ಮಧ್ಯಪ್ರದೇಶ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ವಿವಾದಾತ್ಮಕ ಹೇಳಿಕೆಯನ್ನು ಪಕ್ಷದ ಮುಖಂಡ ರಾಹುಲ್ ಗಾಂಧಿ ಬಹಿರಂಗವಾಗಿ ಟೀಕಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರನ್ನು ಟೀಕಿಸಿದ ಪಕ್ಷದ ಮೊದಲ ನಾಯಕರಾಗಿದ್ದಾರೆ.
ಹಿರಿಯ ನಾಯಕ ಕಮಲನಾಥ್, ಬಿಜೆಪಿ ಸಚಿವೆ ಇಮಾರ್ತಿ ದೇವಿಯವರನ್ನ ‘ಐಟಂ’ ಎಂದು ಕರೆದು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಹೇಳಿಕೆಯು ಉಪಚುನಾವಣೆಗೆ ಮುನ್ನ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ, ರಾಜ್ಯದ ಆಡಳಿತಾರೂಢ ಬಿಜೆಪಿ ಮತ್ತು ಆ ಮಹಿಳಾ ಅಭ್ಯರ್ಥಿಯು ಕಮಲನಾಥ್‌ರನ್ನು ಉಚ್ಚಾಟಿಸುವಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ “ಕಮಲನಾಥ್ ಜಿ ನನ್ನ ಪಕ್ಷದವರು. ಆದರೆ, ಅವರು ಬಳಸಿದ ಭಾಷೆ ವೈಯಕ್ತಿಕವಾಗಿ ನನಗೆ ಹಿಡಿಸಲಿಲ್ಲ. ಅವರು ಯಾರೇ ಆಗಿರಬಹುದು, ಆದರೆ, ಇಂಥ ಭಾಷೆ ಬಳಕೆಯನ್ನು ನಾನು ಬೆಂಬಲಿಸುವುದಿಲ್ಲ. ಇದು ದುರದೃಷ್ಟಕರ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಕಮಲನಾಥ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ
#WATCH Kamal Nath ji is from my party but personally, I don't like the type of language that he used…I don't appreciate it, regardless of who he is. It is unfortunate: Congress leader Rahul Gandhi on the former Madhya Pradesh CM's "item" remark pic.twitter.com/VT149EjHu0
— ANI (@ANI) October 20, 2020
ಇನ್ನು ಪ್ರಕರಣ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದ ಸುದ್ದಿಗಾರರಿಗೆ ’ನನಗೆ ಪ್ರಶ್ನೆ ಮಾಡುವಂತೆ ನೀವು ಪ್ರಧಾನಿಯವರಿಗೆ ಯಾಕೆ ಪ್ರಶ್ನಿಸುವುದಿಲ್ಲ. ಹತ್ರಾಸ್ ಪ್ರಕರಣದ ಕುರಿತು ಅವರೇಕೆ ಒಂದು ಮಾತು ಆಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಕಮಲ್‌ನಾಥ್ ಕುರಿತ ರಾಹುಲ್ ಗಾಂಧಿಯವರ ಟೀಕೆಯನ್ನು ಸ್ವಾಗತಿಸಿದ್ದಾರೆ. “ಬಿಜೆಪಿ ಮುಖಂಡರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಆದರೆ ಆ ಕುರಿತು ಬಿಜೆಪಿಯ ಮೋದಿಯವರಾಗಲಿ, ಹಿರಿಯ ಮುಖಂಡರಾಗಲಿ ಮಾತನಾಡುವುದಿಲ್ಲ. ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ” ಎಂದಿದ್ದಾರೆ.
ಈ ಹಿಂದೆ ಕೂಡ “ಒಂದು ಸ್ವತಂತ್ರ ಮಾಧ್ಯಮವನ್ನು ನನಗೆ ಕೊಡಿ. ಸ್ವತಂತ್ರ ಸಂಸ್ಥೆಗಳನ್ನು ನೀಡಿ. ಮರುಕ್ಷಣ ಈ ಕೇಂದ್ರ ಸರ್ಕಾರ ಆಡಳಿತದಲ್ಲಿರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮಧ್ಯಪ್ರದೇಶ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಪರವಾಗಿ ಮಾಜಿ ಮುಖ್ಯಮಂತ್ರಿ ಕಮಲನಾಥ್ ದಾಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಭಾಷಣದಲ್ಲಿ ಸುರೇಶ್ ರಾಜೆ ಅವರ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಕರೆದಿದ್ದರು.
ಕಮಲನಾಥ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಜೋತಿರಾಧಿತ್ಯ ಸಿಂಧಿಯಾಗೆ ನಿಷ್ಠೆಯಿಂದಿದ್ದ ಇಮಾರ್ತಿ ದೇವಿ ಮತ್ತು ಇತರ 21 ಶಾಸಕರು ಕಾಂಗ್ರೆಸ್ ಮತ್ತು ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿ ಈ ವರ್ಷದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.