Homeಕರ್ನಾಟಕಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು

ಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು

- Advertisement -
- Advertisement -

ಈ ಸಲದ ಗಾಂಧಿ ಜಯಂತಿಗೆ ಹಲವು ವಿಶೇಷತೆಗಳಿವೆ. 1. ಗಾಂಧಿಯವರ ಮುಂದಾಳತ್ವದಲ್ಲಿ ಪಡೆದ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ದೇಶವು ಆಚರಿಸುತ್ತಿರುವುದು. 2. ಗಾಂಧಿಯವರನ್ನು ಖಳನಾಯಕರಾಗಿಸಿದ ಪೂನಾ ಒಪ್ಪಂದದ 90ನೇ ವರ್ಷವಾಗಿರುವುದು. 3. ತಿಲಕರ ಮರಣಾನಂತರ ಗಾಂಧಿ ಭಾರತದ ರಾಜಕಾರಣಕ್ಕೆ ಇಳಿದು ಮತ್ತು ಕಾಂಗ್ರೆಸ್ಸಿನಲ್ಲಿ ಪ್ರವೇಶ ಪಡೆದು (1921) ಒಂದು ಶತಮಾನ ತುಂಬಿರುವುದು. 4. ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಗಾಂಧಿಹಂತಕ ಗೋಡ್ಸೆಯ ಮತ್ತು ಈ ಹತ್ಯೆಯಲ್ಲಿ ಪಿತೂರಿದಾರರೆಂದು ಆಪಾದಿತರಾಗಿದ್ದ ಸಾವರ್ಕರ್ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತ, ಅವರ ಚಿಂತನೆಗೆ ಸಾರ್ವಜನಿಕ ಸಮ್ಮತಿಯನ್ನು ಪಡೆಯುತ್ತಿರುವುದು; ಗಾಂಧಿ ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಿರುವುದು. 5. ಗಾಂಧಿಯವರನ್ನು ಕುರಿತ ಪುಸ್ತಕಗಳು – ಡಿ.ಎಸ್. ನಾಗಭೂಷಣ ರಚಿಸಿದ ‘ಗಾಂಧಿಕಥನ’- ಹೆಚ್ಚು ಮಾರಾಟಗೊಂಡು, ಜನಪ್ರಿಯವಾಗುತ್ತಿರುವುದು.

ಈ ವಿದ್ಯಮಾನಗಳು ಗಾಂಧಿಯನ್ನು ಭಾರತವು ಬಗೆಬಗೆಯಾಗಿ ಅರ್ಥಮಾಡಿಕೊಳ್ಳುವ ಮತ್ತು ವ್ಯಾಖ್ಯಾನಿಸುವ ಬಹುರೂಪಿ ಮತ್ತು ಸಂಕೀರ್ಣ ವಿಧಾನಕ್ಕೆ ಸಾಕ್ಷಿಯಾಗಿವೆ. ಗಾಂಧಿಯವರನ್ನು ಅನುಸಂಧಾನ ಮಾಡುವ ಪ್ರಮುಖವಾದ ನಾಲ್ಕು ದೃಷ್ಟಿಕೋನಗಳಿವೆ. 1. ಅಂಬೇಡ್ಕರ್ ದೃಷ್ಟಿಕೋನ. ಬಾಬಾಸಾಹೇಬರ ಬರೆಹಗಳಲ್ಲಿ ಗಾಂಧಿಯವರ ಬಗ್ಗೆ ಸೈದ್ಧಾಂತಿಕವಾಗಿ ಕಟುವಾದ ವಿಮರ್ಶೆಗಳಿವೆ. ‘ರಾನಡೆ, ಗಾಂಧಿ ಜಿನ್ನಾ ನಾಯಕರಾಧನೆ’, ‘ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’, ‘ಗಾಂಧಿ ಮತ್ತು ಕಾಂಗ್ರೆಸ್ಸಿನಿಂದ ದಲಿತರಿಗೆ ಏನಾಗಿದೆ’ ಕೃತಿಗಳಲ್ಲಿ ಇವು ದಾಖಲಾಗಿವೆ. ಈಗಲೂ ದಲಿತ ಚಿಂತನೆ ಗಾಂಧಿಯನ್ನು ದಲಿತರಿಗೆ ಮಾಡಿದ ಚಾರಿತ್ರಿಕ ದ್ರೋಹದ ಪ್ರತೀಕವೆಂದು ಪರಿಭಾವಿಸುತ್ತದೆ. ಅದರ ಆಕ್ರೋಶ ಮತ್ತು ನೋವುಗಳನ್ನು ಕಳೆದ ವಾರ ಆಂದೋಲನ ಪತ್ರಿಕೆಯ ‘ದೆಹಲಿನೋಟ’ ಅಂಕಣದಲ್ಲಿ ಡಿ. ಉಮಾಪತಿಯವರು ಬರೆದ ಲೇಖನದಲ್ಲಿ ನೋಡಬಹುದು. 2. ಮಾರ್ಕ್ಸಿಸ್ಟರ, ಅದರಲ್ಲೂ ತೀವ್ರಗಾಮಿ ಬಣದವರ ದೃಷ್ಟಿಕೋನ. ಗಾಂಧಿ ಹೇಗೆ ಬಂಡವಾಳಶಾಹಿಗಳ ಆಶ್ರಯದಲ್ಲಿದ್ದು ಬ್ರಿಟಿಶ್‌ರಾಜ್‌ಗೆ ಪೂರಕವಾಗಿ ತಮ್ಮ ಮಾತು, ಚಳವಳಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದರು ಎಂದು ಇದು ವಿಶ್ಲೇಷಿಸುತ್ತದೆ. 3. ಗಾಂಧಿವಾದಿಗಳ ದೃಷ್ಟಿಕೋನ. ಇದು ಗಾಂಧಿಯ ಚಿಂತನೆಯ ಹೆಚ್ಚಿನ ವಿಮರ್ಶೆಯನ್ನು ಮಾಡದೆ, ಅದರ ಪ್ರಸ್ತುತತೆಯನ್ನು ಪ್ರತಿಪಾದಿಸುತ್ತದೆ. ಸಿದ್ಧವನಹಳ್ಳಿ ಕೃಷ್ಣಶರ್ಮ, ಗೊರೂರರ ಬರೆಹಗಳು ಇಂತಹವು. 4. ಲೋಹಿಯಾವಾದಿ ದೃಷ್ಟಿಕೋನ. ಇದು ಗಾಂಧಿ ಚಿಂತನೆಯ ತಿರುಳನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಮಮನೋಹರ ಲೋಹಿಯಾ ಹೇಗೆ ಅರ್ಥಪೂರ್ಣವಾಗಿ ವಿಸ್ತರಿಸಿದರು ಎಂದು ಶೋಧಿಸುತ್ತದೆ. ಈ ನೆಲೆಯಲ್ಲಿ ಗಾಂಧಿಯವರ ಪ್ರಿಯ ಶಿಷ್ಯರಾಗಿದ್ದ ನೆಹರೂ ಅವರನ್ನು ವಿರೋಧಿಸುತ್ತದೆ. ಲಂಕೇಶ್, ಅನಂತಮೂರ್ತಿ, ಚಂಪಾ ಮುಂತಾದವರ ಬರೆಹದಲ್ಲಿ ಇದನ್ನು ಕಾಣಬಹುದು. ಈ ವಿಷಯದಲ್ಲಿ ದೇವನೂರರು ಗಾಂಧಿಸಿನಿಮಾ ನೋಡಿ ಬರೆದ ಲೇಖನ ‘ಆಕಾಶಕ್ಕೆ ಎರಡು ಗೇಣುಕಮ್ಮಿ’ ಉಲ್ಲೇಖಾರ್ಹ.

