Homeಕರ್ನಾಟಕಲಾಕ್‍ಡೌನ್ - ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! - ಮಲ್ಲಿಗೆ ಸಿರಿಮನೆ

ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ

- Advertisement -
- Advertisement -
ಲಾಕ್‍ಡೌನ್ ಕಾಲದ ಬಿಡಿಚಿತ್ರಗಳು ಬಹಳ ವಿಶಿಷ್ಟವಾಗಿವೆ; ಕೆಲವು ನಿರೀಕ್ಷಿತ, ಇನ್ನೂ ಕೆಲವು ಅನಿರೀಕ್ಷಿತ. ಭಾರತದಲ್ಲಿ ಮತ್ತು ಹೊರಗೂ ಕೂಡಾ ಮಹಿಳೆಯರ ಬದುಕಿನ ಮೇಲೆ ಕೊರೊನಾ ವೈರಸ್ ಮತ್ತು ಅದರ ಕಾರಣದಿಂದ ಜಾರಿಯಾದ ಲಾಕ್‍ಡೌನ್ ಉಂಟುಮಾಡಿರುವ ಪರಿಣಾಮಕ್ಕೆ ಹಲವು ಮುಖಗಳು!
‘ಇಟ್ಸ್ ಎ ಫ್ಯಾಮಿಲಿ ಟೈಮ್’…………….!

“ಕುಟುಂಬ ಸದಸ್ಯರೆಲ್ಲ ಸೇರಿ ಹೀಗೆ ಜೊತೆಯಾಗಿ ಕಾಲ ಕಳೆದು ಅದ್ಯಾವ ಶತಮಾನ ಆಗಿತ್ತೋ ಗೊತ್ತಿಲ್ಲ………..ಅಪ್ಪ ರಿಟೈರ್ ಆಗುವಾಗ ಅಮ್ಮ ಇನ್ನೂ ಕೆಲಸಕ್ಕೆ ಹೋಗುತ್ತಿದ್ದರು. ನಾವೆಲ್ಲ ಶಿಕ್ಷಣದಲ್ಲಿ ಬಿಜಿ. ಅಮ್ಮ ರಿಟೈರ್ ಆಗುವ ಹೊತ್ತಿಗೆ ನಮಗೆ ಮದುವೆಯಾಗಿ ಇಬ್ಬರೂ ಗಂಡನ ಮನೆ ಸೇರಿ ಆಗಿತ್ತು…. ಸರ್ಕಾರಿ ಕೆಲಸದಲ್ಲಿದ್ದ ಗಂಡನಿಗೆ ನಾನಿದ್ದ ಊರಿಗೆ ಟ್ರಾನ್ಸ್‍ಫರ್ ಸಿಗದೆ ನಾನೊಂದು ತೀರ ಅವರೊಂದು ತೀರ…. ಅದರ ನಡುವೆಯೇ ಮಕ್ಕಳು……… ಹೀಗೆಲ್ಲ ಚೆಲ್ಲಂಪಿಲ್ಲಿಯಾಗಿದ್ದ ಬದುಕಿಗೆ ಲಾಕ್‍ಡೌನ್ ಒಂದು ರೀತಿಯಲ್ಲಿ ಬಯಸದೆ ಬಂದ ಭಾಗ್ಯ…. ಆ ಸಮಯದಲ್ಲಿ ಹಬ್ಬ ಆಗಿದ್ದಕ್ಕೆ ಅಪ್ಪ ಅಮ್ಮ ಇಬ್ಬರನ್ನೂ ನಮ್ಮ ಮನೆಗೇ ಕರೆದಿದ್ದೆ. ಎರಡು ದಿನ ಇರುವಂತೆಯೇ ಬಂದಿದ್ದರು. ಅಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಊರುಗಳಿಗೆ ಹೋಗುವ ಬಸ್‍ಗಳೇ ಇಲ್ಲದಂತಾದವು. ಎಲ್ಲರೂ ಮನೆಯಲ್ಲಿ ಲಾಕ್ ಆಗಿ ಸೆಟಲ್‍ಡೌನ್ ಆಗಿದ್ದೇವೆ. ಏನೂ ಮಾಡಲು ಕೆಲಸವಿಲ್ಲದೆ ಬೇಜಾರಾದಾಗ ಗಂಡ ಮತ್ತು ಅಪ್ಪ ಇಬ್ಬರೂ ನಮ್ಮ ಮನೆ ಕೆಲಸಕ್ಕೆ ನೆರವಾಗುತ್ತಾರೆ. ನನ್ನ ಗಂಡ ಕಷ್ಟಪಟ್ಟು ಮೋಪ್ ಹಿಡಿದು ನೆಲ ಒರೆಸುವುದನ್ನು ಕಲಿಯುವುದು ನೋಡಿದರೆ ನಗು ಬರುತ್ತೆ. ಪ್ರತಿದಿನ ಒಂದೊಂದು ಹೊಸರುಚಿ ಪ್ರಯೋಗ, ಅಮ್ಮನ ಕೈಯಡುಗೆಯನ್ನು ಹೀಗೆ ವಿರಾಮವಾಗಿ ಸವಿದ ನೆನಪೇ ಇಲ್ಲ; ಈಗ ಅದಕ್ಕೆಲ್ಲ ಸುವರ್ಣಾವಕಾಶ ಆಗಿದೆ………………”

