ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಸರ್ಕಾರ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿದೆ. ಹಲವು ಹೊಸ ಯೋಜನೆಗಳನ್ನೂ ಹಾಕಿಕೊಂಡಿದೆ. ಭರವಸೆಯ ರಾಜಕಾರಣವನ್ನು ಮಾಡುತ್ತಿರುವ ಸ್ಟಾಲಿನ್, ಮುಂದಿನ ಲೋಕಸಭೆ ಚುನಾವಣೆಯ ವೇಳೆಗೆ ‘ತಮಿಳುನಾಡು ಮಾದರಿ’ಯನ್ನು ಮುನ್ನೆಲೆಗೆ ತರುತ್ತಾರೆಯೇ?
2014 ಲೋಕಸಭಾ ಚುನಾವಣೆಯನ್ನು ಮೆಲುಕು ಹಾಕಲು ಹೊರಟರೆ, `ಗುಜರಾತ್ ಮಾದರಿ’ ಎಂಬ ಖೊಟ್ಟಿ ಮಾದರಿ ಮುಖ್ಯವಾಹಿನಿಗಳಲ್ಲಿ ಪ್ರಚಂಡ ಪ್ರಚಾರ ಗಿಟ್ಟಿಸಿಕೊಂಡಿದ್ದು ನಮ್ಮ ಕಣ್ಣಿಗೆ ರಾಚುತ್ತದೆ. ಸಾರ್ವಜನಿಕ ವಲಯವನ್ನು ನಿರ್ಲಕ್ಷಿಸಿ, ಗುಜರಾತ್ ಅನ್ನು ಬಂಡವಾಳಶಾಹಿಗಳು ದೋಚಲು ನೀಡಿದ ಮುಕ್ತ ಅವಕಾಶವೇ ಗುಜರಾತ್ ಮಾದರಿಯಾಗಿತ್ತು. 2019ರ ಲೋಕಸಭಾ ಚುನಾವಣೆ ವೇಳೆಗೆ ಹಾಗೂ 2017ರ ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆಗೆ ತನ್ನದೇ ನೆಲದಲ್ಲಿ ಗುಜರಾತ್ ಮಾದರಿ ಕಣ್ಮರೆಯಾಗಿದ್ದು ವಾಸ್ತವ. 2014ರಲ್ಲಿ ಒಕ್ಕೂಟ ಸರ್ಕಾರದ ಅಧಿಕಾರ ಹಿಡಿದವರು, ಮತ್ತೊಮ್ಮೆ ಚುನಾವಣೆ ಎದುರಿಸುವಾಗ ದೇಶಭಕ್ತಿ, ಭಯೋತ್ಪಾದನೆ, ಸೈನಿಕರ ಮರಣ, ಯುದ್ಧೋನ್ಮಾದ ಮುನ್ನೆಲೆಗೆ ತಂದು ಗೆದ್ದರು. ಬಿಜೆಪಿ 2019ರ ಲೋಕಸಭೆಯಲ್ಲಿ ಅನಾಯಾಸವಾಗಿ ಗೆದ್ದರೂ, 2017ರಲ್ಲಿ ಗುಜರಾತ್ ಚುನಾವಣೆಯಯಲ್ಲಿ ತಿಣುಕಾಡಿದ್ದು ಕಂಡಿದ್ದೇವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಖಾಸಗೀಕರಣವನ್ನು ವಿರೋಧಿಸಿ ಮೋದಿಗೆ ಪತ್ರ ಬರೆಯಲಿರುವ ತಮಿಳುನಾಡು ಸಿಎಂ
ಕಣ್ಣಿಗೆ ಕಾಣದ ಗುಜರಾತ್ ಮಾದರಿಯನ್ನು ಒಪ್ಪಿ ಓಟು ಒತ್ತಿದ ಜನರು, ಈಗ ಅಭಿವೃದ್ದಿ ಎಂದ ತಕ್ಷಣ ಒಂದಿಷ್ಟು ಹಿಂದೆ ಮುಂದೆ ನೋಡುತ್ತಾರೆ. ಜನರು ನಿಜಕ್ಕೂ ಅಭಿವೃದ್ಧಿಯ ಬೆನ್ನೇರಿ ಮುಂದಿನ ಲೋಕಸಭಾ ಚುನಾವಣೆಯನ್ನು ಪರಿಗಣಿಸುವುದಾದರೆ ಅಷ್ಟೋ ಇಷ್ಟೋ ಅಭಿವೃದ್ಧಿಯತ್ತ ಗಮನ ಹರಿಸಿರುವ ತಮಿಳುನಾಡು ಅಥವಾ ಕೇರಳದತ್ತ ನೋಡಬಹುದೇನೋ!
“ಪಬ್ಲಿಕ್ ಡೆಲಿವರಿ ವ್ಯವಸ್ಥೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತಮಿಳುನಾಡಿನಲ್ಲಿ ದಕ್ಷವಾಗಿಯೇ ಇದ್ದಿದೆ” ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಅನೇಕ ತಪ್ಪುಗಳ ನಡುವೆಯೂ ತಮಿಳುನಾಡು ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಭರವಸೆಯನ್ನು ಹುಟ್ಟು ಹಾಕಿರುವುದು ಸುಳ್ಳಲ್ಲ. ಮೋದಿಯವರನ್ನು ಪ್ರಧಾನಿ ಸ್ಥಾನದಲ್ಲಿ ನೋಡುವುದಕ್ಕಿಂತ ಸ್ಟಾಲಿನ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡುವುದು ಅಪಾಯಕಾರಿಯೇನಲ್ಲ.