ಕರ್ನಾಟಕದ ರಾಜಕಾರಣ, ಆಕ್ಟಿವಿಸಂ, ಸಮಾಜ, ಸಾಹಿತ್ಯ ವಿಚಾರವಾದ ಮತ್ತು ಸಂಸ್ಕೃತಿ ಚಿಂತನೆಗಳನ್ನು ಪ್ರಭಾವಿಸಿದ ಪ್ರಮುಖ ಚಿಂತನೆ ಅಥವಾ ವಾದಗಳನ್ನು ಮಾರ್ಕ್ಸ್‌ವಾದ, ಮಾವೋವಾದ, ಲೋಹಿಯಾವಾದ, ಗಾಂಧಿವಾದ, ಅಂಬೇಡ್ಕರ್‌ವಾದ, ಬಸವತತ್ವ, ಕುವೆಂಪು ಚಿಂತನೆ, ಪೆರಿಯಾರ್‌ವಾದ ಎಂದು ಪಟ್ಟಿ ಮಾಡಬಹುದು. ನಮ್ಮ ಸಮಕಾಲೀನ ಬದುಕಿನ ರಾಜಕೀಯ ಸಾಮಾಜಿಕ ಸಾಹಿತ್ಯಕ ವಿದ್ಯಮಾನಗಳನ್ನು ಪ್ರಭಾವಿಸುವ ಯಾವುದೇ ತತ್ವಸಿದ್ಧಾಂತವು, ಅದನ್ನು ಸೃಷ್ಟಿಸಿದ ಚಾರಿತ್ರಿಕ ವ್ಯಕ್ತಿಗಳು ಇರುವ ಕಾಲದಲ್ಲಿ, ಅವರದ್ದೇ ಚಿಂತನೆ ಮತ್ತು ಕ್ರಿಯೆಗಳ ಮೂಲಕ ಬೀರುವ ಪರಿಣಾಮದ ಒಂದು ಮಾದರಿಯಿದೆ. ಸದರಿ ಚಾರಿತ್ರಿಕ ವ್ಯಕ್ತಿಗಳು ಗತಿಸಿದ ಬಳಿಕ, ಬೇರೆಬೇರೆ ಚಾರಿತ್ರಿಕ ಇಕ್ಕಟ್ಟುಗಳಲ್ಲಿ ಸಮಕಾಲೀನ ಒತ್ತಡಗಳ ನಡುವೆ ಅದು ಮರುಹುಟ್ಟು ಪಡೆಯುವುದು ಇನ್ನೊಂದು ಮಾದರಿ. ಈ ಎರಡನೇ ಮಾದರಿಯನ್ನು ತತ್ವಸಿದ್ಧಾಂತಗಳ ಸಮಕಾಲೀನ ರೂಪಾಂತರ ಎಂದು ಕರೆಯಬಹುದು. ಈ ರೂಪಾಂತರ ಪ್ರಕ್ರಿಯೆಯಲ್ಲಿ ಮೂಲ ಚಿಂತನೆ/ಸಿದ್ಧಾಂತಗಳು ಯಥಾವತ್ತು ಅನುಸರಣೆ ಆಗಬಹುದು. ಮತ್ತಷ್ಟು ಪ್ರಖರತೆಯಲ್ಲಿ ಬೇರೆ ದೃಷ್ಟಿಕೋನದಲ್ಲಿ ಹೊಸಹುಟ್ಟು ಪಡೆಯಬಹುದು. ಮೂಲದ ಆಶಯಕ್ಕೆ ವಿರುದ್ಧಗತಿಯಲ್ಲಿ ಚಲಿಸಬಹುದು. ಇಲ್ಲವೇ ತನಗೆ ಎದುರಾಳಿಯೆನಿಸುವ ತತ್ವಸಿದ್ಧಾಂತದ ಜತೆಗೆ ಸ್ನೇಹ ಮಾಡಬಹುದು. ಈ ಪಲ್ಲಟತತ್ವವು ಧರ್ಮಗಳಿಗೂ ಅನ್ವಯವಾಗುತ್ತದೆ. ಈ ಪಲ್ಲಟ ತತ್ವಗಳು ಸೃಷ್ಟಿಸುವ ಕೆಲವು ವೈರುಧ್ಯಗಳನ್ನು ಇಲ್ಲಿ ಗಮನಿಸಬಹುದು.

ಮೊದಲನೆಯದಾಗಿ-ಗಾಂಧಿ ವ್ಯಕ್ತಿತ್ವ ಮತ್ತು ವಾದವನ್ನು, ಇವೆರಡನ್ನೂ ಸೈದ್ಧಾಂತಿಕವಾಗಿ ದ್ವೇಷಿಸುವ ಬಲಪಂಥೀಯ ಸಂಘಟನೆಗಳು, ಸಂದರ್ಭಾನುಸಾರವಾಗಿ ಅವನ್ನೇ ಅನುಸಂಧಾನ ಮಾಡುವುದು. ಉದಾಹರಣೆಗೆ ಸ್ವಚ್ಛಭಾರತ್ ಕಾರ್ಯಕ್ರಮಕ್ಕೆ ಗಾಂಧಿಯ ಚಿತ್ರವನ್ನು ಬಳಸಿದ್ದು; ಬಿಜೆಪಿಯ ಸಂಸದರು-ಶಾಸಕರು ತಾವು ಅನ್ಯಾಯವೆಂದು ಪರಿಭಾವಿಸಿದ ಸಂಗತಿಗೆ ಗಾಂಧಿಪ್ರತಿಮೆಯ ಎದುರು ಉಪವಾಸ ಕೂರುವುದು; ಈ ಪಕ್ಷದ ಮುಖಂಡರು ರಾಜಘಾಟಿಗೆ ಭೇಟಿಕೊಡುವುದು; ವಿದೇಶಗಳಲ್ಲಿ ಗಾಂಧಿಪ್ರತಿಮೆ ಅನಾವರಣ ಮಾಡುವುದು. ಉಳಿದಂತೆ ಇವು ಗಾಂಧಿಯ ಮೂಲಭೂತ ಚಿಂತನೆಗಳಿಗೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸುತ್ತವೆ. ಈಚಿನ ವರ್ಷಗಳಲ್ಲಿ ಅವು ದುರಳೀಕರಣ ಮಾಡಿರುವ ಇಬ್ಬರ ವ್ಯಕ್ತಿತ್ವಗಳೆಂದರೆ ಗಾಂಧಿ ಮತ್ತು ಅವರ ಶಿಷ್ಯ ನೆಹರೂ ಅವರದು. ಮುಖ್ಯವಾಗಿ ಯಾವ ಹಿಂದೂಮುಸ್ಲಿಂ ಏಕತೆಗಾಗಿ ಗಾಂಧಿ ಜೀವಮಾನವಿಡೀ ಶ್ರಮಿಸಿದರೊ, ಅದೇ ಗಾಂಧೀಯವರ ಗುಜರಾತು, 20ನೇ ಶತಮಾನದ ಬಹಳ ದೊಡ್ಡ ಮತೀಯ ಗಲಭೆಗಳಿಗೆ ಭೂಮಿಕೆಯಾಗಿದ್ದು ಒಂದು ವ್ಯಂಗ್ಯ. ರಥಯಾತ್ರೆಯನ್ನು ಅಡ್ವಾಣಿಯವರು ಗುಜರಾತಿನ ಸೋಮನಾಥದಿಂದ ಆರಂಭಿಸಿದ್ದರು. ಅದರ ತಾರ್ಕಿಕ ಮುಂದುವರಿಕೆಯೆಂಬಂತೆ, ನಡೆದ 2002ರ ದಂಗೆಗಳಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಯಾಯಿತು. ಈ ಗಲಭೆಗಳಿಗೆ ನೆಪವನ್ನು ಒದಗಿಸಿದ ರೈಲಿನ ಹೆಸರು ಗಾಂಧಿಯವರ ಗುಜರಾತಿನ ಆಶ್ರಮವನ್ನು ನೆನಪಿಸುವಂತೆ ಸಾಬರಮತಿ ಎಕ್ಸ್‌ಪ್ರೆಸ್ ಆಗಿತ್ತು. ಈಚೆಗೆ ಕೆಲವು ಬಲಪಂಥೀಯ ಸಂಘಟನೆಗಳು ಗಾಂಧಿ ಹತ್ಯೆಯಾದ ದಿನ, ಅವರ ಹತ್ಯೆಯನ್ನು ಪುನರಭಿನಯ ಮಾಡುತ್ತಿವೆ. ಇದರ ಭಾಗವಾಗಿಯೇ ಸಾವರ್ಕರ್- ಗೋಡ್ಸೆಯವರ ವೈಭವೀಕರಣವೂ ನಡೆಯುತ್ತಿದೆ.

ಎರಡನೆಯದಾಗಿ- ಗಾಂಧಿವಾದಿಗಳು, ಅವರ ಉತ್ತರಾಧಿಕಾರತ್ವಕ್ಕೆ ಹಕ್ಕುಸ್ಥಾಪನೆ ಮಾಡುವವರು, ಗಾಂಧಿ ಚಿಂತನೆಗಳಿಗೆ ಸಡಿಲವಾದ ನಿಷ್ಠೆಯನ್ನು ತೋರುವುದು. ಕಾಂಗ್ರೆಸ್ಸಿನಲ್ಲಿ, ರಾಜಕೀಯವಾಗಿ ಕಾಂಗ್ರೆಸನ್ನು ಬೆಂಬಲಿಸಿದರೂ, ಸಾಂಸ್ಕೃತಿಕವಾಗಿ ಬಲಪಂಥೀಯವಾದ ಅಜೆಂಡಾಗಳಿಗೆ ಸಮ್ಮತಿಯಿರುವ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ಹಾರನಹಳ್ಳಿ ರಾಮಸ್ವಾಮಿಯವರು, ಅಯೋಧ್ಯೆಯಲ್ಲಿ ಸಂಘಪರಿವಾದವರು ಮಸೀದಿ ಕೆಡವಿದ್ದು ಸರಿಯೆಂದೇ ವಾದಿಸಿದರು. ಬಹಳಷ್ಟು ಗಾಂಧಿವಾದಿಗಳು, ತಮ್ಮ ಕೊನೆಯ ದಿನಗಳಲ್ಲಿ ಬಲಪಂಥೀಯ ರಾಜಕಾರಣಕ್ಕೆ ಜತೆಗೂಡಿದರು. ಅಣ್ಣಾ ಹಜಾರೆಯವರು ಇದಕ್ಕೆ ಒಂದು ನಿದರ್ಶನ. ಲೋಹಿಯಾವಾದದ ಮೂಲಕ ಗಾಂಧಿವಾದವನ್ನು ಪ್ರತಿಪಾದಿಸುವ ಅನೇಕ ಸಮಾಜವಾದಿಗಳು ಸಹ, ಬಲಪಂಥೀಯ ರಾಜಕಾರಣದ ಭಾಗವಾದರು. ಕನ್ನಡಿಗರಾದ ಜಾರ್ಜ್ ಫರ್ನಾಂಡಿಸ್ ನೆನಪಾಗುತ್ತಾರೆ. ಅವರು ಗುಜರಾತ್ ಗಲಭೆಗಳನ್ನು ಮಾಮೂಲಿ ಎಂದು ಬಣ್ಣಿಸಿದರು.