ಲಾಕ್‍ಡೌನ್‍ನ ಸವಿಯನ್ನು ಬಣ್ಣಿಸಲು ಪದಗಳೇ ಸಿಗದೆ ಕಷ್ಟಪಡುತ್ತಲೇ ಗೆಳತಿಯ ವರ್ಣನೆ ಮುಂದುವರೆದಿತ್ತು! ವಿಸ್ತರಣೆಯಾಗುತ್ತಿರುವ ಈ ಲಾಕ್‍ಡೌನ್‍ನಂತೆಯೇ ಆಕೆಯ ವರ್ಣನೆಗೂ ಕೊನೆಯಿದ್ದಂತೆ ಕಾಣಲಿಲ್ಲ. ತಿಂಗಳಿಗೆ ಸರಿಯಾಗಿ ಸಂಬಳ ಬರುವ ವೃತ್ತಿಯಲ್ಲಿರುವ ದಂಪತಿ, ಅಂತಹ ಸಮಸ್ಯೆಗಳಿಲ್ಲದೆ ಹೊಂದಾಣಿಕೆಯಿಂದ ಸಾಗುತ್ತಿರುವ ಸಂಸಾರ, ಮುದ್ದಾದ ಮಕ್ಕಳು, ನಿವೃತ್ತರಾಗಿ ನೆಮ್ಮದಿಯಾಗಿರುವ ತಂದೆ ತಾಯಿ-ಹಳೆಯ ಕನ್ನಡ ಸಿನೆಮಾದಂತಿರುವ ಕುಟುಂಬದ ಮಹಿಳೆಯರಿಗೆ ಬಹುಶಃ ಲಾಕ್‍ಡೌನ್ ವರದಾನವೇ ಇರಬಹುದು. ಆದರೆ, ಬಹುತೇಕರ ಬದುಕು ಸಿನೆಮಾದಂತೆ ರಮಣೀಯ ಅಲ್ಲವಲ್ಲ!!

‘ಕೊರೊನಾ ನಂತರ ಉದ್ಯೋಗ ಕಡಿತ? ಲೇಡೀಸ್ ಫಸ್ಟ್!’

ಕೊರೊನಾ ಲಾಕ್‍ಡೌನ್ ಕುರಿತು ಬಂದಿರುವ ಎಲ್ಲ ಅಧ್ಯಯನಗಳೂ ಈ ಮಾನವದುರಂತದ ಕಾರಣಕ್ಕೆ-ಅದನ್ನು ಬಹುಸಂಖ್ಯಾತ ಜನರ ಪರವಾಗಿ ನಿರ್ವಹಿಸುವಲ್ಲಿ ಆಳುವವರು ವಿಫಲರಾದ ಕಾರಣಕ್ಕೆ- ಜಗತ್ತಿನ ಆರ್ಥಿಕತೆ ದುಡಿಯುವ ಜನರ ತಲೆಯ ಮೇಲೆ ಚಪ್ಪಡಿಕಲ್ಲಿನಂತೆ ಜರಿದು ಬೀಳಲಿದೆ ಎಂದೇ ಹೇಳುತ್ತಿವೆ.

‘ಇನ್ಸ್ಟಿಟ್ಯೂಟ್ ಆಫ್ ಫಿಸ್ಕಲ್ ಸ್ಟಡೀಸ್’ ಹೊರತಂದಿರುವ ಅಧ್ಯಯನ ವರದಿಯ ಪ್ರಕಾರ, ಜಗತ್ತಿನ ದುಡಿಯುವ ಮಹಿಳೆಯರಲ್ಲಿ ಶೇ.30ರಷ್ಟು ಮಂದಿ, ಶಿಕ್ಷಣದ ಕೊರತೆ ಅಥವಾ ಕೌಟುಂಬಿಕ ಕಾರಣಗಳಿಗಾಗಿ ಉದ್ಯೋಗಗಳಲ್ಲಿ ಅತ್ಯಂತ ಕೆಳಹಂತದಲ್ಲಿರುವ ಶೇ.10 ಉದ್ಯೋಗಾವಕಾಶಗಳನ್ನೇ ಅವಲಂಬಿಸಿದ್ದಾರೆ. ಕೊರೊನಾ ದುರಂತದ ನಂತರ ಅತಿಹೆಚ್ಚು ಹೊಡೆತ ತಿನ್ನುವ ಹಾಗೂ ಶಾಶ್ವತವಾಗಿ ಮುಚ್ಚಿಹೋಗಲಿರುವ ಕೆಲವು ಕ್ಷೇತ್ರಗಳಲ್ಲೇ ಈ ಉದ್ಯೋಗಾವಕಾಶಗಳಲ್ಲಿ ಹೆಚ್ಚಿನವು ಕೇಂದ್ರೀಕೃತವಾಗಿವೆ. ಅಂದರೆ, ದುಡಿಯುವ ಮಹಿಳೆಯರಲ್ಲಿ ಶೇ.30ರಷ್ಟು ಮಂದಿ, ತಕ್ಷಣದಲ್ಲಿ ಅಥವಾ ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಉದ್ಯೋಗ ಕಳೆದುಕೊಳ್ಳುವವರಲ್ಲಿ ನಂತರದ ಸ್ಥಾನದಲ್ಲಿ 25ಕ್ಕಿಂತ ಕಡಿಮೆ ವಯಸ್ಸಿನ, ಅನೌಪಚಾರಿಕ ಉದ್ಯೋಗಗಳನ್ನು ಅವಲಂಬಿಸಿರುವ ಯುವಜನರಿದ್ದಾರೆ.

ಈ ಬಗ್ಗೆ ಪರಿಣಾಮಕಾರಿಯಾಗಿರುವುದನ್ನೇನೂ ಜಾಗತಿಕ ಆರ್ಥಿಕ ವಲಯ ಮಾಡುವುದಕ್ಕೆ ಹೊರಟಂತಿಲ್ಲ. ‘ಫಿಸ್ಕಲ್ ಸ್ಟಡೀಸ್’ನ ಅಧ್ಯಯನಕಾರರ ಪ್ರಕಾರ ಜಗತ್ತಿನ ಆರ್ಥಿಕ ತಿಮಿಂಗಿಲಗಳ ಮಟ್ಟಿಗೆ ಹೀಗೆ ನಷ್ಟವಾಗಲಿರುವ ಉದ್ಯೋಗಗಳು ಉದ್ಯೋಗಗಳೇ ಅಲ್ಲ…… ಅವು ಕೇವಲ ತಾತ್ಕಾಲಿಕ ಹೊಟ್ಟೆಪಾಡಿನ ಮಾರ್ಗಗಳು. ಅವುಗಳಿಗೆ ಯಾರೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ!

ನಡೆಯುತ್ತಲೇ ಮನೆಗೆ ಹೊರಟು ದಾರಿ ಮಧ್ಯದಲ್ಲಿ ಸ್ಮಶಾನ ಸೇರಿದ ರಾಯಚೂರಿನ ವಲಸೆ ಕಾರ್ಮಿಕ ಮಹಿಳೆ, ನಿನ್ನೆ ಅದೇ ರೀತಿ ದುರಂತ ಸಾವಿಗೀಡಾದ ಪುಟ್ಟ ಬಾಲೆ………. ವಲಸೆ ಕಾರ್ಮಿಕ ಸಮುದಾಯವೇ ಸ್ವಾತಂತ್ರ್ಯಾನಂತರ ಕಂಡರಿಯದಂತಹ ನೋವಿಗೆ ತುತ್ತಾಗಿದೆ. ಅದರಲ್ಲೂ ಮಹಿಳೆಯರ ಪಾಡು ಅಸಹನೀಯ. ಬಸಿರೋ, ಬಾಣಂತಿಯೋ, ತಿಂಗಳ ಮುಟ್ಟೋ………. ಕೇಳುವವರಾರು? ಇವರುಗಳ ನೋವಿನ ಬಗ್ಗೆ ಅಸಾಧಾರಣ ಅಸಡ್ಡೆ ಮತ್ತು ಅಸಹನೀಯ ನಿರ್ಲಿಪ್ತತೆ ತೋರುತ್ತಿರುವ ಸರ್ಕಾರ, ಸಮಾಜ ಮತ್ತು ಮಾಧ್ಯಮಗಳ ಬಗ್ಗೆ ಆಕ್ರೋಶ ಮೂಡಲೇಬೇಕಲ್ಲವೇ?

‘ಮಹಿಳೆ-ಮನೆಯಿಂದಲೇ ಕೆಲಸ’

ಲಾಕ್‍ಡೌನ್ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಅನೇಕ ಬಗೆಯ ವೃತ್ತಿಪರರು ಮೊಟ್ಟಮೊದಲ ಬಾರಿಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ಮಾಡುತ್ತಿದ್ದಾರೆ. ಈ ಹಿಂದೆ ಎಂದೂ ಕಾಲೇಜು ಉಪನ್ಯಾಸಕರು, ವೃತ್ತಿಪರ ಆಪ್ತಸಲಹಾಕಾರರು, ಕಲಾವಿದರು, ಪತ್ರಕರ್ತರು ಮೊದಲಾದವರು ಮನೆಯಿಂದ ಕೆಲಸ ಮಾಡಬೇಕಾದ ಸಂದರ್ಭ ಎದುರಿಸಿರಲಿಲ್ಲ. ಹಲವು ಬಗೆಯ ತಂತ್ರಜ್ಞಾನ ಆಧಾರಿತ ವೃತ್ತಿಗಳಲ್ಲೂ ಹಲವು ಮಂದಿ ಮನೆಯಿಂದ ಕೆಲಸ ಮಾಡಿದ ಅನುಭವ ಹೊಂದಿಲ್ಲ. ಹೀಗಾಗಿ ಮನೆಯಿಂದಲೇ ಕೆಲಸ ಎಂಬುದಕ್ಕೆ ಹೊಂದಿಕೊಳ್ಳಲು ಅನೇಕರಿಗೆ-ವಿಶೇಷವಾಗಿ ಮಹಿಳೆಯರಿಗೆ-ಕಷ್ಟವಾಗಿರುವುದು ಸಹಜ. ಆದರೆ, ಇವುಗಳನ್ನು ವೃತ್ತಿಪರವಾದ ರೀತಿಯಲ್ಲಿ ನಿಭಾಯಿಸುವ ಅಭ್ಯಾಸ ಭಾರತದಂತಹ ಊಳಿಗಮಾನ್ಯ ಸಮಾಜಗಳಲ್ಲಿ ಬದುಕುವ ನಮಗೆ ಕಡಿಮೆ. ಪ್ರತಿಭಾನ್ವೇಷಣೆಯನ್ನೆ ಗುರಿಯಾಗಿಸಿಕೊಂಡಿರುವ ‘ಅವತಾರ್’ ಸಂಸ್ಥೆಯ ಸಂಸ್ಥಾಪಕಿ ಸೌಂದರ್ಯ ರಾಜನ್ ಅವರ ಪ್ರಕಾರ “ಭಾರತದಲ್ಲಿ ಒಂದೆಡೆ ಕೊರೊನಾ ವೈರಸ್ ಆತಂಕ ಹುಟ್ಟಿಸಿದ್ದರೆ ಮತ್ತೊಂದೆಡೆ ಇಷ್ಟು ಕಾಲವಾದರೂ ನಮ್ಮನ್ನು ಬಿಟ್ಟುಹೋಗಿಲ್ಲದ ಪಿತೃಪ್ರಧಾನತೆಯ ವೈರಸ್ ಕಾಡುತ್ತಿದೆ. ಹಲವು ವೃತ್ತಿಗಳಲ್ಲಿ ಮೇಲಿನ ಹುದ್ದೆಗಳಲ್ಲಿರುವ ಬಾಸ್‍ಗಳು ಭಾರತದಲ್ಲಿ ಹೆಚ್ಚಾಗಿ ಗಂಡಸರೇ ಆಗಿರುತ್ತಾರೆ. ಅವರಲ್ಲಿ ಬಹುತೇಕರು ಸ್ವತಃ ತಾವೇ ಈ ‘ಮನೆಯಿಂದ ಕೆಲಸ’ದ ಹೊಸ ಶೆಡ್ಯೂಲ್‍ಗೆ ಹೊಂದಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ. ಆ ಹಳೆಯದೇ ಚಾಕಚಕ್ಯತೆ ಸಾಧಿಸಲು ಹೆಣಗುತ್ತಿದ್ದಾರೆ. ಆದರೆ, ತಮ್ಮ ಕೈಕೆಳಗಿರುವ ಉದ್ಯೋಗಿಗಳು-ವಿಶೇಷವಾಗಿ ಮಹಿಳೆಯರು-ಜನ್ಮಜಾತವಾಗಿ ಈ ಕಲೆಯನ್ನು ಸಿದ್ಧಿಸಿಕೊಂಡಿರಬೇಕೆಂದು ಬಯಸುತ್ತಾರೆ. (ಬಿಸಿನೆಸ್ ಟೈಮ್ಸ್ ವರದಿ, ಏಪ್ರಿಲ್ 8, 2020). ಇದೇ ಬಿಸಿನೆಸ್ ಟುಡೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ ಟರ್ಬೋ ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥ ಎಸ್‍ಎನ್ ಸುಬ್ರಮಣಿಯನ್ ಅವರು ತಮ್ಮ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ, ಈ ಕಷ್ಟಕರ ಕಾಲದಲ್ಲಿ ತಮ್ಮ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಂಡು, ಗೃಹಕೃತ್ಯಗಳ ಜೊತೆ ಕಛೇರಿ ಕೆಲಸಗಳನ್ನೂ ಮನೆಯಲ್ಲಿದ್ದುಕೊಂಡೇ ನಿಭಾಯಿಸಲು ಯತ್ನಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಪುರುಷ ಉದ್ಯೋಗಿಗಳು ಆದಷ್ಟೂ ಅವರಿಗೆ ಸಹಕರಿಸಬೇಕು, ಏನಿಲ್ಲವೆಂದರೂ ಅವರ ದಾರಿಗೆ ಅಡ್ಡಿಯಾಗದಂತಿರಲು ಪ್ರಯತ್ನಿಸಬೇಕೆಂದು ವಿನಂತಿಸಿದ್ದಾರೆ. ಇದು ಬಹಳ ಲಿಂಗಸೂಕ್ಷ್ಮತೆಯುಳ್ಳ ಪತ್ರವಾಗಿಲ್ಲವಾದರೂ, ಪರಿಸ್ಥಿತಿಯ ಗಂಭೀರತೆಯನ್ನು ನಮಗೆ ತಿಳಿಸುತ್ತದೆ.

ಮನೆಕೆಲಸ ಮತ್ತು ಲಾಕ್‍ಡೌನ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾ ಬರವಣಿಗೆಯಲ್ಲಿ ತೊಡಗಿರುತ್ತಿದ್ದ ಹಿರಿಯ ಗೆಳತಿಯೊಬ್ಬರ ಪ್ರತಿಕ್ರಿಯೆ ಲಾಕ್‍ಡೌನ್‍ನ ಜೆಂಡರ್ ಆಯಾಮವನ್ನು ಪರಿಚಯಿಸುವಂತಿತ್ತು. “ಬೆಳಿಗ್ಗೆ 6ಕ್ಕೆ ಎದ್ದರೂ ರಾತ್ರಿಯವರೆಗೂ ಮುಗಿಯದಷ್ಟು ಕೆಲಸ. ಎಳೆಯ ಮಗುವಿನೊಂದಿಗೆ ಮನೆಯಲ್ಲಿರುವ ಬಾಣಂತಿ ಮಗಳನ್ನೂ ಸೇರಿದರೆ, ಮನೆಮಂದಿಯ ಅಗತ್ಯಗಳನ್ನು ಪೂರೈಸುವುದಕ್ಕೆ ರಾತ್ರಿಯವರೆಗಿನ ಸಮಯವೂ ಸಾಲದು”. ಅಕ್ಷರ ಕೇಂದ್ರವು 2019ರಲ್ಲಿ ತಂದಿರುವ ‘ಬಿಗ್ ಸ್ಮಾಲ್ ಸ್ಟೆಪ್ಸ್’ ವರದಿಯ ಪ್ರಕಾರ, ಭಾರತದ ನಗರ ಪ್ರದೇಶಗಳ ವಯಸ್ಕ ಪುರುಷರಲ್ಲಿ ಶೇ.79ರಷ್ಟು ಮಂದಿ ಮಹಿಳೆ ಮತ್ತು ಪುರುಷರಿಬ್ಬರಿಗೂ ಸಮಾನವಾದ ಹಕ್ಕುಗಳಿರಬೇಕೆಂದು ಭಾವಿಸುತ್ತಾರೆ. ಆದರೆ ಅಷ್ಟಾದರೂ ಅದು ಗೃಹಕೃತ್ಯಗಳಿಗೆ ಸಂಬಂಧಪಟ್ಟಂತಲ್ಲ; ಮನೆಕೆಲಸ ತಮ್ಮದೂ ಕೂಡಾ ಕರ್ತವ್ಯ ಎಂದು ಭಾವಿಸುವವರು ಶೇ.1.5 ಮಂದಿ ಮಾತ್ರ!

ಪರಿಸ್ಥಿತಿ ಹೀಗಿರುವಾಗ ಲಾಕ್‍ಡೌನ್ ಎಂಬುದು ಎಷ್ಟು ದೊಡ್ಡ ಹೊರೆಯನ್ನು ಮಹಿಳೆಯರ ಮೇಲೆ ಹೊರೆಸಿರಬಹುದು ಎಂಬುದು ಊಹಿಸಲಾರದ ಸಂಗತಿಯಲ್ಲ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಈ ಒಂದು ತಿಂಗಳಲ್ಲಿ 250 ಕೌಟುಂಬಿಕ ಹಿಂಸೆಯ ಪ್ರಕರಣಗಳು ಬಂದಿವೆ. ಸಾಮಾನ್ಯವಾಗಿ ಈ ಸಂಖ್ಯೆ 65-70 ಇರುತ್ತಿತ್ತು ಎಂದು ಅಧ್ಯಕ್ಷೆ ಹೇಳುತ್ತಾರೆ. ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್ ಅವರು, “ಮನೆಯಲ್ಲೇ ಇರಬೇಕಾಗಿ ಬಂದು ಮೂಡುವ ಹತಾಶಭಾವ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತದೆ. ಮೊದಲೇ ಅನೇಕ ಬಗೆಯ ಒತ್ತಡದಲ್ಲಿರುವ ಮಹಿಳೆ ಈಗ ಇದನ್ನೂ ಅನುಭವಿಸಬೇಕು. ಇದು ಬಹಳ ದುರದೃಷ್ಟಕರ” ಎನ್ನುತ್ತಾರೆ.

ಆಶಾ ಕಾರ್ಯಕರ್ತೆಯರು-ಆರೋಗ್ಯ ಸೇವೆಯಲ್ಲಿರುವ ಮಹಿಳೆಯರು!

ಇತ್ತೀಚೆಗೆ ಬೆಳಗಾವಿಯ ನರ್ಸ್ ಒಬ್ಬರ ಮಗುವಿನ ರೋದನೆ ನಮ್ಮೆಲ್ಲರ ಕಣ್ಣುಗಳನ್ನೂ ಒದ್ದೆ ಮಾಡಿತ್ತು. ಈ ಬಗೆಯಲ್ಲಿ ನೋಯುತ್ತಿರುವ ಮಹಿಳೆಯರು ಮತ್ತು ಕುಟುಂಬಗಳಿಗಂತೂ ಎಣೆಯಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ರಿಸ್ಕ್ ಅಂತೂ ಅತ್ಯಂತ ದೊಡ್ಡದು. ಇವರಿಗೆ ಕೊರೊನಾ ಸಂಬಂಧಿ ಕೆಲಸಕ್ಕೆ ದಿನವೊಂದಕ್ಕೆ ಕೇವಲ 30 ರೂ ಸಿಗುತ್ತದೆ. ಆದರೆ, ತಮ್ಮ ಬದುಕನ್ನೇ ಅವರು ಅಪಾಯಕ್ಕೆ ಒಡ್ಡಿಕೊಳ್ಳಬೇಕಿದೆ. ಹಾಗೆಯೇ ಹೆಚ್ಚಾಗಿ ಮಹಿಳೆಯರೇ ಇರುವ ಆರೋಗ್ಯ ಸಹಾಯಕರು, ದಾದಿಗಳು, ಪೌರ ಕಾರ್ಮಿಕರು…… ಈ ಪಟ್ಟಿ ಮುಗಿಯವುದಿಲ್ಲ!!

ಇಂತಹವುಗಳ ಬಗ್ಗೆ ಮುಖ್ಯವಾಹಿನಿ ಸುದ್ದಿ ಮಾಧ್ಯಮಗಳಲ್ಲಿ ಒಂದಾದರೂ ವಿಶ್ಲೇಷಣಾತ್ಮಕ ವರದಿ ನೋಡಿದ್ದೀರಾ? ಅವರಿಗೆ ಪಾಪ ಧರ್ಮದ ಆಧಾರದಲ್ಲಿ ದೇಶದಲ್ಲಿ ಗಲಭೆ ಹುಟ್ಟು ಹಾಕುವುದು ಹೇಗೆ ಎಂಬ ಚಿಂತೆಯೇ ಮುಗಿಯದಿರುವಾಗ ದೇಶದ ಮಹಿಳೆಯರ ಗೋಳು, ವಲಸೆ ಕಾರ್ಮಿಕರ ಅಸಹಾಯಕತೆ ಹೇಗೆ ತಾನೇ ತಟ್ಟೀತು? ಲಾಕ್‍ಡೌನ್ ಮುಗಿದರೂ ಮುಗಿಯದ ಈ ಕಥನಗಳನ್ನು ಹೆಂಕಥನಗಳೆಂದು ಕರೆಯಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...