ಈ ವರ್ಷ ಕೇರಳದಲ್ಲಿ ರಾಜ್ಯ ಟೆಲಿವಿಷನ್ ಪ್ರಶಸ್ತಿಗೆ ಯಾವುದೇ ಟಿವಿ ಸೀರಿಯಲ್ ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ. “ಕಲಾತ್ಮಕ ಮತ್ತು ತಾಂತ್ರಿಕ ಅರ್ಹತೆಯಿರುವ ಯಾವುದೇ ಧಾರವಾಹಿ ತೀರ್ಪುಗಾರರಿಗೆ ಕಂಡು ಬರದ ಕಾರಣ, ಈ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡದಿರಲು ನಿರ್ಧರಿಸಲಾಗಿದೆ” ಎಂದು ತೀರ್ಪುಗಾರರು ತಿಳಿಸಿದ್ದಾರೆ.
ಧಾರಾವಾಹಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ನೆಗೆಟಿವ್ ಆಗಿ ಚಿತ್ರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿ, ‘ಎರಡನೇ ಅತ್ಯುತ್ತಮ ಟೆಲಿ ಸೀರಿಯಲ್’ ಪ್ರಶಸ್ತಿಯೂ ಈ ಬಾರಿ ಇಲ್ಲ. ಜೊತೆಗೆ ಅತ್ಯುತ್ತಮ ನಿರ್ದೇಶಕರ (ಟೆಲಿ ಸೀರಿಯಲ್ / ಟೆಲಿ ಫಿಲ್ಮ್) ಪ್ರಶಸ್ತಿಯನ್ನು ನೀಡದಿರಲು ತೀರ್ಪುಗಾರರು ನಿರ್ಧರಿಸಿದ್ದಾರೆ.
“ಯಾವುದೇ ಅದ್ಭುತ ಅಥವಾ ಜವಾಬ್ದಾರಿಯುತ ನಿರ್ದೇಶಕರು ಕಂಡುಬಂದಿಲ್ಲ” ಎಂದಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮತ್ತು ಹಾಸ್ಯ ಕಾರ್ಯಕ್ರಮಗಳನ್ನು ಕುಟುಂಬ ಸಮೇತರಾಗಿ ಜನ ವೀಕ್ಷಿಸುತ್ತಿರುವುದರಿಂದ, ಅವುಗಳ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ ರೇಪ್: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ
ಮಲಯಾಳಂ ದೂರದರ್ಶನ ಧಾರಾವಾಹಿಗಳು ತಮ್ಮ ಕುಟುಂಬ ನಾಟಕಗಳ ಚಿತ್ರಣ, ಮನೆಗಳಲ್ಲಿ ಮಹಿಳೆಯರ ತ್ಯಾಗವನ್ನು ವೈಭವೀಕರಿಸುವ ಕಥೆಗಳು, ಕೌಟುಂಬಿಕ ದೌರ್ಜನ್ಯ ಮತ್ತು ಒಂದೇ ಮನೆಯಲ್ಲಿ ವಾಸಿಸುವ ಮಹಿಳೆಯರ ನಡುವಿನ ದ್ವೇಷದಂತಹ ವಿಷಯಗಳ ಕುರಿತು ಸಾಕಷ್ಟು ಟೀಕೆಗೆ ಒಳಗಾಗಿವೆ.
ಮೇ ಕೊನೆಯಲ್ಲಿ, ಹೊಸ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ಮತ್ತು ಸಜಿ ಚೆರಿಯನ್ ಸಂಸ್ಕೃತಿ ಸಚಿವರಾಗಿ ನೇಮಕಗೊಂಡ ನಂತರ, ಅವರು ದೂರದರ್ಶನ ಧಾರಾವಾಹಿಗಳ ಬಗ್ಗೆ ಕೆಲವು ಕಟುವಾದ ಟೀಕೆಗಳನ್ನು ಮಾಡಿದ್ದಾರೆ.
ಟಿವಿ ಕಾರ್ಯಕ್ರಮವೊಂದರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಜಿ, ಸರ್ಕಾರವು “ಅವೈಜ್ಞಾನಿಕ ಮತ್ತು ಮೂಢನಂಬಿಕೆಯ ವಿಷಯವನ್ನು ಪ್ರಸಾರ ಮಾಡುವುದರಿಂದ” ಟೆಲಿವಿಷನ್ ಸೀರಿಯಲ್‌ಗಳ ಸೆನ್ಸಾರ್‌ಶಿಪ್ ಮತ್ತು ಸೆನ್ಸಾರ್ ಬೋರ್ಡ್ ರಚನೆ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಹೇಳಿದ್ದರು.
ಇದು ಕೇವಲ ಮಲಯಾಳಂ ಧಾರಾವಾಹಿಗಳ ಕಥೆಯಲ್ಲ ಹೆಚ್ಚಿನ ಭಾಷೆಗಳಲ್ಲಿ ಧಾರಾವಾಹಿಗಳು ಇಂತಹ ಕಥೆಯನ್ನೆ ಹೊಂದಿವೆ. ಮಹಿಳೆಯರು, ಅವರ ಸಂಬಂಧಗಳು, ಮಹಿಳೆಯರ ತ್ಯಾಗವನ್ನು ವೈಭವೀಕರಿಸುವುದು, ಅತ್ತೆ ಸೋಸೆ ಜಗಳ, ಅಕ್ಕ-ತಂಗಿ ಜಗಳ, ಒಬ್ಬ ಗಂಡಸಿಗಾಗಿ ಹೊಡೆದಾಡುವ ಮಹಿಳೆಯರು…..ಇಂತಹ ಕಥೆಗಳೇ ಧಾರವಾಹಿಗಳಾಗುತ್ತಿವೆ. ಧಾರವಾಹಿಗಳು ಬದಲಾಗಬೇಕಾದ ಅನಿರ್ವಾಯತೆ ಸೃಷ್ಠಿಯಾಗುವ ನಿಟ್ಟಿನಲ್ಲಿ ಕೇರಳ ಸರ್ಕಾರ ಮತ್ತು ತೀರ್ಪುಗಾರರ ಈ ನಿರ್ಧಾರವನ್ನು ಸ್ವಾಗತಿಸಬೇಕಾಗಿದೆ.
ಇದನ್ನೂ ಓದಿ: ‘ಮನಿ ಹೀಸ್ಟ್-5’ ವೀಕ್ಷಿಸಲು ರಜೆ ಘೋಷಿಸಿದ ಕಂಪೆನಿ!


