Homeಕರ್ನಾಟಕಮೋದಿ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ - ಸಿದ್ದರಾಮಯ್ಯ

ಮೋದಿ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ – ಸಿದ್ದರಾಮಯ್ಯ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬೆಲೆ ನಿಯಂತ್ರಣ ಮಾಡಲಾಗದ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳು ಲೆಕ್ಕದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡಾ ಮೋದಿಯವರ ಸುಳ್ಳುಗಳನ್ನೇ ಇಲ್ಲಿ ಬಾಯಿಪಾಠ ಒಪ್ಪಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರದಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದಿರುವ ಸಿದ್ದರಾಮಯ್ಯ ಅವರು, “ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ರೂ.47, ಪೆಟ್ರೋಲ್ ಬೆಲೆ ರೂ.75ರ ಗಡಿಯೊಳಗೆ ಇತ್ತು, ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಿತ್ತು. 2014 ರಿಂದ ಈ ವರೆಗೆ ಕಚ್ಚಾತೈಲ ದರ ಸುಮಾರು 50 ಡಾಲರ್ ಆಸುಪಾಸಿನಲ್ಲಿದ್ದರೂ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಒಕ್ಕೂಟ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಿದ್ದ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಜೊತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಕುಮಾರವ್ಯಾಸನ ಪದ್ಯ ಓದಿ, ಭಾಮಿನಿ ಷಟ್ಪದಿ ಪಾಠ ಮಾಡಿದ ಸಿದ್ದರಾಮಯ್ಯ

“ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ರೂ.3.45 ಹಾಗೂ ಪೆಟ್ರೋಲ್ ಮೇಲೆ ರೂ.9.20 ಅಬಕಾರಿ ಸುಂಕ ಇತ್ತು. ನರೇಂದ್ರ ಮೋದಿ ಆಡಳಿತದಲ್ಲಿ ಅಬಕಾರಿ ಸುಂಕ ಡೀಸೆಲ್ ಮೇಲೆ ರೂ. 31.84 ಹಾಗೂ ಪೆಟ್ರೋಲ್ ಮೇಲೆ ರೂ. 32.98 ಆಗಿದೆ. ಇದರಲ್ಲಿ 50% ಕಡಿಮೆ ಮಾಡಲಿ. ಅವರ ಸರ್ಕಾರ ಡೀಸೆಲ್, ಪೆಟ್ರೋಲ್ ಮೇಲಿನ ಅಬಕಾರಿ ಸುಂಕದ ಮೂಲಕ ರೂ. 23 ಲಕ್ಷ ಕೋಟಿ ಸಂಗ್ರಹಿಸಿದೆ. 2020-21 ರಲ್ಲಿ ಸಂಗ್ರಹಿಸಿದ ಅಬಕಾರಿ ಸುಂಕ ರೂ. 3 ಲಕ್ಷದ 35 ಸಾವಿರ ಕೋಟಿ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕದಿಂದ ರೂ.1 ಲಕ್ಷ 20 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ” ಎಂದು ಹೇಳಿದ್ದಾರೆ.

“ಪೆಟ್ರೋಲ್ ಬೆಲೆಯೇರಿಕೆಗೆ ತೈಲ ಬಾಂಡ್ ಕಾರಣ ಎನ್ನುವುದು ಶುದ್ದ ಸುಳ್ಳು. 2006 ರಿಂದ 2010 ರವರೆಗೆ ಖರೀದಿಸಿದ್ದು ರೂ. 1.40 ಲಕ್ಷ ಕೋಟಿ ಮೌಲ್ಯದ ತೈಲಬಾಂಡ್. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರ್ಕಾರ ರೂ. 5,762 ಕೋಟಿ ತೈಲಬಾಂಡ್ ಮರುಪಾವತಿಸಿದೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೂ. 30,923 ಕೋಟಿ ಬೆಲೆಯ ತೈಲ ಬಾಂಡ್‌ಗಳನ್ನಷ್ಟೇ ಮರುಪಾವತಿಸಬೇಕಾಗಿದೆ. ಒಕ್ಕೂಟ ಸರ್ಕಾರ ಒಂದೇ ವರ್ಷದಲ್ಲಿ ಸಂಗ್ರಹಿಸಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ ಒಟ್ಟು ಸಾಲವೇ ತೀರಿಹೋಗುತ್ತದೆ. ಹಾಗಾಗಿ ತೆರಿಗೆಯನ್ನು 50% ಕಡಿತಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

“ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ರೂ. 3 ಕಡಿಮೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರ ಯಾಕೆ ತೆರಿಗೆ ಕಡಿತಗೊಳಿಸಬಾರದು? ಆಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಇಳಿಯುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಂಜನಗೂಡಿನ ಪುರಾತನ ದೇವಸ್ಥಾನ ಕೆಡವಿದ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆಕ್ರೋಶ

“ಜಿ.ಎಸ್.ಟಿ ಬಂದಮೇಲೆ ರಾಜ್ಯಗಳಿಗಿದ್ದ ತೆರಿಗೆ ಸಂಗ್ರಹದ ಅವಕಾಶ ಇಲ್ಲದಂತಾಗಿ ಆದಾಯ ಇಳಿಮುಖವಾಗಿದೆ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರವನ್ನು ನೀಡಬೇಕಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಪರಿಹಾರವನ್ನೂ ಕೊಡದೆ ನೀವೆ ಸಾಲ ತಗೊಳ್ಳಿ ಎಂದು ಹೇಳುತ್ತಿರುವುದು ಯಾವ ನ್ಯಾಯ?” ಎಂದು ಅವರು ತಿಳಿಸಿದ್ದಾರೆ.

“15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ರಾಜ್ಯದ ಪಾಲನ್ನು 4.71% ಇಂದ 3.64% ಗೆ ಇಳಿಸಲಾಗಿದೆ. ಹಿಂದೆ ರಾಜ್ಯದ ಪಾಲು, ವಿಶೇಷ ಅನುದಾನ ಸೇರಿ ಒಟ್ಟು ರೂ. 80,000 ಕೋಟಿ ರಾಜ್ಯಕ್ಕೆ ಬರುತ್ತಿತ್ತು, ಆದರೆ ಈಗ ರೂ. 38,000 ಮಾತ್ರ ಬರುತ್ತಿದೆ. ಇದಕ್ಕೆ ಯಾರು ಹೊಣೆ? 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ ರೂ. 5,495 ವಿಶೇಷ ಅನುದಾನವನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕಾರ ಮಾಡಿದರು, ಅದನ್ನು ಕೇಳುವ ಧೈರ್ಯ ಈ ಪುಕ್ಕಲು ಸರ್ಕಾರಕ್ಕೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಭಂಡ ಸರ್ಕಾರ ಇದು. ಇವತ್ತು ಆಟೋ ಚಾಲಕರು, ಕ್ಯಾಬ್ ಚಾಲಕರು, ಟ್ರ್ಯಾಕ್ಟರ್ ಇರುವ ರೈತರು, ಬಸ್ ಮಾಲೀಕರು, ಲಾರಿ ಮಾಲೀಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಗೋಳನ್ನಾಗಲಿ, ವಿರೋಧಪಕ್ಷಗಳ ಹೋರಾಟವನ್ನಾಗಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಗಣನೆಗೆ ತೆಗೆದುಕೊಳ್ಳದಷ್ಟು ಭಂಡತನವನ್ನು ಬೆಳೆಸಿಕೊಂಡಿದೆ. ಮಾಧ್ಯಮಗಳು ಜನರ ಬವಣೆಗೆ ದನಿಯಾದರೆ ಸರ್ಕಾರಗಳು ಎಚ್ಚೆತ್ತುಕೊಳ್ಳಬಹುದೇನೋ?” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜಕಾರಣಿಗಳ ಬಗ್ಗೆ ತೇಜಸ್ವಿಯರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ; ಆದರೆ, ನನ್ನ ಬಗ್ಗೆ ಪ್ರೀತಿ, ಅಭಿಮಾನವಿತ್ತು- ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...