Homeಮುಖಪುಟಮಹಾರಾಷ್ಟ್ರ ಸರ್ಕಾರ ಕೊಟ್ಟ ಗಡುವು ಅಂತ್ಯ: ಮರಾಠ ಮೀಸಲಾತಿ ಹೆಚ್ಚಳಕ್ಕೆ ಮತ್ತೆ ಉಪವಾಸ ಸತ್ಯಾಗ್ರಹ

ಮಹಾರಾಷ್ಟ್ರ ಸರ್ಕಾರ ಕೊಟ್ಟ ಗಡುವು ಅಂತ್ಯ: ಮರಾಠ ಮೀಸಲಾತಿ ಹೆಚ್ಚಳಕ್ಕೆ ಮತ್ತೆ ಉಪವಾಸ ಸತ್ಯಾಗ್ರಹ

- Advertisement -
- Advertisement -

ಮರಾಠ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಜಲ್ನಾ ಮೂಲದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಬುಧವಾರ ಬೆಳಗ್ಗೆ ಅಂತರವಾಲಿ ಸಾರಥಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ಹೆಚ್ಚಳಕ್ಕೆ ಜಾರಂಗೆ ಪಾಟೀಲ್ ಅವರು ಮಹಾರಾಷ್ಟ್ರ ಸರ್ಕಾರಕ್ಕೆ 40 ದಿನಗಳ ಗಡುವು ನೀಡಿದ್ದರು. ಗಡುವು ಮಂಗಳವಾರ ಮುಕ್ತಾಯಗೊಂಡಿದೆ.

ಮನೋಜ್ ಜಾರಂಗೆ ಪಾಟೀಲ್ ಗ್ರಾಮದಲ್ಲಿ ಆ.29ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸೆ.18 ರಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಗ್ರಾಮಕ್ಕೆ ಬಂದು ಮರಾಠ ಮೀಸಲಾತಿ ಬಗ್ಗೆ ಭರವಸೆ ನೀಡಿದ ಬಳಿಕ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದರು.

ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಮಾತನಾಡಿದ ಜಾರಂಗೆ ಪಾಟೀಲ್, ಈ ಬಾರಿ ನಾನು ಯಾವುದೇ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ. ನಾನು ನೀರು ಕುಡಿಯುವುದಿಲ್ಲ ಅಥವಾ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ನಾವು ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ. ಆದರೆ ಅದು ಆಕ್ರಮಣಕಾರಿಯಾಗಿರುವುದಿಲ್ಲ. ಹಳ್ಳಿಗಳಲ್ಲಿ ಸರಣಿ ಉಪವಾಸ ಸತ್ಯಾಗ್ರಹಗಳು ನಡೆಯಲಿದೆ. ಕ್ಯಾಂಡಲ್ ಲೈಟ್ ಮೆರವಣಿಗೆ ಆಯೋಜಿಸಲಾಗುವುದು. ಮರಾಠರಿಗೆ ಮೀಸಲಾತಿ ನೀಡುವವರೆಗೆ ಎಲ್ಲ ಪಕ್ಷಗಳ ರಾಜಕಾರಣಿಗಳು ನಮ್ಮ ಹಳ್ಳಿಗಳಿಗೆ ಬರಬೇಡಿ ಎಂದು ನಾವು ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ನಾಯಕ ಗಿರೀಶ್ ಮಹಾಜನ್, ಜಾರಂಗೆ ಪಾಟೀಲ್‌ಗೆ  ಸಂಪರ್ಕಿಸಿ ಮತ್ತೊಂದು ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳದಂತೆ ಒತ್ತಾಯಿಸಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡುವಂತೆ ಅವರು ಆಗ್ರಹಿಸಿದ್ದಾರೆ. ಇದಲ್ಲದೆ ಅವರ ನಾಲ್ಕೈದು ಬೇಡಿಕೆಗಳನ್ನು ತಕ್ಷಣ ಈಡೇರಿಸಲಾಗುವುದು ಎಂದು ಮಹಾಜನ್ ಹೇಳಿದ್ದಾರೆ.

ಪಾಟೀಲ್‌ ಸರಕಾರಕ್ಕೆ ಸಮಯಾವಕಾಶ ನೀಡಲು ನಿರಾಕರಿಸಿದ್ದು, ಮೀಸಲಾತಿ ಘೋಷಣೆ ಬಳಿಕವೇ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದ್ದಾರೆ. ಮೀಸಲಾತಿ ಘೋಷಣೆಗೆ ಏನು ತೊಂದರೆ? ಸರ್ಕಾರ ಆರಂಭದಲ್ಲಿ 15 ದಿನಗಳ ಕಾಲಾವಕಾಶ ಕೇಳಿತ್ತು. ನಂತರ 30 ದಿನಗಳು ಆಯ್ತು. ಆದರೆ ನಾವು ಅವರಿಗೆ 40 ದಿನಗಳ ಕಾಲಾವಕಾಶ ನೀಡಿದ್ದೇವೆ ಆದರೆ ಏನೂ ಮಾಡಲಾಗಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

ಸೆ.1ರಂದು ಜಲ್ನಾದ ಅಂತರವಾಲಿ ಗ್ರಾಮದಲ್ಲಿ ಮರಾಠ ಮೀಸಲಾತಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದರು. ಇದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ವಿರೋಧ ಪಕ್ಷದ ನಾಯಕರು ಬಲಪ್ರಯೋಗ ಮಾಡಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನು ಓದಿ: ಮಣಿಪುರ ಜನಾಂಗೀಯ ಕಲಹಕ್ಕೆ ಪ್ರಚೋದಿಸಿದ್ದು ಸಿಎಂ ಬಿರೇನ್ ಸಿಂಗ್: ಗಂಭೀರ ಆರೋಪ ಮಾಡಿದ ಬುಡಕಟ್ಟು ಸಂಸ್ಥೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read