ಮೂರನೆಯದಾಗಿ-ಕರ್ನಾಟಕದ ಅನೇಕ ಲೇಖಕರು ಮತ್ತು ಚಿಂತಕರು, 90ರ ದಶಕದ ಬಳಿಕ, ಮತೀಯವಾದವನ್ನು ವಿರೋಧಿಸುತ್ತ, ಹೆಚ್ಚುಹೆಚ್ಚು ಗಾಂಧಿವಾದಿಗಳಾಗಿದ್ದು; ಕಾಂಗ್ರೆಸ್ ವಿರೋಧಿ ನೆಲೆಯ ಲೋಹಿಯಾವಾದದಿಂದ ಬಂದರೂ, ಕಾಂಗ್ರೆಸ್ಸನ್ನು ಬೆಂಬಲಿಸಿದ್ದು. ಅನಂತಮೂರ್ತಿ, ಚಂಪಾ ಮತ್ತು ಲಂಕೇಶ್ ಇದಕ್ಕೆ ನಿದರ್ಶನ. ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಯುದ್ಧ ಸಾರಿದಂತೆ 70ರ ದಶಕದಲ್ಲಿ ಬರೆದ, ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಹೋದ ಚಂಪಾ, ತಮ್ಮ ರಾಜಕೀಯ ಪ್ರತಿರೋಧವನ್ನು ‘ಗಾಂಧಿಸ್ಮರಣೆ’ ಸಂಕಲನದಲ್ಲಿ ಕವಿತೆಗಳಾಗಿ ಪ್ರಕಟಿಸಿದರು. ಕಾಂಗ್ರೆಸ್ ಚಳವಳಿಯ ನೇತಾರರಾಗಿದ್ದ ಗಾಂಧಿಯೇ, ವರ್ತಮಾನದ ಕಾಂಗ್ರೆಸ್ ಸರ್ವಾಧಿಕಾರ ವಿರೋಧಿಸಲು ಪ್ರೇರಣೆಯಾಗುವುದು ಇಲ್ಲಿನ ವಿಶೇಷತೆಯಾಗಿತ್ತು. ಹಾಗೆ ಕಂಡರೆ ಗಾಂಧಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಪ್ರತಿಪಾದಿಸಿದ್ದಕ್ಕೆ ವಿರುದ್ಧವಾಗಿ ಲಂಕೇಶ್ ಪಾಶ್ಚಿಮಾತ್ಯ ವಿಜ್ಞಾನ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯ ಪರವಾಗಿದ್ದವರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ಬರೆದ ಟೀಕೆಟಿಪ್ಪಣಿಗಳಲ್ಲಿ ಮತ್ತೆಮತ್ತೆ ಗಾಂಧಿಸ್ಮರಣೆ ಮಾಡುತ್ತಾರೆ.

ಎಚ್.ಎಸ್ ದೊರೆಸ್ವಾಮಿ

ನಾಲ್ಕನೆಯದಾಗಿ-ಗಾಂಧಿವಾದಿಗಳು ಕಮ್ಯುನಿಸ್ಟ್ ರಾಜಕಾರಣದೊಂದಿಗೆ ಕಮ್ಯುನಿಸ್ಟರು ಗಾಂಧಿವಾದದೊಂದಿಗೆ ಮಾಡಿದ ಅನುಸಂಧಾನ. ಲಂಕೇಶ್, ಅನಂತಮೂರ್ತಿ. ನಾಗಭೂಷಣ ಮೊದಲಾದ ಲೋಹಿಯಾವಾದಿಗಳು, ಗಾಂಧಿವಾದದ ಪರವಾಗಿರುವಷ್ಟೆ ಕಮ್ಯುನಿಸ್ಟರನ್ನು ವಿಮರ್ಶೆ ಮಾಡುತ್ತಾರೆ. ಕೊನೆಯ ಇಬ್ಬರೂ ತಮ್ಮ ಬಾಳಿನ ಕೊನೆಯ ದಿನಗಳಲ್ಲಿ ರಚಿಸಿದ ಪುಸ್ತಕಗಳಾದರೂ (ಹಿಂದುತ್ವ ಮತ್ತು ಹಿಂದ್‌ಸ್ವರಾಜ್ ಹಾಗೂ ಗಾಂಧಿಕಥನ) ಗಾಂಧಿವಾದದ ಪ್ರಸ್ತುತತೆಯನ್ನು ಪ್ರತಿಪಾದಿಸುವ ಕೃತಿಗಳೇ ಆಗಿವೆ. ಇದೇ ಕಾಲಕ್ಕೆ ಅನೇಕ ಕಮ್ಯುನಿಸ್ಟರು ಗಾಂಧಿವಾದದ ಜತೆಗೆ ಅನುಸಂಧಾನ ಮಾಡಿದರು. ಇದನ್ನು ಜಿ. ರಾಮಕೃಷ್ಣ, ಬರಗೂರು, ಪ್ರಸನ್ನ ಅವರಲ್ಲಿ ಕಾಣಬಹುದು. ಪ್ರಸನ್ನ ಮತ್ತು ಎಚ್.ಎಸ್ ದೊರೆಸ್ವಾಮಿಗಳ ಸೈದ್ಧಾಂತಿಕ ಪಯಣವಂತೂ ವಿಶೇಷ. ಎಡಪಂಥೀಯ ಚಳವಳಿಗಳಿಂದ ಸಾರ್ವಜನಿಕ ಬದುಕನ್ನು ಆರಂಭಿಸಿದ ರಂಗಕರ್ಮಿ ಪ್ರಸನ್ನ, ಉಪವಾಸವ್ರತ, ಖಾದಿ ಉತ್ಪಾದನೆ, ಗ್ರಾಮೀಣ ಭಾರತ, ಕೈಕಸುಬು, ಯಂತ್ರವಿರೋಧ ಇತ್ಯಾದಿ ಸಂಗತಿಗಳಲ್ಲಿ ತೊಡಗಿಸಿಕೊಂಡರು. ಗಾಂಧಿವಾದಿಯೂ ಸ್ವತಂತ್ರ ಹೋರಾಟಗಾರರೂ ಆಗಿದ್ದ ಎಚ್.ಎಸ್ ದೊರೆಸ್ವಾಮಿ ಅವರು, ಎಡಚಳವಳಿಗಳ ಜತೆ ಸೇರಿ, ಭೂಹೋರಾಟಗಳಲ್ಲಿ, ಕೋಮುವಾದ ವಿರೋಧಿ ಆಂದೋಲನಗಳಲ್ಲಿ ಭಾಗವಹಿಸಿದರು. ಬಂಗಾಳವನ್ನು ಒಳಗೊಂಡಂತೆ ಅನೇಕ ಕಡೆ, ಕಮ್ಯುನಿಸ್ಟರು ಕೋಮುವಾದವನ್ನು ವಿರೋಧಿಸಲು ಕಾಂಗ್ರೆಸ್ಸಿನ ಜತೆ ರಾಜಕೀಯ ಒಪ್ಪಂದಗಳನ್ನು ಮಾಡಿಕೊಂಡಿರುವುದು ಸರ್ವವಿದಿತವಿದೆ.

ಯಾವುದೇ ತತ್ವಸಿದ್ಧಾಂತಗಳು ತತ್ವಗಳು, ಧರ್ಮಗಳು, ಚಿಂತನೆಗಳು, ತಮ್ಮ ಚಾರಿತ್ರಿಕ ಮೂಲದ ಅವಸ್ಥೆಯಲ್ಲಿಯೇ ಇರುವುದಿಲ್ಲ. ಇದ್ದರೆ ಅವಕ್ಕೆ ಸಾವು ಬಂದಿದೆಯೆಂದೇ ಅರ್ಥ. ಸಮಕಾಲೀನ ಸಾಮಾಜಿಕ ರಾಜಕೀಯ ಆರ್ಥಿಕ ಸನ್ನಿವೇಶಗಳು, ಅವುಗಳ ಚಲನಶೀಲ ಸ್ಥಿತ್ಯಂತರಕ್ಕೆ ಕಾರಣವಾಗುತ್ತವೆ. ಆದರೆ ಈ ಸ್ಥಿತ್ಯಂತರಗಳ ಮೌಲ್ಯಮಾಪನ ನಡೆಯಬೇಕು. ಇದು ಈ ಸ್ಥಿತ್ಯಂತರಗಳಿಂದ ಸಂಭವಿಸಿದ ಪರಿಣಾಮಗಳ ಆಧಾರದಿಂದಲೇ ನಡೆಯಬೇಕು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಗಾಂಧಿ ಅನ್ನೋ ಪತ್ರಕರ್ತ : ಗಾಂಧಿಯಿಂದ ಪತ್ರಕರ್ತರು ಕಲಿಯಬೇಕಾದುದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...