Homeರಂಜನೆಕ್ರೀಡೆಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ

ಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ

- Advertisement -
- Advertisement -

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ವಾ, ಡಾನ್ ಬ್ರಾಡ್ಮನ್, ರಿಕಿ ಪಾಂಟಿಂಗ್ ನಂತರದ ನಾಲ್ಕನೇ ಸ್ಥಾನದಲ್ಲಿ ಭಾರತದ ವಿರಾಟ್ ಕೊಹ್ಲಿ ಇದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಮುನ್ನಡೆಸಿದ 68 ಟೆಸ್ಟ್‌ಗಳಲ್ಲಿ 40 ಜಯವನ್ನು ತಂದುಕೊಟ್ಟಿದ್ದಾರೆ. ಆದಾಗ್ಯೂ ಇತ್ತೀಚೆಗೆ ನಡೆಯುತ್ತಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ರಿಂದ ಸೋತ ಒಂದು ದಿನದ ಬಳಿಕ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ಕ್ರಿಕೆಟ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮೊದಲ ಟೆಸ್ಟ್ ಗೆದ್ದು, ನಂತರ ಎರಡು ಸತತ ಸೋಲುಗಳನ್ನು ಭಾರತ ತಂಡ ಅನುಭವಿಸಿದೆ. ಬಹುಶಃ ಆ ನೋವು ಕೋಹ್ಲಿಯನ್ನು ಕಾಡಿರಬಹುದು. ಹಾಗಾಗಿ ’ನನ್ನ ಮನಸ್ಸಿನಲ್ಲಿ ಸ್ಪಷ್ಟತೆಯಿದೆ, ನಾನು ತಂಡಕ್ಕೆ ಅಪ್ರಾಮಾಣಿಕನಾಗಿ ಇರಲು ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.

33 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ವಿಶ್ವದ ಬಹುತೇಕ ಬೌಲರ್‌ಗಳ ನಿದ್ದೆಗೆಡಿಸಬಲ್ಲ ಅದ್ಭುತ ಬಲಗೈ ಬ್ಯಾಟ್ಸ್‌ಮ್ಯಾನ್. ಕ್ರೀಡಾಂಗಣದ ಮೂಲೆಮೂಲೆಗೂ ಚೆಂಡನ್ನು ಅಟ್ಟಬಲ್ಲ ಸಾಮರ್ಥ್ಯದ ಕೊಹ್ಲಿ ಎಲ್ಲ ಆಯ್ಕೆಗಾರರ ಅಚ್ಚುಮೆಚ್ಚು. ತನ್ನ ಆಕ್ರಮಣಕಾರಿ ಮನೋಭಾವನೆಯಿಂದ ಭಾರತೀಯರ ಮನಸ್ಸನ್ನು ಗೆದ್ದ ಆಟಗಾರ. ಭಾರತ ಒಂದು ದಿನದ ತಂಡಕ್ಕೆ 2008ರಲ್ಲಿ ಪಾದಾರ್ಪಣೆ ಮಾಡಿ ಗಣನೀಯ ಸಾದನೆ ಮಾಡಿರುವ ಕೊಹ್ಲಿ ಹಿಂತಿರುಗಿ ನೋಡಿಯೇ ಇಲ್ಲ. ತನ್ನ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 99 ಪಂದ್ಯಗಳಲ್ಲಿ 50.4 ಸರಾಸರಿಯಲ್ಲಿ 7962 ರನ್‌ಗಳನ್ನು, ಒಂದು ದಿನದ ಕ್ರಿಕೆಟ್‌ನಲ್ಲಿ 254 ಪಂದ್ಯಗಳಲ್ಲಿ 59.1 ಸರಾಸರಿಯಲ್ಲಿ 12169 ರನ್‌ಗಳನ್ನು, ಟಿ20 ಕ್ರಿಕೆಟ್‌ನಲ್ಲಿ 95 ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 3227 ರನ್‌ಗಳನ್ನು ಹೊಡೆದು ತನ್ನ ಬ್ಯಾಟಿಂಗ್ ಮಾಂತ್ರಿಕತೆಯನ್ನು ಸಾಬೀತು ಮಾಡಿದ್ದಾರೆ. ತೆಂಡೂಲ್ಕರ್ ನಂತರ ಭಾರತ ಕಂಡ ಶ್ರೇಷ್ಟ ಸವ್ಯಸಾಚಿ ಆಟಗಾರ ಯಾರು ಎಂಬ ಪ್ರಶ್ನೆಗೆ ಕೊಹ್ಲಿ ಉತ್ತರವಾಗಿ ಕಾಣಿಸಿದ್ದಾರೆ.

ತೊಂಭತ್ತರ ದಶಕದ ನಂತರ ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಭಾರತದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರ ಮಧ್ಯೆ ಬೇರೆ ಆಟಗಾರರು ನಾಯಕರಾಗಿದ್ದರೂ ಅದು ಕೇವಲ ತಾತ್ಕಾಲಿಕ ವ್ಯವಸ್ಥೆ ಮಾತ್ರ ಆಗಿರುತ್ತದೆ. ಇವರಲ್ಲಿ ಅಜರುದ್ದೀನ್ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದರೆ, ಆಟಗಾರರ ಮಧ್ಯೆ ಸಮನ್ವಯತೆಯನ್ನು ತಂದು ಒಂದು ಅದ್ಭುತ ತಂಡವಾಗಿ ರೂಪಿಸಿ ತಂಡಕ್ಕೆ ಹಲವು ಗೆಲುವು ತಂದುಕೊಟ್ಟ ಕೀರ್ತಿ ಸೌರವ್ ಗಂಗೂಲಿಗೆ ಸಲ್ಲುತ್ತದೆ. ಅದೇ ದಾರಿಯಲ್ಲಿ ನಡೆದ ಧೋನಿ, ತನ್ನ ಶಾಂತ ಸ್ವಭಾವದ ನಿರ್ಧಾರಗಳಿಂದ ಬೇರೆ ಯಾವ ನಾಯಕನೂ ಸಾಧಿಸದ ಯಶಸ್ಸನ್ನು ಕಂಡಿದ್ದಾರೆ. ಟಿ20 ವಿಶ್ವಕಪ್ ಹಾಗೂ ಒಂದು ದಿನದ ಕ್ರಿಕೆಟ್‌ನ ವಿಶ್ವಕಪ್‌ಗಳನ್ನು ಗೆಲ್ಲಿಸಿದ ಕೀರ್ತಿ ಧೋನಿಗೆ ಸಲ್ಲುತ್ತದೆ.

ತೆಂಡೂಲ್ಕರ್ ಅಸಾಧಾರಣ ಪ್ರತಿಭೆಯ ಆಟಗಾರನಾಗಿದ್ದರೂ ಉತ್ತಮ ನಾಯಕನಾಗಲೂ ಸಾಧ್ಯವಾಗಲಿಲ್ಲ. ಸಚಿನ್ ನಾಯಕತ್ವದಲ್ಲಿ ಭಾರತ ತಂಡವು 25 ಟೆಸ್ಟ್‌ಗಳಲ್ಲಿ 4ರಲ್ಲಿ ಗೆದ್ದು 9ರಲ್ಲಿ ಸೋಲು ಅನುಭವಿಸಿ 12 ಡ್ರಾ ಮಾಡಿಕೊಂಡಿದೆ. ಸಚಿನ್ ಬೇರೆ ಯಾವ ನಾಯಕನೂ ಯೋಚಿಸದ ರೀತಿ ಯೋಜನೆಗಳನ್ನು ಹಾಕಿಕೊಂಡು ಮೈದಾನದಲ್ಲಿ ಇಳಿಯುತ್ತಿದ್ದರು. ಆದರೂ ಅದಕ್ಕೆ ಪ್ರತಿಫಲ ಸಿಗುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಸಚಿನ್ ವಿರೋಧಿ ತಂಡದ ಒಬ್ಬ ಬ್ಯಾಟ್ಸ್‌ಮ್ಯಾನ್ ಸ್ಥಾನದಲ್ಲಿ ತಮ್ಮನ್ನು ತಾವು ನಿಲ್ಲಿಸಿಕೊಂಡು ಯೋಚಿಸುತ್ತಿದ್ದರು. ಆದರೆ ಸಚಿನ್‌ಗಿದ್ದಷ್ಟು ಪ್ರತಿಭೆ ಬೇರೆ ಯಾವ ಆಟಗಾರನಿಗೂ ಇರಲಿಲ್ಲ. ಸಚಿನ್ ಸ್ಥಾನವನ್ನು ಬೇರೆ ಆಟಗಾರ ತುಂಬಲು ಸಾಧ್ಯವಿಲ್ಲ ಎಂಬ ಸತ್ಯ ಸ್ವತಃ ಸಚಿನ್‌ಗೆ ಯಾರಾದರೂ ಮನವರಿಕೆ ಮಾಡಿಕೊಡಬೇಕಾಗಿತ್ತು. ಸಚಿನ್‌ರ ಅತಿಹೆಚ್ಚು ಕ್ರಿಕೆಟ್ ಜ್ಞಾನವೂ ಹೀಗೆ ಪೋಲಾಗಿದ್ದು ಭಾರತ ಕ್ರಿಕೆಟ್ ತಂಡದ ದುರಾದೃಷ್ಟ. ಆಟಗಾರನಾಗಿ ಯಶಸ್ಸು ಕಾಣುತ್ತಿದ್ದ ಸಚಿನ್ ನಾಯಕನಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ.

ಕ್ರಿಕೆಟ್
Photo Courtesy: Rediff.com

ಈ ಎಲ್ಲಾ ನಾಯಕರಿಗಿಂತ ’ಕಿಂಗ್‌ಕೊಹ್ಲಿ’ ವಿಭಿನ್ನ. ಇವರು ಆ ಸ್ಥಾನ ಅಲಂಕರಿಸುವ ಹೊತ್ತಿಗೆ ಭಾರತ ಕ್ರಿಕೆಟ್ ತಂಡವು ಗಂಗೂಲಿ ಹಾಗು ಧೋನಿಯವರಿಂದ ಒಂದು ಅದ್ಭುತ ತಂಡವಾಗಿ ರೂಪು ಗೊಂಡಿತ್ತು. ಅದನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿಯ ಜೊತೆಗೆ ಹಿಂದಿನ ನಾಯಕರ ದಾಖಲೆಗಳನ್ನು ಮುರಿಯಬೇಕಾದ ಸವಾಲು ಕೊಹ್ಲಿ ಮುಂದಿತ್ತು. ಅದಕ್ಕೆ ನಿರಂತರ ಪರಿಶ್ರಮದ ಅಗತ್ಯತೆ ಇತ್ತು. ನಿಸ್ವಾರ್ಥದ ಕೊಹ್ಲಿ ಯುವ ಆಟಗಾರರ ಮುಂಚೂಣಿಯ ನಾಯಕನಾಗಿ, ತಂಡದ ಕೋಚ್ ರವಿಶಾಸ್ತ್ರಿಯವರ ಜೊತೆ ತಂಡದ ಹಿತಾಸಕ್ತಿಗಾಗಿ ಉತ್ತಮ ಬಾಂಧವ್ಯದಿಂದ ’ಪಿಚ್’ಗೆ ಹೊಂದಾಣಿಕೆಯಾಗುವ ಆಡುವ ಹನ್ನೊಂದರ ಬಳಗವನ್ನು ಮೈದಾನಕ್ಕಿಳಿಸುತ್ತಿದ್ದರು. ಇದರಿಂದ ಪರಿವರ್ತನೆಯ ಗಾಳಿ ಬೀಸತೊಡಗಿತ್ತು.

ಆಕ್ರಮಣಕಾರಿ ಮನೋಭಾವನೆಯ ಕೊಹ್ಲಿ ಮೈದಾನದಲ್ಲಿ ಸಹ ಆಟಗಾರರು ಕೆಚ್ಚೆದೆಯಿಂದ ಆಡುವಂತೆ ಪ್ರೇರೇಪಿಸುತ್ತಿದ್ದರು. ಇದರಿಂದ ವಿರೋಧಿ ತಂಡಕ್ಕೆ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲವೆಂದು ಸ್ಪಷ್ಟ ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ ಏಳು ವರ್ಷಗಳ ಕಾಲ ಭಾರತ ತಂಡದ ಯಶಸ್ವಿ ನಾಯಕನಾಗಿ ಕೊಹ್ಲಿ ಮುನ್ನಡೆಸಲು ಸಾಧ್ಯವಾಯಿತು. ತಂಡವನ್ನು ಒಟ್ಟಿಗೆ ಒಂದು ಯುನಿಟ್ ಆಗಿ ಕೊಂಡೊಯ್ಯುವ ಸವಾಲು ಕೂಡ ಇತ್ತು. ಇದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಕೊಹ್ಲಿ ಹಠಾತ್ತನೆ ಟಿ20 ವಿಶ್ವಕಪ್ ಸೋಲಿನ ನಂತರ ವೈಟ್ ಬಾಲ್ ಚುಟುಕಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದರು. ಅವರ ಈ ನಡೆಯ ಹಿಂದೆ ’ಅಗಾಧವಾದ ಕೆಲಸದ ಹೊರೆ’ ಕಾರಣವೆಂದು ಒತ್ತಿ ಹೇಳಿದರು. ಟಿ20 ನಾಯಕತ್ವದಿಂದ ಕೆಳಗಿಳಿಯುವಾಗ ವಾಸ್ತವವಾಗಿ ಭಾರತದ ಒಂದು ದಿನದ ಕ್ರಿಕೆಟ್ ತಂಡದ ನಾಯಕನಾಗಿ 2023ರ ವಿಶ್ವಕಪ್‌ವರೆವಿಗೂ ಮುನ್ನಡೆಸುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ ಆಯ್ಕೆ ಸಮಿತಿಯು ಕೊಹ್ಲಿ ಬಳಿ ಇದ್ದ ಒಂದು ದಿನದ ಕ್ರಿಕೆಟ್ ನಾಯಕನ ’ಬ್ಯಾಟನ್’ಅನ್ನು ರೋಹಿತ್ ಶರ್ಮರಿಗೆ ಹಸ್ತಾಂತರಿಸಿತು. ಟೆಸ್ಟ್ ನಾಯಕನಾಗಿ ಮಾತ್ರ ಕೊಹ್ಲಿಯನ್ನು ಉಳಿಸಿಕೊಂಡಿತು. ಆಯ್ಕೆ ಸಮಿತಿಯು ಟೆಸ್ಟ್ ಸರಣಿ ಹಾಗೂ ಒಂದು ದಿನದ ಸರಣಿಗೆ ಸೌತ್ ಆಫ್ರಿಕಾ ಪ್ರವಾಸ ಮಾಡುವ ಭಾರತ ತಂಡದ ಆಟಗಾರರ ಪಟ್ಟಿ ಪ್ರಕಟಣೆ ಮಾಡುವ ಒಂದೆರಡು ಗಂಟೆಗಳ ಮೊದಲು ಕೊಹ್ಲಿಗೆ ಈ ಮಾಹಿತಿ ನೀಡಿತ್ತು. ಬಿ.ಸಿ.ಸಿ.ಐನ ಈ ನಿರ್ಧಾರ ಕೊಹ್ಲಿ ಪಾಲಿಗೆ ಅನಿರೀಕ್ಷಿತವಾದ ಬರಸಿಡಿಲಿನಂತೆ ಎರಗಿ ಮಾನಸಿಕ ಬಲ ಕುಗ್ಗಿಸಿತು.

ರಾಹುಲ್ ದ್ರಾವಿಡ್ ಈ ಹೊತ್ತಿಗಾಗಲೇ ರವಿಶಾಸ್ತ್ರಿಯ ನಂತರದ ಕೋಚ್ ಆಗಿ ನ್ಯೂಜ಼ಿಲ್ಯಾಂಡ್ ಸರಣಿಯನ್ನು ಯಶಸ್ವಿಯಾಗಿ ಮುಗಿಸಿದ್ದರು. ಕೊಹ್ಲಿ ಹಾಗೂ ದ್ರಾವಿಡ್ ಭಾರತ ಕ್ರಿಕೆಟ್ ತಂಡವನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುತ್ತಾರೆಂಬ ಕನಸನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಂಡಿದ್ದರು. ಬಹಳ ಕಡಿಮೆ ಸಮಯದಲ್ಲೇ ಅಗಾಧವಾದ ಬದಲಾವಣೆ ಕೊಹ್ಲಿ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಬಿಳಿ-ಚೆಂಡಿನ ನಾಯಕತ್ವ ಕಳೆದುಕೊಂಡ ಕೊಹ್ಲಿ ಟೆಸ್ಟ್ ನಾಯಕನಾಗಿ ವಿದೇಶಿ ನೆಲದಲ್ಲಿ ಸರಣಿ ಗೆಲ್ಲುವ ಆಸೆ ಹೊಂದಿದ್ದರು. ಆದರೆ
ಅದು ಈಡೇರದೇ ಇದ್ದಾಗ ಬೇಸರದ ಮನೋಭಾವನೆಯಿಂದ ನಾಯಕನ ಸ್ಥಾನ ತ್ಯಜಿಸಿದರು. ಬಹುಶಃ ಅದಕ್ಕೆ ಕಾರಣ ಬಿ.ಸಿ.ಸಿ.ಐ ಕೊಹ್ಲಿಯನ್ನು ನಾಯಕನ ಪಟ್ಟದಿಂದ ವಜಾಗೊಳಿಸಬಹುದೆಂಬ ಭಯ ಇರಬಹುದು ಎಂದು ಮಾಜಿ ಭಾರತದ ಕ್ರಿಕೆಟ್ ಆಟಗಾರ ಹಾಗೂ ಪ್ರಸ್ತುತ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಬಿ.ಸಿ.ಸಿ.ಐ ಅಧ್ಯಕ್ಷರಾದ ಸೌರವ್ ಗಂಗೂಲಿ ’ಇದು ಅವರ ವೈಯಕ್ತಿಕ ನಿರ್ಧಾರ, ಬಿ.ಸಿ.ಸಿ.ಐ ಅದನ್ನು ಗೌರವಿಸುತ್ತದೆ’ ಎಂದು ಹೇಳಿದ್ದಾರೆ. ಭಾರತದ ಯಶಸ್ವಿ ನಾಯಕನಾಗಿದ್ದರೂ ಹಠಾತ್ತನೆ ಈ ಬಗೆಯ ನಿರ್ಧಾರ ಕ್ರಿಕೆಟ್ ಪಂಡಿತರಿಂದ ಹಿಡಿದು ಕ್ರಿಕೆಟ್ ಪ್ರೇಮಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಕ್ರಿಕೆಟ್ ಅನಿಶ್ಚಿತತೆಯ ಆಟ ಎಂದು ಹೇಳುತ್ತಾರೆ. ಆದರೆ ನಾಯಕನ ಸ್ಥಾನವೂ ಅನಿಶ್ಚಿತ ಎಂಬುದು ಸಾಬೀತಾಗಿದೆ.

ಈ ಹೊತ್ತಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಾವ ಮಾದರಿಯಲ್ಲಿಯೂ ವಿರಾಟ್ ಕೊಹ್ಲಿ ಬಳಿ ನಾಯಕನ ಪಟ್ಟವಿಲ್ಲ. ನಾಯಕನಾಗಿ ಸಾಗುತ್ತಿದ್ದ ಹೋರಾಟದ ಹಾದಿ ಕೊನೆಗೊಂಡಿದೆ. ಇನ್ನು ಮುಂದೆ ಮೈದಾನದಲ್ಲಿ ನಿಂತು ತನ್ನ ನಾಯಕನಿಗೆ ಸಲಹೆ ನೀಡಬಹುದಷ್ಟೇ. ಬ್ಯಾಟುಗಾರನಾಗಿ ಮೈದಾನಕ್ಕಿಳಿದಾಗ ಕೊಹ್ಲಿ ಬ್ಯಾಟು ಇನ್ನು ಅನೇಕ ವರ್ಷಗಳ ಕಾಲ ಮಾತಾಡಬೇಕಿದೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ, ತಂಡ ಹೊಸ ಎತ್ತರಕ್ಕೆ ತಲುಪಲು ಇವರ ಅಪಾರ ಕೊಡುಗೆಯ ಅವಶ್ಯಕತೆ ಇದೆ. ವಿರಾಟ್ ಕೊಹ್ಲಿ ಭವಿಷ್ಯದಲ್ಲಿ ತನ್ನ ಅಸಾಧಾರಣ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡು ಶಾಶ್ವತ ದಾಖಲೆಗಳನ್ನು ಸೃಷ್ಟಿಸಲಿ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: ಎಲ್ಲಾ ವಿಭಾಗದ ಕ್ರಿಕೆಟ್‌ಗೆ ಗುಡ್‌ಬೈ: ಬೆಂಗಳೂರಿಗರ ನೆಚ್ಚಿನ ಆಟಗಾರ ಎಬಿ ಡಿವಿಲಿಯರ್ಸ್ ವಿದಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...