ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಖಾಸಗಿ ಗುತ್ತಿಗೆಗೆ ನೀಡುವ ಸರಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಶುಗರ್ ಖಾಸಗೀಕರಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸರ್ಕಾರ ಮಂಡ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡರೆ ಉಗ್ರ ಹೋರಾಟ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಾಜಿ ಸಂಸದ ಜಿ ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದ ವೇಳೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಂಡ್ಯ ಜಿಲ್ಲೆ ರೈತರ ಸೇವೆಗೆಂದು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಮಹಾರಾಜರು ಒಂದು ದೊಡ್ಡ ಆಸ್ತಿ ಮಾಡಿ ಹೋಗಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಸ್ವಾಮ್ಯಕ್ಕೆ ಒಪ್ಪಿಸದೇ ಸರಕಾರವೇ ಮುನ್ನಡೆಸುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಬೇಕು,” ಎಂದಿದ್ದಾರೆ.
ಈಗಾಗಲೇ ಜಿಲ್ಲೆಯ ರೈತ ನಾಯಕರು ತಮ್ಮನ್ನೂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೂಡಲೇ ಕಾರ್ಖಾನೆ ಆರಂಭಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಎಂದು ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ಈ ಕುರಿತು ಚರ್ಚಿಸುವುದಾಗಿ ಶಿವಕುಮಾರ್ ಇದೇ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಂಸದೆ ಸುಮಲತಾ ದಾಖಲೆ ನೀಡಿದರೆ ಅಕ್ರಮ ಗಣಿಗಾರಿಕೆಯ ತನಿಖೆ – ಮುರುಗೇಶ್ ನಿರಾಣಿ
ಕೆಆರ್‌ಎಸ್ ಅಣೆಕಟ್ಟೆ ಬಿರುಕು ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ಬಿರುಕು ಬಿಟ್ಟಿದ್ದರೆ ಅದನ್ನು ಪರಿಶೀಲಿಸಲು 40 ಮಂದಿ ಎಂಜಿನಿಯರ್‌ಗಳಿದ್ದು, ಅವರನ್ನೇ ಕೇಳಿ ಮಾಹಿತಿ ಪಡೆಯಲಿ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ನಡೆಯುತ್ತಿರುವ ವಿವಾದಗಳಿಗೆ ಸ್ಪಂದಿಸಲು ನಿರಾಕರಿಸಿದ ಅವರು ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ ಅವುಗಳ ಕುರಿತು ಸರ್ಕಾರದ ಗಮನ ಸೆಳೆಯುವುದರ ಕಡೆ ಮಾತ್ರ ಗಮನಹರಿಸಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಚುನಾವಣೆಗಳಿಗೆ ಪಕ್ಷದ ಚಿಹ್ನೆಯಡಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿಗೆ ಕಾರ್ಯಯೋಜನೆ ರೂಪಿಸುವುದಾಗಿ ತಿಳಿಸಿದ ಕೆಪಿಸಿಸಿ ಅಧ್ಯಕ್ಷರು ಸ್ಥಳೀಯ ಮುಖಂಡರು, ಕಾರ್ಯಕರ್ತರೊಟ್ಟಿಗೆ ಚರ್ಚಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.
ಈ ವೇಳೆ ಕೆಪಿಸಿಸಿ ಸದಸ್ಯ ಎಸ್. ಗುರುಚರಣ್, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕದಲೂರು ರಾಮಕೃಷ್ಣ, ತಾ.ಪಂ. ಮಾಜಿ ಸದಸ್ಯ ಕೆ.ಆರ್. ಮಹೇಶ್, ಮುಖಂಡರಾದ ಸತೀಶ್, ಚಿದಂಬರ್, ಅಪ್ಪಾಜಿ, ಆಸೀಫ್, ಮುನ್ನಾವರ್, ಅಸ್ಲಾಂ, ವಿಜಿಕುಮಾರ್, ಮಹೇಶ್ ಇತರರಿದ್ದರು.
ಇದನ್ನೂ ಓದಿ: ಎಚ್.ಡಿ.ಕುಮಾರಸ್ವಾಮಿ V/s ಸುಮಲತಾ: ರಾಜಕೀಯ ಕದನಕ್ಕೆ ವಿರಾಮ ನೀಡಲು ಎಚ್‌ಡಿಕೆ ನಿರ್ಧಾರ


