ಸೋದರ ಮಾವನೊಂದಿಗೆ ಪೋನಿನಲ್ಲಿ ಮಾತನಾಡಿದ ಕಾರಣಕ್ಕೆ ಇಬ್ಬರು ಬುಡಕಟ್ಟು ಯುವತಿಯರ ಮೇಲೆ ಸಂಬಂಧಿಕರು ಸಾರ್ವಜನಿಕ ಪ್ರದೇಶದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದಲ್ಲಿ ನಡೆದಿರುವ ಈ ಕೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಡಿಯೊಗಳಲ್ಲಿ ಇಬ್ಬರು ಸಹೋದರಿಯರ ಮೇಲೆ ಏಳು ಮಂದಿ ಸಂಬಂಧಿಕರು, ಕಪಾಳಮೋಕ್ಷ ಮಾಡುವುದು, ಒದೆಯುವುದು, ಕೂದಲು ಹಿಡಿದು ಎಳೆದೊಯ್ಯುವುದು, ಕಟ್ಟಿಗೆಗಳಿಂದ ಬಡಿಯುವ ಅಮಾನವೀಯ ದೃಶ್ಯಗಳು ಸೆರೆಯಾಗಿದೆ.
ಸಹೋದರಿಯರಾದ ಬುಡಕಟ್ಟು ಯುವತಿಯರ ಮೇಲೆ ಕುಟುಂಬ ಸದಸ್ಯರು ಸಾರ್ವಜನಿಕ ಸ್ಥಳದಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದರೂ ಕೂಡ ಯಾರು ಸಹಾಯಕ್ಕೆ ಬಂದಿಲ್ಲ. ಅನೇಕ ಮಂದಿ ಅಲ್ಲೆ ನಿಂತು ಘಟನೆಯನ್ನು ಗಮನಿಸುತ್ತಾ, ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ, ಆದರೆ ಯುವತಿಯರ ಮೇಲೆ ನಡೆಯುತ್ತಿದ್ದ ಅಮಾನವೀಯ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿಲ್ಲ.
ಈ ಅಮಾನವೀಯ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಿಪಾಲ್ವಾ ಗ್ರಾಮದಲ್ಲಿ ನಡೆದಿದೆ. ನದಿಯ ಬಳಿ ನಿಂತಿರುವ ಯುವತಿಯರ ಮೇಲೆ ತಮ್ಮ ಸೋದರಸಂಬಂಧಿಗಳ ತಂಡ ಥಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಬಾಲಕಿಗೆ ಕಿರುಕುಳ ನೀಡಿ ಮಹಡಿ ಮೇಲಿನಿಂದ ತಳ್ಳಿದ ಕಿಡಿಗೇಡಿಗಳು
ಜೂನ್ 22 ರಂದು ಈ ಘಟನೆ ನಡೆದಿದ್ದು, ಕೆಲವು ದಿನಗಳ ನಂತರ ಈ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಗಮನಕ್ಕೆ ಬಂದ ನಂತರ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಹಲ್ಲೆಗೊಳಗಾದ ಯುವತಿಯರನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಗಿದ್ದು, ಹಲ್ಲೆಗೊಳಗಾದ ಒಬ್ಬ ಯುವತಿಯ ತಾಯಿ ಮತ್ತು ಸಹೋದರ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಚಿತ್ರಹಿಂಸೆ ಇಲ್ಲಿಯೇ ನಿಂತಿಲ್ಲ. ನದಿ ದಂಡೆಯಿಂದ ಹಳ್ಳಿಗೆ ಕರೆದೊಯ್ಯದು ಅಲ್ಲಿ ಮತ್ತೆ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇತ್ತ ಅಲಿರಾಜ್‌ಪುರದಲ್ಲಿ, 19 ವರ್ಷದ ಯುವತಿಯನ್ನು ಮರಕ್ಕೆ ಕಟ್ಟಿ ಕೋಲುಗಳಿಂದ ಹೊಡೆದಿರುವ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಮದುವೆಯಾದ ಯುವತಿ ತನ್ನ ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದಕ್ಕಾಗಿ ಕುಟುಂಬ ಸದಸ್ಯರು ಕೋಪಗೊಂಡಿದ್ದು, ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯಲಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿದ್ಯತೆ


