ನಟಿ, ನಿರ್ದೇಶಕಿ, ಬರಹಗಾರ್ತಿ ಶೈಲಜಾ ಪಡಿಂಡಾಲ ನಿರ್ದೇಶಿಸಿರುವ ಕನ್ನಡದ ಮೊದಲ ಲೆಸ್ಬಿಯನ್ ಪ್ರೇಮಕಥೆಯ ಚಿತ್ರ ‘ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಕನ್ನಡದ ಈ ಲೆಸ್ಬಿಯನ್ ಪ್ರೇಮಕಥೆಯನ್ನು ಆಧರಿಸಿದ ಚಿತ್ರ ‘ನಾನು ಲೇಡಿಸ್’ ಅಪರೂಪದ ಗೌರವವನ್ನು ಗಳಿಸಿದ್ದು, ಮುಂದಿನ ತಿಂಗಳು ಅಕ್ಟೋಬರ್ 1 ರಿಂದ 16 ರವರೆಗೆ ಅಮೆರಿಕದ ಸಿಯಾಟಲ್‌ನಲ್ಲಿ ನಡೆಯಲಿರುವ 16 ನೇ ತಸ್ವೀರ್ ದಕ್ಷಿಣ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.
’ನಾನು ಲೇಡಿಸ್’ ಚಲನಚಿತ್ರವು ಇಬ್ಬರು ಯುವತಿಯರು ಈ ಸಮಾಜದಲ್ಲಿ ತಮ್ಮ ಪ್ರೇಮವನ್ನು ಉಳಿಸಿಕೊಳ್ಳಲು ಹೆಣಗಾಡುವ ಕಥೆಯ ಜೊತೆಗೆ ಮಧ್ಯಮ ವರ್ಗದ ಆರ್ಥಿಕ ಸಮಸ್ಯೆಗಳು, ಸಮಾಜ, ಆರ್ಥಿಕ ವ್ಯವಸ್ಥೆ, ಲಿಂಗತ್ವ, ಮದುವೆ, ಸಲಿಂಗಿಗಳ ಸಮುದಾಯದ ಸಂತಾನೋತ್ಪತ್ತಿ ಹಕ್ಕುಗಳಂತಹ ಅನೇಕ ಅಂಶಗಳನ್ನು ಈ ಚಲನಚಿತ್ರವು ಹೊಂದಿದೆ ಎಂದು ಶೈಲಜಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ
ಐದು ವರ್ಷದ ಕೆಳಗೆ ಶೈಲಜಾ ‘ಮೆಮೋರೀಸ್ ಆಫ್ ಮೆಷೀನ್’ ಎಂಬ ಕಿರುಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಆ ಕಿರುಚಿತ್ರ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಈ ಬಾರಿ ಲೆಸ್ಬಿಯನ್ ಪ್ರೇಮಕಥೆಯ ಮೂಲಕ ಕನ್ನಡಕ್ಕೆ ಅಪರೂಪವಾದ ಕಥಾ ಎಳೆಯನ್ನು ಹೇಳಲು ಹೊರಟಿದ್ದಾರೆ.

’ನನ್ನ ಮೊದಲ ಕಿರುಚಿತ್ರ ’ಮೆಮೋರೀಸ್ ಆಫ್ ಮೆಷೀನ್’ ಇದೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಈಗ ನನ್ನ ಮೊದಲ ಚಿತ್ರ ಕೂಡ ಇಲ್ಲಿಯೇ ಪ್ರದರ್ಶನಗೊಳ್ಳುತ್ತಿರುವುದಕ್ಕೆ ನಾನು ರೋಮಾಂಚಿತಳಾಗಿದ್ದೇನೆ. ತಸ್ವೀರ್ ದಕ್ಷಿಣ ಏಷ್ಯನ್ ಚಲನಚಿತ್ರೋತ್ಸವದೊಂದಿಗೆ ನನ್ನ ಅನುಭವ ಮರೆಯಲಾರದಂತಹದ್ದು’ ಎಂದು ಶೈಲಜಾ ಹೇಳಿದ್ದಾರೆ.
ಇನ್ನು ತಸ್ವೀರ್ ಫಿಲ್ಮ್ ಫೆಸ್ಟಿವಲ್‌ನ ಸಂಸ್ಥಾಪಕಿ ರೀಟಾ ಮೆಹೆರ್ “ಇದೊಂದು ಕಠಿಣ ಸ್ಪರ್ಧೆಯಾಗಿತ್ತು. ನಮ್ಮ ಚಲನಚಿತ್ರೋತ್ಸವದ 16 ನೇ ಆವೃತ್ತಿಯಲ್ಲಿ ಶೈಲಜಾ ಅವರ ‘ನಾನು ಲೇಡಿಸ್’ ಪ್ರದರ್ಶಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ನಾನು ಲೇಡೀಸ್ ಒಂದು ಸುಂದರ ಕಥೆ!” ಎಂದಿದ್ದಾರೆ.
ಚಿತ್ರದಲ್ಲಿ ಶೈಲಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೇದಿನಿ ಕೆಳಮನೆ, ಗುರು ಸೋಮಸುಂದರಮ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಹೊಸಬರಾದ ಕೋಮಲ್ ಖಿಯಾನಿ ಮತ್ತು ಚೆಹೆಕ್ ಬಿಲ್ಗಿ ಹೊತ್ತಿದ್ದಾರೆ. ಚಿತ್ರವನ್ನು ವಿಷ್ಣು ಪ್ರದೀಪ್, ಎಸ್ತರ್ ರೋಷಿತಾ ಮತ್ತು ತಿಜು ಈಸ್ತಪ್ಪನ್ ನಿರ್ಮಿಸಿದ್ದಾರೆ.
ದಕ್ಷಿಣ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನದ ನಂತರ, ಚಲನಚಿತ್ರವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು


