ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಪಕ್ಷದ ಚುನಾವಣಾ ಅಭಿಯಾನವನ್ನು ಪ್ರಾರಂಭಿಸುತ್ತಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯಾನಿಧಿ ಸ್ಟಾಲಿನ್ ಅವರನ್ನು ಶುಕ್ರವಾರ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಎಐಎಡಿಎಂಕೆ ಸರ್ಕಾರದ ಆಡಳಿತದ ತಪ್ಪುಗಳನ್ನು ಬೆಟ್ಟುಮಾಡುತ್ತಾ, ಡಿಎಂಕೆ ಯುವ ವಿಭಾಗದ ನಾಯಕ ಉದಯಾನಿಧಿ ಸ್ಟಾಲಿನ್, ಪಕ್ಷದ ಹಿರಿಯ ನಾಯಕರೊಂದಿಗೆ 75 ದಿನಗಳ ಅಭಿಯಾನವನ್ನು ಪ್ರಾರಂಭಿಸಿದರು. “ರಾಜಕೀಯ ಸಭೆಗಳಿಗೆ ಯಾವುದೇ ಅನುಮತಿಗಳಿಲ್ಲ” ಹಾಗಾಗಿ ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ದ್ರಾವಿಡ ಮುನ್ನೆತ್ರ ಕಳಗಂ (ಡಿಎಂಕೆ) ಪಕ್ಷದ 15 ಹಿರಿಯ ನಾಯಕರು ಎಲ್ಲಾ 234 ಕ್ಷೇತ್ರಗಳಲ್ಲಿ, 75 ದಿನಗಳಲ್ಲಿ 1,500 ಸಭೆಗಳನ್ನು ಮಾತನಾಡಲಿದ್ದಾರೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ನೆಹರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ’ಇ-ವಾಣಿಜ್ಯ’ ಸಂಸ್ಥೆಗಳಲ್ಲಿನ ಹಿಂದುಳಿದ ವರ್ಗಗಳ ಯುವಕರಿಗೆ ಬೈಕ್ ಕೊಳ್ಳಲು 25 ಸಾವಿರ ಸಹಾಯ ಧನ!
' #விடியலைநோக்கி_ஸ்டாலினின்குரல்' பிரச்சார பயணத்தின் முதல் நாளிலேயே கிடைத்த எழுச்சி பொறுக்காமல் அடிமை அதிமுக அரசு என்னை கைது செய்தது. எனது கைதிற்கு எதிரான தமிழக மக்களின் கொந்தளிபப்புக்கு அஞ்சி தற்போது விடுவித்துள்ளது. எனது பிரச்சார பயணத்தை திட்டமிட்டபடி தொடர்கிறேன்; தொடர்வேன். pic.twitter.com/6cZJqW7mge
— Udhay (@Udhaystalin) November 20, 2020
ಬಂಧನದ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಉದಯಾನಿಧಿ ಸ್ಟಾಲಿನ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ಪಕ್ಷದ ಮೊದಲ ದಿನದ ಅಭಿಯಾನವನ್ನು ಸಹಿಸದ ಕಾರಣ ಗುಲಾಮ ಎಐಎಡಿಎಂಕೆ ಸರ್ಕಾರವು ನನ್ನನ್ನು ಬಂಧಿಸಿತ್ತು. ನನ್ನ ಬಂಧನದ ವಿರುದ್ಧ ತಮಿಳುನಾಡಿನಲ್ಲಿ ಅಶಾಂತಿ ಉಂಟಾಗುವ ಭಯದಿಂದ ಈಗ ನನ್ನ ಬಿಡುಗಡೆಯಾಗಿದೆ. ನಾನು ಯೋಜಿಸಿದಂತೆ ನನ್ನ ಪ್ರಚಾರ ಪ್ರಯಾಣವನ್ನು ಮುಂದುವರಿಸುತ್ತೇನೆ” ಎಂದು ಉದಯಾನಿಧಿ ಸ್ಟಾಲಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ, ಪಕ್ಷದ ಮಾಜಿ ಮುಖ್ಯಸ್ಥ ಎಂ.ಕರುಣಾನಿಧಿಯವರ ಜನ್ಮಸ್ಥಳವಾದ ತಿರುವರೂರು ಜಿಲ್ಲೆಯ ತಿರುಕ್ಕುವಲೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, “ಆವರಿಸಿರುವ ಕತ್ತಲೆಯನ್ನು ಕೊನೆಗೊಳಿಸಲು ತನ್ನ ತಂದೆಯ ಸಂದೇಶವನ್ನು ತಮಿಳುನಾಡು ರಾಜ್ಯದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ಅಭಿಯಾನಕ್ಕೆ ಹೊರಟಿದ್ದೇನೆ ಎಂದು ಹೇಳಿದ್ದರು.


