ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯವರ ಕಾರು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ರೈತರೊಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ಬೈಕ್ ಸವಾರ ಕೂಡ್ಲೆಪ್ಪ ಹನುಮಂತ ಬೋಳಿ ಎಂಬ 58 ವರ್ಷದ ರೈತರು ಅಪಘಾತದಲ್ಲಿ ತೀವ್ರ ಗಾಯಗೊಂಡು ನಿಧನರಾಗಿದ್ದಾರೆ. ಹೊಲದ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಡಿಸಿಎಂ ಪುತ್ರನ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ
A 58-year-old farmer died after allegedly being hit by DCM @LaxmanSavadi’s son @Savadichidu’s car at #Kudalasangama Cross near Hungund. A case has been registered in #Hungund Police Station. @XpressBengaluru @naushadbijapur @SpBagalkote @Laxmansavadibjp @BSBommai @DgpKarnataka pic.twitter.com/diWOip9yBk
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) July 6, 2021
ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿ ವಿಜಯಪುರ ಮಾರ್ಗವಾಗಿ ಕೆಎ22 ಎಂಸಿ5151 ನಂ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ರೈತರ ಬೈಕ್‌ಗೆ ಗುದ್ದಿದೆ. ರೈತ ಕೂಡ್ಲೆಪ್ಪ ಹನುಮಂತ ಬೋಳಿ ತಲೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಉಳಿದಿಲ್ಲ. ಮೃತರನ್ನು ಬಾಗಲಕೋಟೆ ತಾಲ್ಲೂಕಿನ ಚಿಕ್ಕಹಂಡರಗಲ್ ನಿವಾಸಿಯೆಂದು ಗುರುತಿಸಲಾಗಿದೆ.
ಅಪಘಾತ ನಡೆಸಿ, ತಮ್ಮ ವಾಹನದ ನಂಬರ್ ಪ್ಲೇಟ್ ಹಾನಿಗೊಳಿಸಿ ಪರಾರಿಯಾಗಲು ಚಿದಾನಂದ ಸವದಿ ಯತ್ನಿಸಿದ್ದರು ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ, ಈ ಆರೋಪಗಳನ್ನು ಚಿದಾನಂದ ನಿರಾಕರಿಸಿದ್ದು, ಅಪಘಾತವಾದ ಕಾರಿನಲ್ಲಿ ತಾನು ಇರಲಿಲ್ಲ, ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು 30 ಕಿಲೋಮೀಟರ್ ಮುಂದೆ ಇತ್ತು. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಗಾಯಾಳುವನ್ನು ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡುವ ವೇಳೆ ಜನರು ಬಂದಿದ್ದರು” ಎಂದು ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ್ ಜಗಲಾಸರ್ ಕೂಡ, ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿ ಅಪಘಾತವಾದ ಸ್ಥಳದಿಂದ ಹೋರಟು ಹೋಗಿರಲಿಲ್ಲ. ಹುನಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಗಾಯಾಳುವನ್ನು ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಿದ ಬಳಿಕ ಅಲ್ಲಿಂದ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಮೃತನ ಕುಟುಂಬಸ್ಥರು ಚಿದಾನಂದ ಸವದಿ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಕೂಡ ನ್ಯಾಯಯುತ ತನಿಖೆಗೆ ಆಗ್ರಹಿಸಿದೆ. “ಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿಯಿಂದ ಸಂಭವಿಸಿದ ಅಪಘಾತ ಪ್ರಕರಣವನ್ನ ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿರುವ ಸುದ್ದಿ ಬರುತ್ತಿವೆ. ಹಿಂದೆ ಸಿಟಿ ರವಿ ಹಾಗೂ ಆರ್ ಅಶೋಕ್ ಅವರ ಪುತ್ರನ ಪ್ರಕರಣಗಳಲ್ಲಿಯೂ ತಪ್ಪಿತಸ್ತರನ್ನ ಬಾಚವು ಮಾಡಲಾಗಿತ್ತು. ಗೃಹ ಸಚಿವ ಬಸವರಾಜ ಬೊಮ್ಮಯಿ ಅವರೇ, ಯಾವುದೇ ಪ್ರಭಾವಕ್ಕೆ ಒಳಪಡದೆ ಈ ಪ್ರಕರಣದ ಮೃತರಿಗೆ ನ್ಯಾಯ ಒದಗಿಸಿ” ಎಂದು ಒತ್ತಾಯಿಸಿದೆ.
ಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿಯಿಂದ ಸಂಭವಿಸಿದ ಅಪಘಾತ ಪ್ರಕರಣವನ್ನ ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿರುವ ಸುದ್ದಿ ಬರುತ್ತಿವೆ.
ಹಿಂದೆ ಸಿಟಿ ರವಿ ಹಾಗೂ ಆರ್ ಅಶೋಕ್ ಅವರ ಪುತ್ರನ ಪ್ರಕರಣಗಳಲ್ಲಿಯೂ ತಪ್ಪಿತಸ್ತರನ್ನ ಬಾಚವು ಮಾಡಲಾಗಿತ್ತು.@BSBommai ಅವರೇ, ಯಾವುದೇ ಪ್ರಭಾವಕ್ಕೆ ಒಳಪಡದೆ ಈ ಪ್ರಕರಣದ ಮೃತರಿಗೆ ನ್ಯಾಯ ಒದಗಿಸಿ.
— Karnataka Congress (@INCKarnataka) July 6, 2021
ಇದನ್ನೂ ಓದಿ: ದ್ವಿತೀಯ ಪಿಯುಸಿ ‘ಪುನರಾವರ್ತಿತ’ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಪಾಸ್!


