ಭಾರತೀಯ ರೈಲ್ವೇ ನೇಮಕಾತಿ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆಯ ಕುರಿತು ಉದ್ಯೋಗ ಆಕಾಂಕ್ಷಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ನಂತರ ಎನ್‌ಟಿಪಿಸಿ (Non-Technical Popular Categories) ಪರೀಕ್ಷೆಗಳನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಸಾರಿಗೆ ವಕ್ತಾರರು ಬುಧವಾರ ತಿಳಿಸಿದ್ದಾರೆ.
ವಿವಿಧ ರೈಲ್ವೇ ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿ) ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸುವ ಸಮಿತಿಯನ್ನು ಸಹ ಇಲಾಖೆ ರಚಿಸಿದೆ. ಎರಡೂ ಕಡೆಯವರ ಮಾತುಗಳನ್ನು ಆಲಿಸಿದ ನಂತರ ಸಮಿತಿಯು ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುವ ರೈಲ್ವೇ ಇಲಾಖೆ ನಿರ್ಧಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 2019 ರಲ್ಲಿ ಹೊರಡಿಸಲಾದ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆಯಲ್ಲಿ ಒಂದೇ ಒಂದು ಪರೀಕ್ಷೆಯನ್ನು ಉಲ್ಲೇಖಿಸಲಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಪಿಐ(ಎಂ) ನಾಯಕ, ಪ.ಬಂ. ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ ‘ಪದ್ಮಭೂಷಣ’ ನಿರಾಕರಣೆ
ರೈಲ್ವೆ ಸಚಿವಾಲಯವು ಜನವರಿ 25 ರಂದು ಉದ್ಯೋಗಾಕಾಂಕ್ಷಿಗಳಿಗೆ ಸಾಮಾನ್ಯ ಸೂಚನೆಯನ್ನು ನೀಡಿತ್ತು, ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ರೈಲ್ವೇಯಲ್ಲಿ ಎಂದಿಗೂ ಉದ್ಯೋಗ ಪಡೆಯಲು ಸಾಧ್ಯಾವಾಗುವುದಿಲ್ಲ ಎಂದು ತಿಳಿಸಿತ್ತು.
ಬಿಹಾರದ ಹಲವಾರು ಸ್ಥಳಗಳಲ್ಲಿ ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಧರಣಿ ನಡೆಸಿದ್ದರು. ಪೂರ್ವ ಕೇಂದ್ರ ರೈಲ್ವೇ (ECR) ವಲಯದ ಕೋಲ್ಕತ್ತಾ-ದೆಹಲಿ ಮಾರ್ಗದಲ್ಲಿ ಸುಮಾರು 25 ರೈಲುಗಳ ಸಂಚಾರಕ್ಕೆ ತೊಂದರೆಯಾಯಿತು. ಪಾಟ್ನಾ, ನವಾಡ, ಮುಜಾಫರ್‌ಪುರ, ಸೀತಾಮರ್ಹಿ, ಬಕ್ಸರ್ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆದಿತ್ತು.
ಕೆಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಇದರಿಂದಾಗಿ ರೈಲ್ವೆ ಆಸ್ತಿಗೆ ಹಾನಿಯಾಗಿದೆ. ಸಿತಾಮರ್ಹಿಯರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಅರಾದಲ್ಲಿ ನಿಂತಿದ್ದ ರೈಲು ಕೋಚ್‌ಗೆ ಬೆಂಕಿ ಹಚ್ಚಲಾಗಿದೆ.
ಸುಮಾರು 1.25 ಕೋಟಿ ಅಭ್ಯರ್ಥಿಗಳು ಹಂತ 2 ರಿಂದ ಹಂತ 6 ರವರೆಗಿನ 35,000 ಕ್ಕೂ ಹೆಚ್ಚು ಹುದ್ದೆಗಳ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಈ ಹುದ್ದೆಗಳ ಆರಂಭಿಕ ವೇತನವು ತಿಂಗಳಿಗೆ 19,900 ರಿಂದ 35,400 ರೂಪಾಯಿಯಿದೆ.
ಇದನ್ನೂ ಓದಿ: ‘ಅಕ್ಕಿ ಕದ್ದನೆಂದು ಆದಿವಾಸಿ ಯುವಕನನ್ನು ಕೊಂದು 4 ವರ್ಷವಾಯಿತು, ವಿಚಾರಣೆ ಮಾತ್ರ ಆರಂಭವಾಗಲಿಲ್ಲ’