ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಈ ಹಿಂದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಹೊಗಳಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ದೇವೇಗೌಡರು ಇದು ಅಪ್ಪಟ ಸುಳ್ಳು ಎಂದಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಎಚ್.ಡಿ.ದೇವೇಗೌಡ ಅವರು, “ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು. ಅಡ್ವಾಣಿ ಅವರು ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ಬಾಂಕ್ವೆಟ್ ಹಾಲ್‌ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು. ನಾನೇ ಬಾಂಕ್ವಟ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು. ನಾನು ಆ ಸಭೆಯಲ್ಲೇ ಹೇಳಿದ್ದೆ, ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ” ಎಂದಿದ್ದಾರೆ.
“ನನಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ..? ಆರ್‌ಎಸ್‌ಎಸ್ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲ. ನಾನು ಬೈಟಕ್ ಕೂತಿಲ್ಲ, ಹೊಗಳಿಯೂ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: RSS ಬೆಂಬಲಿತ ಶಾಲೆಗಳು ಕೋಮು ದ್ವೇಷವನ್ನು ಬೆಳೆಸುತ್ತವೆ: ದಿಗ್ವಿಜಯ್ ಸಿಂಗ್
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಚುನಾವಣಾ ಪ್ರಚಾರದ ವೇಳೆ ನಿಮ್ಮ ತಂದೆ ದೇವೇಗೌಡರು "ಆರ್‌ಎಸ್‌ಎಸ್ ಉತ್ತಮ ಸಂಘಟನೆ", 1975ರಲ್ಲಿ ತುರ್ತುಪರಿಸ್ಥಿತಿ ವೇಳೆ ನಾವೆಲ್ಲ ಬಂಧನವಾದಾಗ ಎಲ್.ಕೆ.ಅಡ್ವಾಣಿ ಮತ್ತಿತರರು ನಡೆದುಕೊಂಡ ರೀತಿ ನನಗೆ ಮೆಚ್ಚುಗೆಯಾಯಿತು. ಹೀಗಾಗಿ ಆರ್‌ಎಸ್‌ಎಸ್ ಹೊಗಳುತ್ತೇನೆ ಎಂದು ಹೇಳಿದ್ದರು.
4/14 pic.twitter.com/TWqt6Qtqei— C T Ravi ?? ಸಿ ಟಿ ರವಿ (@CTRavi_BJP) October 7, 2021
ಆರ್‌ಎಸ್‌ಎಸ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಡುವೆ ಟ್ವಿಟರ್ ಸಮರ ನಡೆಯುತ್ತಿತ್ತು. ಈ ವೇಳೆ ಅಕ್ಟೋಬರ್ 7 ರಂದು ಟ್ವೀಟ್ ಮಾಡಿದ್ದ ಸಿ.ಟಿ ರವಿ, ಆರ್‌ಎಸ್‌ಎಸ್ ಉತ್ತಮ ಸಂಘಟನೆ ಎಂದು ನಿಮ್ಮ ತಂದೆ ದೇವೇಗೌಡರೇ ಹೊಗಳಿದ್ದಾರೆ. ಅವರಿಂದ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಿ ಎಂದಿದ್ದರು.
“ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಚುನಾವಣಾ ಪ್ರಚಾರದ ವೇಳೆ ನಿಮ್ಮ ತಂದೆ ದೇವೇಗೌಡರು “ಆರ್‌ಎಸ್‌ಎಸ್ ಉತ್ತಮ ಸಂಘಟನೆ”, 1975ರಲ್ಲಿ ತುರ್ತುಪರಿಸ್ಥಿತಿ ವೇಳೆ ನಾವೆಲ್ಲ ಬಂಧನವಾದಾಗ ಎಲ್.ಕೆ.ಅಡ್ವಾಣಿ ಮತ್ತಿತರರು ನಡೆದುಕೊಂಡ ರೀತಿ ನನಗೆ ಮೆಚ್ಚುಗೆಯಾಯಿತು. ಹೀಗಾಗಿ ಆರ್‌ಎಸ್‌ಎಸ್ ಹೊಗಳುತ್ತೇನೆ ಎಂದು ಹೇಳಿದ್ದರು” ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಯಿಸಿರುವ ಮಾಜಿ ಪ್ರಧಾನಿಗಳು ಇದು ಅಪ್ಪಟ ಸುಳ್ಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: RSS ಶಾಖೆಗೆ ಬನ್ನಿ ಎಂದಿದ್ದ ಸಿ.ಟಿ.ರವಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು


