ಆಳಂದಲ್ಲಿ ಮತಗಳ್ಳತನದ ಕುರಿತು ನಾವು ಆರೋಪ ಮಾಡಿದ ಬಳಿಕವಷ್ಟೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ‘ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆಗೆ’ ಹೊಸ ಕ್ರಮ ಪರಿಚಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಆಳಂದಲ್ಲಿ ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದಂತೆ ಪಟ್ಟಿಯಿಂದ ಅಳಿಸಲಾಗಿದೆ ಎಂಬ ರಾಹುಲ್ ಗಾಂಧಿಯ ಆರೋಪದ ಬಳಿಕ, ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಹೊಸ ‘ಇ-ಸೈನ್’ ವೈಶಿಷ್ಟ್ಯ’ವನ್ನು ಚುನಾವಣಾ ಆಯೋಗ ಪರಿಚಯಿಸಿದೆ ಎಂಬ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ವರದಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ “ಜ್ಞಾನೇಶ್ ಕುಮಾರ್ ಅವರೇ ನಾವು ಕಳ್ಳತನ ಕಂಡು ಹಿಡಿದ ಬಳಿಕವಷ್ಟೇ ನಿಮಗೆ ಬೀಗ ಹಾಕಲು ನೆನಪಾಗಿದೆ. ನಾವು ಕಳ್ಳರನ್ನೂ ಹಿಡಿಯುತ್ತೇವೆ. ನೀವು ಸಿಐಡಿಗೆ ದತ್ತಾಂಶ ಯಾವಾಗ ಕೊಡುತ್ತೀರಿ? ಹೇಳಿ” ಎಂದು ಪ್ರಶ್ನಿಸಿದ್ದಾರೆ.
ज्ञानेश जी, हमने चोरी पकड़ी तब आपको ताला लगाना याद आया – अब चोरों को भी पकड़ेंगे।
तो बताइए, CID को सबूत कब दे रहे हैं आप? pic.twitter.com/9o1fDbShvt
— Rahul Gandhi (@RahulGandhi) September 24, 2025
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರುಗಳನ್ನು ಅವರಿಗೆ ಗೊತ್ತಿಲ್ಲದಂತೆ ನಕಲಿ ಫಾರ್ಮ್ 7 ಮೂಲಕ ಅಳಿಸಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಕರ್ನಾಟಕ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ತನಿಖೆಗೆ ನಿರ್ಣಾಯಕವಾದ ಡೆಸ್ಟಿನೇಶನ್ ಫೋರ್ಟ್ ಮತ್ತು ಡೆಸ್ಟಿನೇಶನ್ ಐಡಿ ಸೇರಿದಂತೆ ಪ್ರಮುಖ ದತ್ತಾಂಶಗಳನ್ನು ಚುನಾವಣಾ ಆಯೋಗ ಒದಗಿಸುತ್ತಿಲ್ಲ. ಇದರಿಂದ ತನಿಖೆ ಹಳ್ಳ ಹಿಡಿದಿದೆ ಎಂದು ಸೆಪ್ಟೆಂಬರ್ 7ರಂದು ದಿ ಹಿಂದೂ ಪತ್ರಿಕೆ ವರದಿ ಮಾಡಿತ್ತು.
ಸೆಪ್ಟೆಂಬರ್ 18ರಂದು ನವದೆಹಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಆಳಂದ ಮತಗಳ್ಳತನದ ದಾಖಲೆ ಬಿಡುಗಡೆ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮತಗಳ್ಳರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಲು ಕೇಂದ್ರೀಕೃತ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿತ್ತು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಸಂಬಂಧಿತ ವ್ಯಕ್ತಿಗೆ ಮಾಹಿತಿ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ ಎಂದಿತ್ತು.
ಹೊಸ ‘ಇ-ಸೈನ್’ ವೈಶಿಷ್ಟ್ಯ’
ಚುನಾವಣಾ ಆಯೋಗದ ECINET ಪೋರ್ಟಲ್‌ನಲ್ಲಿ ಹೊಸ ಮತದಾರರ ನೋಂದಣಿಗಾಗಿ ಫಾರ್ಮ್ 6, ಅಸ್ತಿತ್ವದಲ್ಲಿರುವ ಪಟ್ಟಿಗಳಲ್ಲಿ ಹೆಸರನ್ನು ಸೇರಿಸಲು ಮತ್ತು ಅಳಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಫಾರ್ಮ್ 7 ಹಾಗೂ ನಮೂದುಗಳ ತಿದ್ದುಪಡಿಗಾಗಿ ಫಾರ್ಮ್ 8 ಭರ್ತಿ ಮಾಡಲು ಹೊಸದಾಗಿ ‘ಇ-ಸೈನ್’ ಕಡ್ಡಾಯಗೊಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಇ-ಸೈನ್ ವೈಶಿಷ್ಟ್ಯದಿಂದಾಗಿ ಈಗ ಅರ್ಜಿದಾರರು ಅರ್ಜಿಗೆ ಬಳಸುವ ಮತದಾರರ ಕಾರ್ಡ್‌ನಲ್ಲಿರುವ ಹೆಸರು ಅವರ ಆಧಾರ್ ಕಾರ್ಡ್‌ನಲ್ಲಿರುವ ಹೆಸರಿಗೆ ಹೊಂದಿಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೋರ್ಟಲ್ ಕೇಳುತ್ತದೆ. ಅಲ್ಲದೆ, ಅವರು ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಅವರ ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆಯೂ ಅದು ಕೇಳುತ್ತದೆ ಎಂದು ವರದಿ ವಿವರಿಸಿದೆ.
ಅರ್ಜಿದಾರರು ಫಾರ್ಮ್ ಭರ್ತಿ ಮಾಡಿದ ನಂತರ, ಅವರಿಗೆ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ ಆಯೋಜಿಸಿರುವ ಬಾಹ್ಯ ಇ-ಸೈನ್ ಪೋರ್ಟಲ್ ಅನ್ನು ತೋರಿಸಲಾಗುತ್ತದೆ. ಇದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಈ ಪೋರ್ಟಲ್‌ನಲ್ಲಿ ‘ಆಧಾರ್ ಒಟಿಪಿ ರಚಿಸಬೇಕಾಗುತ್ತದೆ. ತರುವಾಯ, ಆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
ನಂತರ ಅರ್ಜಿದಾರರು ಆಧಾರ್ ಆಧಾರಿತ ದೃಢೀಕರಣಕ್ಕೆ ಒಪ್ಪಿಗೆ ನೀಡಬೇಕು ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಇದರ ನಂತರ, ಅರ್ಜಿದಾರರನ್ನು ಫಾರ್ಮ್ ಅನ್ನು ಸಲ್ಲಿಸಲು ECINET ಪೋರ್ಟಲ್‌ಗೆ ಮರುನಿರ್ದೇಶಿಸಲಾಗುತ್ತದೆ.
ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ECINET,ಮತದಾರರು ಮತ್ತು ಅಧಿಕಾರಿಗಳಿಗೆ ಮೀಸಲಾದ 40ಕ್ಕೂ ಹೆಚ್ಚು ಚುನಾವಣಾ ಸಮಿತಿಯ ಅರ್ಜಿಗಳನ್ನು ಸಂಯೋಜಿಸುವ ಮತ್ತು ಮರುಪರಿಶೀಲಿಸುವ ವೇದಿಕೆಯಾಗಿದೆ.


