ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ರದ್ಧತಿ ವಿರುದ್ಧ ಉಪನ್ಯಾಸಕರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ಕೆಲವೇ ದಿನಗಳಲ್ಲಿ ಕಾಶ್ಮೀರಿ ಕೇಂದ್ರಾಡಳಿತ ಪ್ರದೇಶದ ಶಿಕ್ಷಣ ಇಲಾಖೆಯಿಂದ ಅವರನ್ನು ಅಮಾನತುಗೊಳಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಅವರು ಆದೇಶದಲ್ಲಿ ರಾಜ್ಯಶಾಸ್ತ್ರದ ಹಿರಿಯ ಉಪನ್ಯಾಸಕ ಜಹೂರ್ ಅಹ್ಮದ್ ಭಟ್ ಅವರನ್ನು ”ತಪ್ಪಿತಸ್ಥ ಅಧಿಕಾರಿ” ಎಂದು ಬಣ್ಣಿಸಿದ್ದಾರೆ.
ಹಿರಿಯ ಉಪನ್ಯಾಸಕ ಜಹೂರ್ ಅಹ್ಮದ್ ಭಟ್ ಅವರು ಜಮ್ಮು-ಕಾಶ್ಮೀರ ನಾಗರಿಕ ಸೇವಾ ನಿಯಮಗಳು, ಸರ್ಕಾರಿ ನೌಕರರ ನಡವಳಿಕೆ ನಿಯಮಗಳು ಮತ್ತು ಜಮ್ಮು-ಕಾಶ್ಮೀರ ರಜೆ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಭಟ್ ಅವರ “ನಡತೆ” ಕುರಿತು ತನಿಖೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸುಬಹ್ ಮೆಹ್ತಾ ಅವರಿಗೆ ತಿಳಿಸಲಾಗಿದೆ.
ವಕೀಲರಾಗಿರುವ ಭಟ್ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ಆರು ನಿಮಿಷಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ಧತಿ ವಿರುದ್ಧ ವಾದಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
”2019ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ಕ್ರಮವು ಸಹಕಾರಿ ಫೆಡರಲಿಸಂಗೆ ವಿರುದ್ಧವಾಗಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದೆ” ಎಂದು ಭಟ್ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಪೀಠದ ಎದುರು ಹೇಳಿದರು.
”ನಾನು ಜಮ್ಮು-ಕಾಶ್ಮೀರದಲ್ಲಿ ರಾಜ್ಯಶಾಸ್ತ್ರದ ಹಿರಿಯ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಸುಂದರ ಸಂವಿಧಾನದ ಬಗ್ಗೆ 2019ರಿಂದ ಕಲಿಸಲು ನನಗೆ ತುಂಬಾ ಕಷ್ಟವಾಗುತ್ತಿದೆ. 2019ರ ನಂತರ ನಮ್ಮದು ಪ್ರಜಾಪ್ರಭುತ್ವವೇ? ಎಂದು ವಿದ್ಯಾರ್ಥಿಗಳು ಕೇಳಿದರೆ ಉತ್ತರಿಸುವುದು ಕಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: 20 ಕ್ಕೂ ಹೆಚ್ಚು ನಾಯಕರು ಗುಲಾಂ ನಬಿ ಆಜಾದ್ ಪಕ್ಷದಿಂದ ಕಾಂಗ್ರೆಸ್‌ಗೆ ಮರು ಸೇರ್ಪಡೆ


