ಸಾಕ್ಷರತೆಯಲ್ಲಿ ಮುಂದಿರುವ ಕೇರಳ ರಾಜ್ಯವು ಮತೀಯವಾದ, ಕಟ್ಟಳೆಗಳಿಗೆ ಸೊಪ್ಪು ಹಾಕುವುದಿಲ್ಲ ಎನ್ನುವುದನ್ನು ಅಲ್ಲಿನ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಒಂದು ಸುಂದರ ಫೋಟೊ ಮೂಲಕ ಸಂಪ್ರದಾಯವಾದಿಗಳ ವಿರುದ್ಧ ವಿನೂತನವಾಗಿ ಸೆಡ್ಡು ಹೊಡೆದು ಸುದ್ದಿಯಾಗಿದ್ದಾರೆ.
ಕಾಲೇಜ್ ಆಫ್ ಇಂಜಿನಿಯರಿಂಗ್ ತ್ರಿವೇಂದ್ರಮ್ (ಸಿಇಟಿ) ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬಸ್ ನಿಲ್ದಾಣದಲ್ಲಿ ಲಿಂಗಬೇಧವೆಣಿಸದೆ ಒಬ್ಬರ ಕಾಲಿನ ಮೇಲೆ ಮತ್ತೊಬ್ಬರು ಕುಳಿತುಕೊಂಡು ತೆಗೆಸಿಕೊಂಡ ಸುಂದರ ಫೋಟೊ ಒಂದು ವೈರಲ್ ಆಗಿದೆ. ಹಲವಾರು ಜನ ಆ ಫೋಟೊವನ್ನು ಪ್ರೊಫೈಲ್ ಪಿಕ್ ಆಗಿ, ವಾಟ್ಸಾಪ್ ಸ್ಟೇಟಸ್ ಆಗಿ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಉಳಿದ ವಿದ್ಯಾರ್ಥಿಗಳು ಕೂಡ ಅದೇ ಜಾಗದಲ್ಲಿ ಕುಳಿತು ಫೋಟೊ ತೆಗೆಸಿದ್ದಾರೆ! ಆ ಮೂಲಕ ನೈತಿಕ ಪೊಲೀಸ್‌ಗಿರಿ ಮಾಡಲು ಮುಂದಾದವರಿಗೆ ತಕ್ಕ ಉತ್ತರ ನೀಡಿದ್ದಾರೆ.
ನಡೆದಿದ್ದಿಷ್ಟು..
ಸಿಇಟಿ ಕಾಲೇಜಿನ ಹೊರಗಿನ ಬಸ್ ನಿಲ್ದಾಣವು ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರನ್ನು ಮಾತನಾಡಿಸಲು, ಹರಟೆ ಹೊಡೆಯಲು ಪ್ರಸಕ್ತ ಸ್ಥಳವಾಗಿತ್ತು. ಕಾಲೇಜು ಮುಗಿದ ನಂತರ ಅಲ್ಲಿ ಕುಳಿತು ಹುಡುಗ ಹುಡುಗಿಯರು ಸೇರಿ ತಮಾಷೆ ಮಾಡುತ್ತಿದ್ದುದು ಎಂದಿನ ದಿನಚರಿ. ಆದರೆ ಇದು ಅಲ್ಲಿನ ಸ್ಥಳೀಯ ಸಂಪ್ರದಾಯವಾದಿಗಳಿಗೆ ಸಹಿಸಿಕೊಳ್ಳಲು ಅಸಾಧ್ಯವಾಗಿತ್ತು. ಅವರ ಪ್ರಕಾರ ಹುಡುಗ ಹುಡುಗಿಯರು ಮಾತನಾಡಬಾರದು, ಸ್ನೇಹ ಪ್ರೀತಿ ಮಾಡಬಾರದು. ಅದಕ್ಕಾಗಿ ಸ್ಥಳೀಯರು ಕಳೆದ ಜುಲೈ 19ರ ಮಂಗಳವಾರ ರಾತ್ರೋರಾತ್ರಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತುಕೊಳ್ಳುವ ಕುರ್ಚಿಗಳನನ್ನು ತೆಗೆದು ಕೇವಲ ಒಬ್ಬೊಬ್ಬರು ಮಾತ್ರ ಕುಳಿತುಕೊಳ್ಳುವಂತೆ ಮೂರು ಕುರ್ಚಿಗಳನ್ನು ಹಾಕಲಾಗಿತ್ತು. ಎರಡು ಕುರ್ಚಿ ಜೊತೆಗಿದ್ದರೆ ಹುಡುಗ-ಹುಡುಗಿ ಕುಳಿತು ಮಾತನಾಡುತ್ತಾರೆ ಎಂಬುದು ಅವರ ಈ ಕೃತ್ಯಕ್ಕೆ ಕಾರಣವಾಗಿತ್ತು.

ಇದನ್ನು ನೋಡಿದ ವಿದ್ಯಾರ್ಥಿಗಳಿಗೆ ಆಶ್ಚರ್ಯ ಮತ್ತು ಆಘಾತವಾಗಿತ್ತು. ಇದನ್ನು ಪ್ರತಿಭಟಿಸಲು ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಧರಿಸಿದರು. ಒಂದೇ ಸೀಟಿನಲ್ಲಿ ಹುಡುಗ ಹುಡುಗಿಯರು ತೊಡೆಮೇಲೆ ಕುಳಿತು ಫೋಟೊ ತೆಗೆದು ತಮ್ಮ ಸ್ನೇಹಿತರ ಗುಂಪುಗಳಲ್ಲಿ ಹಂಚಿಕೊಂಡರು. ಅವರ ಈ ದಿಟ್ಟ ಮತ್ತು ವಿನೂತನ ಪ್ರತಿಭಟನೆಯ ಈ ಚಿತ್ರಗಳು ನಂತರ ಎಲ್ಲೆಂದರಲ್ಲಿ ವೈರಲ್ ಆದವು. ಉಳಿದ ವಿದ್ಯಾರ್ಥಿಗಳು ಈ ಫೋಟೊ ತೆಗೆಸಿಕೊಳ್ಳುವ ಪ್ರತಿಭಟನೆಗೆ ಕೈಜೋಡಿಸಿ ತಾವು ಜೊತೆಗೆ ಕುಳಿತು ಪೋಟೊ ತೆಗೆಸಿಕೊಂಡರು.
“ನಾವು ಪ್ರತಿನಿತ್ಯ ಅಲ್ಲಿ ಕುಳಿತರೆ, ಹುಡುಗ-ಹುಡುಗಿ ಮಾತನಾಡಿದರೆ ಸ್ಥಳೀಯರು ತೊಂದರೆ ಕೊಡುತ್ತಿದ್ದರು. ನಿಂದಿಸುತ್ತಿದ್ದರು. ಹಾಗಾಗಿ ಇಬ್ಬರು ಕೂರಬಾರದೆಂದು ಒಂದೊಂದು ಕುರ್ಚಿಯನ್ನು ತೆಗೆಸಿದ್ದರು. ಅದನ್ನು ವಿದ್ಯಾರ್ಥಿಗಳು ವಿರೋಧಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ” ಎಂದು ಸಿಇಟಿ ಕಾಲೇಜು ಸಂಘದ ಉಪಾಧ್ಯಕ್ಷರಾದ ಕೆ.ಪೆ ಫೆಬಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಮತ್ತೊಬ್ಬ ವಿದ್ಯಾರ್ಥಿನಿ ಆರ್ಯ ಪ್ರತಿಕ್ರಿಯಿಸಿ, “ನಾವು ಪೋಸ್ಟ್ ಮಾಡಿದ ಚಿತ್ರ ವೈರಲ್ ಆಗುತ್ತದೆ ಎಂದು ನಾವು ಅಂದಾಜಿಸಿರಲಿಲ್ಲ. ಅದು ಅಷ್ಟೊಂದು ಹರಿದಾಡುತ್ತಿರುವುದು ನಮ್ಮ ಈ ಸರಳ ಪ್ರತಿಭಟನೆಗೆ ಜನಬೆಂಬಲವನ್ನು ತೋರಿಸುತ್ತದೆ. ಜೊತೆಗೆ ಇಲ್ಲಿನ ಸ್ಥಳೀಯರು ವಿದ್ಯಾರ್ಥಿಗಳ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಮತ್ತು ನಮ್ಮನ್ನು ಹೇಗೆ ನಿಯಂತ್ರಿಸಲು ಬಯಸುತ್ತಾರೆ ಎಂಬುದನ್ನು ತಿಳಿಸುತ್ತದೆ. ಆದರೆ ನಮ್ಮ ಪ್ರತಿಭಟನೆಯ ನಂತರ ಇದುವರೆಗೂ ನಮಗೆ ಸಕರಾತ್ಮಕ ಪ್ರತಿಕ್ರಿಯೆಗಳು ಬಂದಿವೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ಹೀಗಿತ್ತು; ಚಿತ್ರಗಳಲ್ಲಿ ನೋಡಿ
ಈ ಮೊದಲು ಸಹ ಸಿಇಟಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ ಸಮಯದ ಕುರಿತು ಪ್ರತಿಭಟನೆ ನಡೆಸಿದ್ದರು. ಸಂಜೆ 6.30ರ ಒಳಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ಒಳಗೆ ಬರಬೇಕು ಎಂಬ ನಿಯಮ ತಂದಾಗ ದೊಡ್ಡ ಪ್ರತಿಭಟನೆ ನಡೆಸಿ ಅದನ್ನು 9.30ರ ಒಳಗೆ ಬರಬೇಕು ಎಂದು ತಿದ್ದುಪಡಿ ತರಲು ಕಾರಣರಾಗಿದ್ದರು. ಈಗ ಮತ್ತೊಮ್ಮೆ ಮತೀಯ ಗೂಂಡಾಗಿರಿ ವಿರುದ್ಧ ಸ್ಪಷ್ಟ ಸಂದೇಶ ನೀಡಿದ್ದಾರೆ.
ಕೃಪೆ: ಆನ್‌ಮನೋರಮ



ಗಂಡು ಹೆಣ್ಣಿನ ಸ್ನೇಹ ಅದು ಗಿಟ್ಟದ ಸಂಪ್ರದಾಯಿಗಳ ಲೈಂಗಿಕ ವಿಕರಾಳಗಳಿಗೆ ಸವಾಲೊಡ್ಡುತ್ತದೆ 😁ಪಾಪ ಆವರೇನು ಮಾಡಿಯಾರು?
ಆದರೆ ಈ ತಾಲೆಬಾನಿಗಳಿಗೆ ವಿದ್ಯಾರ್ಥಿಗಳ ಉತ್ತರ ಸಮಂಜಸವಾದದ್ದೆ.
ಈ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ಸಲಾಂ.
Super