Homeಮುಖಪುಟಶಿಕ್ಷಣವನ್ನು ವೇಗವಾಗಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರುತ್ತಿದೆ; ರಮೇಶ್ ಪಟ್ನಾಯಕ್

ಶಿಕ್ಷಣವನ್ನು ವೇಗವಾಗಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರುತ್ತಿದೆ; ರಮೇಶ್ ಪಟ್ನಾಯಕ್

- Advertisement -
- Advertisement -

ಬಿಜೆಪಿ ಸತತವಾಗಿ ಎರಡನೆ ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ ಆಳ್ವಿಕೆಯ ಕಾಲದಲ್ಲಿ ಶಿಕ್ಷಣ ನೀತಿಯ ಮೇಲೆ ಸುಬ್ರಮಣೀಯನ್ ಕಮಿಟಿಯನ್ನು ನೇಮಿಸಿ ಅದು ನೀಡಿದ ವರದಿಯನ್ನು ಪಡೆದುಕೊಂಡು ಸುಮ್ಮನೆ ಇಟ್ಟುಕೊಂಡಿತ್ತು. ಮತ್ತೆ 2017 ಜೂನ್‍ನಲ್ಲಿ ಪ್ರಸ್ತುತ ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಿತು. ಈ ಕಮಿಟಿ 2018 ಡಿಸೆಂಬರ್ 15ರಂದು(ಚುನಾವಣೆಗೂ ಮುಂಚೆ) ಸರ್ಕಾರಕ್ಕೆ ತಲುಪಿಸಿದರೂ ಸಹ ಸರ್ಕಾರ ಮಾತ್ರ ಸುಮಾರು ಆರು ತಿಂಗಳ ನಂತರ ಚುನಾವಣೆಯ ನಂತರ 2019 ಮೇ 31ರಂದು ಬಿಡುಗಡೆ ಮಾಡಿತು.

ಆಶ್ಚರ್ಯಕರವಾದ ವಿಷಯವೇನೆಂದರೆ ತಯಾರಾದ ವರದಿಯನ್ನು ಬಿಡುಗಡೆ ಮಾಡಲು ಆರು ತಿಂಗಳು ತೆಗೆದುಕೊಂಡ ಸರ್ಕಾರ , ಜನಸಾಮಾನ್ಯರಿಗೆ ಮಾತ್ರ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಒಂದು ತಿಂಗಳು ಮಾತ್ರ ಕಾಲಾವಕಾಶ ನೀಡಿತು. ಈ ವರದಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಲಭ್ಯವಿದೆ. ಕನಿಷ್ಠ ತೆಲುಗು ತಮಿಳು , ಕನ್ನಡದಂತಹ ಷೆಡ್ಯೂಲ್ ಭಾಷೆಗಳಲ್ಲಿಯೂ ಸಹ ಲಭ್ಯವಿಲ್ಲ. ವರದಿಯನ್ನು ಎಲ್ಲಾ ಭಾಷೆಗಳಲ್ಲೂ ಅನುವಾದ ಮಾಡಲೂ ಕನಿಷ್ಟ ಮೂರು ತಿಂಗಳ ಸಮಯ ನೀಡಬೇಕೆಂದು ದೇಶದ್ಯಾಂತ ಅನೇಕ ಶಿಕ್ಷಣಕ್ಷೇತ್ರದ ಸಂಸ್ಥೆಗಳು ಸರ್ಕಾರಕ್ಕೆ ಆಗ್ರಹಿಸಿವೆ. ಆದರೆ ಸರ್ಕಾರ ಏನು ಮಾಡುತ್ತದೆಯೋ ಕಾದು ನೋಡಬೇಕಿದೆ.

ಕಸ್ತೂರಿ ರಂಗನ್ ಸಮಿತಿ, ಅದು ರೂಪಿಸಿದ ವರದಿಗೆ ‘ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟು 2019’ ಎಂದು ಹೆಸರಿಟ್ಟರೂ ಅದು ನಿಜಕ್ಕೆ ಅದು ಚೌಕಟ್ಟಿನ ವಿಧಾನವಲ್ಲ. ಅದು ಶಿಕ್ಷಣ ರಂಗದ ಅಭಿವೃದ್ಧಿಯ ಮೇಲೆ ಒಂದು ವರದಿ ಮಾತ್ರ. ಒಂದು ಕಡೆ ಶಿಕ್ಷಣ ವ್ಯಾಪಾರದ ಬಗ್ಗೆ ಅಸ್ಫಷ್ಟತೆ, ಮತ್ತೊಂದು ಕಡೆ ತೀವ್ರವಾದ ಅಧಿಕಾರ ಕೇಂದ್ರಿಕರಣ ಈ ವರದಿಯಲ್ಲಿ ಪ್ರಧಾನವಾಗಿ ಕಾಣಿಸುತ್ತಿದೆ. ಅಧಿಕಾರ ಕೇಂದ್ರಿಕರಣ ಅತ್ತ ಮಾರುಕಟ್ಟೆಗೆ ಇತ್ತ ಮನುವಾದ ನವೀಕರಣಕ್ಕೆ ಹೆಚ್ಚು ಅವಶ್ಯಕ ಎಂಬ ವಿಷಯ ತಿಳಿದಿರುವುದೆ ಆಗಿದೆ.