ಬಿಜೆಪಿಯ ಜೊತೆ ಕೈಜೋಡಿಸಿದ ಎಐಎಡಿಎಂಕೆಯನ್ನು ಮಣಿಸಿ, 234 ಸ್ಥಾನಗಳಲ್ಲಿ 159 ಸ್ಥಾನಗಳಲ್ಲಿ ಗೆದ್ದು ತಮಿಳುನಾಡಿನ ಅಧಿಕಾರ ಹಿಡಿದ ಡಿಎಂಕೆ ಪಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೊಸ ಭರವಸೆಗಳನ್ನು ಬಿತ್ತಿದ್ದಾರೆ. ಸ್ಟಾಲಿನ್ ಕೈಗೊಳ್ಳುತ್ತಿರುವ, ಘೋಷಿಸುತ್ತಿರುವ ಯೋಜನೆಗಳು, ಕಾರ್ಯಕ್ರಮಗಳು, ನೀತಿಗಳು ಆಶಾದಾಯಕವಾಗಿವೆ. ದ್ವೇಷ, ಮತ್ಸರವಿಲ್ಲದ ಆಡಳಿತಕ್ಕೆ ಒತ್ತು ನೀಡುತ್ತಿದ್ದಾರೆ.
ಅಧಿಕಾರ ಹಿಡಿದ ತಕ್ಷಣವೇ, ಎಲ್ಲ ಮಹಿಳೆಯರಿಗೆ, ವಿಕಲಾಂಗ ಚೇತನರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಉಚಿತವಾಗಿ ಬಸ್ ಪ್ರಯಾಣವನ್ನು ಸ್ಟಾಲಿನ್ ಘೋಷಿಸಿದರು. ವೃತ್ತಿಪರ ಕೋರ್ಸ್ಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೇ. 7.5ರಷ್ಟು ಸ್ಥಾನಗಳನ್ನು ಮೀಸಲಿಡುವುದಾಗಿ ಹೇಳಿದರು. 28 ವರ್ಷದ ಸುಹಾಂಜನ ಗೋಪಿನಾಥ್ ಎಂಬ ಮಹಿಳೆಯನ್ನು ‘ಓದುವರ್’ (ದೇವಸ್ಥಾನಗಳಲ್ಲಿ ಸ್ತೋತ್ರಗಳನ್ನು ಪಠಿಸುವವರು) ಆಗಿ ನೇಮಿಸಿ ಆಗಸ್ಟ್ 15ರಂದು ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಸ್ಟಾಲಿನ್ ನೀಡಿದರು. ಮಹಿಳಾ ‘ಓದುವರ್’ ಆಗಿರುವ ಸುಹಾಂಜನ, ಅವರು 2019ರಲ್ಲಿ ವಿವಾಹವಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾರೆ.
ಇದನ್ನೂ ಓದಿರಿ: ಹೋರಾಟಗಾರರ ಮೇಲೆ ದಾಖಲಾಗಿದ್ದ 5,570 ಪ್ರಕರಣ ಹಿಂಪಡೆದ ತಮಿಳುನಾಡು ಸರ್ಕಾರ
“ಸುಹಾಂಜನ ಅವರ ವಿಷಯವನ್ನು ಪಕ್ಕಕ್ಕಿಟ್ಟು ಬಿಡಿ. ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಸ್ಟಾಲಿನ್ ಇಟ್ಟರು. 24 ಮಂದಿ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ. 24 ಮಂದಿಯಲ್ಲಿ ಐವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆರು ಮಂದಿ ಅತ್ಯಂತ ಹಿಂದುಳಿದ ಸಮುದಾಯದವರಾಗಿದ್ದು, 12 ಮಂದಿ ಹಿಂದುಳಿದ ಸಮುದಾಯದವರು ಮತ್ತು ಒಬ್ಬರು ಇತರೆ ಸಮುದಾಯದವರಾಗಿದ್ದಾರೆ. ಈ ನೇಮಕಾತಿಯು ಧಾರ್ಮಿಕ ಒಳಗೊಳ್ಳುವಿಕೆಯ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎನ್ನುತ್ತಾರೆ ಇಂಡಿಯಾ ಟುಡೇಯ ಡೆಪ್ಯುಟಿ ಎಡಿಟರ್ ಅಮರನಾಥ್ ಕೆ.ಮೆನಾನ್.
ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು 1970ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಗೆ ತಿದ್ದುಪಡಿ ತಂದು, ಬ್ರಾಹ್ಮಣೇತರರನ್ನು ಪುರೋಹಿತರನ್ನಾಗಿ ನೇಮಿಸಲು ಮುಂದಾಗಿದ್ದರು. ದ್ರಾವಿಡ ಚಳವಳಿಯ ಭಾಗವಾಗಿ ಈ ಹೆಜ್ಜೆ ಇರಿಸಲಾಗಿತ್ತು. ಎಲ್ಲರ ಊಹೆಯಂತೆ ಸಂಪ್ರದಾಯವಾದಿಗಳು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 1972ರಲ್ಲಿ ಐವರು ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟ್‌ನ ಪೀಠವು, “ಅರ್ಚಕ ಯಾವುದೇ ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಸ್ಥನಲ್ಲ. ಅರ್ಚಕ ದೇವಸ್ಥಾನಗಳಲ್ಲಿನ ಆಚರಣೆ ಮತ್ತು ಆಗಮಗಳನ್ನು ಚೆನ್ನಾಗಿ ತಿಳಿದಿರನಾಗಿರಬಹುದು. ಅರ್ಚಕ ನೇಮಕಾತಿಯು ಜಾತ್ಯತೀತ ಕಾಯಿದೆಯಾಗಿದೆ” ಎಂದು ಅನೇಕ ಪ್ರಕರಣಗಳಲ್ಲಿ ಕೋರ್ಟ್ ಹೇಳಿತ್ತು. “ಅರ್ಚಕ ವೃತ್ತಿಯು ಅನುವಂಶಿಕ ಹಕ್ಕಲ್ಲ” ಎಂದು ಸೇಶಮ್ಮಲ್ ಹಾಗೂ ತಮಿಳುನಾಡು ಸರ್ಕಾರ ವಿರುದ್ಧದ ಪ್ರಕರಣದಲ್ಲಿ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿಯಲಾಗಿತ್ತು.
“ವಂಶಪಾರಂಪರ್ಯವಾಗಿದ್ದ ಅರ್ಚಕ ಸ್ಥಾನಕ್ಕೆ ಕಡಿವಾಣ ಹಾಕಿದಾಗ, ಸುಪ್ರೀಂ ಕೋರ್ಟ್ ಆಗಮ ಶಾಸ್ತ್ರಗಳನ್ನು ತಿಳಿದಿರಬೇಕು ಎಂದಿದ್ದನ್ನು ಉಲ್ಲೇಖಿಸಿ ಬೇರೆ ಬೇರೆ ಗುಂಪುಗಳು ಬೇರೆ ಬೇರೆ ವಿಶ್ಲೇಷಣೆಗಳನ್ನು ಮಾಡಿದವು. ಆಗಮ ಶಾಸ್ತ್ರದ ಪ್ರಕಾರ ಅರ್ಚಕರು ಬ್ರಾಹ್ಮಣರೇ ಆಗಬೇಕು ಎಂದರು. ಇನ್ನು ಕೆಲವರು ಆಗಮಗಳನ್ನು ಅಧ್ಯಯನ ಮಾಡಿ, ಸಂಪ್ರದಾಯವನ್ನು ತಿಳಿದವರು ಯಾರೇ ಆದರೂ ಅರ್ಚಕರಾಗಬಹುದು ಎನ್ನಲಾಯಿತು. ಇಂತಹ ಸಂದರ್ಭದಲ್ಲಿ ಕೇರಳದಲ್ಲಿ ಕೇರಳ ದೇವಸಂ ಬೋರ್ಡ್ ಮೂಲಕ ಅರ್ಚಕ ವೃತ್ತಿ ತರಬೇತಿ ಆರಂಭಿಸಲಾಯಿತು. ಬ್ರಾಹ್ಮಣೇತರರು ಅರ್ಚಕರಾಗುವ ಪದ್ಧತಿ ಕೇರಳದಲ್ಲಿ ಆರಂಭವಾಯಿತು. ತಮಿಳುನಾಡಿಗೆ ಹೋಲಿಸಿದರೆ ಈ ವಿಚಾರದಲ್ಲಿ ಕೇರಳದವರು ಒಂದು ಹೆಜ್ಜೆ ಮುಂದೆ ಇದ್ದರು. ಇದೆಲ್ಲವೂ ಸುಪ್ರೀಂಕೋರ್ಟ್ ಮುಂದೆ ಬಂದಾಗ ಜಾತಿ ಪ್ರಮುಖವಲ್ಲ, ಅರ್ಹತೆಗಳು ಮುಖ್ಯ ಎಂದಿತ್ತು. ಆದಿಶಿವ ಶಿವಾಚಾರ್ಯಲು ಪ್ರಕರಣದಲ್ಲೂ ಇದನ್ನೇ ಹೇಳಲಾಗಿದೆ” ಎನ್ನುತ್ತಾರೆ ಜಸ್ಟೀಸ್ ನಾಗಮೋಹನ ದಾಸ್.
2006ರಲ್ಲಿ ಅಧಿಕಾರಕ್ಕೆ ಬಂದಾಗ ಕರುಣಾನಿಧಿಯವರು ಮತ್ತೆ ಎಲ್ಲ ಸಮುದಾಯದವರೂ ಅರ್ಚಕರಾಗಬಹುದು ಎಂದು ಆದೇಶ ಹೊರಡಿಸಿದಾಗ ಅನೇಕರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಗಮನಿಸಬಹುದು. ಜಾತಿ ಮತ್ತು ಹುಟ್ಟಿನ ಆಧಾರದಲ್ಲಿ ಹೊರಗಿಡುವ ಅಥವಾ ಒಳಗೊಳ್ಳುವ ನಿಲುವು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇಷ್ಟಾಗಿಯೂ ಮೊದಲ ಬ್ರಾಹ್ಮಣೇತರ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಅರ್ಚಕರಾಗಿ ನೇಮಕವಾಗಿದ್ದು 2018ರಲ್ಲಿ, 2020ರಲ್ಲಿ ಎರಡನೇ ಬಾರಿಗೆ ನೇಮಕಾತಿ ನಡೆದಿತ್ತು.
“ತಮಿಳುನಾಡಿನಲ್ಲಿ ಅರ್ಚಕರಾಗಲು ಬಯಸುವವರಿಗೆ ತರಬೇತಿ ನೀಡಲಾಗುತ್ತಿದೆ. ಟ್ರೈನಿಂಗ್‌ನಲ್ಲಿ ಪಾಸ್ ಆದವರಿಗೆ ಅರ್ಚಕರನ್ನಾಗಿ ನೇಮಿಸಲಾಗುತ್ತಿದೆ. ಆಗಸ್ಟ್ 15ರ ನೇಮಕಾತಿಯಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಅರ್ಚಕರ ನೇಮಕಾತಿ ನಡೆಯಬೇಕಿದೆ. ಮುಜರಾಯಿ ಇಲಾಖೆಯ ಅಡಿಯಲ್ಲಿ ಸುಮಾರು 34,000 ದೇವಾಲಯಗಳು ತಮಿಳುನಾಡಿನಲ್ಲಿವೆ. ಇನ್ನು ದೂರವಾದ ಪ್ರಯಾಣ ಮಾಡಬೇಕಿದೆ. ಸಾಧಿಸಬೇಕಿರುವುದು ಬೆಟ್ಟದಷ್ಟಿದೆ. ಅರ್ಚಕರನ್ನಾಗಿ ಮಹಿಳೆಯರನ್ನೂ ನೇಮಕ ಮಾಡಬೇಕಿದೆ. ತಮಿಳುನಾಡು, ಕೇರಳದ ರಾಜ್ಯಗಳು ಇಟ್ಟಿರುವ ಹೆಜ್ಜೆ ಸ್ವಾಗತಾರ್ಹ. ಇದು ಎಲ್ಲ ರಾಜ್ಯಗಳಿಗೂ ಹಬ್ಬಲಿ. ಕರ್ನಾಟಕದಲ್ಲೂ ಸುಮಾರು 34,000 ದೇವಾಲಯಗಳು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿವೆ. ಇಲ್ಲಿಯೂ ಬ್ರಾಹ್ಮಣೇತರರ ನೇಮಕಾತಿ ನಡೆಯಬೇಕಿದೆ” ಎನ್ನುತ್ತಾರೆ ಜಸ್ಟೀಸ್ ನಾಗಮೋಹನ ದಾಸ್.
ಅರ್ಥ ವ್ಯವಸ್ಥೆಗೆ ಒತ್ತು
ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಇಟ್ಟಿರುವ ಹೆಜ್ಜೆ ಗಮನ ಸೆಳೆದಿದೆ. ಕೃಷಿಗೆ ಪ್ರತ್ಯೇಕ ಬಜೆಟ್‌ಗೆ ಅವಕಾಶ ನೀಡಲಾಗಿದೆ. ಆರ್ಥಿಕ ಸ್ವಾಯತ್ತತೆಗಾಗಿ ತಮಿಳುನಾಡು ಸರ್ಕಾರ “ಆರ್ಥಿಕ ಸಲಹಾ ಮಂಡಳಿ”ಯನ್ನು ರಚಿಸಲಾಯಿತು. ಈ ಮಂಡಳಿಗೆ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ನೊಬೆಲ್ ಪುರಸ್ಕೃತ ಎಸ್ತಾರ್ ಡುಪ್ಲೋ, ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ಒಕ್ಕೂಟ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮಣಿಯನ್, ಅಭಿವೃದ್ಧಿ ಅರ್ಥಶಾಸ್ತ್ರಜ್ಞರಾದ ಪ್ರೊ.ಜೀನ್ ಡ್ರೋಜ್, ಕೇಂದ್ರದ ಮಾಜಿ ಆರ್ಥಿಕ ಕಾರ್ಯದರ್ಶಿ ಎಸ್.ನಾರಾಯಣ್ ಅವರನ್ನು ಕರೆತಂದಿದ್ದು ಪ್ರಶಂಸೆಗೆ ಪಾತ್ರವಾಯಿತು.
ಇದನ್ನೂ ಓದಿರಿ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ಭರ್ಜರಿ ಗೆಲುವಿನತ್ತ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ
ಸಾಮಾಜಿಕ ಪರಿವರ್ತನೆಯತ್ತ ಹೆಜ್ಜೆಗಳು
ಅತಿಹೆಚ್ಚ ಅಸಮಾನತೆಯನ್ನು ಹೊಂದಿರುವ ರಾಜ್ಯಗಳ ಪೈಕಿ ತಮಿಳುನಾಡು ಕೂಡ ಒಂದು. ಹೀಗಾಗಿಯೇ ಇಲ್ಲಿನ ಚಳವಳಿಗಳು ತುಸು ಒರಟಾಗಿರುತ್ತವೆ ಎನ್ನಲಾಗುತ್ತದೆ. ತಮಿಳುನಾಡಿಗೆ ಅಂಟಿರುವ ಕಳಂಕವನ್ನು ಹಂತಹಂತವಾಗಿ ತೊಡೆದುಹಾಕುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ.
ಜಾತಿ ನಿರ್ಮೂಲನೆ ಮಾಡಿದ ಗ್ರಾಮಕ್ಕೆ ಹತ್ತು ಲಕ್ಷ ರೂ.ಬಹುಮಾನವನ್ನು ಸರ್ಕಾರ ಘೋಷಿಸಿದೆ. ಮುಖ್ಯವಾಗಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಜನ್ಮದಿನ (ಸೆ.17)ವನ್ನು ‘ಸಾಮಾಜಿಕ ನ್ಯಾಯದಿನ’ ಎಂದು ಘೋಷಿಸಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ಸಮಾನಾಂತರವಾಗಿ ತಮಿಳುನಾಡಿನಲ್ಲಿಯೂ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲಾಗುವುದು ಎಂದು ಸ್ಟಾಲಿನ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಜಾತಿ ಸಮೀಕ್ಷೆ ನಡೆಸಬೇಕೆಂದು ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಕಾರ್ಮಿಕರ ಸೇವೆಗೆ ಗೌರವ ತರುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಕುರ್ಚಿಯ ವ್ಯವಸ್ಥೆ ಮಾಡಬೇಕು ಎಂದು ಶಾಸನ ರೂಪಿಸಲಾಗಿದೆ. ಕೇರಳ ರಾಜ್ಯ ಸರ್ಕಾರ ತಂದಿದ್ದ ಕಾನೂನನ್ನು ನೋಡಿ ತಮಿಳುನಾಡು ಸರ್ಕಾರವೂ ಬದಲಾವಣೆ ತಂದಿದೆ.
ಸಿಎಎ ವಿರುದ್ಧ ಸಮರ
ಒಕ್ಕೂಟ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾರಿಗೊಳಿಸಿದ್ದ ಪೌರತ್ವ ಕಾರ್ಯ ತಿದ್ದುಪಡಿಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. “ಸಂವಿಧಾನದ ಜಾತ್ಯತೀತ ನಿಲುವುಗಳಿಗೆ ವಿರುದ್ಧವಾಗಿ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯು ಕೋಮು ಸೌಹಾರ್ದತೆಯನ್ನು ಕದಡುತ್ತದೆ” ಎಂದು ಸ್ಟಾಲಿನ್ ಹೇಳಿದರು.
ಸಿಎಎ, ಎನ್‌ಆರ್‌ಸಿ, ಮೂರು ವಿವಾದಿತ ಕೃಷಿ ಕಾಯ್ದೆಗಳು, ಸೇಲಂ-ಚೆನ್ನೈ ಎಂಟು ಪಥ ಎಕ್ಸ್ ಪ್ರೆಸ್ ವೇ, ಮಿಥೇನ್ ಹೊರತೆಗೆಯುವಿಕೆ, ನ್ಯೂಟ್ರಿನೊ ಮತ್ತು ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ವಿರುದ್ಧದ ಹೋರಾಟಗಾರರ ಮೇಲೆ ದಾಖಲಾಗಿದ್ದ ಒಟ್ಟು 5,570 ಪ್ರಕರಣಗಳನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತು. ಮಾಧ್ಯಮಗಳ ವಿರುದ್ಧ ಎಐಎಡಿಎಂಕೆ ಅಧಿಕಾರಾವಧಿಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನೂ ಸರ್ಕಾರ ಹಿಂಪಡೆದಿದ್ದು, 5,570 ಪ್ರಕರಣಗಳಲ್ಲಿ 2,831 ಪ್ರಕರಣಗಳು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿವೆ. ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಬಿಂಬಿಸಿ ಅವರ ಮೇಲೆ ಕರಾಳ ಕಾನೂನುಗಳನ್ನು ಹೇರಿ, ಜೈಲಿಗೆ ತಳ್ಳುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು ಇಲ್ಲಿ ಸ್ಪಷ್ಟ.
ಮನೆಬಾಗಿಲಲ್ಲೇ ಆರೋಗ್ಯ ಕೇಂದ್ರ ಯೋಜನೆ
“ಮನೆಬಾಗಿಲಲ್ಲೇ ಆರೋಗ್ಯ ಕೇಂದ್ರ” ಯೋಜನೆಯನ್ನು ಎಂಟು ಜಿಲ್ಲೆಗಳಲ್ಲಿ ಸ್ಟಾಲಿನ್ ಚಾಲನೆ ನೀಡಲಾಯಿತು. ಸಂವಹನಾಸಾಧ್ಯ (Non-communicable debases) ಕಾಯಿಲೆಗಳಿಗೆ ಮನೆಯ ಹತ್ತಿರದಲ್ಲೇ ಚಿಕಿತ್ಸೆ ದೊರಕಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. “30 ಲಕ್ಷ ಕುಟುಂಬಗಳ ಒಂದು ಕೋಟಿ ಜನರನ್ನು ಒಂದು ವರ್ಷದೊಳಗೆ ತಲುಪುವ ಗುರಿ ಹೊಂದಿದ್ದೇವೆ. ಎಲ್ಲರಿಗೂ ಉತ್ತಮ ಆರೋಗ್ಯ ಗುರಿಯನ್ನು ಒಂದು ವರ್ಷದೊಳಗೆ ಸಾಧಿಸುವ ಗುರಿ ಹೊಂದಿದ್ದೇವೆ” ಎಂದು ಸ್ಟಾಲಿನ್ ಹೇಳಿಕೊಂಡರು.
ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ
ಜಯಲಲಿತಾ ಮತ್ತು ಕೆ.ಪಳನಿಸ್ವಾಮಿಯವರ ಫೋಟೋಗಳು ಸರ್ಕಾರ ಶಾಲಾ ಮಕ್ಕಳಿಗೆ ನೀಡುವ ಬ್ಯಾಗಿನ ಮೇಲಿದ್ದವು. ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸ್ಟಾಲಿನ್ ಆದೇಶಿಸಿದ್ದು ಜನರ ಪ್ರೀತಿಗೆ ಪಾತ್ರವಾಗಿದೆ.
“ಸ್ಟಾಲಿನ್ ಅವರಲ್ಲಿ ಈ ರೀತಿಯ ಪ್ರಬುದ್ಧತೆ ಮೊದಲು ಕಂಡು ಬರುತ್ತಿರಲಿಲ್ಲ. ಎಐಎಡಿಎಂಕೆಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಪಿ.ಪನ್ನೀರಸೆಲ್ವಂ, ಮಾಜಿ ಆರೋಗ್ಯ ಸಚಿವ ವಿಜಯ ಭಾಸ್ಕರ್ ಅವರನ್ನು ಬಹುಪಕ್ಷಗಳ ಕೋವಿಡ್ ನಿರ್ವಹಣಾ ಪ್ಯಾನೆಲ್‌ನಲ್ಲಿ ಒಳಗೊಂಡು ಚರ್ಚಿಸಿರುವಂತಹ ಬೆಳವಣಿಗೆ ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಭೂತಪೂರ್ವವಾದದ್ದನ್ನು ಸಾಧಿಸಿದನ್ನು ತೋರುತ್ತದೆ” ಎಂದು ಅಭಿಪ್ರಾಯ ತಾಳುತ್ತಾರೆ ಚೆನ್ನೈ ಪ್ರೆಸಿಡೆನ್ಸಿ ಕಾಲೇಜಿನ ರಾಜಕೀಯ ವಿಜ್ಞಾನದ ಸಹಪ್ರಧ್ಯಾಪಕ ಪಿ.ಮುತ್ತುಕುಮಾರ್ (ದಿ ಪ್ರಿಂಟ್ ವಿಶ್ಲೇಷಣೆ).
ಈ ರೀತಿಯ ರಾಜಕೀಯ ಸಂಪ್ರದಾಯ ಜಯಲಲಿತಾ, ಕರುಣಾನಿಧಿ ಹಾಗೂ ಎಂಜಿಆರ್ ಅಧಿಕಾರಾವಧಿಯಲ್ಲೂ ಕಂಡುಬಂದಿರಲಿಲ್ಲ. ಈ ಸಂಪ್ರದಾಯ ಅಣ್ಣಾದೊರೈ ಕಾಲಕ್ಕೆ ಮುಗಿದುಹೋಗಿತ್ತು. ತಮಿಳುನಾಡು ಜನತೆಗಾಗಿ ಏನನ್ನಾದರೂ ಒಳಿತು ಮಾಡಬೇಕೆಂದು ಸ್ಟಾಲಿನ್ ಶ್ರಮಿಸುತ್ತಿದ್ದಾರೆ ಎಂಬುದು ಮುತ್ತುಕುಮಾರ್ ಅವರ ಅಭಿಪ್ರಾಯ.
ಪ್ರತಿಪಕ್ಷಗಳು ಸರ್ಕಾರವನ್ನು ದೂಷಿಸುವುದು ಸಾಮಾನ್ಯ. ಆದರೆ ಸ್ಟಾಲಿನ್ ಅವರ ಕೆಲಸಗಳನ್ನು ಒಪ್ಪದೇ ಇರಲಾರರೂ ಎಂಬುದೂ ಸತ್ಯ. “ಸಾಮಾನ್ಯವಾಗಿ ಪ್ರತಿ ಸರ್ಕಾರದಲ್ಲೂ ಪ್ರಮುಖ ಸ್ಥಾನಗಳಲ್ಲಿ ಹೌದಪ್ಪಗಳು (ಅಧಿಕಾರಿಗಳು ಹಾಗೂ ಮಂತ್ರಿಗಳು) ಇರುತ್ತಾರೆ. ಆದರೆ ಸ್ಟಾಲಿನ್ ಕಳಂಕರಹಿತರನ್ನು ನೇಮಿಸಿಕೊಂಡಿದ್ದಾರೆ” ಎಂದು ಎಐಎಡಿಎಂಕೆಯ ಐಟಿ ವಿಭಾಗದ ಮಾಜಿ ಮುಖ್ಯಸ್ಥ ಸ್ವಾಮಿನಾಥನ್ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಪಟಾಕಿ ಬ್ಯಾನ್: 4 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್
ನೀಟ್ ಏಕೆ ಬೇಡ: ತಮಿಳುನಾಡು ಸರ್ಕಾರದ ನಡೆಯನ್ನೇಕೆ ಸ್ವಾಗತಿಸಬೇಕು?
ವೈದ್ಯರಾಗಬೇಕು ಎಂದು ಆಸೆ ಹೊತ್ತ ವಿದ್ಯಾರ್ಥಿಗಳ ಪಾಲಿಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿರುವ ನ್ಯಾಷನಲ್ ಎಲಿಜಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (ನೀಟ್)ನಿಂದ ಸಂಪೂರ್ಣ ರಿಯಾಯಿತಿ ನೀಡುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಅಂಗೀಕರಿಸಿರುವ ಮಸೂದೆ ಮಹತ್ವವನ್ನು ಪಡೆದಿದೆ. ಹಲವು ವರ್ಷಗಳಿಂದ ನೀಟ್‌ನಿಂದ ಹೊರಗಿದ್ದ ತಮಿಳನಾಡು 2017ರಲ್ಲಿ ನೀಟ್ ಪರೀಕ್ಷೆಗೆ ತೆರೆದುಕೊಂಡಿತ್ತು.
12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 1,200 ಅಂಕಗಳಿಗೆ 1,176 ಅಂಕಗಳನ್ನು ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾ, ನೀಟ್ ಪರೀಕ್ಷೆ ಪೂರೈಸಲಾಗದೆ ಸಾವನ್ನಪ್ಪಿದ್ದರು. ಈ ಘಟನೆ ನೀಟ್ ವಿರುದ್ಧದ ಸಮರಕ್ಕೆ ಕಾರಣವಾಯಿತು. ಗ್ರಾಮೀಣ ವಿದ್ಯಾರ್ಥಿಗಳು ನೀಟ್‌ನಿಂದ ಅನುಭವಿಸುವ ಯಾನತೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. 2021ರ ನೀಟ್ ಪರೀಕ್ಷೆಯಲ್ಲಿ ಹಾಜರಾದವರ ಪ್ರಮಾಣವೂ ಕುಸಿತ ಕಂಡಿದೆ. 2020ರಲ್ಲಿ 1,21,617 ವಿದ್ಯಾರ್ಥಿಗಳು ನೀಟ್ ಬರೆದಿದ್ದರೆ, 1,12,617 ವಿದ್ಯಾರ್ಥಿಗಳು 2021ರಲ್ಲಿ ನೀಟ್ ಬರೆದಿದ್ದಾರೆ. ಪರೀಕ್ಷೆ ವಿಳಂಬ ಹಾಗೂ ಕಟ್ ಆಫ್ ಅಂಕಗಳನ್ನು ಏರಿಕೆ ಮಾಡಿದ್ದರಿಂದ ಶೇ. 7ರಷ್ಟು ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ ಎನ್ನಲಾಗಿದೆ.
‘ತಮಿಳುನಾಡಿಗೆ ನೀಟ್ ಪರೀಕ್ಷೆ ಅಗತ್ಯವೇ?’ ಎಂದು ವಿಷಯ ಕುರಿತು 2021ರ ಜುಲೈನಲ್ಲಿ ಜನಾಭಿಪ್ರಾಯ ಸಮೀಕ್ಷೆಯನ್ನು ನಡೆಸಲಾಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.90 ಮಂದಿ ರಾಜ್ಯಕ್ಕೆ ನೀಟ್ ಬೇಡ ಎಂದಿದ್ದಾರೆ. ಸುಮಾರು 42,000 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. “ನೀಟ್ ಹೆಸರಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ಗಳು ಸುಮಾರು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗಳವರೆಗೆ ದುಡ್ಡು ಕೇಳುತ್ತಿವೆ” ಎಂದು ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಈ ಹಿಂದೆ ತಿಳಿಸಿದ್ದಾಗ, “ನೀಟ್ ಹೆಸರಲ್ಲಿ ಕೋಚಿಂಗ್ ಎಂಬುದು ದೊಡ್ಡ ಬ್ಯುಸಿನೆಟ್ ಆಗಿದೆ” ಎಂದು ಜಸ್ಟೀಸ್ ಎ.ಕೆ.ರಾಜನ್ ಪೀಠ ಅಭಿಪ್ರಾಯಪಟ್ಟಿತ್ತು. ನೀಟ್ ವಿರುದ್ಧದ ನಿಲುವನ್ನು ಎಐಎಡಿಎಂಕೆ ಹಾಗೂ ಡಿಎಂಕೆ ಎರಡೂ ಪಕ್ಷಗಳೂ ಬೆಂಬಲಿಸಿದ್ದರು. ಈ ಬಾರಿಯ ನೀಟ್ ಪರೀಕ್ಷೆ ನಡೆಯಬೇಕಿದ್ದ ಹಿಂದಿನ ದಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದನು. “ನೀಟ್ ವಿರುದ್ಧ ಕಾನೂನು ಸಮರ ಶುರುವಾಗಿದೆ” ಎಂದು ಸ್ಟಾಲಿನ್ ಘೋಷಿಸಿ, ಮರುದಿನವೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದರು.
ತಮಿಳು ನೆಲದಲ್ಲಿ ಎಲ್ಲವೂ ಸರಿ ಇದೆಯೇ?
ಸ್ಟಾಲಿನ್ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತ್ರಕ್ಕೆ ತಮಿಳುನಾಡಿನಲ್ಲಿ ಎಲ್ಲವೂ ಸರಿ ಎನ್ನಲಾಗದು. ಪೆರಿಯಾರ್ ಜನ್ಮದಿನವನ್ನು ‘ಸಾಮಾಜಿಕ ನ್ಯಾಯ ದಿನ’ವನ್ನಾಗಿ ಸರ್ಕಾರ ಆಚರಣೆಗೆ ತಂದಿದೆ. ಆದರೆ ಪೆರಿಯಾರ್ ಅವರ ನಿಜವಾದ ಆಶಯಗಳು ಇನ್ನೂ ಜಾರಿಯಾಗಿಲ್ಲ ಎಂದು ಅಂಕಿ-ಅಂಶಗಳು ಹೇಳುತ್ತವೆ.
‘ದಿ ಕ್ವಿಂಟ್’ ಜಾಲತಾಣದಲ್ಲಿ ಪ್ರಕಟವಾಗಿರುವ ಸ್ಮಿತಾ ಟಿ.ಕೆ. ಅವರ ಲೇಖನವು, ತಮಿಳುನಾಡು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆಗಳತ್ತ ಬೊಟ್ಟು ಮಾಡಿದೆ.

ಜಾತಿ ಪ್ರೇರಿತ ಕೊಲೆಗಳ ಕುರಿತು ಕೆಲಸ ಮಾಡುತ್ತಿರುವ ಕಾತಿರ್ ಆಫ್ ಎವಿಡೆನ್ಸ್ ಸಂಘಟನೆಯ ಪ್ರಕಾರ 2013ರಿಂದ 2017ರ ಅವಧಿಯಲ್ಲಿ ಒಟ್ಟು 187 ಮರ್ಯಾದೆ ಹೆಸರಲ್ಲಿ ಹತ್ಯೆಗಳು ನಡೆದಿವೆ. ಅದರಲ್ಲಿ ಸಾವಿಗೀಡಾದವರು ಶೇ. 80 ಮಂದಿ ಮಹಿಳೆಯರಾಗಿದ್ದಾರೆ. ಇದು ಅಧಿಕೃತವಾಗಿ ದಾಖಲಾಗಿರುವ ವರದಿಯಷ್ಟೇ. ಬಹುತೇಕ ಕೊಲೆಗಳು ಆತ್ಮಹತ್ಯೆ ಎಂದೋ, ಸಹಜ ಸಾವೆಂದೋ ವರದಿಯಾಗುತ್ತಿವೆ ಎನ್ನಲಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ನೀಡಿದ 2020ರ ವರದಿಯ ಪ್ರಕಾರ ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. 2019ರಲ್ಲಿ 15.6ರಷ್ಟಿದ್ದ ಈ ಪ್ರಮಾಣ 2020ರಲ್ಲಿ 17.4ರಷ್ಟಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ 2019ರಲ್ಲಿ 4,139 ಇದ್ದದ್ದು, 2020ರಲ್ಲಿ 4,338ರಷ್ಟಾಗಿದೆ.
“ಶೇ. 50ರಷ್ಟು ಮಹಿಳಾ ಪ್ರಾತಿನಿಧ್ಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಇರಬೇಕೆಂದು ಪೆರಿಯಾರ್ ಪ್ರತಿಪಾದಿಸಿದ್ದರು. ಮಹಿಳೆಯರನ್ನು ಅಡುಗೆ ಮನೆಯಿಂದ ಹೊರತಂದು ಸ್ವಾತಂತ್ರ್ಯ ನೀಡಬೇಕು ಎನ್ನುತ್ತಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಡಿಎಂಕೆ ನೇತೃತ್ವದ ಈಗಿನ ಸರ್ಕಾರದಲ್ಲಿನ 33 ಸಚಿವರಲ್ಲಿ ಇಬ್ಬರು ಮಾತ್ರ ಮಹಿಳೆಯರಿದ್ದಾರೆ” ಎಂದು ಸ್ಮಿತಾ ಉಲ್ಲೇಖಿಸುತ್ತಾರೆ.
ಜಾತಿ ನಿರ್ಮೂಲನೆ ಮಾಡಬೇಕೆಂದು ಸರ್ಕಾರವೇನೋ ಹೆಜ್ಜೆ ಇರಿಸಿದೆ. ಆದರೆ ತಮಿಳುನಾಡಿನ ಜಾತಿ ವ್ಯವಸ್ಥೆ ಆತಂಕಕಾರಿಯಾದದ್ದು. ಎನ್‌ಸಿಆರ್‌ಬಿ ವರದಿಯ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗಗಳ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. 2019ರಲ್ಲಿ 1,144 ಪ್ರಕರಣಗಳಿದ್ದವು, 2020ರಲ್ಲಿ 1,274 ಪ್ರಕರಣಗಳು ವರದಿಯಾಗಿವೆ.
ವಣ್ಣಿಯಾರ್ಸ್ ಮೇಲ್ವರ್ಗಕ್ಕೆ ಸೇರಿದ 20 ಜನರ ಗುಂಪು ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ದಲಿತ ಯುವಕರನ್ನು ಕೊಂದಿರುವ ಘಟನೆ ಕಳೆದ ಅಂಬೇಡ್ಕರ್ ಜಯಂತಿಯದ್ದು ನಡೆದುಹೋಯಿತು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆಗೆ ಸರಿಯಾದ ಕ್ರಮ ಜರುಗಿಸದ ಕಾರಣ ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚು ಸಫಾಯಿಗಳು ತಮಿಳುನಾಡಿನಲ್ಲೇ ಸಾವನ್ನಪ್ಪಿದ್ದಾರೆ ಎನ್ನುತ್ತದೆ ವರದಿ. 1993ರಿಂದ 2019ರವರೆಗೆ ದೇಶದ 18 ರಾಜ್ಯಗಳಲ್ಲಿ ಎಷ್ಟು ಸಫಾಯಿಗಳು ಸಾವನ್ನಪ್ಪಿದ್ದಾರೆಂದು ಸರ್ಕಾರ ಸಮೀಕ್ಷೆ ನಡೆಸಿದಾಗ 206 ಮಂದಿ ಸಫಾಯಿಗಳು ತಮಿಳುನಾಡಿನಲ್ಲಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇತರೆ ರಾಜ್ಯಗಳಿಗೆ ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿರಿ: ದಲಿತ್ ಫೈಲ್ಸ್: ತಮಿಳುನಾಡಿನಲ್ಲಿ ಅರ್ಚಕರಾಗಿ ನೇಮಕವಾದ ಅಬ್ರಾಹ್ಮಣರಿಗೆ ಬ್ರಾಹ್ಮಣರಿಂದ ಕಿರುಕುಳ
ತಮಿಳುನಾಡು ಸರ್ಕಾರವೇನೋ ಬ್ರಾಹ್ಮಣೇತರರಿಗೆ ಅರ್ಚಕರಾಗುವ ಅವಕಾಶ ದೊರಕಿಸಿ ಕೊಟ್ಟಿತು. ಆದರೆ ಅರ್ಚಕರಾದ ಬ್ರಾಹ್ಮಣೇತರರು ನಿತ್ಯವೂ ಕಿರುಕುಳ ಅನುಭವಿಸಿದರು. ಬಹುತೇಕರು ಅರ್ಚಕರ ವೃತ್ತಿಯನ್ನೇ ತ್ಯಜಿಸಿದರು ಎಂದು ಇತ್ತೀಚಿಗೆ ‘ನ್ಯೂಸ್ ಲಾಂಡ್ರಿ’ ವರದಿ ಮಾಡಿತ್ತು.
