Homeಮುಖಪುಟಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ - ’ಗರಿಷ್ಠ ಬೆಂಬಲ ನೀತಿ’

ಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ – ’ಗರಿಷ್ಠ ಬೆಂಬಲ ನೀತಿ’

- Advertisement -
- Advertisement -

ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಹೊಂದಾಣಿಕೆತನ, ಕಟಿಬದ್ಧತೆ ಮತ್ತು ಪ್ರಾಮಾಣಿಕತೆ ಯಶಸ್ಸು ಸಾಧಿಸಿರುವುದು ಒಂದು ಚಾರಿತ್ರಿಕ ವಿದ್ಯಮಾನವೇ ಸರಿ. ಈ ಆರಂಭಿಕ, ಗಮನಾರ್ಹ ಗೆಲುವು ಮುಂದೆ ಹೇಗೆ ಪೂರ್ಣ ರೂಪದಲ್ಲಿ ತೆರೆದುಕೊಳ್ಳುತ್ತದೆ ಹಾಗೂ ಅದು ಕೃಷಿ ನೀತಿಗಳ ಮೇಲೆ ಮಾತ್ರವಲ್ಲದೆ ಪ್ರಜಾತಂತ್ರ ಮತ್ತು ಬಂಡವಾಳವಾದಗಳ ನಡುವಿನ ಜಿದ್ದಾಜಿದ್ದಿನ ಸಂಘರ್ಷದ ಮೇಲೆ ಕೂಡ ಏನು ಪ್ರಭಾವ ಉಂಟುಮಾಡುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದು, ಈ ಚಳವಳಿಯು ಮೂರು ಕೃಷಿ ಕಾಯ್ದೆಗಳ ಬದಲು ಏನನ್ನು ಡಿಮ್ಯಾಂಡ್ ಮಾಡುತ್ತದೆ ಎಂಬುದನ್ನು ಅವಲಂಬಿಸಿದೆ. ಬಹುಮುಖ್ಯ ಕೃಷಿ ಉತ್ಪನ್ನಗಳಿಗೆ ’ಕನಿಷ್ಠ ಬೆಂಬಲ ಬೆಲೆ’(ಎಂಎಸ್‌ಪಿ)ಯ ಬೇಡಿಕೆಯು ಚಳವಳಿ ಮತ್ತು ಸರ್ಕಾರದ ನಡುವಿನ ’ಮಾತುಕತೆ’ಗಳ ಉದ್ದಕ್ಕೂ ಬಗೆಹರಿಯದೆ ಉಳಿದಿದ್ದ ಒಂದು ಕಗ್ಗಂಟು ಆಗಿತ್ತು; ಎಂಎಸ್‌ಪಿಯನ್ನು ಕಾಯ್ದೆಬದ್ಧಗೊಳಿಸಬೇಕು, ಇನ್ನೂ ವಿಸ್ತರಿಸಬೇಕು ಹಾಗೂ ಹೆಚ್ಚು ಮಾಡಬೇಕು ಎಂದು ಚಳವಳಿಯ ನಾಯಕರು ಆಗ್ರಹಿಸುತ್ತಾ ಬಂದರೆ, ಸರ್ಕಾರವು ಇಂಥ ಯಾವುದೇ ಕೇಳಿಕೆಯನ್ನು ಸಾರಾಸಗಟು ತಳ್ಳಿಹಾಕಿತ್ತು. ಎಂಎಸ್‌ಪಿ ವಿಚಾರವು ಪ್ರಧಾನವಾಗಿ ವೆಚ್ಚಕ್ಕನುಗುಣವಾಗಿ ಬೆಲೆ ನಿರ್ಧರಿಸುವುದಕ್ಕೆ ಸಂಬಂಧಿಸಿದ್ದು; ಒಂದು ಉದ್ಯಮ, ವಹಿವಾಟು ಅಥವಾ ಜೀವನೋಪಾಯವಾಗಿ ಕೃಷಿಯ ಮೌಲ್ಯಮಾಪನಕ್ಕೆ ಇದೇ ಆಧಾರವಾಗಿರಬೇಕಾದುದು ಸೂಕ್ತವಾದದ್ದು. ಜೊತೆಗೆ ಅದರಾಚೆಗೂ ಯೋಚಿಸುವುದು ಅಗತ್ಯವಿದೆ.

ಬಹುತೇಕ ಗ್ರಾಮೀಣ ಭಾರತವು ಪರಸ್ಪರ ವೈರುಧ್ಯಗಳಿಂದ ಕೂಡಿದ ಕೃಷಿ ನೀತಿಗಳ ಕಹಿ ಫಲವನ್ನು ಅನುಭವಿಸುತ್ತಾ ಬಂದಿದ್ದು, ಗ್ರಾಮೀಣವನ್ನು ಆರ್ಥಿಕವಾಗಿ ಬಹುಪಾಲು ಕಡೆಗಣಿಸಿ ರಾಜಕೀಯವಾಗಿ ಓಟಿಗೋಸ್ಕರ ಮಾತ್ರ ಬೇಕಾದಂತೆ ಬಳಸಿಕೊಳ್ಳಲಾಗಿದೆ. ಆದ್ದರಿಂದ ’ಗರಿಷ್ಠ ಬೆಂಬಲ ನೀತಿ’ಯ ಪ್ಯಾಕೇಜನ್ನು ಕೇಳಲು ಇದೀಗ ಸಕಾಲವಾಗಿದೆ. ಅದೇ ಹೊತ್ತಿನಲ್ಲಿ, ಒಟ್ಟಾರೆ ರಾಜಕೀಯಾರ್ಥಿಕ ನೀತಿಗಳು ಗ್ರಾಮೀಣ ಭಾರತದ ಮೇಲೆ ಹೇರಿರುವ ಬಹುಬಗೆಯ ಕಾಯಿಲೆಗಳಿಗೆಲ್ಲ ಕೃಷಿ ಉತ್ಪನ್ನಗಳ ಬೆಲೆ ನಿಗದಿ, ಮಾರಾಟ ಮತ್ತು ವಿತರಣೆ ಎನ್ನುವುದು ಸಿದ್ಧೌಷಧವಾಗಲು ಸಾಧ್ಯವಿಲ್ಲ ಎಂಬ ಗ್ರಹಿಕೆಯ ಜೊತೆಗೇ ಇದು ಮೂಡಿಬರಬೇಕಿದೆ. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು, ಸಾಂಸ್ಥಿಕ ಮತ್ತು ಆಡಳಿತಾತ್ಮಕ ಕೊರತೆಗಳು ಹಾಗೂ ಗ್ರಾಮೀಣ ಭಾರತವನ್ನು ರಾಜಕೀಯವಾಗಿ ವಿರೂಪಗೊಳಿಸಿರುವ ನೀತಿಗಳು-ನಡೆಗಳು – ಇವೆಲ್ಲವನ್ನೂ ಸಮಗ್ರವಾಗಿ, ಸರ್ವಾಂಗೀಣವಾಗಿ ಅಡ್ರೆಸ್ ಮಾಡುವಂಥ ನೀತಿಗಳು ಮಾತ್ರವೇ ಗ್ರಾಮೀಣ ಭಾರತಕ್ಕೊಂದು ಹೊಸ ಜೀವದಾನ ನೀಡಬಲ್ಲ ಉತ್ತರವಾಗಲು ಸಾಧ್ಯ.

ಮೊದಲಿಗೆ, ಸಬ್ಸಿಡಿ ಆಧಾರಿತವಾಗಿ ಕೈಗಾರಿಕಾ-ರಾಸಾಯನಿಕ ಕೃಷಿಯನ್ನು ಉತ್ತೇಜಿಸುವ ’’ಹಸಿರು ಕ್ರಾಂತಿ’ಯ ಒಟ್ಟಾರೆ ಮಾದರಿಯಿಂದ ಹಂತಹಂತವಾಗಿ, ಆದರೆ ಸಾಕಷ್ಟು ಪ್ರಮಾಣದಲ್ಲಿ ಹಿಂದೆ ಸರಿಯುವುದು ಆಗಬೇಕು. ಆದರೆ, ’ಸುಸ್ಥಿರ’ ಕೃಷಿಗೆ ಪಲ್ಲಟಗೊಳ್ಳುವ ಮಾತು ಅಥವಾ ಪ್ರಯತ್ನವು ಪ್ರಧಾನಿಯವರು (ತನ್ನ ಭಾಷಣದಲ್ಲಿ) ಪ್ರಸ್ತಾಪಿಸಿದ ’ಝೀರೋ ಬಜೆಟ್ ಸಹಜ ಕೃಷಿ’ಯ ಮೂಲಕ ಆಗಲು ಸಾಧ್ಯವಾ ಎಂಬ ಬಗ್ಗೆ ಜಾಗರೂಕವಾಗಿ ಆಲೋಚಿಸಬೇಕು. ಭಾರತದ ಕೃಷಿ-ವಾತಾವರಣ-ಸಂಸ್ಕೃತಿಯ ವಲಯ(ಜ಼ೋನ್)ಗಳು ಬಹಳ ವೈವಿಧ್ಯಪೂರ್ಣವಾದಂಥವು; ’ಸಹಜ ಕೃಷಿ’ಯ ಯಾವುದೇ ಏಕೈಕ ಮಾದರಿಯು ಅವೆಲ್ಲಕ್ಕೂ ಸೂಕ್ತವಾಗುವುದು ಸಾಧ್ಯವಿಲ್ಲ. ಅದರ ಬದಲು, ಪ್ರಾದೇಶಿಕವಾಗಿ ವಿಕಾಸಗೊಂಡು ರೂಢಿಗತವಾಗಿರುವ ಸುಸ್ಥಿರ ಕೃಷಿ-ಸಂಸ್ಕೃತಿಗಳನ್ನು ಉಳಿಸಿಕೊಂಡು, ಅವುಗಳೊಳಗಿರುವ ಜೀತ, ಗೇಣಿ ಮುಂತಾದ ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಹೊಸ ವಾತಾವರಣದ ಪ್ರವೃತ್ತಿಗಳಿಗೆ ಸರಿಹೊಂದುವಂತೆ ರೂಪಿಸುವ ಒಂದು ಕಾಂಬಿನೇಶನ್ ಅಗತ್ಯವಿದೆ.

ಸಣ್ಣ, ಅತಿ ಸಣ್ಣ ರೈತರ ಬಗೆಗಿನ ಪ್ರಧಾನಿಯ ಕಳಕಳಿ ನೈಜವಾದುದೇ ಆಗಿದ್ದಲ್ಲಿ, ಭೂಮಿಯ ಸಮಾನ ಹಂಚಿಕೆ ಮಾತ್ರವಲ್ಲದೆ ನೀರಿನ ಸಂಪನ್ಮೂಲದ ಸಮಾನ ಹಂಚಿಕೆಯೂ ಆಗುವಂತೆ ನೋಡಿಕೊಳ್ಳಬೇಕು; ಅಷ್ಟೇ ಅಲ್ಲ, ನಾನಾ ಬಗೆಯ ಪರ್ಯಾಯ ಆರ್ಥಿಕ ವಿಧಾನಗಳು ಮತ್ತು ಬೆಂಬಲ ರಚನೆಗಳೂ ಸಮಾನವಾಗಿ ದಕ್ಕುವಂತಹ ನೀತಿಗಳನ್ನು ಸಹ ರೂಪಿಸಬೇಕು. (ಸಾಮಾನ್ಯವಾಗಿ ಗ್ರಾಮೀಣೇತರ ಫಲಾನುಭವಿಗಳ ಪಾಲಾಗುವ) ಸಬ್ಸಿಡಿಗಳು, ಸಾಲ ಮರುಪಾವತಿಯ ಮುಂದೂಡಿಕೆ, ಚುನಾವಣಾ ಸಮಯಗಳಲ್ಲಿ ಘೋಷಿಸುವ ಒಂದಷ್ಟು ಪುಕ್ಕಟೆ ಸವಲತ್ತುಗಳು ಮುಂತಾದುವುಗಳ ಬದಲು, ಮಣ್ಣು, ನೀರು, ಬೀಜ ಮತ್ತು ಕೃಷಿ-ಜೀವವೈವಿಧ್ಯಗಳನ್ನು ಪುನರುಜ್ಜೀವನಗೊಳಿಸುವಂಥ ’ಪುನರುಜ್ಜೀವನ ಕೃಷಿ’ಯ ವಿಸ್ತರಣೆಗೆ ಹಣಕಾಸು ಒದಗಿಸುವುದು ಅತ್ಯಗತ್ಯ. ಈ ಅಂಶಗಳನ್ನಾಧರಿಸಿ ಒಂದು ಸಮಗ್ರ ಕಾರ್ಯಕ್ರಮ ರೂಪಿಸಿದಲ್ಲಿ ಅದರಿಂದ ಸುಸ್ಥಿರ ಕೃಷಿಗೆ ಹೊರಳಿಕೊಳ್ಳುವುದರ ಜೊತೆಗೆ, ಹವಾಮಾನದ ವೈಪರೀತ್ಯ ಬದಲಾವಣೆಯನ್ನು ಕಡಿಮೆಗೊಳಿಸುವಂತಹ ಮತ್ತು ಅದಕ್ಕೆ ಹೊಂದಿಕೊಳ್ಳುವಂತಹ ವಿಧಾನಗಳನ್ನು ಅಭಿವೃದ್ಧಿಪಡಿಸಲೂ ಗ್ರಾಮೀಣ ಜನರಿಗೆ ಸಹಾಯಕವಾಗುತ್ತದೆ.

ಸಂಪನ್ಮೂಲಗಳು, ಶ್ರಮ, ಕೌಶಲ ಹಾಗೂ ಅನುಭವ-ಜ್ಞಾನಗಳನ್ನು ಪೂಲ್ ಮಾಡಿ, ಅದನ್ನೆಲ್ಲ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯ ಸುಧಾರಣೆಗೆ ಬಳಸಲು ಸಾಧ್ಯವಾಗುವಂತೆ ಕೃಷಿ ಸಹಕಾರಿಗಳನ್ನು ರಚಿಸಿಕೊಳ್ಳಲು ರೈತರಿಗೆ ಬೆಂಬಲ ನೀಡಬೇಕು; ರೈತರಿಗೆ ಲಾಭ ಅಥವಾ ಉತ್ತಮ ಆದಾಯ ಗಗನ ಕುಸುಮವಾಗುವಂತೆ ಮಾಡಿರುವ ಎಲ್ಲಾ ಕಾರಣಗಳನ್ನು ಅಡ್ರೆಸ್ ಮಾಡುವಲ್ಲಿ ಇದು ಬಹಳಷ್ಟು ನೆರವಾಗಲಿದೆ. ಪರಿಸರಕ್ಕೆ ಸೂಕ್ತವಾದ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಿಕೆ, ಸ್ಥಳೀಯವಾಗಿ ಸಂಗ್ರಹ ಮತ್ತು ವಿತರಣೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವಂಥ ಸ್ಥಳೀಯ ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳುವಿಕೆ ಇವುಗಳ ದೃಷ್ಟಿಯಿಂದಲೂ ಸಹ ಕೃಷಿಯ ಪ್ಲಾನಿಂಗ್‌ಅನ್ನು ಪ್ರಜಾತಾಂತ್ರಿಕಗೊಳಿಸುವುದು ಮತ್ತು ವಿಕೇಂದ್ರೀಕರಿಸುವುದು ಅಗತ್ಯವಿದೆ. ಸ್ಥಳೀಯ ’ಬೀಜ ಬ್ಯಾಂಕ್’ಗಳ ಸ್ಥಾಪನೆಯು ಬಹಳ ಸಮಸ್ಯಾತ್ಮಕವಾಗಿರುವ ವ್ಯಾಪಾರೀ ಬೀಜೋದ್ಯಮದಿಂದ ರೈತರು ಬಚಾವಾಗುವುದಕ್ಕೆ ಮೂಲಾಧಾರವಾಗಲಿದೆ.

ಗ್ರಾಮೀಣ ಕೃಷಿ ಬದುಕಿಗೂ, ನಗರದ ಕೈಗಾರಿಕೆ ಆಧಾರಿತ ಬದುಕಿಗೂ ನಡುವಿನ ಬಹುಕಾಲದ ಕಂದರ ಇನ್ನೂ ಮುಂದುವರಿಯುವುದು ಸರ್ವಥಾ ಸಮರ್ಥನೀಯವಲ್ಲ. ಗ್ರಾಮೀಣ ಸಂಪನ್ಮೂಲಗಳು, ಕೌಶಲಗಳು ಹಾಗೂ ಉದ್ಯೋಗಗಳನ್ನು ಕಾಪಾಡಿಕೊಳ್ಳಬಲ್ಲ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸಂಸ್ಕರಣ ಕೇಂದ್ರಗಳನ್ನು ಉತ್ತೇಜಿಸುವುದು ನಿರುದ್ಯೋಗ ಮತ್ತು ವಲಸೆಯ ಕಠಿಣ ಸಮಸ್ಯೆಗೆ ಉತ್ತರವಾಗುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯಗಳ ದುರವಸ್ಥೆ ಗ್ರಾಮೀಣ ಭಾರತದ ಹೆಗ್ಗುರುತಾಗಿದೆ; ಇದಕ್ಕೆ ಕಾರಣವಾದ ಹಳೆಯ ತಪ್ಪುಗಳನ್ನು ಮತ್ತು ನಿರ್ಲಕ್ಷ್ಯದಿಂದ ಉಂಟಾಗಿರುವ ಅಸಮಾಧಾನಗಳನ್ನು ಅಡ್ರೆಸ್ ಮಾಡಬಲ್ಲ ಹೊಸ ಆರ್ಥಿಕ ಏರ್ಪಾಡೊಂದನ್ನು ಗ್ರಾಮೀಣ ಭಾರತಕ್ಕೆ ನೀಡಬೇಕು. ಪಂಚಾಯತಿಗಳು, ಅಂಗನವಾಡಿಗಳು, ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಂಥ ಪ್ರಮುಖ ಸಾರ್ವಜನಿಕ ಸಂಸ್ಥೆಗಳಿಗೆ ತುರ್ತಾಗಿ ಕಾಯಕಲ್ಪ ನೀಡಿ, ಅವುಗಳನ್ನು ಪರಿಣಾಮಕಾರಿ ಮತ್ತು ಜನತೆಗೆ ಹೊಣೆಗಾರರಾದ ಸಾರ್ವಜನಿಕ ಸಂಸ್ಥೆಗಳನ್ನಾಗಿ ಮಾಡಬೇಕು.

ಈ ಹೊಸ ಗುರಿಗಳನ್ನೂ ಸಾಧ್ಯತೆಗಳನ್ನೂ ಸಾಕಾರಗೊಳಿಸಬೇಕಿದ್ದಲ್ಲಿ ಆಡಳಿತಾತ್ಮಕ ಮತ್ತು ಸರ್ಕಾರಿ ಯಂತ್ರಾಂಗದ ತುರ್ತು ಸುಧಾರಣೆ ಆಗಬೇಕು; ಆ ಮೂಲಕ ಪ್ರಭುತ್ವಕ್ಕೂ ಪ್ರಜೆಗಳಿಗೂ ನಡುವಿನ ವ್ಯವಹಾರವನ್ನು ಅಧಿಕಾರಶಾಹಿಯಿಂದ ಮುಕ್ತವಾಗಿಸಿ, ಗ್ರಾಮೀಣ ಜನತೆಯನ್ನು ’ಅರ್ಜಿ ಹಿಡಿದುಕೊಂಡು, ಬೇಡಿಕೆ ಮುಂದಿಟ್ಟುಕೊಂಡು ಕಚೇರಿ ಅಲೆಯುವವರಂತೆ’ ನೋಡದೆ, ನಾಗರಿಕರಂತೆ ಕಾಣುವ ವಾತಾವರಣವನ್ನು ರೂಪಿಸಬೇಕು. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು ಮತ್ತು ಅನಾನುಕೂಲತೆಗಳಿಂದ ಉಂಟಾಗಿರುವ ಸಾಲುಸಾಲು ಸಮಸ್ಯೆಗಳಿಗೆ ಮುಲಾಮು ಹಚ್ಚುವ ಧೋರಣೆ ಕೈಬಿಟ್ಟು, ಜಾತಿ, ಜನಾಂಗೀಯ, ಜೆಂಡರ್ ಮತ್ತು ವರ್ಗ ಅಸಮಾನತೆಗಳ ಮೂಲ ಕಾರಣಗಳನ್ನು ಅಡ್ರೆಸ್ ಮಾಡುವಂತಹ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಅಗತ್ಯವಿದೆ.

ಇಂದಿನ ಆಳುವ ಸರ್ಕಾರವು ಹಳೆಯ ನಂಬಿಕೆಗಳನ್ನು ಸಮ್ಮತಗೊಳಿಸಲು ಸಂಸ್ಕೃತಿ-ಪರಂಪರೆಗಳನ್ನು ವೈಭವೀಕರಿಸಿ ಬಳಕೆ ಮಾಡುತ್ತಿರುವುದರಿಂದ, ವೈವಿಧ್ಯಮಯವೂ ಶ್ರೀಮಂತವೂ ಆದ ನಮ್ಮ ಕೃಷಿ-ಸಂಸ್ಕೃತಿಗಳು ನಮ್ಮ ನಾಗರಿಕತೆಯ ಅಸ್ಮಿತೆಯ ತಳಹದಿಗಳಾಗಿದ್ದವು ಮತ್ತು ಈಗಲೂ ಆಗಬಲ್ಲವು ಎಂಬುದನ್ನು ಆಳುವ ಸರ್ಕಾರ ಮಾತ್ರವಲ್ಲ, ನಾವು ಕೂಡ ಮಾನ್ಯ ಮಾಡುವುದು ಸೂಕ್ತವೇ ಆಗುತ್ತದೆ. ಕಾರ್ಪೊರೆಟೀಕೃತ, ಕೈಗಾರಿಕೀಕೃತ ವಿದೇಶೀ ಕೃಷಿ ಮಾದರಿಗಳ ವಿನಾಶಕಾರಿ ಪರಿಣಾಮಗಳು ಜಗತ್ತಿನಾದ್ಯಂತ ವ್ಯಾಪಕವಾದ ದುರಂತಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ; ನಾವು ಸಹ ಅವುಗಳನ್ನೇ ಅಳವಡಿಸಿಕೊಳ್ಳುವುದಕ್ಕಿಂತಲೂ, ನಮ್ಮ ವೈವಿಧ್ಯಮಯವಾದ ಕೃಷಿ-ಸಂಸ್ಕೃತಿಗಳ ಜ್ಞಾನ ಪರಂಪರೆಯನ್ನು (ಅದರೊಳಗಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನು ದೂರ ಮಾಡಿ) ಮತ್ತೆ ನಮ್ಮದಾಗಿಸಿಕೊಂಡಲ್ಲಿ ಅದು ನಮ್ಮ ಬಗೆಬಗೆಯ ರಾಷ್ಟ್ರೀಯ ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

ರೈತರು ಮತ್ತು ಸರ್ಕಾರದ ನಡುವಿನ ವರ್ಷಾವಧಿ ಸಂಘರ್ಷದಲ್ಲಿ ರೈತ ಆಂದೋಲನದ ವಿಜಯವನ್ನು ಕವಿ-ಚಿಂತಕ ಶಿವಸುಂದರ್ “ಟ್ರಾಕ್ಟರುಗಳು ಟ್ಯಾಂಕ್‌ಗಳ ವಿರುದ್ಧ ವಿಜಯ ಸಾಧಿಸಿವೆ” ಎಂದು ವರ್ಣಿಸುತ್ತಾರೆ. ಇದು ನಿಜವಿದ್ದಲ್ಲಿ, ಶಾಂತಿಯುತ ವಿಧಾನಗಳಿಂದಲೇ ಪ್ರಜಾತಂತ್ರಕ್ಕೆ ಹಿಂದಿರುಗುವುದು ಸಾಧ್ಯವೆಂಬ ಆಶಾವಾದವು ಗ್ರಾಮೀಣ ಕೃಷಿ ಭಾರತಕ್ಕಾಗಿ ’ಗರಿಷ್ಠ ಬೆಂಬಲ ನೀತಿ’ಗಳನ್ನು (maximum support policies) ಪ್ರೋತ್ಸಾಹಿಸಲು ನಮ್ಮನ್ನು ಪ್ರೇರೇಪಿಸಬೇಕಿದೆ. ಈ ನಿಟ್ಟಿನಲ್ಲಿ, ಮುಂಬರುವ ಸಂಸತ್ ಅಧಿವೇಶನವು ಮೂರು ಕೃಷಿ ಕಾಯ್ದೆಗಳನ್ನು ಪುನಃ ಜಾರಿಗೊಳಿಸುವತ್ತ ಹೆಜ್ಜೆಯಿಡುವ ಬದಲು, ಗ್ರಾಮೀಣ ಭಾರತಕ್ಕೆ ಅತ್ಯುತ್ತಮವಾದುದನ್ನು ಸಾಕಾರಗೊಳಿಸುವ ಪ್ರಯತ್ನಗಳಿಗೆ ಮುಂದಾಗುವಂತೆ ಪ್ರಯತ್ನಿಸಬೇಕಿದೆ. ನಮ್ಮನಮ್ಮ ಎಂಪಿಗಳಿಗೆ ಮನವಿ ಸಲ್ಲಿಸುವುದರಿಂದ ನಮ್ಮ ಪ್ರಯತ್ನಗಳು ಆರಂಭವಾಗಬೇಕಿದೆ.

ಅನುವಾದ: ಸಿರಿಮನೆ ನಾಗರಾಜ್

ಡಾ. ಎ.ಆರ್.ವಾಸವಿ

ಡಾ. ಎ.ಆರ್.ವಾಸವಿ
ಸಾಮಾಜಿಕ ಮಾನವಶಾಸ್ತ್ರಜ್ಞೆ, ಪುನರ್ಚಿತ್ ಕಲೆಕ್ಟಿವ್.


ಇದನ್ನೂ ಓದಿ: ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...