ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯು ಕನ್ನಡಕ್ಕಾಗಿ ನಾವು ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಒಂದು ವಾರ ‘ಮಾತಾಡ್ ಮಾತಾಡ್ ಕನ್ನಡ’ ಎಂಬ ಅಭಿಯಾನ ನಡೆಯಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಅಕ್ಟೋಬರ್ 24 ರಿಂದ 30ರ ವರೆಗೆ ನಡೆಯಲಿದೆ. ಈ ವೇಳೆ ರಾಜ್ಯದಲ್ಲಿ ಇರುವ ಕನ್ನಡಿಗರು, ಕನ್ನಡೇತರ ಭಾಷಿಕರು ಪ್ರೀತಿ ಮತ್ತು ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕು. ಆದರೆ, ಇದು ಕಡ್ಡಾಯವಲ್ಲ ಎಂದು ಮಾಹಿತಿ ನೀಡಿದ್ದಾರೆ.
ಒಂದು ವಾರಗಳ ಕಾಲ ಕನ್ನಡಮಯ ವಾತಾವರಣ ಸೃಷ್ಟಿಸಲು ಹಲವು ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ʼಒಂದೇ ದೇಶ, ಒಂದೇ ಭಾಷೆʼ ಎಂಬ ಕರಾಳ ನೀತಿಯ ಮೂಲಕ ಹಿಂದಿ ಹೇರಿಕೆ: ಎಚ್.ಡಿ.ಕುಮಾರಸ್ವಾಮಿ
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸಲು ಕರೆ ನೀಡಿದ್ದಾರೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವ ಜನರು ಕನಿಷ್ಠ 100 ಪದಗಳನ್ನು ಕಲಿತು ಬಳಸುವಂತೆ ಸಚಿವರು ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಅ. 28 ರಂದು ಒಂದು ಲಕ್ಷ ಕಂಠಗಳಲ್ಲಿ ಒಂದು ಸಾವಿರ ಕಡೆಗಳಲ್ಲಿ ಕನ್ನಡದ ಮೂರು ಹಾಡುಗಳ ಸಾಮೂಹಿಕ ಗಾಯ ನಡೆಸಲಾಗುತ್ತದೆ. ಅನ್ಯಭಾಷೆಯ ಪದಗಳನ್ನು ಒಂದೂ ಬಳಸದೇ ಕನ್ನಡದಲ್ಲಿ ನಿರರ್ಗಳವಾಗಿ ನಾಲ್ಕು ನಿಮಿಷ ಕಾಲ ನಾಡು-ನುಡಿಯ ಪರಂಪರೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಕಳುಹಿಸುವ ಸ್ಫರ್ಧೆ ನಡೆಸಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅಭಿಯಾನದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ಕನ್ನಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.
ಇದನ್ನೂ ಓದಿ: ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ


