ಚುನಾವಣಾ ಆಯೋಗದ (ಇಸಿ) ಅಂಕಿಅಂಶಗಳ ಪ್ರಕಾರ, 2019ರ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಟ್ರಾನ್ಸ್ ಜೆಂಡರ್ (ತೃತೀಯ ಲಿಂಗ) ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. 2024 ರಲ್ಲಿ, ತೃತೀಯ ಲಿಂಗದ ಮತದಾರರು ಶೇಕಡಾ 25 ರಷ್ಟಿದ್ದರೆ, ಕಳೆದ ಚುನಾವಣೆಯಲ್ಲಿ ಅದು ಶೇಕಡಾ 14.58 ರಷ್ಟಿತ್ತು.
ಈಗಷ್ಟೇ ಮುಗಿದಿರುವ ಏಳು ಹಂತದ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಹಂತ-ಹಂತದ ಡೇಟಾವನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 19 ರಂದು ನಡೆದ 2024 ರ ಮೊದಲ ಹಂತದ ಚುನಾವಣೆಯಲ್ಲಿ ತೃತೀಯ ಲಿಂಗದ ಮತದಾರರು ಶೇಕಡಾ 31.32 ರಷ್ಟಿದ್ದರು. ಏಪ್ರಿಲ್ 26ರಂದು ನಡೆದ ಎರಡನೇ ಹಂತದಲ್ಲಿ ಶೇ.23.86, ಮೇ 7ರಂದು ನಡೆದ ಮೂರನೇ ಹಂತದಲ್ಲಿ ಶೇ.25.2, ಮೇ 13ರಂದು ನಡೆದ ನಾಲ್ಕನೇ ಹಂತದಲ್ಲಿ ಶೇ.34.23, ಮೇ 20ರಂದು ನಡೆದ ಐದನೇ ಹಂತದಲ್ಲಿ ಶೇ.21.96 ಮತ್ತು ಮೇ 25 ರಂದು ನಡೆದ ಆರನೇ ಹಂತದಲ್ಲಿ ಶೇ. 18.67 ರಷ್ಟು ಜನ ಮತದಾನ ಮಾಡಿದ್ದಾರೆ.
ಜೂನ್ 1 ರಂದು ನಡೆದ ಅಂತಿಮ ಮತ್ತು ಏಳನೇ ಹಂತದ ಮತದಾನದಲ್ಲಿ ಶೇ 22.33 ರಷ್ಟು ತೃತೀಯಲಿಂಗಿ ಮತದಾನವಾಗಿದೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ 4,87,803 ತೃತೀಯಲಿಂಗಿಗಳಿದ್ದಾರೆ.
18ನೇ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರದ ದೊಡ್ಡ ಪಕ್ಷ ಕಾಂಗ್ರೆಸ್ 99 ಸ್ಥಾನಗಳೊಂದಿಗೆ, ಸಮಾಜವಾದಿ ಪಕ್ಷವು 37 ಸ್ಥಾನಗಳನ್ನು ಗಳಿಸಿದೆ.
ಒಟ್ಟು ಮತದಾನದ ಪ್ರಮಾಣ
2024 ರ ಲೋಕಸಭಾ ಚುನಾವಣೆಯ ಒಟ್ಟಾರೆ ಮತದಾನದ ಪ್ರಮಾಣವು ಶೇಕಡಾ 65.79 ರಷ್ಟಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ (ಜೂನ್ 6) ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಶೇ.81.56ರಷ್ಟು ಮತದಾನವಾಗಿದೆ. ರಾಜ್ಯಗಳ ಪೈಕಿ ಶೇ.56.19 ರಷ್ಟು ಮತದಾನದಲ್ಲಿ ಬಿಹಾರ ಕಡಿಮೆ ಮತದಾನವಾಗಿದೆ ಎಂದು ಇಸಿ ಹೇಳಿದೆ.
“ಅಂಚೆ ಮತಗಳ ಸಂಖ್ಯೆ ಮತ್ತು ಒಟ್ಟು ಮತದಾನದ ಪ್ರಮಾಣ ಹೊಂದಿರುವ ವಿವರವಾದ ಅಂಕಿಅಂಶಗಳ ವರದಿಗಳು ವಿವರಗಳನ್ನು ಅಂತಿಮಗೊಳಿಸಿದ ನಂತರ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ” ಎಂದು ಆಯೋಗ ಹೇಳಿದೆ.
ಚುನಾವಣಾ ಆಯೋಗದ ಪ್ರಕಾರ, ಪುರುಷ ಮತದಾರರು ಶೇಕಡಾ 63.11 ರಷ್ಟಿದ್ದರೆ, ಶೇಕಡಾ 64.72 ರಷ್ಟು ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ತೃತೀಯ ಲಿಂಗದ ಮತದಾನದ ಪ್ರಮಾಣವು ಶೇಕಡಾ 22.33 ರಷ್ಟಿತ್ತು. ಈ ವಾರದ ಆರಂಭದಲ್ಲಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಮತದಾರರೊಂದಿಗೆ ಭಾರತವು ಇತಿಹಾಸವನ್ನು ನಿರ್ಮಿಸಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ; ‘ಸ್ಪೀಕರ್ ಸ್ಥಾನವನ್ನು ಪಡೆಯಿರಿ..’; ಬಿಜೆಪಿ ಮಿತ್ರಪಕ್ಷಗಳಿಗೆ ಎಚ್ಚರಿಕೆ ನೀಡಿದ ಆದಿತ್ಯ ಠಾಕ್ರೆ


