Homeಮುಖಪುಟಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

ಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

- Advertisement -

| ಪ್ರದೀಪ್ ಪುಟ್ಟಪ್ಪ |

ಬ್ಲಾಕ್ ಮೇಲ್ ಆರೋಪ : ಪತ್ರಕರ್ತನ ಸೆರೆ,  ನಕಲಿ ದಾಖಲೆ ಸೃಷ್ಟಿಗೆ ಪತ್ರಕರ್ತನ ಬಂಧನ, ಲೋಗೋ ದುರ್ಬಳಕೆ : ವಾಹಿನಿ ಮೇಲೆ ದೂರು ಇದು ಇಂದಿನ ಪತ್ರಿಕಾರಂಗದ ಜನಸಾಮಾನ್ಯರಿಗೆ ತಲುಪದ ಇನ್ನೊಂದು ಮುಖ. ಅಷ್ಟಕ್ಕೂ ಎಲ್ಲಿ ಹೋಯ್ತು ಆ ವಿಶ್ವಾಸಾರ್ಹತೆ, ಎಲ್ಲಿ ಹೋಯ್ತು ಆ ಸತ್ಯ ಶುದ್ಧ ವರದಿಗಾರಿಕೆ.!?

ಚಳುವಳಿಯ ಹಿನ್ನೆಲೆಯಲ್ಲಿ, ನೊಂದವರ, ಶೋಷಿತರ ದನಿಯಾಗಿ, ಅಸಂಘಟಿತ ವರ್ಗಗಳ ಕೂಗಿಗೆ ಪ್ರತಿಧ್ವನಿಯಾಗಿ ಹುಟ್ಟಿದ Journalism ಅನ್ನೋದು ಈಗ ಐಡಿ ಕಾರ್ಡ್ ಚಲಾವಣೆಗಷ್ಟೆ ಸೀಮಿತವಾಗಿದೆ. ಮಾಧ್ಯಮದ ಕಾರ್ಡ್ ಒಂದಿದ್ದರೆ ವಿಧಾನಸೌಧ ಆದ್ರೇನು, ಪಾರ್ಲಿಮೆಂಟ್ ಆದ್ರೇನು ಅನ್ನುವಷ್ಟು ಸಲೀಸಾಗಿ ಹೋಗಿದೆ ಇವತ್ತಿನ ಪತ್ರಿಕೋದ್ಯಮ. ಇಷ್ಟೇ ಆಗಿದ್ದರೂ ಸಹಿಸಿಕೊಂಡು ಹೋಗಬಹುದಿತ್ತು. ಆ ಹಂತವನ್ನೂ ಮೀರಿ ಇಂದಿನ ಬಹುತೇಕ ಮಾಧ್ಯಮಗಳು ವಸೂಲಿ ದಂಧೆಗೆ ಇಳಿಯಲ್ಪಡುತ್ತಿವೆ. ಹಾಗಾದ್ರೆ ಎಲ್ಲಿ ಹೋಯ್ತು ಹುಟ್ಟಿನ ಮೂಲದಲ್ಲಿ ಇದ್ದ ಆ ಉದ್ದೇಶ.!?

ಇವತ್ತು ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮ ಯಾವುದೇ ಆಗಿರಲಿ.. ಸೂಕ್ಷ್ಮವಾಗಿ ಒಮ್ಮೆ ಕಣ್ಣಾಡಿಸಿದರೆ ನಿಮಗೆ ಪ್ರತೀ ಮಾಧ್ಯಮ ಸಂಸ್ಥೆಗಳಲ್ಲೂ ವಸೂಲಿ ವೀರರ ಒಂದೊಂದು ಗುಂಪು ಕಾಣ ಸಿಗುತ್ತವೆ. ಅದು ಸಂಸ್ಥೆಯೊಳಗಿನ ಪ್ರೈವೇಟ್ ಟೀಮ್ ಆಗಿರಬಹುದು ಅಥವಾ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್ ಖೂಳರ” ಟೀಮ್ ಆಗಿರಬಹುದು‌, ಪ್ರತೀ ಸಂಸ್ಥೆಯಲ್ಲೂ ಇಂತಾದ್ದೊಂದು ತಂಡ ಖಾಯಂ ಅನ್ನಿಸುವಷ್ಟರ ಮಟ್ಟಿಗೆ ಬೇರೂರಿ ಬಿಟ್ಟಿದೆ. ಕೆಲವರಿಗೆ ಅದು ಅನಿವಾರ್ಯ, ಕೆಲವರಿಗೆ ಅವಶ್ಯಕವಲ್ಲದ ಕಾಯಕವಾಗಿದೆ. ಅಪಾಯಕಾರಿ ಬೆಳವಣಿಗೆ ಏನೆಂದರೆ ಇವತ್ತಿನ ಪತ್ರಿಕೋದ್ಯಮದಲ್ಲಿ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್” ಕಾರಣದ ತಂಡಗಳಿಗೆ ಯಾವ ಅಡೆತಡೆಯೂ ಇಲ್ಲದಂತಾಗಿದೆ. ಎಲ್ಲಿ ಬೇಕಾದರೂ ನುಗ್ಗಿ ವಸೂಲಿ ದಂಧೆಗೆ ಸುಲಭವಾಗಿ ಇಳಿಯಬಹುದಾದಷ್ಟು ಸ್ವಾತಂತ್ರ್ಯವನ್ನು ಆಯಾ ಮಾಧ್ಯಮ ಸಂಸ್ಥೆಗಳೇ ಮಾಡಿಕೊಟ್ಟಿವೆ. ಮಾಧ್ಯಮ ಸಂಸ್ಥೆಗಳ ಈ ಮಟ್ಟಿಗಿನ ಸದರ ಹಲವಷ್ಟು ವಸೂಲಿ ವೀರರಿಗೆ ಹಲ್ಲಿಗೆ ಶಾಣೆ ಹಿಡಿದಂತಾಗಿದೆ. ಸಂಸ್ಥೆ ವಹಿಸಿದ “ಕೆಲಸ”ದ ಹೊರತಾಗಿ ತಮ್ಮ ಜೇಬಿಗೂ ಇಳಿಸಿಕೊಳ್ಳುವಷ್ಟು ಸಲೀಸಾಗಿ ದಂಧೆಗಳಲ್ಲಿ ತೊಡಗಿಕೊಂಡಿದ್ದಾರೆ The great Journalist ಗಳು.

ಸಧ್ಯ ಇವೆಲ್ಲಾ ಕಾರಣಗಳಿಂದ ಮಾಧ್ಯಮ ಅನ್ನೋದು ಕಳ್ಳನ ಕೈಗೆ ಗಂಟು ಕೊಟ್ಟಂತಾಗಿದೆ. ಮಾಧ್ಯಮ ಅಂದ್ರೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಅಥವಾ ಇನ್ಯಾವುದೋ ಮೇಲ್ಸ್ತರದಲ್ಲಿ ಕೂತ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿ ದಾರಿಗೆ ತರಬೇಕಾದ ಮಹತ್ತರ ಪಾತ್ರ ಹೊಂದಿರಬೇಕು. ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ಪ್ರಜೆಗಳನ್ನು ಮರೆತಾಗ, ಜನಸೇವೆಗಾಗಿಯೇ ಜನರ ತೆರಿಗೆ ಹಣವನ್ನು ಸಂಬಳವಾಗಿ ಪಡೆಯುವ ಅಧಿಕಾರಿಗಳು ಕರ್ತವ್ಯ ಮರೆತಾಗ ಅವರನ್ನು ಬಡಿದು ಎಚ್ಚರಿಸಬೇಕಾಗಿರೋದು ಮಾಧ್ಯಮಗಳ ಕರ್ತವ್ಯವಾಗಿರಬೇಕು. ಆದ್ರೆ ಇವತ್ತು ಹಲವಷ್ಟು ಮಾಧ್ಯಮಗಳಿಗೆ, ಮಾಧ್ಯಮಗಳ ಒಳಗಿನ ವಸೂಲಿ ವೀರರಿಗೆ ಸಮಾಜದ ಅಂಕುಡೊಂಕುಗಳೇ ಆಹಾರ ಒದಗಿಸುತ್ತಿವೆ. ಯಾವ ಮಾಧ್ಯಮ ಅಧಿಕಾರಿ ವರ್ಗಗಳ ಅಥವಾ ಸಮಾಜದಲ್ಲಿ ಉನ್ನತ ಹಂತದಲ್ಲಿರೋ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರಬೇಕಿತ್ತೋ ಅದನ್ನು ಎಳ್ಳಷ್ಟೂ ಮಾಡುತ್ತಿಲ್ಲ. ಅದರ ಹೊರತಾಗಿ ಅವರ ತಪ್ಪುಗಳೇ ಅಥವಾ ಪ್ರಮಾದಗಳೇ ಬಂಡವಾಳ ಆಗ್ತಿದೆ ಇಂತಾ ವಸೂಲಿ ಮಾಧ್ಯಮಗಳಿಗೆ.

ಉದಾಹರಣೆಗೆ ಹೇಳ್ಬೇಕು ಅಂದ್ರೆ ಹೆಚ್ಚಿನ ಟಿವಿ ಜರ್ನಲಿಸ್ಟ್ಗಳು ಇಂತಾ ಅಕ್ರಮಗಳಲ್ಲಿ ಭಾಗಿ ಆಗ್ತಿದ್ದಾರೆ. ರಾಜ್ಯ ಸಿಸಿಬಿ ಪೊಲೀಸ್ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲೇ ಬಹಳಷ್ಟು ಸುದ್ದಿ ಮಾಡಿದ ಆಂಬಿಡೆಂಟ್ ನಂತಾ ಹೈ ಪ್ರೊಫೈಲ್ ಕೇಸ್ಗಳಲ್ಲೇ ಪತ್ರಕರ್ತರ ಹೆಸರು ಓಡಾಡ್ತಿದೆ. ಅದರ ನಂತರ ಓಡಾಡಿದ ವೈದ್ಯರೊಬ್ಬರ ಲೈಂಗಿಕ ಪ್ರಕರಣವೊಂದನ್ನ ಬ್ಲಾಕ್ಮೇಲ್ಗೆ ಬಳಸಿಕೊಂಡ ವಿಚಾರದಲ್ಲಿ ಪತ್ರಕರ್ತರ ತಲೆದಂಡ ಹಲವಷ್ಟು ಸುದ್ದಿ ಮಾಡಿತ್ತು. ಸಧ್ಯ ಈಗ ಚಾಲ್ತಿಯಲ್ಲಿರೋ ಒಂದೊಂದೇ ಆರೋಪಿಗಳನ್ನು ಹಿಡಿದು ಒಳಗೆ ಹಾಕ್ತಿರೋ ಎಂಬಿ ಪಾಟೀಲರ ಟಾರ್ಗೆಟ್ ಮಾಡಿದ ಕೇಸ್ನಲ್ಲಿ ಪತ್ರಕರ್ತರು ಭಾಗಿಯಾಗಿದ್ದು ಎದ್ದು ಕಾಣ್ತಿದೆ. ರಾಜಕಾರಣಿಯೊಬ್ಬರ ಲೈಂಗಿಕ ಅಫೈರ್ ಕೇಸ್ ಕೂಡ ಪತ್ರಕರ್ತರಿಗೆ ಆಹಾರವಾಗ್ತಿದೆ. ತೀರಾ ಕೆದಕುತ್ತಾ ಹೋದ್ರೆ ದಿನಕ್ಕೊಂದು ವಸೂಲಿ ಕಥೆಗಳು ಮಾಧ್ಯಮಗಳ ಒಳಗೆ ಯಥೇಚ್ಛವಾಗಿ ಸಿಕ್ಕುತ್ತಾ ಹೋಗುತ್ತವೆ. ತೀರಾ ವಯುಕ್ತಿಕ ಅನ್ನಿಸೋ ಸ್ಟೋರಿಗಳಿಂದಲೂ ಸಹ ವಸೂಲಿ ವೀರರು ಕಮಿಷನ್ ಪಡೆದುಕೊಳ್ಳುವಷ್ಟು ಹದಗೆಟ್ಟಿದೆ ಇವತ್ತಿನ ಪತ್ರಿಕೋದ್ಯಮ. ನಿಮಗೆ ಆಶ್ಚರ್ಯದ ಜೊತೆಗೆ ಹೇಸಿಗೆ ಸಹ ಹುಟ್ಟಬಹುದು, ಕನ್ನಡದ ಟಿವಿ ಚಾನಲ್ ಒಂದು ಇದಕ್ಕಂತಲೇ ಒಂದು ಟೀಂ ಕಟ್ಟಿಕೊಂಡು ಫೀಲ್ಡಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕೆ ಚಾನಲ್ಲಿನ ಮುಖ್ಯಸ್ಥರೇ ಸಾತ್ ಕೊಡ್ತಿದ್ದಾರೆ. ಮೊದಲಿಗೆ ಸರಿಯಾದ ಮಿಕವೊಂದನ್ನು ಟಾರ್ಗೆಟ್ ಮಾಡಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳೀತಾರೆ. ನೆಕ್ಸ್ಟ್ ಸೀನಿನಲ್ಲಿ ಅದೇ ಸ್ಟಿಂಗ್ ಟೀಂ ಅದೇ ‘ಮಿಕ’ದ ಟೇಬಲ್ ಮೇಲೆ ವಸೂಲಿಗೆ ಇಳಿದಿರುತ್ತೆ. ಕೂತ ಬೈಟಕ್ಕಿಗೆ ಲಕ್ಷ, ಕೋಟಿ ನಿರಾಯಾಸವಾಗಿ ಜೇಬಿಗೆ ಬಂದು ಇಳಿಯುತ್ತೆ. ಇನ್ನೇನು ಬೇಕು. ಕೇಳಿದ್ರೆ ‘ನಾವು ಕೊಡ್ತಿರೋ ಪ್ರೋಗ್ರಾಂಗಳಿಗೆ ಬರೋ ಟಿಆರ್ಪಿ ಅಷ್ಟರಲ್ಲೇ ಇದೆ.. ಇನ್ನು ನೂರೈವತ್ತು ಇನ್ನೂರು ಮಂದಿ ಉದ್ಯೋಗಿಗಳಿಗೆ ಸಂಬಳ ಎಲ್ಲಿಂದ ಬರಬೇಕು’ ಅನ್ನೋ ಸಬೂಬಿನ ಉತ್ತರ ಕೂಡ ಇವರಿಂದ ಅಷ್ಟೇ ಸಲೀಸಾಗಿ ಬರುತ್ತೆ. ಹಾಗಾಗಿ ವಸೂಲಿ ಮಾಡಿಯೇ ಸಂಸ್ಥೆಯನ್ನು ಮುನ್ನಡೆಸಬೇಕಾದ ಕೃತಕ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಅಥವಾ ಅಂತಾ ಸುಲಭದ ದಾರಿ ಅಂತಲೂ ಹೇಳ್ಬಹುದು.

ಒಂದು ಕಾಲದಲ್ಲಿ ಪತ್ರಕರ್ತರು ಅಂದ್ರೆ ಸಾಮಾನ್ಯ ಜನ ಅತಿಯಾಗಿ ಗೌರವ ಕೊಡುವಂತಾ ಸ್ಥಾನಮಾನ ಹೊಂದಿದ್ದಾಗಿತ್ತು. ತಮ್ಮ ಸಮಸ್ಯೆಗಳನ್ನು, ನಮ್ಮ ಕೂಗನ್ನು ಸರ್ಕಾರದ ಮಟ್ಟಕ್ಕೆ, ಅಧಿಕಾರಿಗಳ ಮಟ್ಟಕ್ಕೆ ತಲುಪಿಸುವಂತಾ ಜವಾಬ್ದಾರಿ ಹೊಂದಿತ್ತು. ಆ ಮೂಲಕ ಆಡಳಿತ ವರ್ಗ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಂತಾ ಪಾತ್ರ ವಹಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ನಿರ್ವಹಿಸುವಂತಹ ಜವಾಬ್ದಾರಿ ಮಾಧ್ಯಮಕ್ಕೆ ಇದೆ. ಸಧ್ಯ ಇವೆಲ್ಲಾ ಘನತೆಯನ್ನ ಮಾಧ್ಯಮ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಪತ್ರಕರ್ತರು ಅಂದ್ರೆ ಮುಖ ಮುರಿಯುವ ಹಂತಕ್ಕೆ ಬಂದಿದ್ದಾರೆ ಜನಸಾಮಾನ್ಯರು. ಆ ಮೂಲಕ ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬೀಳುತ್ತಿದ್ದಾರೆ.

ಕೊನೆಯದಾಗಿ ಹೇಳೋದು ಏನಂದ್ರೆ ಪತ್ರಿಕೋಧ್ಯಮ ಅನ್ನೋದು ಚಿಕ್ಕ ಸರ್ಕಲ್. ಯಾವ ಸಂಸ್ಥೆಯ ಒಳಗೆ ಏನು ಆಗ್ತಿದೆ ಅನ್ನೋದು ಸುಲಭವಾಗಿ ಇನ್ನೊಂದು ಸಂಸ್ಥೆಗೆ ಗೊತ್ತಾಗಿ ಬಿಡುವಷ್ಟು ವಿಚಾರಗಳು ಗಾಳಿಯಷ್ಟೇ ವೇಗವಾಗಿ ಹರಿದಾಡುತ್ತೆ. ಇನ್ನು ವಸೂಲಿ ವೀರರ ವಿಚಾರಗಳು ಮಾಧ್ಯಮಗಳ ಒಳಗಿರೋ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದ್ರೆ ಹೊರಗೆಲ್ಲೂ ಲೀಕ್ ಮಾಡುವಂತಿಲ್ಲ. ಏನು ಮಾಡ್ತೀರಿ.. ಮಾಧ್ಯಮ ಧರ್ಮ ಅನ್ನೋ ಉತ್ತರ ಯಾವುದೇ ಅಂಜಿಕೆ ಅಳುಕಿಲ್ಲದೇ ಬಂದು ಹೋಗುತ್ತದೆ. ಇನ್ನಾದ್ರು ಎಚ್ಚರ ವಹಿಸುತ್ತಾರಾ? ಕಾಲವೇ ಉತ್ತರಿಸಬೇಕು.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial