ಸರ್ಕಾರ ರಚಿಸಿ ಹಲವು ದಿನಗಳಾದರೂ ಸಚಿವ ಸಂಪುಟ ವಿಸ್ತರಣೆಗೆ ನೂರಾರು ವಿಘ್ನಗಳು ಎದುರಾಗುತ್ತಲೇ ಇವೆ. ಈ ವಾರದಲ್ಲಿ ಶತಾಯಗತಾಯ ಮಾಡಲೇಬೇಕೆಂದು ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪನವರ ಮತ್ತೆ ನಿರಾಶೆಯಾಗಿದ್ದು ಸಂಪುಟ ವಿಸ್ತರಣಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಈ ನಡುವೆ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ರವರು ನಿಧನದ ಹಿನ್ನೆಲೆಯಲ್ಲಿ ಅಮಿತ್ ಶಾ ರವರು ವಿಸ್ತರಣೆಗೆ ಅನುಮತಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಮುನ್ನವೇ ಸಂಪುಟ ರಚಿಸಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಅದಕ್ಕಾಗಿ ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿಮಾಡಲು ನಿರ್ಧರಿಸಿದ್ದರು. ಇಂದು ಬುಧವಾರ ಅಮಿತ್ ಶಾ, ಜೆ.ಪಿ ನಡ್ಡಾ ಸಿಗಬೇಕಿತ್ತು. ಆದರೆ ಅವರೆಲ್ಲರೂ ಸುಷ್ಮಾ ಸ್ವರಾಜ್ ರವರ ಅಂತ್ಯಕ್ರಿಯೆಗೆ ತೆರಳಿರುವುದರಿಂದ ಸಾಧ್ಯವಾಗಿಲ್ಲ.
ಇನ್ನು ಉತ್ತರ ಕರ್ನಾಟಕ ಅತಿವೃಷ್ಟಿಯಿಂದ ಬಳಲುತ್ತಿದೆ. ಹಾಗಾಗಿ ಕೂಡಲೇ ಯಡಿಯೂರಪ್ಪ ಕರ್ನಾಟಕಕ್ಕೆ ಮರಳಬೇಕು ಮತ್ತು ಶನಿವಾರ ವಾಪಸ್ ದೆಹಲಿಗೆ ಬರಬೇಕೆಂದು ಸೂಚನೆ ನೀಡಲಾಗಿದೆ.
ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಸೂಚಿಸುವ ಲಿಸ್ಟೇ ಅಂತಿಮವಾಗಬೇಕಿರುತ್ತದೆ. ಅದಕ್ಕೆ ಯಡಿಯೂರಪ್ಪನವರು ವಿರೋಧ ವ್ಯಕ್ತಪಡಿಸುವಂತಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಅದನ್ನು ಸರಿಯಾಗಿ ಹ್ಯಾಂಡಲ್ ಮಾಡುವ ಕಾರಣಕ್ಕಾಗಿ ಪದೇ ಪದೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ.


