Homeಅಂಕಣಗಳುಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಬೇಸಗೆಯ ಕೊನೆಯಿಂದ ದೀಪಾವಳಿ ಹಬ್ಬದವರೆಗೆ ಅಥವಾ ಕಾಫಿಹಣ್ಣು ಕೊಯ್ಲಿನ ಸಮಯದವರೆಗೆ ತೋಟದ ಎಲ್ಲಾ ನೌಕರ, ಕಾರ್ಮಿಕರಿಗೂ ಪ್ರತಿವಾರ ಭತ್ತ ಅಥವಾ ಅಕ್ಕಿಯನ್ನು ಲಾಭ ನಷ್ಟವಿಲ್ಲದೆ ಕೊಡುತ್ತಿದ್ದರು.

- Advertisement -
- Advertisement -

ಗಣಪಯ್ಯನವರು ಹಾರ್ಲೆಗೆ ಬಂದ ಮೇಲೆ ಕೃಷಿ ವಿಸ್ತರಣೆಯ ಜೊತೆಯಲ್ಲಿ ಸುತ್ತಲಿನ ಜನರೊಡನೆ ಸಂಬಂಧಗಳನ್ನೂ ವಿಸ್ತರಿಸುತ್ತಾ ಹೋದರು. ಇದಕ್ಕೆ ಕಾರಣವೂ ಇತ್ತು.

ಗಣಪಯ್ಯ ಸಹೋದರರರು ಕೊಡಗಿನಿಂದ ಬರುವಾಗ ಅನೇಕ ಕಾರ್ಮಿಕ ಕುಟುಂಬಗಳು ಇವರೊಂದಿಗೆ ಹಾರ್ಲೆಗೆ ಬಂದರು. ಅವರಲ್ಲಿ ಕೂಲಿ ಕಾರ್ಮಿಕರು, ಮೇಸ್ತ್ರಿಗಳು, ಮೆಕ್ಯಾನಿಕ್‌ಗಳು, ಡ್ರೈವರ್‌ಗಳು, ರೈಟರ್‌ಗಳು ಎಲ್ಲರೂ ಇದ್ದರು. ಕೊಡಗಿನಲ್ಲಿ ಇದ್ದಾಗಲೇ ಇವರೆಲ್ಲರಿಗೂ ಗಣಪಯ್ಯ ತಮ್ಮ ಬಂಧುವೆನ್ನುವಂತಹ ಬಾಂಧವ್ಯ ಬೆಳೆದಿತ್ತು. ಇವರಲ್ಲಿ ಹಲವರು ಈಗ ತೀರಿಕೊಂಡಿದ್ದಾರೆ. ಕೆಲವರ ಮೊಮ್ಮಕ್ಕಳು ಇಂದಿಗೂ ಹಾರ್ಲೆ ಸುತ್ತ ಮುತ್ತ ಇದ್ದಾರೆ. ಇನ್ನು ಕೆಲವರು ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ, ಉನ್ನತ ಹುದ್ದೆ ತಲುಪಿದ್ದಾರೆ, ಉದ್ಯಮಿಗಳಾಗಿದ್ದಾರೆ.

ನಂತರದ ದಿನಗಳಲ್ಲಿಯೂ ಕೊಡಗಿನಿಂದ ಹಲವು ಕುಟುಂಬಗಳು ಗಣಪಯ್ಯನವರ ಆಶ್ರಯದಲ್ಲಿ ಸಕಲೇಶಪುರ ತಾಲ್ಲೂಕಿಗೆ ಬಂದು ಬದುಕು ಕಟ್ಟಿಕೊಂಡರು. ಕೆಲವರು ಹಾರ್ಲೆಯಲ್ಲಿ ಮತ್ತು ಅವರ ಸಹೋದರ ಕೃಷ್ಣಮೂರ್ತಿಯವರಲ್ಲಿ ಉದ್ಯೋಗ ಪಡೆದರೆ ಇನ್ನು ಕೆಲವರು ಸ್ವತಂತ್ರವಾಗಿ ಕೃಷಿಯಲ್ಲಿ ತೊಡಗಿಕೊಂಡರು.

ಆ ಕಾಲದಲ್ಲಿ ಸುತ್ತಲಿನ ಹಳ್ಳಿಯ ಕೃಷಿಕರು ಸಣ್ಣ ಪುಟ್ಟ ಹಣ ಸಹಾಯಕ್ಕಾಗಿ ಗಣಪಯ್ಯನವರಲ್ಲಿಗೆ ಬರುತ್ತಿದ್ದರು. ಇತರ ಕೃಷಿ ಸಂಬಂಧದ ಕೆಲಸಕ್ಕಾಗಿ ಬರುವವರಿದ್ದರು. ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು, ಆ ಬಾಡಿಗೆಯೂ ಯಂತ್ರಗಳ ದುರುಪಯೋಗವಾಗದಂತೆ ಹೆಸರಿಗೆ ಮಾತ್ರ ಇರುತ್ತಿತ್ತು.

ನಿಧಾನವಾಗಿ ಗಣಪಯ್ಯ ಸುತ್ತಲಿನ ಹಳ್ಳಿಯ ರೈತರಿಗೆ ಆಪದ್ಭಾಂಧವರಾಗುತ್ತ ಹೋದರು.

ಹಾರ್ಲೆ ಎಸ್ಟೇಟ್

ತುರ್ತು ಸಂದರ್ಭಗಳಲ್ಲಿ ಹಣ ಪಡೆದ ರೈತರು ಗದ್ದೆ ಕೊಯ್ಯವ ಸಮಯದಲ್ಲಿ ಅದಕ್ಕೆ ತಕ್ಕ ಭತ್ತವನ್ನು ಹಿಂದಿರುಗಿಸಬೇಕು. ಇದು ಶರತ್ತು ಜೊತೆಯಲ್ಲಿ ಹಾರ್ಲೆ ಎಸ್ಟೇಟ್‌ನಲ್ಲಿಯೂ ಗದ್ದೆಯಿದ್ದು ಅಲ್ಲೂ ಬೇಸಾಯ ನಡೆಯುತ್ತಿತ್ತು. ಈ ಎಲ್ಲಾ ಭತ್ತವನ್ನೂ ಅವರು ಒಂದಿಷ್ಟೂ ಮಾರುತ್ತಿರಲಿಲ್ಲ. ಬೇಸಗೆಯ ಕೊನೆಯಿಂದ ದೀಪಾವಳಿ ಹಬ್ಬದವರೆಗೆ ಅಥವಾ ಕಾಫಿಹಣ್ಣು ಕೊಯ್ಲಿನ ಸಮಯದವರೆಗೆ ತೋಟದ ಎಲ್ಲಾ ನೌಕರ ಕಾರ್ಮಿಕರಿಗೂ ಪ್ರತಿವಾರ ಭತ್ತ ಅಥವಾ ಅಕ್ಕಿಯನ್ನು ಲಾಭ ನಷ್ಟವಿಲ್ಲದೆ ಕೊಡುತ್ತಿದ್ದರು. ಇದರಿಂದ ಮಳೆಗಾಲದಲ್ಲಿ ಕೆಲಸಗಾರರು ಊಟಕ್ಕಿಲ್ಲದೆ ಕೂರುವುದು ತಪ್ಪುತ್ತಿತ್ತು. ಅದೇ ಭತ್ತದ ಅಕ್ಕಿಯನ್ನೇ ಅವರೂ ಊಟ ಮಾಡುತ್ತಿದ್ದುದು.

ಇವರಲ್ಲಿ ಕೆಲಸ ಕೇಳಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಿತ್ತು, ಇಲ್ಲಿ ಬಂದು ಸೇರಿದವರು ಬಿಟ್ಟು ಹೋಗುವುದಿಲ್ಲ ಎಂಬ ಮಾತು ಜನರಲ್ಲಿ ವಾಡಿಕೆಯಾಯಿತು. ಗಣಪಯ್ಯ ಕಾಫಿ ತೋಟದ ವಿಸ್ತರಣೆಯಲ್ಲಿ ತೊಡಗಿದರು. ಆಗೆಲ್ಲ ಪತ್ನಿ ದೇವಮ್ಮನವರು ಆಕ್ಷೇಪಿಸುವರು, “ಯಾಕೆ ಇಷ್ಟೊಂದು ನಮಗೆ, ಇಷ್ಟು ವರ್ಷ ನೀವು ದುಡಿದದ್ದು ಸಾಕು ಇನ್ನು ನೆಮ್ಮದಿಯಲ್ಲಿರೋಣ” ಎನ್ನುವರು. ದೇವಮ್ಮನವರ ಆರೋಗ್ಯ ಮೊದಲಿನಿಂದಲೂ ಚೆನ್ನಾಗಿರಲಿಲ್ಲ. ಕೊಡಗಿನಲ್ಲಿ ಇರುವಾಗಲೇ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳಾಗಿದ್ದವು. ನಿರಂತರ ಔಷಧಿ ಸೇವನೆ ಮುಂದುವರೆದಿತ್ತು. ಅವರಿಗೆ ಈಗಲೂ ಇದೆಲ್ಲ ಜಂಜಾಟ ಯಾಕೆ ಎಂದು ಅನ್ನಿಸುತ್ತಿತ್ತು.

ಆಗ ಗಣಪಯ್ಯ “ನಿಂಗೇನು ಗೊತ್ತು ಸುಮ್ಮನಿರು ಒಂದು ಎಕರೆ ತೋಟ ಮಾಡಿದ್ರೆ ನಾಕು ಜನರಿಗೆ ಉದ್ಯೋಗ ಆಗುತ್ತೆ. ಇಷ್ಟು ಜನ ಕೆಲಸ ಕೇಳಿಕೊಂಡು ಬರ್ತಾ ಇದ್ದಾರಲ್ಲ ಅವರು ಕಷ್ಟ ಇರುವುದರಿಂದ ಬರ್ತಾರೆ, ತಮಾಷೆಗೆ ಯಾರೂ ಬರದಿಲ್ಲ” ಎನ್ನುವರು.

ಮುಂದಿನ ದಿನಗಳಲ್ಲಿ ಗಣಪಯ್ಯ ತಮ್ಮ ತೋಟವಲ್ಲದೇ ಇನ್ನೂ ಕೆಲವರ ತೋಟಗಳನ್ನು ನೋಡಿಕೊಳ್ಳಲು ತೊಡಗಿದರು. ಆವಾಗ ಸ್ಥಾಪಿಸಿದ್ದು “ಹಾರ್ಲೆ ಮ್ಯಾನೇಜ್ ಮೆಂಟ್ ಸರ್ವಿಸಸ್” ಎಂಬ ಸಂಸ್ಥೆ. ಇದರಿಂದ ಇನ್ನೂ ಅನೇಕರಿಗೆ ಉದ್ಯೋಗ ನೀಡಲು ಅವರಿಗೆ ಸಾಧ್ಯವಾಯಿತು.

ಹಾರ್ಲೆ ಎಸ್ಟೇಟನ್ನು ಖರೀದಿಸುವಾಗ ಅದರ ಕೆಲವು ಭಾಗಗಳಷ್ಟೇ ಕಾಫಿಕೃಷಿಯಾಗಿತ್ತು. ಉಳಿದ ಹೆಚ್ಚಿನ ಭಾಗಗಳು ಯಾಲಕ್ಕಿ ಬೆಳೆ. ಬಾಕಿ ಕುರುಚಲು ಕಾಡು ಮತ್ತು ಕರೆದೀಣೆ. ಇವೆಲ್ಲ ಖಾಲಿ ಇದ್ದವು. ನಿಧಾನವಾಗಿ ಇವೆಲ್ಲವೂ ಕೃಷಿಗೆ ಒಳಪಟ್ಟವು. ಸುತ್ತಲಿನ ಬೆಳೆಗಾರರು ಹಾರ್ಲೆಗೆ ಬರುವುದು ಗಣಪಯ್ಯನವರ ಸಲಹೆ ಸೂಚನೆ ಪಡೆಯುವುದೂ ಸಾಮಾನ್ಯ ವಿಷಯವಾಯಿತು. ದೂರ ದೂರದಿಂದ ಹಾರ್ಲೆಯ ಯಾಲಕ್ಕಿ ತೋಟವನ್ನು ನೋಡಲು ಜನರು ಬರುತ್ತಿದ್ದರು.

ಗಣಪಯ್ಯನವರು ಹಾರ್ಲೆಗೆ ಬಂದ ಪ್ರಾರಂಭದಲ್ಲಿ ಗೆಳೆಯ ಸಿ.ಎಂ. ಪೂಣಚ್ಚನವರು (ಅವರಾಗ ಕರ್ನಾಟಕದ ಗೃಹ ಮಂತ್ರಿಗಳು) ಗಣಪಯ್ಯನವರಲ್ಲಿ “ನನ್ನ ಪಿತ್ರಾರ್ಜಿತ ಆಸ್ತಿ ಗಂಡು ಮಕ್ಕಳಿಗಿರಲಿ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಲ್ಲಿ ಕೊಡಗಿನಲ್ಲಿ ಜಮೀನಿನ ಬೆಲೆ ಏರಿ ಹೋಗಿದೆ ನಿಮ್ಮ ಸುತ್ತ ಮುತ್ತ ಕಡಿಮೆ ಬೆಲೆಗೆ ಯಾವುದಾದರೂ  ಜಮೀನಿದ್ದರೆ ಕೊಡಿಸಿ, ಮತ್ತೆ ಅದನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಎಂದರಂತೆ”.

ಹಾರ್ಲೆಯ ಪಕ್ಕದ ರಕ್ಷಿದಿ ಗ್ರಾಮದಲ್ಲಿ ಒಂದು ತೋಟವನ್ನು ಗಣಪಯ್ಯನವರು ಹರಾಜಿನಲ್ಲಿ ಪಡೆದುಕೊಂಡಿದ್ದರು. ಅದರ ಕೆಲವು ಭಾಗ ಮಾತ್ರ ತೋಟವಾಗಿದ್ದು ಉಳಿದ ಜಾಗ ಕಾಡು ಮತ್ತು ಹುಲ್ಲುಗಾವಲಾಗಿತ್ತು.

ಒಟ್ಟು ಒಂಬೈನೂರು ಎಕರೆಗಳಷ್ಟಿರುವ ಇಡೀ ರಕ್ಷಿದಿ ಕಂದಾಯ ಗ್ರಾಮವೇ ಹಿಂದೆ ಮೇಜರ್ ಅಟ್ಲಿ ಎನ್ನುವ  ಬ್ರಿಟಿಷ್ ಅಧಿಕಾರಿಯದ್ದಾಗಿತ್ತು. ಅದರ ಒಂದು ಭಾಗವನ್ನು ಆತ ಅಮೀರ್ ಜಾನ್ ಎಂಬುವರಿಗೆ ಮಾರಾಟ ಮಾಡಿ, ನಂತರ ಅದು ಹಲವರ ಕೈದಾಟಿ ಗಣಪಯ್ಯನವರಿಗೆ ಬಂದಿತ್ತು. ಆ ತೋಟವನ್ನು ಆಗ ಜನರು ‘ಸಣ್ ರಕ್ಷಿದಿ’ ಎಂದು ಕರೆಯುತ್ತಿದ್ದರು. ಆ ತೋಟವನ್ನೇ ಗಣಪಯ್ಯನವರು 1958ರಲ್ಲಿ ಪೂಣಚ್ಚನವರಿಗೆ ಕೊಟ್ಟರು. ಸಕಲೇಶಪುರದ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿ, ಮೂವತ್ತೈದು ಸಾವಿರ ರೂಗಳಿಗೆ ಪೂಣಚ್ಚ ಅದನ್ನು ಕೊಂಡುಕೊಂಡರು. ತೋಟಕ್ಕೆ ಗಣಪಯ್ಯನವರೇ “ಪೂರ್ಣಿಮಾ ಎಸ್ಟೇಟ್” ಎಂದು ಹೆಸರಿಟ್ಟರು.

ಪೂರ್ಣಿಮಾ ಎಸ್ಟೇಟ್ ಗೇಟ್ 1982 ರಲ್ಲಿ

ಗಣಪಯ್ಯನವರ ಇನ್ನೊಬ್ಬರು ಗೆಳೆಯರಾದ ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್, ಜೊತೆಗೆ, ಕ್ಯಾಮನಹಳ್ಳಿ ಗ್ರಾಮದ ಬಾವಲಿ ಮೂಲೆ ಎಸ್ಟೇಟ್, ಹಾರ್ಲೆ ಮ್ಯಾನೇಜ್‌ಮೆಂಟ್‌ನಲ್ಲಿ ಇದ್ದವು. ಹಾಗೆಯೇ ಕಾಲಾನಂತರದಲ್ಲಿ ಕಪ್ಪಳ್ಳಿ ಎಸ್ಟೇಟ್, ಮೇಲಳ್ಳಿ ದೊಡ್ಡನಾಗರ ಎಸ್ಟೇಟ್, ದೇವಾಲದಕೆರೆಯ ಬೈರಳ್ಳಿ ಎಸ್ಟೇಟ್, ಹೀಗೆ ಹಲವಾರು ತೋಟಗಳು ಗಣಪಯ್ಯನವರ ಸುಪರ್ದಿಗೆ ಬಂದವು.

ಈ ಎಸ್ಟೇಟುಗಳೆಲ್ಲ ಇವರ ಗೆಳೆಯರದ್ದು ಮತ್ತು ಬಂಧುಗಳದ್ದಾಗಿತ್ತು. ಬಹಳ ಜನರು ಇದರಿಂದ ಗಣಪಯ್ಯನವರಿಗೆ ಲಾಭವಾಗಿರಬಹುದು ಎಂದುಕೊಂಡರೆ ಅದು ನಿಜವಲ್ಲ. ಈ ಯಾವ ತೋಟಗಳ ಉಸ್ತುವಾರಿಯಿಂದ ಅವರು ಯಾವುದೇ ಮ್ಯಾನೇಜ್‌ಮೆಂಟ್ ಸಂಭಾವನೆ ಪಡೆಯುತ್ತಿರಲಿಲ್ಲ. ಎಲ್ಲವೂ ಸ್ವಸಂತೋಷದ ಉಚಿತ ಸೇವೆ. ಆದರೆ ಇದರಿಂದಾಗಿ ನೂರಾರು ಜನರಿಗೆ ಅನ್ನ, ಬದುಕು ಸಿಕ್ಕಿತು.

1861 ರಲ್ಲಿ ಮೇಜರ್ ಅಟ್ಲಿ ಕಟ್ಟಿಸಿದ ರಕ್ಷಿದಿ ಎಸ್ಟೇಟ್ ಬಂಗಲೆ

ಇದೆಲ್ಲದರ  ಜೊತೆಗೆ ಗಣಪಯ್ಯನವರ ಕಾರ್ಯಕ್ಷೇತ್ರ ವಿಸ್ತರಿಸುತ್ತಿತ್ತು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬೇರೆ ಬೇರೆ ಕಾರಣಕ್ಕೆ ಹಾರ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಸಕಲೇಶಪುರದಿಂದ ಮೂಡಿಗೆರೆ ರಸ್ತೆಯಲ್ಲಿ ಎಂಟು ಕಿ.ಮೀ ದೂರದಲ್ಲಿ ಹಾರ್ಲೆ ಕೂಡಿಗೆ ಸಿಗುತ್ತದೆ. ಅಲ್ಲಿಂದ ಮೂರು ಕಿ.ಮೀ ದೂರ ಸಾಗಿದರೆ ಹಾರ್ಲೆ ಎಸ್ಟೇಟ್ ದಾರಿಯಲ್ಲಿ ಅಡ್ಡಲಾಗಿ ಈಗ ಎತ್ತಿನಹೊಳೆ ಎಂದು ಪ್ರಖ್ಯಾತವಾಗಿರುವ “ಯೆತ್ನಳ್ಳ” ಸಿಗುತ್ತದೆ. ಅದಕ್ಕೆ ಸೇತುವೆ ಇರಲಿಲ್ಲ. ಬೇಸಗೆಯಲ್ಲಿ ಹೊಳೆಗೆ ಇಳಿದು ಗಾಡಿಗಳು ಹೋಗುತ್ತಿದ್ದವು ಮಳೆಗಾಲದಲ್ಲಿ ಹಾರ್ಲೆ, ಅದರಿಂದಾಚೆ, ಕುಂಬರಡಿ, ಬೆಂಬಳೆ, ಗೊಚ್ಚೆಗುಂಡಿ, ನಡಹಳ್ಳಿ, ದೇಕಲ, ಮಲ್ಲೇಗದ್ದೆ ಮುಂತಾದ ಊರುಗಳಿಗೆ ಸಂಪರ್ಕ ಕಡಿದು ಹೋಗುತ್ತಿತ್ತು. ಗಣಪಯ್ಯನವರು ಪ್ರಯತ್ನ ಮಾಡಿ ಸರ್ಕಾರದಿಂದ ಮಂಜೂರಾತಿ ಪಡೆದು 1958ರಲ್ಲಿ ಯೆತ್ನಳ್ಳಕ್ಕೆ ಒಂದು ಸೇತುವೆ ಮಾಡಿಸಿದರು. ಇದರಿಂದಾಗಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಯಿತು.

ಈ ವಿಸ್ತರಣೆಗಳಿಂದಾಗಿ ಗಣಪಯ್ಯನವರಿಗೆ ಎಲ್ಲವನ್ನೂ ನೋಡಿಕೊಳ್ಳಲು ಒಬ್ಬ ಸಮರ್ಥ ಮ್ಯಾನೇಜರ್‌ನ ಅಗತ್ಯವಿತ್ತು. ಮಿಡ್ಲಟನ್ ಕಾಲದಿಂದಲೇ ಇದ್ದ ಕೇಶವಮೂರ್ತಿ ಎಂಬವರು ಹಾರ್ಲೆಯನ್ನು ಬಿಟ್ಟು ಹಲಸೂರು ಎಂಬಲ್ಲಿ ಸ್ವಂತ ತೋಟ ಮಾಡಿದ್ದರು.

ಆಗ ಮ್ಯಾನೇಜರ್ ಆಗಿ ಬಂದವರು ಇಡ್ಯ ವಾಸುದೇವ ರಾವ್ ಎಂಬವರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನವರು. ವಾಸುದೇವರಾಯರ ತಂದೆ ಇಡ್ಯ ನಾರಾಯಣರಾವ್. ಅವರು ಹಲವಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡವರು. ಹಲವು ವಿದ್ಯಾಸಂಸ್ಥೆಗಳ ಸ್ಥಾಪನೆಗೂ ದುಡಿದಿದ್ದವರು, ಯಾವಾಗಲೂ ಒಂದು ಪಂಚೆ ಅಂಗಿ ಹಾಕದ ಬರಿಮೈ ಮತ್ತು ಬಿಳಿಯ ಟವಲ್ ಇಷ್ಟೇ ಅವರ ಉಡುಗೆ. ಜನರು ಅವರನ್ನು ಸುರತ್ಕಲ್ ಗಾಂಧಿ ಎಂದು ಕರೆಯುತ್ತಿದ್ದರು.

ಹಾರ್ಲೆ ತೋಟಗಳ ಉಸ್ತುವಾರಿಗೆ ಬಂದ ವಾಸುದೇವರಾವ್ ಉಗ್ರಮೂರ್ತಿಯೆಂದು ಹೆಸರಾದವರು. ಶೀಘ್ರಕೋಪಿ, ಆದರೆ ದಕ್ಷ ಹಾಗೂ ಪ್ರಾಮಾಣಿಕರೆಂದು ಹೆಸರಾಗಿದ್ದರು. ಅವರಿಗೆ ಕೃಷಿ ಅನುಭವ ಹೆಚ್ಚೇನೂ ಇರಲಿಲ್ಲ ಆದರೆ ಆಡಳಿತ ಮತ್ತು ಲೆಕ್ಕಪತ್ರಗಳಲ್ಲಿ ಅನುಭವಿ, ಎಲ್ಲವನ್ನೂ ಬಿಗಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದರು. ಕೃಷಿಯ ವಿಷಯಕ್ಕೆ ಬಂದರೆ ಗಣಪಯ್ಯನವರ ಅಗಾಧವಾದ ಅನುಭವ ಅವರ ಬೆನ್ನಿಗಿತ್ತು.

ಆ ಕಾಲದಲ್ಲಿ ಕಾಫಿ ಎಸ್ಟೇಟುಗಳ ನಿರ್ವಹಣೆ ಇಂದಿನಂತಲ್ಲ ಜನರಲ್ಲಿ. ವಿದ್ಯಾಭ್ಯಾಸ ತೀರ ಕಡಿಮೆ. ಕೂಲಿಕಾರ್ಮಿಕರಲ್ಲಂತೂ ವಿದ್ಯೆ ಇಲ್ಲವೇ ಇಲ್ಲ. ಮ್ಯಾನೇಜರ್ ಆದವನು, ತೋಟದಲ್ಲಿ ಆಡಳಿತಗಾರ, ಪೋಲಿಸು, ನ್ಯಾಯಾಧೀಶ, ವೈದ್ಯ, ಆಪ್ತ ಸಮಾಲೋಚಕ, ಅಗತ್ಯ ಬಿದ್ದಾಗ ಡ್ರೈವರ್, ಮೆಕ್ಯಾನಿಕ್, ಎಲ್ಲವೂ ಆಗಿರಬೇಕಾಗುತ್ತಿತ್ತು. ಸಾಂಧರ್ಭಿಕವಾಗಿ ಬರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತಿತ್ತು. ಕೂಲಿ ಕಾರ್ಮಿಕರಲ್ಲಿ ಅನೇಕರಲ್ಲಿ ರಾತ್ರಿ ಕುಡಿದು ಗಲಾಟೆಗಳು ಆಗುವುದು ಸಾಮಾನ್ಯವಾಗಿತ್ತು. ಆಗ ಬರುವ ದೂರು,  ಪಂಚಾಯತಿ ಎಲ್ಲವನ್ನೂ ನಿಭಾಯಿಸಬೇಕಾಗುತ್ತಿತ್ತು.

