ಇತ್ತೀಚೆಗೆ ಕರ್ನಾಟಕದ ಜನರ ಮನೆಮಾತಾಗಿರುವ ಮಹಾನಾಯಕ ಧಾರಾವಾಹಿ ಕನ್ನಡ ಧಾರಾವಾಹಿಗಳ ಲೋಕದಲ್ಲಿ ಹೊಸ ದಾಖಲೆಯನ್ನೆ ನಿರ್ಮಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ರಾಜ್ಯದಾದ್ಯಂತ ಜನಮನ್ನಣೆ ಗಳಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನಾಧಾರಿತ “ಮಹಾನಾಯಕ” ಧಾರಾವಾಹಿಗೆ ಡಬ್ಬಿಂಗ್ ವಿಭಾಗದಲ್ಲಿ ಜೀ ಕುಟುಂಬ ಪ್ರಶಸ್ತಿ ಲಭಿಸಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮುಂದಿನ ವಾರ ಇದರ ಪ್ರಸಾರ ಮಾಡಲಾಗುತ್ತದೆ ಎಂದು ಜೀ ಕನ್ನಡದ ಅನಿಲ್‌ಕುಮಾರ್.ಜೆ ನಾನುಗೌರಿ.ಕಾಂ ಗೆ ತಿಳಿಸಿದರು.
ಜೀ ಟಿವಿ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಒಂದು ವಾರ ಕಾರಣಾಂತರಗಳಿಂದ ಧಾರವಾಹಿ ಪ್ರಸಾರವಾಗೇ ಇದ್ದಾಗ ಸಾವಿರಾರು ಜನ ಆಕ್ರೋಶ ವ್ಯಕ್ತಪಡಿಸುವ ಮಟ್ಟಿದೆ ಇದು ಜನರ ಮನಗೆದ್ದಿದೆ. ಕರ್ನಾಟಕದಾದ್ಯಂತ ಹಲವಾರು ಹಳ್ಳಿಗಳಲ್ಲಿ ಧಾರಾವಾಹಿ ಮತ್ತು ಅಂಬೇಡ್ಕರ್‌ರವರ ಬ್ಯಾನರ್ ಹಾಕಿ ಲಕ್ಷಾಂತರ ಜನ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ:ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!
ಇತ್ತೀಚೆಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಬೆದರಿಕೆಗಳು ಬರುತ್ತಿವೆ ಎಂದು ಜೀ ವಾಹಿನಿಯ ಮುಖ್ಯ ನಿರ್ವಾಹಕರಾಗಿರುವ ರಾಘವೇಂದ್ರ ಹುಣಸೂರು ಹೇಳಿದ್ದರು.
“ಮಹಾನಾಯಕ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ತುಂಬಾ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಆದರೆ ವೈಯಕ್ತಿಕವಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾನಾಯಕ ಮುಂದುವರೆಯುತ್ತದೆ. ಜೊತೆಗೆ ಇದು ನಮ್ಮ ಹೆಮ್ಮೆಯಾಗಿದ್ದು, ಇದರಲ್ಲಿ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ, ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್” ಎಂದು ಟ್ವೀಟ್ ಮಾಡಿದ್ದರು.
ಬೆದರಿಕೆ ಕರೆಗಳ ವಿರುದ್ಧ ಕರ್ನಾಟಕದಾದ್ಯಂತ ವ್ಯಾಪಕ ಪ್ರತಿರೋಧವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್‌ರವರ ಮುಂಬೈ ಮನೆ ‘ರಾಜ್‌ಗೃಹ’ ಮೇಲೆ ದಾಳಿ, ಧ್ವಂಸ


