ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್, ಮುಂಬೈನ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಕಂಗನಾ ವಿರುದ್ಧ ಮಾನಹಾನಿ ಪ್ರಕರಣದ ದೂರು ದಾಖಲಿಸಿದ್ದಾರೆ. ಇದಕ್ಕೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣದಲ್ಲಿ ನಟಿ ಕಂಗನಾ ಅನಗತ್ಯವಾಗಿ ನನ್ನನ್ನು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಖಾಸಗಿವಾಹಿನಿಗಳಿಗೆ ನೀಡಿರುವ ಸಂದರ್ಶನಗಳಲ್ಲಿ ನನ್ನ ವಿರುದ್ಧ ಆಧಾರರಹಿತ ದೂರುಗಳನ್ನು ಮಾಡುವ ಮೂಲಕ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಜಾವೇದ್ ಅಖ್ತರ್ ಮುಂಬೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಷಯವನ್ನು ಶಿವಸೇನೆ ಮುಖಂಡ ಸಂಜಯ್ ರಾವತ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ರಿಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್, “ಏಕ್ ಥಿ ಶೆರ್ನಿ… ಓರ್ ಏಕ್ ಭೆಡಿಯೋಂಕಾ ಝೂಡ್” (ಒಬ್ಬಳು ಸಿಂಹಿಣಿ… ಮತ್ತು ಒಂದು ತೋಳಗಳ ಹಿಂಡು) ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕಂಗನಾ ವಿರುದ್ಧ ವಿಡಿಯೋ ಮಾಡಲು 65 ಲಕ್ಷ ಹಣ ಪಡೆಯಲಾಗಿದೆ: ಧೃವ್ ರಾಠೀ ಕೊಟ್ಟ ಉತ್ತರವೇನು?
एक थी शेरनी ….. और एक भेड़ियों का झुंड । https://t.co/uSGd4KBmwl
— Kangana Ranaut (@KanganaTeam) November 3, 2020
ನಟಿ ಕಂಗನಾ ತನ್ನನ್ನು ಸಿಂಹಿಣಿಗೆ ಹೋಲಿಸಿಕೊಂಡಿದ್ದು, ಆಕೆಯ ವಿರುದ್ಧ ದೂರು ದಾಖಲಿಸುವವರು ಮತ್ತು ಟೀಕಿಸುತ್ತಿರುವವರನ್ನು ತೋಳಗಳ ಗುಂಪಿಗೆ ಹೋಲಿಸಿದ್ದಾರೆ.
ಮುಂಬೈನ ಮೆಟ್ರೋಪಾಲಿಟನ್ ಕೋರ್ಟ್ನಲ್ಲಿ ಕಂಗನಾ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ದೂರು ದಾಖಲಾಗಿದೆ. ನಿನ್ನೆ ಕೂಡ ಕಂಗನಾಗೆ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಇದನ್ನೂ ಓದಿ: ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕಂಗನಾ ರಾಣಾವತ್ ವಿರುದ್ಧ FIR ದಾಖಲು
ಮಹಾರಾಷ್ಟ್ರದಲ್ಲಿ ಕಂಗನಾ ರಣಾವತ್ ಮತ್ತು ಆಡಳಿತರೂಢ ಶಿವಸೇನೆ ನಡುವೆ ಗುದ್ದಾಟ ನಡೆಯುತ್ತಿದ್ದು, ಇದು ಆಕೆಯ ಪರಸ್ಪರ ವಾಗ್ದಾಳಿಗೆ ಕಾರಣವಾಗಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಆರಂಭಗೊಂಡ ಈ ಗುದ್ದಾಟ, ಏಮ್ಸ್ ವೈದ್ಯರು ಅದು ಆತ್ಮಹತ್ಯೆ ಎಂದು ಪ್ರತಿಪಾದಿಸಿದರೂ ಸಹ ಇನ್ನು ನಿಂತಿಲ್ಲ. ನಟಿ ಕಂಗನಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶಿವಸೇನೆ, ಉದ್ಧವ್ ಠಾಕ್ರೆ ಸರ್ಕಾರವನ್ನು ನೆರವಾಗಿಯೇ ಟೀಕಿಸುತ್ತಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತಿಚೆಗೆ ಕಂಗನಾ ಹೆಸರೇಳದೆ ಅವರನ್ನು ಟೀಕಿಸಿದ್ದರು. “ಕೆಲವು ಜನರು ತಮ್ಮ ರಾಜ್ಯಗಳಲ್ಲಿ ಜೀವನೋಪಾಯಕ್ಕಾಗಿ ಏನೂ ಇಲ್ಲದೆ ಮುಂಬೈಗೆ ಬರುತ್ತಾರೆ ಮತ್ತು ದ್ರೋಹವೆಸಗುತ್ತಾರೆ. ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡುವ ಅಪಮಾನ. ಏಕೆಂದರೆ ಮೋದಿಯವರು ಪಾಕ್ ಆಕ್ರಮಿತ ಪ್ರದೇಶವನ್ನು ಮರಳಿ ಪಡೆಯುವುದಾಗಿ ವಾಗ್ದಾನ ಮಾಡಿದ್ದಾರೆ. ನಮ್ಮ ರಾಜ್ಯವನ್ನು ಹಳಿಯಲು ಕೆಲವರು ಯಾವ ಮಟ್ಟಕ್ಕೂ ಕೂಡ ಹೋಗಬಹುದು” ಎಂದು ಠಾಕ್ರೆ ಹೇಳಿದ್ದರು.
ಇತ್ತ ಕರ್ನಾಟಕದಲ್ಲಿಯೂ ಕಂಗನಾ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಕಂಗನಾ ರಣಾವತ್ ಟ್ವೀಟ್ ಮಾಡಿದ್ದನ್ನು ಉಲ್ಲೇಖಿಸಿ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