ವಾಸುದೇವರಾವ್ ಇವುಗಳಲ್ಲಿ ಅನೇಕ ಸಮಸ್ಯೆಗಳನ್ನು ತಮ್ಮ ಅಬ್ಬರದ ಸ್ವರದಲ್ಲೇ ನಿಭಾಯಿಸಿಬಿಡುತ್ತಿದ್ದರು.

ಒಂದು ಸಂದರ್ಭವನ್ನು ಹೇಳಿದರೆ ಅವರ ವ್ಯಕ್ತಿತ್ವ ಅರ್ಥವಾದೀತು.

ಒಮ್ಮೆ ಕೆಲಸಗಾರನೊಬ್ಬ ಅವರಲ್ಲಿ ಕಂಟ್ರಾಕ್ಟ್ ಕೆಲಸದ ಹಣದ ಲೆಕ್ಕದ ವಿಚಾರಕ್ಕೆ ತಕರಾರೆತ್ತಿ ವಾದ ಮಾಡಿ ಗಣಪಯ್ಯನರಲ್ಲಿ ದೂರು ಕೊಟ್ಟ. ಅದಕ್ಕವರು, ವಾಸುದೇವರಾವ್ ಅವರಿಗೆ ಸುಮ್ಮನೆ ಯಾಕೆ ರಗಳೆ ಸ್ವಲ್ಪ ಸೇರಿಸಿ ಕೊಟ್ಟುಬಿಡಿ ಎಂದರು.

ಮ್ಯಾನೇಜರ್ ವಾಸುದೇವ ರಾವ್ (ಕನ್ನಡಕ ಧಾರಿ)

“ಕೊಡುವುದಿಲ್ಲ ಮ್ಯಾನೇಜರ್ ನಾನು ನೀವಲ್ಲ” ಎಂದು ಬಿಟ್ಟರು ಮ್ಯಾನೇಜರ್ ಸಾಹೇಬರು. ಗಣಪಯ್ಯ ಸುಮ್ಮನಾದರು.

ಅನೇಕ ವೇಳೆ ಇತರ ನೌಕರರಿಗೂ ವಾಸುದೇವರಾವ್ ಅವರರೊಂದಿಗೆ ಜಗಳವಾಗುತ್ತಿತ್ತು. ಈ ಎಲ್ಲವನ್ನೂ ಗಣಪಯ್ಯ ನಿಭಾಯಿಸಿಕೊಳ್ಳುತ್ತಿದ್ದರು. ವಾಸುದೇವರಾವ್ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಹಾರ್ಲೆಯಲ್ಲಿ ಸೇವೆ ಸಲ್ಲಿಸಿದರು. ಗಣಪಯ್ಯನವರ ಹಣಕಾಸಿನ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಂಡರು. ಇದರಿಂದ ಗಣಪಯ್ಯ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಾಜಕಾರಣ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ವಾಸುದೇವರಾವ್ ಅವರ ದಕ್ಷ ಆಡಳಿತದ ಬೆಂಬಲ ಇದ್ದುದರಿಂದ ಸುಲಭವಾಯಿತು. ಹಾರ್ಲೆ ಎಸ್ಟೇಟ್ ಕರ್ನಾಟಕದ ಪ್ರತಿಷ್ಟಿತ ತೋಟಗಳಲ್ಲಿ ಒಂದಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ, ಇಸ್ರೇಲ್, ಇರಾನ್ ದಾಳಿ-ಪ್ರತಿ ದಾಳಿ : ಈವರೆಗೆ ಕನಿಷ್ಠ 8 ಸಾವು

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತಿ-ದಾಳಿಗಳಲ್ಲಿ ಹಲವು ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಹೆಣ್ಣು...

ಮಧ್ಯಪ್ರಾಚ್ಯ ಉದ್ವಿಗ್ನ : ಯುಎಇ, ಬಹ್ರೇನ್‌, ಕತಾರ್, ಕುವೈತ್‌ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿ ದಾಳಿ!

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ, ಇರಾನ್ ಅಮೆರಿಕದ ಮಿಲಿಟರಿ ನೆಲೆಗಳಿರುವ ಹಲವು ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್...

ರಾಜ್ಯಸಭೆಗೆ ಮೇನಕಾ ಗುರುಸ್ವಾಮಿ : ದೇಶದ ಮೊದಲ LGBTQ+ ಸಂಸದೆಯಾಗಲು ಅಣಿಯಾದ ಹಿರಿಯ ವಕೀಲೆ

ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ (ಫೆ.27) ವಕೀಲೆ ಮೇನಕಾ ಗುರುಸ್ವಾಮಿ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್, ರಾಜ್ಯ ಸಂಪುಟ ಸಚಿವ ಬಾಬುಲ್ ಸುಪ್ರಿಯೋ ಮತ್ತು ನಟಿ...

ದಾಳಿ ಮುಂದುವರಿಸುವ ಸೂಚನೆ ನೀಡಿದ ಟ್ರಂಪ್ : ಇರಾನ್‌ನಿಂದ ತೀವ್ರ ಪ್ರತಿದಾಳಿಯ ಎಚ್ಚರಿಕೆ

ಅಮೆರಿಕದ ಸಹಯೋಗದೊಂದಿಗೆ ಇಸ್ರೇಲ್ ಶನಿವಾರ (ಫೆ.28) ಇರಾನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗುವಾಗ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇಸ್ರೇಲ್‌ ಇರಾನ್‌ನ ರಾಜಧಾನಿ ಟೆಹ್ರಾನ್‌ ಸೇರಿದಂತೆ ದೇಶದ ಹಲವು ಸ್ಥಳಗಳ...

ಅಮೆರಿಕ ಅಣತಿಯಂತೆ ಇರಾನ್ ಮೇಲೆ ಇಸ್ರೇಲ್ ದಾಳಿ : ಟೆಹ್ರಾನ್‌ನ ಹಲವೆಡೆ ಭಾರೀ ಸ್ಪೋಟ

ಇರಾನ್ ಮೇಲೆ ಇಸ್ರೇಲ್ ಶನಿವಾರ (ಫೆ.28) ವೈಮಾನಿಕ ದಾಳಿ ನಡೆಸಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯನ್ನು ಇಸ್ರೇಲ್ 'ಪೂರ್ವಭಾವಿ ದಾಳಿ' ಎಂದು ಕರೆದಿದೆ. ಇಂದು ಬೆಳಿಗ್ಗಿನ ಹೇಳಿಕೆಯೊಂದರಲ್ಲಿ, ಇಸ್ರೇಲ್ ರಕ್ಷಣಾ ಸಚಿವ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ನಟ ದಿಲೀಪ್, ಇತರರ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರ್ಕಾರ

ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರಕರಣದ...

‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ವಿಧಿಸಿದ್ದ ತಡೆಯಾಜ್ಞೆ ತೆರವು

'ದಿ ಕೇರಳ ಸ್ಟೋರಿ-2 : ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ (ಫೆ.27) ತೆರವುಗೊಳಿಸಿದೆ. 'ಕೋಮು ಸಾಮರಸ್ಯ ಕದಡುವ ಸಾಧ್ಯತೆ'ಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಬೆಚು...

‘ದೆಹಲಿಯಲ್ಲಿ ಮತ್ತೆ ಚುನಾವಣೆ ನಡೆಸಿ; ಬಿಜೆಪಿ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ’: ಕೇಜ್ರಿವಾಲ್ ಸವಾಲು

"ದೆಹಲಿಯಲ್ಲಿ ಮತ್ತೆ ಚುನಾವಣೆ ನಡೆಸಿ, ಬಿಜೆಪಿ ಹತ್ತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ನಾನು ರಾಜಕೀಯ ತ್ಯಜಿಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ....

ಚನ್ನರಾಯಪಟ್ಟಣ| ಭೂಸ್ವಾಧೀನ ವಿರುದ್ಧ ಗೆದ್ದ ರೈತರಿಂದ ‘ಭೂಮಿ ಹಬ್ಬ’ ಸಂಭ್ರಮ: ಹೋರಾಟದ ಒಡನಾಡಿಗಳಿಗೆ ಗೌರವ ಸಮರ್ಪಣೆ

ದೇವನಹಳ್ಳಿಯ ಚನ್ನರಾಯಪಟ್ಟಣದ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ರೈತರು ನಡೆಸಿದ ಸುದೀರ್ಘ ನಾಲ್ಕು ವರ್ಷಗಳ ಸತ್ಯಾಗ್ರಹಕ್ಕೆ ಐತಿಹಾಸಿಕ ಜಯ ಲಭಿಸಿದ ಹಿನ್ನಲೆಯಲ್ಲಿ, ಭೂಸ್ವಾದೀನ ವಿರೋಧಿ ಹೋರಾಟ ಸಮಿತಿಯು...

ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಮತ್ತು ಇತರರು ಖುಲಾಸೆ: ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ

ಮದ್ಯ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು...