PC: iamherbalifenutrition.com

ಭಾರತದಲ್ಲಿ ಅಲೋಪತಿ, ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಮತ್ತು ನ್ಯಾಚುರೋಪತಿ ಇವಿಷ್ಟು ಔಷಧೀಯ ಪದ್ಧತಿಗಳನ್ನು ಅಂಗೀಕರಿಸಲಾಗಿದೆ. ಹಾಗೆ ನೂರಾರು ವಿಧದ ಹೊಸ ಹೊಸ ಪದ್ಧತಿಗಳು ಬಂದಿವೆಯಾದರೂ ಅವ್ಯಾವುವೂ ಮಾನ್ಯತೆ ಪಡೆದಿಲ್ಲ. ಹರ್ಬಲ್ ಲೈಫ್ ಎಂಬ ಒಂದು ಔಷಧೀಯ ಪದ್ಧತಿಯೂ ಇಲ್ಲ. ಹರ್ಬಲ್ ಲೈಫ್ ಕಂಪೆನಿಯೂ ಎಲ್ಲೂ ತನ್ನ ಪ್ರಾಡಕ್ಟ್‌ಗಳನ್ನು ನೇರವಾಗಿ ಪರ್ಯಾಯ ಔಷಧಿಗಳೆಂದು ಹೇಳಿಕೊಳ್ಳುವುದೂ ಇಲ್ಲ. ಬದಲಾಗಿ ಅದು ತನ್ನ ಪ್ರಾಡಕ್ಟ್‌ಗಳನ್ನು “ನ್ಯೂಟ್ರಿಶನ್ ಸಪ್ಲಿಮೆಂಟ್ಸ್” ಎಂದೇ ಅಧಿಕೃತವಾಗಿ ಘೋಷಿಸಿಕೊಂಡಿದೆ ಮತ್ತು ಅದು ಭಾರತ ಸರಕಾರದ ಆಹಾರ ಇಲಾಖೆಯಿಂದ ಹಾಗೆಂದೇ ಮಾನ್ಯತೆ ಪಡೆದುಕೊಂಡಿದೆ. ಬದಲಾಗಿ ಹರ್ಬಲ್ ಲೈಫ್, ಔಷಧ ನಿಯಂತ್ರಣ ಇಲಾಖೆಯಿಂದಲೋ, ಪರ್ಯಾಯ ಔಷಧೀಯ ಪದ್ಧತಿಗಳಿಗೆ ಮಾನ್ಯತೆ ನೀಡಲ್ಪಡುವ ಇನ್ಯಾವುದೋ ಔಷಧೀಯ ಇಲಾಖೆಯಿಂದಲೋ ಅನುಮತಿ ಪಡೆದಿಲ್ಲ ಮತ್ತು ಹಾಗೆ ಪಡೆದುಕೊಳ್ಳುವ ಅಗತ್ಯವೂ ಅದಕ್ಕಿಲ್ಲ.

ಈ ಮೇಲಿನ ಪೀಠಿಕೆಯನ್ನು ಓದಿಕೊಂಡು ನಾನು ಹರ್ಬಲ್ ಲೈಫ್ ಪರ ವಾದ ಮಂಡಿಸುತ್ತಿದ್ದೇನೆಂದು ಭಾವಿಸದಿರಿ. ಈಗ ವಿಷಯಕ್ಕೆ ಬರುತ್ತೇನೆ. ನನ್ನ ಪಾಲಿಕ್ಲಿನಿಕಿಗೆ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಅನೇಕ ಹರ್ಬಲ್ ಲೈಫ್ ತೆಗೆದುಕೊಳ್ಳುವವರು ನನ್ನಲ್ಲಿ ಅದರ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಇನ್ನು ಹಲವರು ಅದನ್ನು ತೆಗೆದುಕೊಳ್ಳಬಹುದೇ ಎಂದು ಸಲಹೆ ಕೇಳುತ್ತಾರೆ. ನಾನವರಿಗೆ ನೀಡುವ ಉತ್ತರ, “ಮೊದಲನೆಯದಾಗಿ ನಾನದರ ಎಕ್ಸ್‌ಪರ್ಟ್ ಅಲ್ಲ. ಎರಡನೆಯದಾಗಿ‌ ಔಷಧಿಗಳನ್ನು ವೈದ್ಯ ಸೂಚಿಸಬೇಕೇ ಹೊರತು ಯಾವುದೋ ಕಂಪೆನಿಯ ಜಾಹೀರಾತು ನೋಡಿ ತೆಗೆದುಕೊಳ್ಳಲಿಕ್ಕಿರುವುದಲ್ಲ. ಕೊನೆಯದಾಗಿ ಯಾವುದಕ್ಕೂ ನೀವು ನಿಮ್ಮ ವೈದ್ಯರ ಸಲಹೆ ಪಡ್ಕೊಳ್ಳಿ..”

ಇದನ್ನೂ ಓದಿರಿ: ಸಾವು, ಉದ್ಯೋಗ ನಷ್ಟ, ಆತಂಕ: ಖಿನ್ನತೆ ಶಮನಕಾರಿ ಔಷಧಿಗಳ ಮಾರಾಟ ಶೇ. 23 ರಷ್ಟು ಏರಿಕೆ

ನಾನೀಗಾಗಲೇ ಬರೆದಂತೆ ಹರ್ಬಲ್ ಲೈಫ್ ಕಂಪೆನಿಯು ಎಲ್ಲೂ ಕೂಡಾ ತನ್ನ ಪ್ರಾಡಕ್ಟನ್ನು ಅಧಿಕೃತವಾಗಿ ಔಷಧಿಯೆಂದು ಘೋಷಿಸಿಲ್ಲ. ಆದರೆ ಅದರ ಫ್ರಾಂಚೈಸಿ ಹೋಲ್ಡರ್ಸ್ ಮತ್ತು ಪ್ರವರ್ತಕರು ಅದನ್ನು ಮೌಖಿಕವಾಗಿ ಔಷಧಿಯೇಂದೇ ಪ್ರಚಾರ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ನಿಜವಾದ ಸಮಸ್ಯೆಯಿರುವುದೇ ಇಲ್ಲಿ. ಜನರು ಬಲಿ ಬೀಳುವುದೇ ಇಲ್ಲಿ.

ಅನೇಕ ಫುಡ್ ಪ್ರಾಡಕ್ಟ್‌ಗಳ ಪೊಟ್ಟಣಗಳಲ್ಲಿ ಬರೆದಿರುವಂತೆಯೇ ಇದರ ಪೊಟ್ಟಣದ ಮೇಲೂ “ಮಧುಮೇಹ ನಿಯಂತ್ರಣಕ್ಕೆ, ರಕ್ತದೊತ್ತಡ ಕಡಿತಗೊಳಿಸಲು, ತೂಕ ಇಳಿಸಲು, ಬೊಜ್ಜು ಕರಗಿಸಲು ಇತ್ಯಾದಿ ಇತ್ಯಾದಿಗಳಿಗೆ ಸಹಕಾರಿ” ಎಂದಷ್ಟೇ ನಮೂದಿಸಿರುತ್ತಾರೆ. ಹಾಗೆ ನಮೂದಿಸುವುದರಿಂದ ಕಂಪೆನಿಗೆ ಎರಡು ವಿಧದ ಪ್ರಯೋಜನವಿದೆ. ಒಂದನೆಯದಾಗಿ ನೇರವಾಗಿ ಬರೆಯದೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು, ಎರಡನೆಯದಾಗಿ ಪರೋಕ್ಷವಾಗಿ ಇದು ಈ ಎಲ್ಲಾ ಖಾಯಿಲೆಗಳಿಗೆ ಔಷಧಿಯೆಂದು ಪ್ರಚಾರವನ್ನೂ ಮಾಡಬಹುದು.

ಇದನ್ನೇ ಇಟ್ಟುಕೊಂಡು ಫ್ರಾಂಚೈಸಿಗಳು ಮತ್ತು ಪ್ರವರ್ತಕರು ಗ್ರಾಹಕರ ಬ್ರೈನ್ ವಾಶ್ ಮಾಡುತ್ತಾರೆ. ಅವರು ಗ್ರಾಹಕರ ತಲೆ ತಿಕ್ಕಲು ಬಳಸುವ ಇನ್ನೊಂದು ಮುಖ್ಯ ಅಸ್ತ್ರ “ಅಲೋಪತಿ ಔಷಧಿಗಳ ಅಡ್ಡ ಪರಿಣಾಮಗಳು.” ಹಾಗೆ ನೋಡ ಹೋದರೆ ಅಡ್ಡ ಪರಿಣಾಮಗಳು ಎಲ್ಲಾ ಪದ್ದತಿಯ ಔಷಧಿಗಳಲ್ಲೂ ಇವೆ. ಹರ್ಬಲ್ ಲೈಫ್ ಎಂಬ ಫುಡ್ ಪ್ರಾಡಕ್ಟನ್ನು ಔಷಧಿ ಎಂದು ಪರೋಕ್ಷವಾಗಿಯಷ್ಟೇ ಬಿಂಬಿಸುತ್ತಾರಷ್ಟೇ.

PC: Indian Express

ಹರ್ಬಲ್ ಲೈಫ್ ಪ್ರಾಡಕ್ಟ್‌ಗಳಲ್ಲಿ ಅಡ್ಡ ಪರಿಣಾಮಗಳಿಲ್ವಾ ಎಂದು ನೀವು ಮರು ಪ್ರಶ್ನೆ ಹಾಕಿದರೆ “ಇದು ಔಷಧಿಯಲ್ಲ, ಇದು ನ್ಯೂಟ್ರಿಶನ್ ಸಪ್ಲಿಮೆಂಟ್ಸ್” ಎಂದು ಅವರೇ ಹೇಳುತ್ತಾರೆ. ನ್ಯೂಟ್ರಿಶನ್ ಸಪ್ಲಿಮೆಂಟ್ಸ್ ಎಂದ ಮೇಲೆ ನಿಮ್ಮ ಅಡ್ಡ ಪರಿಣಾಮದ ಪ್ರಶ್ನೆ ಮುಗಿಯುತ್ತದೆ. ಸಾಮಾನ್ಯವಾಗಿ ಇಂತಹ ಯಾವುದೇ ನ್ಯೂಟ್ರಿಶನ್ ಸಪ್ಲಿಮೆಂಟ್ಸ್ ಗ್ರಾಹಕರನ್ನು ಹಿಡಿಯಲು ಸದಾ ಬಳಸುವುದು ಜೀವನಶೈಲಿಯಾಧಾರಿತ ಖಾಯಿಲೆಗಳಾದ “ಮಧುಮೇಹ, ರಕ್ತದೊತ್ತಡ, ಅತೀ ಬೊಜ್ಜು, ಕಿಡ್ನಿ ಖಾಯಿಲೆ” ಇತ್ಯಾದಿಗಳನ್ನೇ ಆಗಿದೆ. ಏಕೆಂದರೆ ಈ ಖಾಯಿಲೆಗಳಿಗೆ ಜೀವನ ಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುವುದರಿಂದ ಅಡ್ಡ ಪರಿಣಾಮದ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ.

ಇದನ್ನೂ ಓದಿರಿ: ಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

ಹೊಸದಾಗಿ ಮಧುಮೇಹ ಪೀಡಿತರಾದವರು ಜೀವನಪೂರ್ತಿ ಔಷಧಿ ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಸಮಸ್ಯೆಯಾಗುವುದಿಲ್ವಾ ಎಂದು ನನ್ನಲ್ಲಿ‌ ಪ್ರಶ್ನಿಸುತ್ತಾರೆ. ವಾಸ್ತವ ಏನೆಂದರೆ ಮಧುಮೇಹ ಔಷಧಿಯನ್ನು ಸಮರ್ಪಕವಾಗಿ ಬಳಸುವುದರಿಂದ ಕಿಡ್ನಿಗೆ ಸಮಸ್ಯೆಯಾಗುವುದಿಲ್ಲ. ಸರಿಯಾಗಿ ಔಷಧಿ ಸೇವಿಸದೇ ರಕ್ತದ ಸಕ್ಕರೆ ಅಂಶವು ನಿಯಂತ್ರಣ ತಪ್ಪಿ ಕಿಡ್ನಿಗೆ ಸಮಸ್ಯೆಯಾಗುತ್ತದೆ. ಮತ್ತು ಅಡ್ಡಾ ದಿಡ್ಡಿ ನೋವು ನಿವಾರಕಗಳ ಬಳಕೆಯಿಂದಲೂ ಕಿಡ್ನಿ ಖಾಯಿಲೆ ಬರಬಹುದು.

ಈ ಹರ್ಬಲ್ ಲೈಫ್‌ನ ಒಂದೇ ಪ್ರಾಡಕ್ಟ್ ಹಲವು ಖಾಯಿಲೆಗಳಿಗೆ ಔಷಧಿಯಾದರೆ ಒಬ್ಬಾತನಿಗೆ ನಿಜಕ್ಕೂ ಇರುವ ಖಾಯಿಲೆಗೆ ಮಾತ್ರ ಔಷಧಿಯಾಗಬೇಕೇ ಹೊರತು ಇಲ್ಲದ ಖಾಯಿಲೆಗಳಿಗಲ್ಲ. ಉದಾಹರಣೆಗೆ ಕೇವಲ ಮಧುಮೇಹ ಇರುವ ರೋಗಿ ಇದನ್ನು ತೆಗೆದುಕೊಂಡರೆ ಅದು ಮಧುಮೇಹಕ್ಕೆ ಔಷಧಿಯೆಂದೇ ತರ್ಕಕ್ಕೆ ಒಪ್ಪಿಕೊಳ್ಳೋಣ. ಆದರೆ ಅದರಲ್ಲಿ ಸೂಚಿಸಿರುವ ಪ್ರಕಾರ ಇತರ ಖಾಯಿಲೆಗಳಾದ ಬೊಜ್ಜು, ರಕ್ತದೊತ್ತಡವನ್ನೂ ಅದು ನಿಯಂತ್ರಿಸುತ್ತದಲ್ವಾ? ರಕ್ತದೊತ್ತಡ ಇಲ್ಲದವ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಂಡರೆ ಆತನ ರಕ್ತದೊತ್ತಡ ಕುಸಿದು ಆತನಿಗೆ ಅದು ತೊಂದರೆ ಕೊಡಲೇಬೇಕಲ್ಲವೇ? ಹಾಗೊಂದು ವೇಳೆ ರಕ್ತದೊತ್ತಡ ಇಲ್ಲದವನ ಮೇಲೆ ಅದು ಯಾವ ಪರಿಣಾಮವನ್ನೂ ಬೀರದಿದ್ದರೆ ಅದು ಹೇಗೆ ರಕ್ತದೊತ್ತಡ ಇದ್ದವನ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ? ಒಂದು ವೇಳೆ ರಕ್ತದೊತ್ತಡ ಇಲ್ಲದವ ಸೇವಿಸಿ ಏನಾದರೂ ಆದರೆ ಅದೂ ಅಡ್ಡಪರಿಣಾಮ ತಾನೆ?

ಇದರ ಪ್ರವರ್ತಕರಲ್ಲಿ “ಮಧುಮೇಹದ ಔಷಧಿ ಬಿಟ್ಟು ಇದನ್ನೇ ಸೇವಿಸಿದರೆ ಸಾಕೇ “ಎಂದು ಪ್ರಶ್ನಿಸಿದರೆ, “ಇಲ್ಲ ಇಲ್ಲ, ಔಷಧಿಯ ಜೊತೆ ಜೊತೆಗೇ ಇದನ್ನೂ ಸೇವಿಸಿ” ಎನ್ನುತ್ತಾರೆ. ಹಾಗಾದರೆ ರೋಗಿಯೇಕೆ ಎರಡೆರಡಕ್ಕೆ ದುಡ್ಡು ವ್ಯಯಿಸಬೇಕು?

ಕೆಲವು ರೋಗಿಗಳು ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆಂದು ಮುಗ್ಧವಾಗಿ ನಂಬಿ ಔಷಧಿಯನ್ನು ಕಡಿಮೆಗೊಳಿಸುತ್ತಾರೆ ಅಥವಾ ಬಿಡುತ್ತಾರೆ. ಇದರಿಂದ ಔಷಧಿ ಸೇವನೆಯೂ ಅಸಮರ್ಪಕವಾಗಿ ಮಧುಮೇಹ ನಿಯಂತ್ರಣ ತಪ್ಪಿ ಕಿಡ್ನಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಹರ್ಬಲ್ ಲೈಫ್‌ ಪ್ರಾಡಕ್ಟ್‌‌ನ ಸೇವನೆಯಿಂದ ಕಿಡ್ನಿ ಸಮಸ್ಯೆ ಬಂತೆಂದು ವಾದಿಸಲು ನಮ್ಮಲ್ಲಿ ಸಕಾರಣಗಳಿಲ್ಲದಿದ್ದರೂ, ಇದನ್ನು ನಂಬಿ ಔಷಧಿ ತ್ಯಜಿಸಿ ಮಧುಮೇಹ ನಿಯಂತ್ರಣ ತಪ್ಪಿ‌ ಕಿಡ್ನಿ ಖಾಯಿಲೆ ಬಂತೆಂದು ಹೇಳಲು ಬೇರೆ ಕಾರಣಗಳು ಬೇಕಿಲ್ಲ.

ಇ‌ಂತಹ ಪ್ರಾಡಕ್ಟ್‌ಗಳಿಗೆ ಅತೀ ಹೆಚ್ಚು ಮಾರುಹೋಗುವುದು ವಿದ್ಯಾವಂತ ಮಧ್ಯಮ ವರ್ಗ. ಅವರು ಸ್ವಯಂವೈದ್ಯರಲ್ಲ, ಸೂಪರ್ ವೈದ್ಯರಾಗಲು ಹೋಗುವುದೇ ಹೆಚ್ಚು. ಅಂತರ್ಜಾಲದಲ್ಲಿ ಜಾಲಾಡಿ ಖಾಯಿಲೆ, ಔಷಧಿ ಮತ್ತು ಅಡ್ಡಪರಿಣಾಮದ ಬಗ್ಗೆ ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂಥವರು ವೈದ್ಯರಿಗಿಂತ ಅಂತರ್ಜಾಲವನ್ನೇ ಹೆಚ್ಚು ನಂಬುತ್ತಾರೆ. ಅವರು ಸದಾ ಪರ್ಯಾಯ ಔಷಧಿಗಳ ಹುಡುಕಾಟದಲ್ಲೇ ಇರುತ್ತಾರೆ.
ಅಂತರ್ಜಾಲದಲ್ಲಿ ಇಂತಹ ವಿಷಯಗಳನ್ನು ಅಪ್ಲೋಡ್ ಮಾಡುವವರು ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರಾಗಿರುವುದಿಲ್ಲ ಎಂಬ ಸತ್ಯವನ್ನು ನಾವೆಲ್ಲಾ ಅರಿತುಕೊಳ್ಳಬೇಕು.

ನಾಳೆ ಹರ್ಬಲ್ ಲೈಫ್ ತೆಗೆದುಕೊಂಡವನಿಗೆ ಕಿಡ್ನಿ ಖಾಯಿಲೆ ಬಂತೆಂದು ಹರ್ಬಲ್ ಲೈಫನ್ನು ದೂರಲಾಗುವುದಿಲ್ಲ. ಒಂದು ವೇಳೆ ಹರ್ಬಲ್ ಲೈಫ್‌ನಿಂದಾಗಿಯೇ ಕಿಡ್ನಿ ಖಾಯಿಲೆ ಬಂದರೂ ಕಂಪೆನಿಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವರು ಮೊದಲೇ ಕೊರೆದಿಟ್ಟ ಕಳ್ಳ ಕಿಂಡಿಗಳಿರುತ್ತವೆ.
ನಮ್ಮ ಆರೋಗ್ಯದ ಕಾಳಜಿ ನಮ್ಮದಾಗಿರಬೇಕೇ ಹೊರತು ಅದನ್ನು ಯಾವುದೋ ಕಂಪೆನಿಯ ಮೇಲೆ ಹೊರಿಸಲಾಗದು.

ಇದನ್ನೂ ಓದಿರಿ: ಕಾಲೇಜ್‌‌ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ‘ಗೂಂಡಾ ಸಂಘಟನೆ’ಗಳಿಗೆ ಹಕ್ಕಿಲ್ಲ: ಅಲೋಶಿಯಸ್‌‌ ಬೆಂಬಲಕ್ಕೆ ನಿಂತ ಜನಪರ ಸಂಘಟನೆಗಳು

1 COMMENT

LEAVE A REPLY

Please enter your comment!
Please enter your name here