ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ತಮ್ಮ ವಕೀಲರನ್ನು ಭೇಟಿಯಾಗಲು, ಜಾಮೀನು ನೀಡಲು ಅನುಕೂಲವಾಗುವಂತೆ ಅರ್ಜಿಗೆ ಸಹಿ ಹಾಕಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿತು. ಜೊತೆಗೆ ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾದ ರೀತಿಗೆ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ.
ಸಿಜೆಐ ಎಸ್.ಎ.ಬೊಬ್ಡೆ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕಪ್ಪನ್ ಬಂಧನದ ವಿರುದ್ಧ ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ) ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿತು.
ಹತ್ರಾಸ್‌ನ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವರದಿ ಮಾಡಲು ಅಕ್ಟೋಬರ್ 5 ರಂದು ಉತ್ತರಪ್ರದೇಶಕ್ಕೆ ತೆರಳಿದ್ದ, ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಪರ್ತಕರ್ತ ಸಿದ್ದೀಕ್ ಕಪ್ಪನ್ ಅವರನ್ನುಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಕಪ್ಪನ್ ತನ್ನ ವಕೀಲರನ್ನು ಭೇಟಿಯಾಗುವುದರಲ್ಲಿ ತಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ ನಂತರ, KUWJ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಕಪ್ಪನ್ ಅವರನ್ನು ಭೇಟಿಯಾಗಲು ಅವಕಾಶ ನೀಡಿತು.
ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ
“ಯಾವುದೇ ಆಕ್ಷೇಪಣೆ ಇರಲಿಲ್ಲ ಮತ್ತು ಯಾವುದೇ ಆಕ್ಷೇಪಣೆ ಕೂಡ ಇಲ್ಲ” ಎಂದ ಎಸ್.ಪಿ. ಮೆಹ್ತಾ ಅವರು ಕಪ್ಪನ್ ಅವರ ವಕೀಲರನ್ನು ಭೇಟಿಯಾಗಲು ಅನುಮತಿ ನೀಡಿಲ್ಲ ಎಂಬ ಆರೋಪವನ್ನು ನಿರಾಕರಿಸಿದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ವಾರಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿರುವಂತೆ ಉತ್ತರಪ್ರದೇಶ ಸರ್ಕಾರವು ನ್ಯಾಯಾಂಗ ಬಂಧನದಲ್ಲಿರುವ ಕಪ್ಪನ್‌ಗೆ ಸಂಬಂಧಿಕರು ಅಥವಾ ವಕೀಲರೊಂದಿಗೆ ಮಾತನಾಡಲು ಅನುಮತಿ ಇಲ್ಲ ಎಂಬುದು “ಸಂಪೂರ್ಣ ಸುಳ್ಳು ನಿರೂಪಣೆ” ಎಂದು ಯುಪಿ ಸರ್ಕಾರ ಹೇಳಿದೆ. ಸಿದ್ದೀಕ್ ಕಪ್ಪನ್, ಲಿಖಿತ ಕೋರಿಕೆಯ ಮೇರೆಗೆ ಫೋನ್ ಮಾಡಿ ಮೂರು ಬಾರಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಿದ್ದರು ಎಂದು ಹೇಳಿದೆ.
“ಆರೋಪಿ ಸಿದ್ದೀಕ್ ಕಪ್ಪನ್ ಯಾವುದೇ ಸಂಬಂಧಿ ಅಥವಾ ಯಾವುದೇ ವಕೀಲರನ್ನು ಭೇಟಿಯಾಗಲು ಎಂದಿಗೂ ವಿನಂತಿಸಿಲ್ಲ ಅಥವಾ ಇಲ್ಲಿಯವರೆಗೆ ನ್ಯಾಯಾಲಯ / ಜೈಲು ಅಧಿಕಾರಿಗಳ ಮುಂದೆ ಅಂತಹ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ” ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.
ಕಪ್ಪನ್ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (CFI) ಇಬ್ಬರು ಸದಸ್ಯರು ಹತ್ರಾಸ್ ಅತ್ಯಾಚಾರದ ಬಗ್ಗೆ ಧಾರ್ಮಿಕ ದ್ವೇಷವನ್ನು ಉಂಟುಮಾಡುವ “ಪಿತೂರಿಯ” ಭಾಗವಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ ಮತ್ತು ಕಠಿಣ ಯುಎಪಿಎ ಮತ್ತು ದೇಶದ್ರೋಹ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಿದ್ದಾರೆ.
ಇದನ್ನೂ ಓದಿ: ಯುಪಿ ಸರ್ಕಾರ ಬಂಧಿಸಿದ ಕೇರಳದ ಪತ್ರಕರ್ತನಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ!
