ಮಹಿಳಾ ಬಿಜೆಪಿ ಅಭ್ಯರ್ಥಿಯ ಬಗ್ಗೆ “ಐಟಂ” ಎಂಬ ಹೇಳಿಕೆಯ ಕುರಿತು 48 ಗಂಟೆಗಳ ಒಳಗೆ ವಿವರಿಸಲು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಚುನಾವಣಾ ಆಯೋಗ ಇಂದು ಆದೇಶಿಸಿದೆ.
ಮಧ್ಯಪ್ರದೇಶ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಪರವಾಗಿ ಮಾಜಿ ಮುಖ್ಯಮಂತ್ರಿ ಕಮಲನಾಥ್, ದಾಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಭಾಷಣದಲ್ಲಿ ಸುರೇಶ್ ರಾಜೆ ಅವರ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಕರೆದಿದ್ದರು
ಚುನಾವಣಾ ಸಮಾವೇಶದಲ್ಲಿ ನೇರವಾಗಿ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿಯವರ ಹೆಸರು ಬಳಸದೆ, “ನಮ್ಮ ಅಭ್ಯರ್ಥಿ ಅವರಂತಲ್ಲ. ಅವರ ಹೆಸರು ಏನೋ ಇದೆಯಲ್ಲ ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸುತ್ತಾರೆ. ಅತ್ತಲಿಂದ ಕಾರ್ಯಕರ್ತರು ಇಮಾರ್ತಿ ದೇವಿಯೆಂದು ಒಕ್ಕೊರಲಿನಿಂದ ಕೂಗುತ್ತಾರೆ. ಬಳಿಕ ಮಾತನಾಡುವ ಕಮಲ್ನಾಥ್, ಅವರು ಎಂಥ ಐಟಂ ಎಂಬುದನ್ನು ನೀವೆಲ್ಲರೂ ನನಗಿಂತ ಚೆನ್ನಾಗಿ ಬಲ್ಲಿರಿ” ಎನ್ನುವ ಮೂಲಕ ಮಹಿಳೆಯೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ, ಹಾಲಿ ಬಿಜೆಪಿ ಅಭ್ಯರ್ಥಿಯಾಗಿರುವ ಇಮಾರ್ತಿ ದೇವಿ ಕುರಿತು ಕಮಲನಾಥ್ ಅವರು ಬಹಿರಂಗ ಸಭೆಯಲ್ಲೆ ‘ಐಟಂ’ ಎಂಬ ಪದ ಬಳಸಿ ವ್ಯಂಗ್ಯವಾಡಿದ್ದು, ಬಿಜೆಪಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು.
ಮಧ್ಯಪ್ರದೇಶ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ವಿವಾದಾತ್ಮಕ ಹೇಳಿಕೆಯನ್ನು ಪಕ್ಷದ ಮುಖಂಡ ರಾಹುಲ್ ಗಾಂಧಿ ಬಹಿರಂಗವಾಗಿ ಟೀಕಿಸಿದ್ದರು. ಇದರ ನಂತರವೂ ಕಮಲನಾಥ್ ಕ್ಷಮೆಯಾಚಿಸಲು ನಿರಾಕರಿಸಿದ್ದರು.
ಇದನ್ನೂ ಓದಿ: ಕಮಲನಾಥ್ ವಿವಾದಾತ್ಮಕ ಹೇಳಿಕೆ ಟೀಕಿಸಿದ ರಾಹುಲ್ ಗಾಂಧಿ
“ನಾನು ಆ ಹೇಳಿಕೆಯನ್ನು ನೀಡಿದ ಸಂದರ್ಭವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದಾಗ ನಾನು ಯಾಕೆ ಕ್ಷಮೆಯಾಚಿಸಬೇಕು? ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ಅದಕ್ಕೆ ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ಐಟಂ ಎನ್ನುವುದು ಸಂಸತ್ತು ಸೇರಿದಂತೆ ಎಲ್ಲೆಡೆ ಸಾಮಾನ್ಯವಾಗಿ ಬಳಸುವ ಪದವಾಗಿದೆ ಮತ್ತು ಇದು ಯಾವುದೇ ರೀತಿಯ ಅವಮಾನವಲ್ಲ” ಎಂದು ಕಮಲನಾಥ್ ಸುದ್ದಿಗಾರರಿಗೆ ತಿಳಿಸಿದರು.
“ನಾನು ಅಗೌರವದಿಂದ ಏನನ್ನೂ ಹೇಳಲಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಇದು ಅಗೌರವ ಎಂದು ಯಾರಾದರೂ ಭಾವಿಸಿದರೆ, ನಾನು ವಿಷಾದಿಸುತ್ತೇನೆ” ಎಂದು ಅವರು ಹೇಳಿದರು.
ಕಮಲನಾಥ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಜೋತಿರಾಧಿತ್ಯ ಸಿಂಧಿಯಾಗೆ ನಿಷ್ಠೆಯಿಂದಿದ್ದ ಇಮಾರ್ತಿ ದೇವಿ ಮತ್ತು ಇತರ 21 ಶಾಸಕರು ಕಾಂಗ್ರೆಸ್ ಮತ್ತು ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿ ಈ ವರ್ಷದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಹೇಳಿಕೆಯು ಉಪಚುನಾವಣೆಗೆ ಮುನ್ನ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದು, ರಾಜ್ಯದ ಆಡಳಿತಾರೂಢ ಬಿಜೆಪಿ ಮತ್ತು ಆ ಮಹಿಳಾ ಅಭ್ಯರ್ಥಿಯು ಕಮಲನಾಥ್‌ರನ್ನು ಉಚ್ಚಾಟಿಸುವಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದರು.
ಈ ಅಭಿಪ್ರಾಯವು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ಹಿರಿಯ ಮುಖಂಡರಿಂದ ವಿವರಣೆಯನ್ನು ಕೋರಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಕಮಲನಾಥ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ


