ಸಮ್ಮಿಶ್ರ ಸರ್ಕಾರದ ಶಾಸಕರ ರಾಜಿನಾಮೆಯ ಪ್ರಹಸನ ಈಗ ವಿಧಾನಸಭೆಯ ಅಂಗಳಕ್ಕೆ ಬಂದಿದ್ದು ಚರ್ಚೆ ನಡೆಯುತ್ತಿದೆ. ಬಿಜೆಪಿಯವರಿಗೆ ವಿಶ್ವಾಸ ಮತಯಾಚನೆಯ ಪ್ರಕ್ರಿಯೆ ಬೇಗ ನಡೆಯಬೆಕೆಂಬ ಕಾತರವಾದರೆ, ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈ ದಿನ ಕಳೆದರೆ ಎರಡು ದಿನ ಸಮಾಯಾವಕಾಶ ಸಿಗುವುದರಿಂದ ಮುಂದೆ ತಮ್ಮ ಸರ್ಕಾರ ಉಳಿಸಿಕೊಳ್ಳಬಹುದೆಂಬ ಯೋಚನೆ.
ಬಿಜೆಪಿಯ ಆಪರೇಷನ್ ಕಮಲದಂತಹ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಹಲವರು ಮಾತಾಡಿದ್ದರು. ಈ ಸಂದರ್ಭದಲ್ಲಿ ಅರಸಿಕೆರೆಯ ಶಾಸಕ ಶಿವಲಿಂಗೇಗೌಡರವರು ಹಾಸ್ಯ ಮಿಶ್ರಿತವಾಗಿ ರಾಜಕೀಯದ ಇತಿಹಾಸವನ್ನು ನೆನಪಿಸುತ್ತಾ ಸಭೆಯನ್ನು ಉದ್ದೇಶಿ ಮಾತನಾಡಿದರು. ತಮ್ಮ ಇಂಗ್ಲೀಷ್ ಭಾಷೆಯ ಜ್ಞಾನದ ಬಗ್ಗೆ ಕೆಣಕಿದಾಗ ನಾನು ಇಂಗ್ಲಿಷ್ ನಲ್ಲಿ ಪ್ರವೀಣನಲ್ಲ. ನನಗೆ ಬರುವ ಇಂಗ್ಲಿಷ್ ನಲ್ಲಿ ಬಾಂಬೆಯಲ್ಲಿ ಮಾತಾಡಿದ್ದೆ. ಇಲ್ಲಿ ಕನ್ನಡದಲ್ಲಿ ಮಾತಾನಾಡುತ್ತೇನೆ ಅದರ ಬಗ್ಗೆ ತಾವು ಚಿಂತೆ ಮಾಡಬೇಡಿ ಎಂದು ಹೇಳುತ್ತಲೆ ಭಾಷಣ ಆರಂಭಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಕೀಯ ನಾಟಕವನ್ನ ನೋಡಿ ಜನ ಚೀ ತೂ ಎಂದು ಉಗಿಯುತ್ತಿದ್ದಾರೆ. ನೇರವಾಗಿ ಯಾರಿಗೆ ಉಗಿಯುತ್ತಿದ್ದಾರೆ ಎಂಬುದನ್ನು ನೀವೆ ಊಹಿಸಿಕೊಳ್ಳಬಹದು ಎಂದರು. ಅತೃಪ್ತ ಶಾಸಕರೇ ನಮ್ಮನ್ನ ಬಾಂಬೆಗೆ ಬನ್ನಿ ಅಂದಿದ್ದರು. ಅದರಲ್ಲಿ ಗೋಪಾಲಯ್ಯನವರೇ ಫೋನ್ ಮಾಡಿದ್ದರು. ಅದಕ್ಕಾಗಿ ನಾವು ಹೋದೆವು.
ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡಿದ್ದರೂ, ನಮಗೆ ಸ್ನಾನ ಮಾಡೋಕೆ ಬಿಟ್ಟಿಲ್ಲ. ಅಲ್ಲಿ ಬಿಜೆಪಿನ ಸರ್ಕಾರ ಇದೆ. ಹೋಗಿರೋದು ನಾಲ್ಕು ಜನ ನೀವು ಹೇಂಗಯ್ಯ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಆದರೆ ನಾವು ಡಿಕೆಶಿ ಮಳೆಯಲ್ಲಿಯೇ ಟೀ ಕುಡಿದು, ತಿಂದಿ ತಿಂದು ಬಂದೆವು. ಇದಕ್ಕೆ ಯಾರನ್ನು ನಾವು ಕೇಳಬೇಕು? ಏನು ಮಾಡುತ್ತಿದೆ ಸೆಂಟ್ರಲ್ ಗರ್ಮೆಂಟು. ಏನ್ ಮಾಡ್ತಿದ್ದಾರೆ ಗೃಹ ಸಚಿವರು.
ನಾವು ಇಬ್ಬರು ಸಚಿವರು, ಇಬ್ಬರು ಶಾಸಕರು ಹೋದರೆ ಬಂದು ಮಾತಾಡಿಸುವಷ್ಟು ಸೌಜನ್ಯ ಇಲ್ಲ ಅಲ್ಲಿನ ಸರ್ಕಾರಕ್ಕೆ. ಆ ಹೋಟೆಲ್ ನ ಒಳಗೆ ಬಿಜೆಪಿ ಸಚಿವರು, ಶಾಸಕರು ತುಂಬಿಕೊಂಡಿದ್ದರು. ಈ ಆಟಕ್ಕೆ, ಈ ಕುತಂತ್ರಕ್ಕೆ, ಈ ಘನಕಾರ್ಯಕ್ಕೆ ಕನ್ನಡಿ ಬೇರೆ ಬೇಕಾ ಬಿಜೆಪಿಯವರೆ? ಭಾರೀ ಭಾರೀ ಬೇಕಲ್ವ ಕನ್ನಡಿ ನಿಮಗೆ? ಸಮ್ಮಿಶ್ರ ಸರ್ಕಾರ ಕೆಟ್ಟ ಕೆಲಸ ಮಾಡಿದ್ದರೆ, ಅಪವಿತ್ರ ಕೆಲಸ ಆಗಿದ್ದರೆ ಅದರ ಬಗ್ಗೆ ಚರ್ಚೆಗಿಡಿ. ಅದನ್ನು ಬಿಟ್ಟು ಯಾಕೆ ರಾಜೀನಾಮೆ ಕೊಡಿಸಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇವತ್ತು ನಮ್ಮ ನಾಯಕರಾದ ಕುಮಾರಸ್ವಾಮಿಯವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಿಂದ ವಿಮುಕ್ತರಾಗಬೇಕು. ಯಾವ 15 ಜನ ಶಾಸಕರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಈ ಸದನದಿಂದ ಅವರಿಗೆ ನಾವು ಕೇಳಬೇಕು? ಈ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಲಿಲ್ಲವೇ? ಅನುದಾನ ಸಿಕ್ಕಲಿಲ್ಲವೇ? ಅದಕ್ಕೆ ಈ ಸದನದ ಮೂಲಕ ಜನರಿಗೆ ನಾವು ಉತ್ತರ ಕೊಡಬೇಕಿದೆ.
ಅದಕ್ಕೆ ನಾವು ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಬೇಕಿದೆ. ಇನ್ನು ಸಮ್ಮಿಶ್ರ ಸರ್ಕಾರ ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆಯೇ? ಬೇರೆ ರಾಜ್ಯಗಳಲ್ಲಿ ಇಲ್ಲವೇ? ಗೋವಾದಲ್ಲಿ ಬಿಜೆಪಿಯವರು ಕಡಿಮೆ ಸ್ಥಾನದಲ್ಲಿದ್ದರು ಅವರು ಮುಖ್ಯಮಂತ್ರಿಯಾಗಲಿಲ್ಲವೇ? ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಇವೆ ಅಲ್ಲವೇ? ಕೇವಲ 37 ಇರುವವರಿಗೆ 80 ಜನ ಇರುವವರು ಮುಖ್ಯಮಂತ್ರಿ ಸ್ಥಾನ ಕೊಟ್ಟುಬಿಟ್ಟಿದ್ದಾರೆ ಎಂದು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬೇಕು. ಅದಕ್ಕೆ ಸಮಯ ಬೇಕಿದೆ. ಈ ದೇಶದಲ್ಲಿ ಇದು ಒಂದೇ ಸರ್ಕಾರವೇ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ವಾಜಪೇಯಿಯವರ ಸರ್ಕಾರ ಇದೇ ರೀತಿಯ ಬಿಕ್ಕಟ್ಟು ಇದ್ದಾಗ 10 ತಿಂಗಳ ಕಾಲ ಚರ್ಚೆಯಾಯಿತು ಎಂಬುದು ನೆನಪಿಸಿಕೊಟ್ಟರು.
