ರಾಜ್ಯದ ನದಿ ನೀರು ಬಳಕೆ ಹಾಗೂ ಜನರಿಗೆ ಜಲ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೀರ್ಘಕಾಲೀನ ಅನುಕೂಲತೆಯ ’ಜನತಾ ಜಲಧಾರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
“ರಾಜ್ಯದಲ್ಲಿ ನದಿ, ಉಪನದಿಗಳು ಸೇರಿ 38 ಜೀವ ನದಿಗಳು ಇದ್ದು, ಅವುಗಳ ಜಲ ಸಂಗ್ರಹ ಮಾಡಿ ನೀರಿನ ಬಳಕೆಯ ಬಗ್ಗೆ ನಾಡಿನ ಜನರಿಗೆ ಅರಿವು ಮೂಡಿಸುವ ಹಾಗೂ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುವೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ವೇಳೆ ನೀರಾವರಿ ವಿಷಯಗಳಲ್ಲಿ ಅಕ್ಕಪಕ್ಕದ ರಾಜ್ಯಗಳು ಕರ್ನಾಟಕದ ಬಗ್ಗೆ ಹೃದಯ ವೈಶಾಲ್ಯತೆ ಮೆರೆಯಬೇಕು ಹಾಗೂ ನೀರಾವರಿ ಬಿಕ್ಕಟ್ಟುಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
’ಕಾವೇರಿ, ಮೇಕೆದಾಟು ವಿಷಯದಲ್ಲಿ ತಮಿಳುನಾಡು ತಗಾದೆ ತೆಗೆಯುತ್ತದೆ. ಕೃಷ್ಣಾ ವಿಷಯದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳು ವಿವಾದ ಹುಟ್ಟು ಹಾಕುತ್ತಿದೆ. ಆದರೆ, ಆ ರಾಜ್ಯಗಳ ಅಸಂಖ್ಯಾತ ಜನರು ಬೆಂಗಳೂರು ಮಹಾನಗರದಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರೂ ಕಾವೇರಿ ನೀರು ಕುಡಿಯುತ್ತಾ ಬದುಕುತ್ತಿದ್ದಾರೆ. ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನು ಆಯಾ ರಾಜ್ಯಗಳ ಸರಕಾರಗಳು ಅರ್ಥ ಮಾಡಿಕೊಳ್ಳಬೇಕು’ ಎಂದಿದ್ದಾರೆ.
ಮುಂದುವರಿದು, ’ರಾಷ್ಟ್ರೀಯ ಪಕ್ಷಗಳು ರಾಜ್ಯದ ನೀರಾವರಿ ಹಿತರಕ್ಷಣೆ ಮಾಡುವುದಿಲ್ಲ. ಈ ಸತ್ಯ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರದ ಮುಂದೆ ನಮ್ಮ ಸರ್ಕಾರದಿಂದ ಮನವಿ ಕಳುಹಿಸಲಾಗಿದೆ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ಇವೆಲ್ಲ ಕಾರಣಕ್ಕೆ ಜಲಧಾರೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನತೆಯ ಮುಂದೆ ಈ ಕಾರ್ಯಕ್ರಮ ಇಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ರಾಜ್ಯದ 38 ನದಿಗಳ ನೀರು ಬಳಕೆ ಮಾಡಬೇಕು. ಹೀಗಾಗಿ ನಾವು ಹೋರಾಟ ಮಾಡುತೇವೆ. ನಾವು ಯಾವುದೇ ಗಿಮಿಕ್ ಮಾಡುತ್ತಿಲ್ಲ. ನಾವು ಬದ್ಧತೆ ಇಟ್ಟುಕೊಂಡು ಹೋಗುವವರು. ನಮ್ಮ ಕಾರ್ಯಕ್ರಮ ರೂಪರೇಷ ವಿಭಿನ್ನವಾಗಿರುತ್ತದೆ. ನೀರಾವರಿ ವಿಚಾರವಾಗಿ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ಮೊದಲಿಗರು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ʼಒಂದೇ ದೇಶ, ಒಂದೇ ಭಾಷೆʼ ಎಂಬ ಕರಾಳ ನೀತಿಯ ಮೂಲಕ ಹಿಂದಿ ಹೇರಿಕೆ: ಎಚ್.ಡಿ.ಕುಮಾರಸ್ವಾಮಿ


