ಧಂಗರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕವತೆ ಮಹಂಕಲ್ ತಹಸಿಲ್‌ನ ಅಬಚಿವಾಡಿ ನಿವಾಸಿ ಬಿರುದೇವ್ ಖರ್ಜೆ ಅವರ ಶವ ಭಾನುವಾರ ಮಧ್ಯಾಹ್ನ ಅವರ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನ ಜೇಬಿನಲ್ಲಿ ಧಂಗರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಪತ್ರವು ಪತ್ತೆಯಾಗಿದೆ ಎಂದು ಉಮ್ಡಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಧಂಗರ್ ಅಥವಾ ಕುರುಬ ಸಮುದಾಯವನ್ನು ಅಲೆಮಾರಿ ಬುಡಕಟ್ಟುಗಳ (VJNT) ವರ್ಗದಲ್ಲಿ ವರ್ಗೀಕರಿಸಲಾಗಿದೆ. ಆದರೆ ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂದು ಸಮುದಾಯ ಪ್ರತಿಭಟನೆ ನಡೆಸುತ್ತಿದೆ.
ಧಂಗರ್ ಸಮುದಾಯದ ಖರ್ಜೆ ಅವರು ಮೀಸಲಾತಿಗಾಗಿ ತಮ್ಮ ಜೀವನವನ್ನು ಅಂತ್ಯಗೊಳಿಸಿರುವುದು ದುರದೃಷ್ಟಕರ ಘಟನೆ ಎಂದು ಬಿಜೆಪಿ ಎಂಎಲ್ಸಿ ಗೋಪಿಚಂದ್ ಧಂಗರ್ ಹೇಳಿದ್ದಾರೆ.
ಧಂಗರ್ ಸಮುದಾಯವು ಪರಿಶಿಷ್ಟ ಪಂಗಡ(ST) ಪಟ್ಟಿಯ ಭಾಗವಾಗಿಲ್ಲ. ಬದಲಾಗಿ ಧಂಗಡ್ ಎಂದು ಪಟ್ಟಿಯಲ್ಲಿದೆ. ಮಹಾರಾಷ್ಟ್ರದ ಧಂಗರ್ ಸಮುದಾಯದ ಮುಖಂಡರು ಹಲವಾರು ವರ್ಷಗಳಿಂದ ಮಹಾರಾಷ್ಟ್ರ ಸರಕಾರದ ಬಳಿ ಧಂಗಡ್ ಎಂಬ ಶೀರ್ಷಿಕೆಯ ಯಾವುದೇ ಸಮುದಾಯ ಇಲ್ಲ ಮತ್ತು ಪಟ್ಟಿಯಲ್ಲಿ ನಮೂದನ್ನು ತಪ್ಪಾಗಿ ಬರೆಯಲಾಗಿದೆ ಎಂದು ಹೇಳಿದ್ದರು.
ಸರ್ಕಾರ ಅದನ್ನು ಸರಿಪಡಿಸಿ ಧಂಗಡ್ ಬದಲು ಧಂಗರ್ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ವಿಚಾರವಾಗಿ ಈ ಮೊದಲು ಪ್ರತಿಭಟನೆ ನಡೆದಿತ್ತು. ಈ ವೇಳೆ ಸಮುದಾಯಕ್ಕೆ ಸರಕಾರದಿಂದ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಗಿತ್ತು.
ಅಹ್ಮದ್‌ನಗರ ಜಿಲ್ಲೆಯ ಚೋಂಡಿಯಲ್ಲಿ ಸೆಪ್ಟಂಬರ್‌ನಲ್ಲಿ ಹಿರಿಯ ಧಂಗರ್ ನಾಯಕ ಸುರೇಶ್ ಬಂಡಗರ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಮತ್ತು ಇತರ ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮುಂಬೈನ ಸಹ್ಯಾದ್ರಿ ರಾಜ್ಯ ಅತಿಥಿಗೃಹದಲ್ಲಿ ಸಭೆ ನಡೆಸಿದ್ದರು. ಬೇಡಿಕೆ ಈಡೇರಿಕೆಯ ಭರವಸೆ ನೀಡಿದ್ದರು.
ಇದನ್ನು ಓದಿ: ಮಹಾರಾಷ್ಟ್ರ ಸರ್ಕಾರ ಕೊಟ್ಟ ಗಡುವು ಅಂತ್ಯ: ಮರಾಠ ಮೀಸಲಾತಿ ಹೆಚ್ಚಳಕ್ಕೆ ಮತ್ತೆ ಉಪವಾಸ ಸತ್ಯಾಗ್ರಹ


