ಕಳೆದ ತಿಂಗಳು ರೈತರ ಮೇಲೆ ನಡೆದ ಲಾಠಿಚಾರ್ಜ್ ಮತ್ತು ರೈತರ ತಲೆ ಒಡೆಯಲು ಆದೇಶ ನೀಡಿದ್ದ ಐಎಎಸ್ ಅಧಿಕಾರಿಯ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಗುರುವಾರ ಹೇಳಿದ್ದಾರೆ.
ಇದರ ಜೊತೆಗೆ “ಯಾರಾದರೂ ಬೇಡಿಕೆಯಿಟ್ಟ ಮಾತ್ರಕ್ಕೆ ತನಿಖೆ ಇಲ್ಲದೆ ಯಾರನ್ನೂ ಗಲ್ಲಿಗೇರಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 28 ರಂದು ನಡೆದ ಲಾಠಿಚಾರ್ಜ್ ವಿರುದ್ಧ ರೈತರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರ. ಪೊಲೀಸರ ಲಾಠಿಚಾರ್ಜ್‌ನಲ್ಲಿ ಸುಮಾರು 10 ಮಂದಿ ರೈತರು ಗಾಯಗೊಂಡಿದ್ದರು. ಓರ್ವ ರೈತ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಕಾರಣರಾದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರನ್ನು ಅಮಾನತುಗೊಳಿಸಬೇಕು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ರೈತರ ಇಟ್ಟಿದ್ದಾರೆ. ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಕಳೆದ ತಿಂಗಳು ಪ್ರತಿಭಟನಾ ನಿರತ ರೈತರ ತಲೆ ಒಡೆಯುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಹರಿಯಾಣ :ಕರ್ನಾಲ್ ಶಾಶ್ವತ ಪ್ರತಿಭಟನಾ ಸ್ಥಳವಾಗಿ ಉಳಿಯಬಹುದು- ರೈತರ ಎಚ್ಚರಿಕೆ
ಸದ್ಯ ಐಎಎಸ್ ಅಧಿಕಾರಿ ಸಿನ್ಹಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ವರ್ಗಾವಣೆ ಶಿಕ್ಷೆಯಲ್ಲ ಎಂದು ರೈತ ಸಂಘದ ನಾಯಕರು ಹೇಳಿ, ಪ್ರತಿಭಟನೆ ನಡೆಸುತ್ತಿದ್ದಾರೆ.
“ನಾವು ನಿಷ್ಪಕ್ಷಪಾತ ತನಿಖೆಗೆ ಸಿದ್ಧರಿದ್ದೇವೆ, ಆದರೆ ಇದು ಕೇವಲ ಕರ್ನಾಲ್ ಮಾಜಿ SDM ಆಯುಷ್ ಸಿನ್ಹಾಗೆ ಮಾತ್ರ ಸಂಬಂಧಿಸಿಲ್ಲ, ಆದರೆ ಇಡೀ ಕರ್ನಾಲ್ ಘಟನೆಗೆ ಸಂಬಂಧಿಸಿರುತ್ತದೆ. ತನಿಖೆಯಲ್ಲಿ ರೈತರು ಅಥವಾ ರೈತ ನಾಯಕರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಪರಿಗಣಿಸಬೇಕು” ಎಂದು ಗೃಹ ಸಚಿವ ಅನಿಲ್ ವಿಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಯಾರೋ ಹೇಳುತ್ತಾರೆ ಎಂದು ನಾವು ಯಾರನ್ನೂ ನೇಣಿಗೇರಿಸಲು ಸಾಧ್ಯವಿಲ್ಲ. ದೇಶದ ಕಾನೂನು ರೈತರಿಗೊಂದು ಬೇರೆಯವರಿಗೊಂದು ಇಲ್ಲ. ಅಪರಾಧದ ಮಾಡಿದವರಿಗೆ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಅಪರಾಧ ಕಂಡುಹಿಡಿಯಲು ತನಿಖೆ ನಡೆಸಬೇಕು” ಎಂದು ಹೇಳಿದ್ದಾರೆ.
ರೈತ ಪ್ರತಿಭಟನೆ ಹಿನ್ನೆಲೆ, ಹರಿಯಾಣ ಸರ್ಕಾರವು ಕರ್ನಾಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಗುರುವಾರ ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ. “ಕರ್ನಾಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸೆಪ್ಟೆಂಬರ್ 9 ರ 23:59 ಗಂಟೆಗಳ ವರೆಗೆ ಸ್ಥಗಿತಗೊಳಿಸಲಾಗುತ್ತದೆ” ಎಂದು ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಪ್ರತಿಭಟನೆ ನಡೆಸುತ್ತಿರುವ ರೈತರು ನಿನ್ನೆಯಷ್ಟೇ ಕರ್ನಾಲ್ ಶಾಶ್ವತ ಪ್ರತಿಭಟನಾ ಸ್ಥಳವಾಗಿ ಉಳಿಯಬಹುದು ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಕರ್ನಾಲ್: ಮುಂದುವರೆದ ರೈತ ಪ್ರತಿಭಟನೆ, ಸರ್ಕಾರಿ ಕಚೇರಿಗಳ ಹೊರಗೆ ಜಮಾಯಿಸಿರುವ ರೈತರು


