ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ 14 ದಿನಗಳ ಲಾಕ್‌ಡೌನ್ ಅನ್ನು ಮತ್ತೆ ಮೇ 25 ರಿಂದ ಜೂನ್ 07 ರ ವರೆಗೆ (14 ದಿನಗಳು) ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈಗ ವಿಧಿಸಿರುವ ಲಾಕ್‌ಡೌನ್ ಮೇ.24ಕ್ಕೆ ಅಂತ್ಯವಾಗಲಿದ್ದು, ಮತ್ತೆ 14 ದಿನಗಳು ( ಮೇ 25 ರಿಂದ ಜೂನ್ 7ರ ವರೆಗೆ) ಲಾಕ್‌ಡೌನ್ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಈಗ ಜಾರಿಯಲ್ಲಿ ಇರುವ ಲಾಕ್‌ಡೌನ್ ಮಾರ್ಗಸೂಚಿಗಳೇ ಜೂನ್ 7ರವರೆಗೂ ಮುಂದುವರೆಯಲಿದೆ. ಜನಸಾಮಾನ್ಯರು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಅಗತ್ಯವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. 10 ಗಂಟೆಯ ನಂತರ ಕಠಿಣ ನಿಯಮ ಜಾರಿಯಿರಲಿದೆ.
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆ ನಂತರವೂ ಜನರು ಓಡಾಡುತ್ತಿದ್ದಾರೆ. 9.45ಕ್ಕೆ ಮನೆಗಳಿಗೆ ಹೋಗಲು ತಯಾರಾಗಬೇಕು ಆದರೆ, ಜನ 10 ಗಂಟೆಯಾದರೂ ಸುತ್ತುತ್ತಲೇ ಇದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಮೊದಲಿನಂತೆಯೇ ಮುಂದುವರೆದಿರುವ ಕಾರಣ, ಬಿಗಿಯಾದ ಕ್ರಮ ಅನಿವಾರ್ಯ ಎಂದಿರುವ ಮುಖ್ಯಮಂತ್ರಿ, ಹಿಂದೆ ನೀಡಿದ್ದ ಮಾರ್ಗಸೂಚಿಯೇ ಮುಂದುವರೆಯಲಿದೆ. ವಿಪತ್ತು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ. ಜೊತೆಗೆ ಜನರು ಕೊರೊನಾ ನಿಯಮಗಳನ್ನು ಪಾಲಿಸುವಂತೆ, ಹೆಚ್ಚಿನ ನಿಗಾ ವಹಿಸುವಂತೆ ಮನವಿ ಮಾಡಿದ್ದಾರೆ.
ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ. ಲಾಕ್‌ಡೌನ್ ತೆರವುಗೊಳಿಸಿದರೆ ನಗರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಬಹುದು. ಈಗ ಸಾವಿನ ಸಂಖ್ಯೆಯು ಹೆಚ್ಚಾಗಿದೆ. ಹಳ್ಳಿಗಳಲ್ಲಿ ಸೋಂಕು ಕಡಿಮೆಯಾಗುವವರೆಗೂ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಹಲವು ಶಾಸಕರು, ಸಚಿವರು ಒಮ್ಮತ ಸೂಚಿಸಿದ್ದರು. ಕಂದಾಯ ಸಚಿವ ಆರ್.ಅಶೋಕ್, ರಾಜ್ಯದ ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಯುವ ಅವಶ್ಯಕತೆ ಇದೆ. ಲಾಕ್‌ಡೌನ್ ಮಾಡಿರುವುದರಿಂದ ಕೊರೊನಾ ಪ್ರಕರಣಗಳಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಲಾಕ್‌ಡೌನ್ ಮುಗಿಯುವ 3-4 ದಿನಗಳ ಮೊದಲು ಮುಖ್ಯಮಂತ್ರಿಗಳು ಸಭೆ ಕರೆಯಲಿದ್ದಾರೆ. ಸಭೆಯಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆಯೇ ಸಲಹೆ ನೀಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಕೋವಿಶೀಲ್ಡ್ V/s ಕೋವ್ಯಾಕ್ಸಿನ್: ಎರಡು ಲಸಿಕೆಗಳ ಬಗ್ಗೆ ಸರ್ಕಾರಕ್ಕೇ ಗೊಂದಲವಿದೆ, ಕುಮಾರಸ್ವಾಮಿಯವರು ಗಮನಿಸಲಿ!


