮಗ್ರ ಚಿತ್ರಣ ನೀಡುವ ಉದ್ದೇಶದಿಂದ ಒಂದು ಕಾರ್ಯಕ್ರಮವನ್ನು ರೂಪಿಸಿದರು. ಆಗ ಕವಿ ಸುಬ್ಬು ಹೊಲೆಯಾರ್ ಅವರು ಬೆಂಗಳೂರು ದೂರದರ್ಶನದಲ್ಲಿದ್ದರು. ಅವರು ನನ್ನನ್ನು ಸಂಪರ್ಕಿಸಿ ಒಂದು ಸಮಗ್ರ ಚಿತ್ರಣ ನೀಡುವ ಕಾರ್ಯಕ್ರಮಕ್ಕೆ ರೂಪು ರೇಷೆಯನ್ನು ಚರ್ಚಿಸಿದರು. ಅದರಂತೆ ಕಾಫಿ ಕೃಷಿಗೆ ಸಂಬಂಧ ಪಟ್ಟ ಎಲ್ಲ ವಿಭಾಗಗಳ ಸಮಸ್ಯೆಗಳನ್ನು ಬಿಂಬಿಸುವ ಹಾಗೆ ಕಾಫಿ ಬೆಳೆಗಾರರರು, ಕಾರ್ಮಿಕರು, ನೌಕಕರು, ವ್ಯಾಪಾರಿಗಳು, ಉದ್ಯಮಿಗಳು, ಕೊಮಾರ್ಕ್ ಸಂಸ್ಥೆಯವರು, ರೈತ ನಾಯಕರು ಹಾಗೂ ಕಾಫಿ ಸೀಮೆಯ ಇತರ ಉದ್ಯೋಗಿಗಳನ್ನೂ ಒಳಗೊಂಡಂತೆ ಒಂದು ಚಿತ್ರೀಕರಣ ಪಠ್ಯವನ್ನು ರೂಪಿಸಿಕೊಂಡೆವು.

ಇವರೆಲ್ಲರ ಜೊತೆಯಲ್ಲಿ ಸ್ವತಃ ಕಾಫಿ ಬೆಳೆಗಾರರರೂ ಆಗಿರುವ ಪೂರ್ಣಚಂದ್ರ ತೇಜಸ್ವಿಯವರ ದು ಪುಟ್ಟ ಸಂದರ್ಶನ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆ ಸಮಯದಲ್ಲಿ ಅವರು ಯಾವುದೇ ಟಿ.ವಿ. ಮಾದ್ಯಮಕ್ಕೆ ಸಂದರ್ಶನ ನೀಡದೆ ಏಳು ವರ್ಷಗಳಾಗಿತ್ತು. ಆದ್ದರಿಂದ ಏನನ್ನುತ್ತಾರೋ ಎಂಬ ಅಳುಕು ನಮ್ಮಲ್ಲಿತ್ತು. ಎಲ್ಲ ಕಡೆ ಚಿತ್ರೀಕರಣ ಮುಗಿಸಿ ನಾವು ಮೂಡಿಗೆರೆಗೆ ಹೋದೆವು. ತೇಜಸ್ವಿಯವರೂ ಕೂಡಾ ಅವರ ತೋಟದಲ್ಲಿ ನೀರಿನ ಕೊರತೆಯುಂಟಾಗಿ ಹರಿಯುತ್ತಿದ್ದ ಸಣ್ಣ ಕವಲಿಯೊಂದರ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ ಕೃಷಿಕರ ಸಮಸ್ಯೆಯ ಬಗ್ಗೆ ನೀವು ಮಾತಾಡಬೇಕು ಒಪ್ಪಿಕೊಂಡರು.

ದೂರದರ್ಶನಕ್ಕೆ ಸಂದರ್ಶನ ನೀಡುತ್ತಿರುವ ತೇಜಸ್ವಿಯವರು

ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ‘ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ಧಾರಿಯನ್ನು ಕಾಫಿಬೋರ್ಡನ ಕೈಗೊಪ್ಪಿಸಿ ಕುಳಿತು ಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ-ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೆಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ ಯಾವ ಸರ್ಕಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು ಎಂದರು.

ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.

ಸುವರ್ಣ ಸಂಭ್ರಮದ ದಿನ ಕಾರ್ಮಿಕರಿಗೆ ಸನ್ಮಾನ

ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ ಅವರು ನಮ್ಮ ವಿರುದ್ದವೇ ಮಾತಾಡಿದರು ಎಂದು ಜಗಳಕ್ಕೆ ಬಂದರು!

ಆದರೆ ವಾಸ್ತವದ ನೆಲೆಗಟ್ಟಿನ ಅವರ ಕೆಲವು ಮಾತುಗಳ ಅಂದು ಕೆಲವರು ಕಾಫಿ ಬೆಳೆಗಾರರರಿಗೆ ಇಷ್ಟವಾಗಲಿಲ್ಲ ಎನ್ನುವುದು ಬೇರೆ ಮಾತು. (ಈ ಬಗ್ಗೆ ನಾನು ಬೇರೆ ಕಡೆ ವಿವರವಾಗಿ ಬರೆದಿರುವುದರಿಂದ ಮತ್ತೆ ಇಲ್ಲಿ ಪ್ರಸ್ತಾಪಿಸುವುದಿಲ್ಲ)

ಆದರೆ ಈ ವಿಚಾರಗಳಿಗೆ ಇನ್ನೂ ಒಂದು ಮುಖವಿದೆ. ತೇಜಸ್ವಿಯವರು ಕಾಫಿ ಬೆಳೆಗಾರರು ಹೌದು. ಅವರ ಮಾತುಗಳಲ್ಲಿ ಒಟ್ಟಾರೆಯಾಗಿ ಕೃಷಿಯ ಬಗೆಗಿನ ಅಭಿಪ್ರಾಯಗಳು ಸರಿಯೂ ಹೌದು ಆದರೆ. ಅವರು ಕಾಫಿ ಅಥವಾ ಬೆಳೆಯನ್ನೇ ಅವಲಂಬಿಸಿ ಬದುಕುವ ಬೆಳೆಗಾರರಲ್ಲ. ಬೇರೆ ಆದಾಯ ಮೂಲಗಳ ಬೆಂಬಲವಿರುವ ಕೃಷಿಕನ ಸಮಸ್ಯೆ ಮತ್ತು ಆತ ಯೋಚಿಸುವ ರೀತಿಗೂ ಬರಿಯ ಕೃಷಿಯನ್ನೇ ನಂಬಿ ಬದುಕುವ, ಬೇರೆ ಯಾವುದೇ ಆದಾಯ ಇಲ್ಲದಿರುವವರ ಸಮಸ್ಯೆ ಮತ್ತು ಯೋಚನಾ ಕ್ರಮಕ್ಕೂ ವ್ಯತ್ಯಾಸ ಇದೆ.

ಕಾರಣಗಳು ಏನೇ ಇರಲಿ, ತಪ್ಪು ಯಾರದ್ದೇ ಆಗಿರಲಿ ಕಾಫಿ ವಲಯದಲ್ಲಿ ಬಹಳ ಸಂಕಷ್ಟದ ಪರಿಸ್ಥಿತಿ ಇತ್ತು.  ರವೀಂದ್ರನಾಥರು ತೋಟದ ಎಲ್ಲ ಕೆಲಸಗಾರರನ್ನು ಸಭೆ ಕರೆದು ಸಮಸ್ಯೆಗಳನ್ನು ವಿವರಿಸಿದರು. ಹೀಗೇ ಮುಂದುವರಿದರೆ ತೋಟ ಉಳಿಸಿಕೊಳ್ಳುವದೇ ಕಷ್ಟವಾಗಬಹುದು ಎಂದರು.

ಆಗ ಕಾರ್ಮಿಕರು ಹೌದು ಈಗಿನ ಸಂದರ್ಭ ನಮಗೂ ಅರ್ಥವಾಗಿದೆ ನಮ್ಮ ದಿನಗೂಲಿಯನ್ನು ಸ್ವಲ್ಪ ಕಡಿತಗೊಳಿಸಿ, ಈಗ ತೋಟ ಉಳಿದರೆ ಮುಂದೆ ಮತ್ತೆ ಒಳ್ಳೆಯ ದಿನಗಳು ಬರಬಹುದು ಎಂದರು.! ಶೇ ಹತ್ತರಷ್ಟು ಕಡಿಮೆ ದಿನಗೂಲಿಗೆ ಕೆಲಸಮಾಡಲು ಪ್ರಾರಂಭಿಸಿದರು. ಇದರಿಂದಾಗಿ ವರ್ಷಕ್ಕೆ ಕೆಲವು ಲಕ್ಷಗಳ ಉಳಿತಾಯವಾಗುತ್ತಿತ್ತು. ಈ ರೀತಿ ಎಲ್ಲ ಕೆಲಸಗಾರರನ್ನು ಉಳಿಸಿಕೊಂಡು ಮುಂದಿನ ಮೂರು ವರ್ಷಗಳ ಕಾಲ ತೋಟವನ್ನು ನಡೆಸಲು ಕಾರ್ಮಿಕರ ಈ ನಿರ್ಧಾರ ಸಹಕಾರಿಯಾಯಿತು.

ಮುಂದೆ ಹಾರ್ಲೆ ಎಸ್ಟೇಟಿಗೆ ಐವತ್ತು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಈ ಎಲ್ಲ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಹಬ್ಬದಂತೆ ನಡೆದ ಅಂದಿನ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ಕಾರ್ಮಿಕ ಆಯುಕ್ತರು “ಎಲ್ಲ ಕಡೆ ಇದೇ ರೀತಿಯ ವಾತಾವರಣ ಇದ್ದರೆ ನಮ್ಮ ಕೆಲಸ ಹಗುರವಾಗುತ್ತದೆ” ಎಂದರು. ಇಂದು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಶಿವಾನಂದ ತಗಡೂರ್ ಅವರೂ ಆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...