ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಏಕಾಏಕಿ ಘೋಷಣೆಯಾಗಿದ್ದ ಲಾಕ್‌ಡೌನ್ ಲಕ್ಷಾಂತರ ವಲಸೆ ಕಾರ್ಮಿಕರ ನೋವುಗಳಿಗೆ ಸಾಕ್ಷಿಯಾಗಿದೆ. ಕೊರೊನಾ ನಿಯಂತ್ರಣದ ಹೆಸರಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ದೇಶದ 11 ರಾಜ್ಯಗಳಲ್ಲಿ ಸುಮಾರು 45 ಪ್ರತಿಶತದಷ್ಟು ಜನರು ಆಹಾರಕ್ಕಾಗಿ ಸಾಲ ತೆಗೆದುಕೊಳ್ಳಬೇಕಾಗಿತ್ತು ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.
ಸಾಂಕ್ರಾಮಿಕ ಕೊರೊನಾ ಪ್ರೇರಿತ ಲಾಕ್‌ಡೌನ್‌ನಿಂದ ದೇಶದ 11 ರಾಜ್ಯಗಳಿಂದ ಸುಮಾರು 45 ಪ್ರತಿಶತದಷ್ಟು ಜನರು ಊಟ ಮಾಡಲು ಸಹ ಹಣವನ್ನು ಸಾಲ ಪಡೆಯಬೇಕಾಯಿತು ಎಂದು ಹಂಗರ್ ವಾಚ್ ನಡೆಸಿದ ಸಮೀಕ್ಷೆ ಉಲ್ಲೇಖಿಸಿದೆ.
‘ಹಂಗರ್ ವಾಚ್’ ಸಮೀಕ್ಷೆಯಲ್ಲಿ, ಲಾಕ್‌ಡೌನ್ ಮುಗಿದ ಐದು ತಿಂಗಳ ನಂತರವೂ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳಲ್ಲಿ ಹಸಿವಿನ ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಕುಟುಂಬಗಳು ಆಹಾರವಿಲ್ಲದೆಯೇ ಹಸಿವಿನಿಂದ ಮಲಗುತ್ತಿರುವುದು ಈ 11 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ’ಯಡಿಯೂರಪ್ಪ ಕೋಟುಬೂಟು ಹಾಕಿರುವ ರೈತರ ಪರ’-ಐಕ್ಯ ಹೋರಾಟ ಸಮಿತಿ
ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ದೇಶದ ವಿವಿಧ ಭಾಗಗಳಲ್ಲಿನ ಆಹಾರ ಪರಿಸ್ಥಿತಿಯನ್ನು ಪತ್ತೆಹಚ್ಚಲು ಇತರ ಹಲವು ನೆಟ್‌ವರ್ಕ್‌ಗಳೊಂದಿಗೆ ಆಹಾರ ಹಕ್ಕು ಅಭಿಯಾನವು ಸೆಪ್ಟೆಂಬರ್ 2020 ರಲ್ಲಿ ‘ಹಂಗರ್ ವಾಚ್’ ಅನ್ನು ಪ್ರಾರಂಭಿಸಿತು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್, ದೆಹಲಿ, ತೆಲಂಗಾಣ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸುಮಾರು 3,994 ಜನರನ್ನು ಹಂಗರ್ ವಾಚ್ ತಂಡ ಸಂದರ್ಶನ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ 2,186 ಜನರನ್ನು ಸಂದರ್ಶಿಸಿದರೆ, ನಗರ ಪ್ರದೇಶಗಳಿಂದ 1,808 ಜನರನ್ನು ಸಂದರ್ಶಿಸಲಾಗಿದೆ.
ಸುಮಾರು 77% PVTG (ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು) ಕುಟುಂಬಗಳು, 76% ದಲಿತರು, ಮತ್ತು 54% ರಷ್ಟು ಆದಿವಾಸಿಗಳು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ತಮ್ಮ ಆಹಾರ ಸೇವನೆಯ ಪ್ರಮಾಣವು ತೀರ ಕಡಿಮೆಯಾಗಿದೆ ಎಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ವರದಿಯು ಸೂಚಿಸಿದೆ. ಇದು ಸಾಂಕ್ರಾಮಿಕ ಸಮಯದಲ್ಲಿ ಅಂಚಿನಲ್ಲಿರುವವರಿಗೆ ಇನ್ನೂ ಲಭ್ಯವಿರುವ ಕೆಲವು ಸಂಪನ್ಮೂಲಗಳಲ್ಲಿ ಒಂದಾಗಿದೆ. ಕೃಷಿ ಕಾಯ್ದೆಗಳು ದೇಶದ ಹಸಿವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕಳೆದ 15 ದಿನಗಳಿಂದ ಸಾವಿರಾರು ರೈತರು ಕೇಂದ್ರದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತರು, ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈಗಾಗಲೇ ಯಶಸ್ವಿ ಭಾರತ್ ಬಂದ್ ನಡೆಸಿರುವ ರೈತರು, ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೇ ಡಿಸೆಂಬರ್ 12 ರಂದು ದೆಹಲಿ – ಜೈಪುರ ಹೆದ್ದಾರಿ ಬಮದ್ ಮಾಡಲು ಮತ್ತು 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.