ಶಾಲೆಗಳಲ್ಲಿ ಜಾತಿ ಸೂಚಕ ಬಣ್ಣದ ರಿಸ್ಟ್ ಬ್ಯಾಂಡುಗಳು ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಬೆಳೆಸುತ್ತಿವೆ. ಜಾತಿ ಹೆಮ್ಮೆಯ ಕಾರಣಕ್ಕೆ ಹಿಂದಿನಿಂದಲೂ ಮಕ್ಕಳು ನಿರ್ದಿಷ್ಟ ಜಾತಿ ಸೂಚಕ ಬಣ್ಣದ ಬ್ಯಾಂಡ್‌ಗಳನ್ನು ಕೈಗಳಿಗೆ ಧರಿಸುತ್ತಾರೆ. ಅದು ಶಾಲೆಗಳಲ್ಲಿ ತಮ್ಮದೇ ಜಾತಿಯ ಇತರರನ್ನು ಗುರುತಿಸಲು, ಅವರೊಂದಿಗೆ ಸ್ನೇಹ ಬೆಳೆಸಲು, ಆಟ ಆಡಲು, ಊಟ ಮಾಡಲು ಗುರುತಾಗುತ್ತದೆ. ಇನ್ನು ಶಿಕ್ಷಕರಿಗೆ ಪ್ರಶ್ನೆ ಕೇಳಲು ಅಥವಾ ಯಾವುದೇ ಕೆಲಸಕ್ಕೆ ಅನುಮತಿ ಪಡೆಯಲು ಮಕ್ಕಳು ಕೈ ಎತ್ತಿದರೆ ಶಿಕ್ಷಕರಿಗೆ ಆ ವಿದ್ಯಾರ್ಥಿ ಯಾವ ಜಾತಿಗೆ ಸೇರಿದವನು ಎಂದು ಸುಲಭವಾಗಿ ತಿಳಿದುಬಿಡುತ್ತದೆ. ಇದು ಕೂಡಿ ಬಾಳುವ ಸೌಹಾರ್ದ ಸಂಸ್ಕೃತಿಗೆ ವಿರುದ್ಧದ ಅನಿಷ್ಟ
ಆಚರಣೆಯಾಗಿದೆ. ಇದನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಇದನ್ನೂ ಓದಿರಿ: ಬಣ್ಣದ ರಿಸ್ಟ್ ಬ್ಯಾಂಡುಗಳ ಮೂಲಕ ತಮಿಳುನಾಡು ಶಾಲೆಗಳಲ್ಲಿ ಮಾರಕವಾದ ಜಾತಿ ತಾರತಮ್ಯ!
ಜನಪರ ಕೆಲಸಗಳನ್ನು ಮಾಡುತ್ತಿರುವ ತಮಿಳುನಾಡು ಸರ್ಕಾರ, ಇಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು. ಪೆರಿಯಾರ್ ಥರದ ಮಹನೀಯರು ನೆಡೆದಾಡಿದ ನೆಲದಲ್ಲಿ ಮೌಢ್ಯಗಳು ತೊಗಲಬೇಕು. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ದೊರಕುವಂತಾಗಬೇಕು.
ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸದ್ಯಕ್ಕೆ ಜನಮಾನಸಕ್ಕೆ ಲಗ್ಗೆ ಇಡುತ್ತಿರುವ ಸ್ಟಾಲಿನ್, ತಮಿಳುನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ತಮ್ಮ ಕೈಲಾದ ಮಟ್ಟಿಗೆ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಕ್ರಾಂತಿ ರಾತ್ರಿ ಬೆಳಗಾಗುವುದರೊಳಗೆ ಆಗುವುದು ಅಸಾಧ್ಯ. ಈ ಪೋಸ್ಟ್ ಟ್ರೂತ್ ಕಾಲದಲ್ಲಂತೂ ಬದಲಾವಣೆಗೆ ಹೆಚ್ಚಿನ ಶ್ರಮವಂತೂ ಅಗತ್ಯ.
(ಟಿಪ್ಪಣಿ: ಈ ಲೇಖನದ ಹಲವು ಅಂಶಗಳನ್ನು ಇದೇ ವೆಬ್‌ಸೈಟ್‌ನಲ್ಲಿ 2021ರ ಅಕ್ಟೋಬರ್ 24ರಂದು ಪ್ರಕಟಿಸಲಾಗಿದೆ. ಆದರೆ ಲೇಖನವನ್ನು ಪರಿಷ್ಕರಿಸಲಾಗಿದೆ.)



ಹಗರಣಗಳ ಸರದಾರ ಸ್ಟಾಲಿನ್ ಮುಂದೆ ತಮಿಳುನಾಡು ಚುನಾವಣೆಯಲ್ಲಿ ಸಹ ಗೆಲ್ಲುವ ಅನುಮಾನ ಇರುವಾಗ ,ರಾಷ್ಟ್ರ ರಾಜಕೀಯದ ಆಸೆ ಕನಸು ಮಾತ್ರವೇ