ಪ್ರಧಾನಿ ಮೋದಿಯವರನ್ನು ಮೆಚ್ಚಿಸಿ, ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದಿ ಪತ್ರಿಕೆ ಜಾಹೀರಾತುಗಳಿಗೆ ಕೋಟ್ಯಾಂತರ ರೂಪಾಯಿ ಸುರಿಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕೊರೊನಾ ಉಚಿತ ಲಸಿಕೆ ಅಭಿಯಾನದ ದಿನ ಜೂನ್ 21 ರಂದು ಕರ್ನಾಟಕದ ಕನ್ನಡ ಸೇರಿದಂತೆ ಹಲವು ಪತ್ರಿಕೆಗಳು ಸೇರಿದಂತೆ ದೆಹಲಿಯ ಹಿಂದಿ ಪತ್ರಿಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾಹೀರಾತು ನೀಡಿದ್ದಾರೆ. ಕೊರೊನಾ ನಿರ್ವಹಣೆಯ ವಿಫಲತೆಯನ್ನು ಮುಚ್ಚಿಕೊಳ್ಳಲು ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ಜಾಹೀರಾತುಗಳಿಗೆ ಸುರಿಯುತ್ತಿರುವ ಅವರು ಈಗ ಖುರ್ಚಿ ಉಳಿಸಿಕೊಳ್ಳಲು ಮತ್ತಷ್ಟು ಹಣ ಪೋಲು ಮಾಡುತ್ತಿದ್ದಾರೆ ಎಂದು ಆಪ್ ಆರೋಪಿಸಿದೆ.
ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ
No money to subsidize our children's school fees but Crores of Rupees spent on full front-page advertisements in Hindi , that too in Delhi edition, just to save @BSYBJP 's Chief Minister's chair by pleasing @narendramodi pic.twitter.com/ldielgMart
— Prithvi Reddy (@aapkaprithvi) June 21, 2021
ದೈನಿಕ್ ಭಾಸ್ಕರ್, NBT ನವ ಭಾರತ ಟೈಮ್ಸ್, ದೈನಿಕ ಜಾಗರಣ, ಅಮರ್ ಉಜಾಲಾ ಪತ್ರಿಕೆಗಳಲ್ಲಿ ಹಿಂದೆ ಭಾಷೆಯಲ್ಲಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿ ಯಡಿಯೂರಪ್ಪನವರು ಪೂರ್ಣ ಪುಟದ ಜಾಹೀರಾತು ನೀಡಿದ್ದಾರೆ.
ಉಚಿತ ಲಸಿಕೆ ನೀಡಿರುವ ಒಕ್ಕೂಟ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದ್ದು, ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿ, ಹಿಂದೆ ಪತ್ರಿಕೆಗಳಲ್ಲಿ, ಹಿಂದಿ ಭಾಷೆಯಲ್ಲಿ ಜಾಹೀರಾತು ನೀಡಿದ್ದಾರೆ. ಇದು ಮೋದಿಯವರನ್ನು ಒಲೈಸಿಕೊಳ್ಳಲು ಬಿ.ಎಸ್.ಯಡಿಯೂರಪ್ಪ ಹೀಗೆ ಜಾಹೀರಾತುಗಳಿಗೆ ಹಣ ಸುರಿಯುತ್ತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ‘ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಸಬ್ಸಿಡಿ ಮಾಡಲು ಹಣವಿಲ್ಲ. ಆದರೆ ದೆಹಲಿ ಆವೃತ್ತಿಯ ಹಿಂದಿ ಪತ್ರಿಕೆಗಳಲ್ಲಿ ಮೊದಲ ಪುಟದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾಹೀರಾತುಗಳಿಗಾಗಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂತೋಷ ಪಡಿಸಿ, ಬಿ.ಎಸ್. ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಮಾತ್ರವೇ” ಎಂದು ಟೀಕಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಆಪ್ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, “ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬರವಣಿಗೆಯಲ್ಲಿ ಉತ್ತರ ನೀಡಿದೆ.. ಸಾವಿರಾರು ಕೋಟಿ ಖರ್ಚು ಮಾಡಿ ಪ್ರಚಾರ ಮಾಡಕೊಳ್ಳಲು ಇವರ ಬಳಿ ದುಡ್ಡಿದೆ. ಆದರೆ, ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿ, ಬೀದಿಪಾಲಾಗಿರುವ ಕುಟುಂಬಗಳಿಗೆ ಸಹಾಯ ಮಾಡಲು ದುಡ್ಡಿಲ್ಲ. ಕನ್ನಡಿಗರಿಗೆ ಯಾವುದೋ ಒಂದು ಯೋಜನೆ ಬಗ್ಗೆ ತಿಳಿಸಲು, ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಈ ಜಾಹೀರಾತು ನೀಡುತ್ತಿಲ್ಲ. ಹಿಂದಿ ಭಾಷೆಯಲ್ಲಿ ಇಂತಹ ಜಾಹೀರಾತು ನೀಡುತ್ತಿರುವುದು ಬೇರೆಯದೆ ಕಾರಣಕ್ಕೆ. ಇರುವ ದುಡ್ಡನ್ನು ಹಾಳು ಮಾಡುವ ಬದಲು ಕೊರೊನಾ ಪೀಡಿತರಿಗೆ ಆರ್ಥಿಕ ಸಹಾಯ ಮಾಡಲಿ. ನಮ್ಮ 25 ಮಂದಿ ಸಂಸದರಂತೆ ಯಡಿಯೂರಪ್ಪ ಕೂಡ ರಾಜ್ಯದ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಕೂಡ ಕೊರೊನಾ ನಿರ್ವಹಣೆಯ ವಿಫಲತೆಯನ್ನು ಮುಚ್ಚಿಕೊಳ್ಳಲು ಕರ್ನಾಟಕ ಸರ್ಕಾರ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಪೂರ್ಣಪುಣದ ಜಾಹೀರಾತುಗಳು ಮತ್ತು ಪ್ರಾಯೋಜಿತ ಲೇಖನಗಳನ್ನು ಬರೆಸಿತ್ತು.
ಇದನ್ನೂ ಓದಿ: ಕೊರೊನಾ ನಿರ್ವಹಣೆ ಲೋಪ ಮುಚ್ಚಿಕೊಳ್ಳಲು ಜಾಹೀರಾತುಗಳಿಗೆ ಹಣ ಸುರಿಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ



ತಾಯಿ, ತಾಯ್ನುಡಿ ಮತ್ತು ತಾಯ್ನಾಡು; ಈ ಮೂರೂ ಸಹ ಅತ್ಯಮೂಲ್ಯವಾದವು. ಆದರೆ ಮನುವಾದಿ ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎನ್ನುವುದಕ್ಕೆ ಈ ಹಿಂದಿ ಜಾಹೀರಾತು ಸಾಕ್ಶಿ. ಕನ್ನಡಿಗರ ಹಣದಿಂದ ಈ ರೀತಿ ಹಿಂದಿಯಲ್ಲಿ ಜಾಹೀರಾತು ನೀಡಿರುವ ಯಡಿಯೂರಪ್ಪನವರ ಕ್ರಮ ಕಂಡನಾರ್ಹ.