ಹಳ್ಳಿಯ ಗ್ರಾಮ್ಯ ಭಾಷೆಯಲ್ಲಿ ಮುಂದುವರೆಸಿದ ಅವರು ಹಳ್ಳಿಯ ಕಡೆ ಎತ್ತುಗಳನ್ನು ಮಾರಿದರೆ ಚೀಟಿಕೊಡುತ್ತಾರೆ ಆದರೆ ಶಾಸಕರನ್ನು ಕರೆದುಕೊಂಡರೆ ಅದೇನು ಕೊಡೋದೇ ಇಲ್ಲ ಅದಕ್ಕಿಂತ ಕಡೆಯಾಗಿ ಹೋಗಿದ್ಧಾರೆ ಶಾಸಕರು ಎಂದರು. ಬಿಜೆಪಿ ಮಾಡುತ್ತಿರುವ ಎಲ್ಲಾ ಕುತಂತ್ರಗಳಿಗೂ ಯಾವ ಕನ್ನಡಿಯೂ ಬೇಕಿಲ್ಲ ಜನರಿಗೆಲ್ಲ ತಿಳಿದಿದೆ. ನಾನು ಮುಖ್ಯಮಂತ್ರಿ ಯವರ ಸ್ಥಾನ ಉಳಿದರೆ ತಿರುಪತಿಗೆ ಒಂದು ಕೋಟಿ ಕೊಡುವುದಾಗಿ ಬೇಡಿಕೊಂಡು ಹೊರಬಂದೆ ಒಂದು ಗುಳ್ಳೆನರಿ ಎಡದಿಂದ ಬಲಕ್ಕೆ ಹೋಯಿತು ನಾನು ಒಳ್ಳೆಯದಾಗುತ್ತದೆ ಅಂದುಕೊಂಡೆ ಆದರೆ ನಮ್ಮ ಸ್ನೇಹಿತರಿಗೆ ಪೋನಾಯಿಸಿದರೆ ಎಮ್.ಟಿ.ಬಿ ನಾಗರಾಜ್ ಗುಳ್ಳೆನರಿ ತರ ತಪ್ಪಿಸಿಕೊಂಡಿದ್ದರು ಎಂದು ಹೇಳುವ ಮೂಲಕ ಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಸಂಧರ್ಭದಲ್ಲಿ ಸದಸ್ಯರನ್ನ ಕಿಡ್ನಾಪ್ ಮಾಡೋತರ ಶಾಸಕರನ್ನ ಕಿಡ್ನಾಪ್ ಮಾಡಿದ್ದಾರೆ. ಶಾಸಕ ಶ್ರೀಮಂತ್ ಪಾಟೀಲ್ ಗೆ ಆರೋಗ್ಯ ಸರಿಯಿಲ್ಲ ಅಂತ ಅಡ್ಮಿಟ್ ಮಾಡಿದ ಹಾಗೆ ಎಲ್ಲಾ 15 ಅತೃಪ್ತ ಶಾಸಕರನ್ನು ಅಡ್ಮಿಟ್ ಮಾಡಬೇಕಿತ್ತು ಎಂದರು. ಪ್ರತಿ ಬಾರಿ ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬವನ್ನು ಹೇಳುತ್ತೀರಿ, ಕುಟುಂಬ ರಾಜಕಾರಣವಿಲ್ಲದ ಒಂದಾದರೂ ರಾಜಕೀಯ ಪಕ್ಷವಿದ್ದರೆ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷದವರನ್ನು ಆಹ್ವಾನಿಸಿದರು.
ಇನ್ನು ಸರ್ಕಾರ ಇವತ್ತು ಬಿದ್ದೋಯಿತು, ನಾಳೆ ಬಿದ್ದೋಯಿುತು, ಢಮಾರ್ ಅಂತ ಎಲ್ಲ ಚರ್ಚೆ ಮಾಡ್ತೀರಿ ಏನ್ರಿ ಇದು. ನಾವು ಒಂದು ಪಕ್ಷದ ಚಿಹ್ನೆಯ ಕೆಳಗೆ ಗೆದ್ದರೆ ಅದು ನಮಗೆ ತಾಯಿ ಇದ್ದ ಹಾಗೆ. ಆ ಅತೃಪ್ತರು ನಾವು ಕಾಂಗ್ರೇಸ್ ಅಲ್ಲೇ ಇದ್ದೇವೆ ಮುಖ್ಯಮಂತ್ರಿಗಳಿಗೆ ವಿರೋಧ ಎಂದು ಹೇಳುತ್ತಾರೆ. ಆದರೆ ಬನ್ನಿ ಹದಿನೈದು ಜನ ಶಾಸಕರ ಕ್ಷೇತ್ರಕ್ಕೆ ಕೊಟ್ಟ ಅನುದಾನದ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು .
ಬೇರೆ ಸಮಯದಲ್ಲಿ ನಾವು ಮಾತಾಡಲು ಇಷ್ಟು ಸಮಯ ನೀವು ಕೊಡಲ್ಲ. ಇವತ್ತು ನಾನು ಏನು ಮಾತನಾಡಿದರು ಸುಮ್ಮನೆ ಇರುತ್ತೀರಿ ಅದಕ್ಕೆ ನಾನು ಚಚ್ಚುತ್ತಿದ್ದೀನಿ ಎಂದು ಹೇಳಿ ಸಭೆಯನ್ನು ನಗೆ ಗಡಲಲ್ಲಿ ತೇಲಿಸಿದರು.