ಈ ವರದಿಯಲ್ಲಿ ಶಿಕ್ಷಣನೀತಿ ವ್ಯಾಖ್ಯಾನದಲ್ಲಿಯೇ ಒಂದು ವಕ್ರಮಾರ್ಗ ಕಾಣಿಸುತ್ತಿದೆ. ಸಂವಿಧಾನದ ಮೌಲ್ಯಗಳನ್ನು ನೀಡುವ ಶಿಕ್ಷಣ ಎಂದು ಸೂಚಿಸಿದಾಗ್ಯೂ ಜಾತ್ಯತೀತ, ಸಮಾಜವಾದ ಎನ್ನುವ ಪದಗಳು ಒಟ್ಟಾರೆ ವರದಿಯಲ್ಲೇ ಕಾಣಿಸಲಿಲ್ಲ. ಪ್ರಸ್ತುತ ಆಡಳಿತಪಕ್ಷ ಬಿ.ಜೆ.ಪಿ ಆ ಪದಗಳನ್ನು ಸಂವಿಧಾನದಿಂದಲೇ ತೆಗೆದುಹಾಕಬೇಕೆಂದು ನೋಡುತ್ತಿರುವುದು ತಿಳಿದ ವಿಷಯವೇ. ಸಾಮಾಜಿಕ ನ್ಯಾಯ ಎಂಬ ವಿಷಯವು ಸಹ ಒಂದು ನೀತಿ ಹೇಳಿಕೆಯಾಗಿ ಕಾಣಿಸದು.

ದೇಶದಲ್ಲಿನ ಭಾಷೆ, ಸಂಸ್ಕøತಿಗಳ ವೈವಿಧ್ಯತೆಯ ಬಗ್ಗೆ ಪ್ರಮುಖವಾಗಿ ನಿರ್ಧಿಷ್ಟಪಡಿಸಿದ ವರದಿಯ ಕೊನೆಗೆ ಸಂಸ್ಕøತ, ಹಿಂದಿಗಳನ್ನು ತಲೆಮೇಲೆ ಕೂರಿಸಿಕೊಂಡಿದೆ. ವರದಿ ಈ ದೇಶದ ಜನರ ಐಕ್ಯತೆಯನ್ನು ಅನೇಕ ಏಳುಬೀಳುಗಳಿಂದ ಕಾಪಾಡುತ್ತಾ ಬಂದಿರುವ ‘ಭಿನ್ನತೆಯಲ್ಲಿ ಏಕತೆ’ ಎಂಬ ಘೋಷವಾಕ್ಯವನ್ನು ಏಕೋ ಹೇಳಬಾರದ ವಿಷಯ ಎಂಬಂತೆ ನೋಡಿದೆ. ಸೂಕ್ಷ್ಮವಾಗಿ ನೋಡಿದರೆ ಸುಧಾರಣಾ ಚಳುವಳಿ, ಸ್ವಾತಂತ್ರ್ಯ ಚಳುವಳಿಯಿಂದ ಉದಯಿಸಿದ ಸಂವೇದನೆಗಳು, ಅಭಿವ್ಯಕ್ತಿ ಭಾವಗಳನ್ನು ಬಿಜೆಪಿಯ ರೀತಿಯಲ್ಲಿಯೇ ಈ ವರದಿ ತಿರಸ್ಕರಿಸಿದೆ.

ಪ್ರಾಚೀನ ನಾಗರೀಕತೆಯನ್ನು ಅದು ಸಾಧಿಸಿದ ವಿಜಯಗಳನ್ನು ಹೆಚ್ಚು ಹೊಗಳುವ ವರದಿ ಮಧ್ಯಯುಗೀನ ಇತಿಹಾಸ ಮತ್ತು ಅದು ಸಾಧಿಸಿದ ನಾಗರೀಕತೆಯ ಮೇಲೆ ಕಳ್ಳಗಣ್ಣು ಹಾಕಿದೆ. ಮಧ್ಯಯುಗದ ಇತಿಹಾಸವನ್ನು ಮುಸ್ಲೀಂ ಚರಿತ್ರೆಯಾಗಿ ನೋಡುವ ಸಂಘಪರಿವಾರದ ನೋಟವೇ ಈ ವರದಿಯಲ್ಲಿ ಕಾಣಿಸುತ್ತದೆ.

ಒಂದು ಶಿಕ್ಷಣ ನೀತಿಗೆ ಸಂಬಂಧಿಸಿದ ವರದಿಯನ್ನು ಪರಿಶೀಲಿಸಲು ಪ್ರಸ್ತುತ ಕಾಲದಲ್ಲಿ ಕೆಲವು ಮಾನದಂಡಗಳನ್ನು ಉಪಯೋಗಿಸಬೇಕಾಗುತ್ತದೆ. ಅವು 1) ಶಿಕ್ಷಣವ್ಯಾಪಾರ ನಿಷೇಧ, 2)ಜಾತಿ, ಧರ್ಮ, ಪ್ರಾಂತ್ಯ, ಲಿಂಗ, ಭಾಷಾ ಆಧಿಪತ್ಯವಾದಗಳ ನಿರಾಕರಣೆ, 3) ಶಿಕ್ಷಣ ವ್ಯಾಪಾರದ ಜಾಗತೀಕರಣ-ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಭಾರತ ಶಿಕ್ಷಣ ರಂಗವನ್ನು ಸೇರಿಸುವುದನ್ನು ವಿರೋಧಿಸುವುದು, ಒಕ್ಕೂಟ ಸ್ಪೂರ್ತಿಯನ್ನು ಹೊಂದಿರುವುದು. 5) ವಿದ್ಯಾರ್ಥಿಗಳ ಶಿಕ್ಷಕರ ಹಕ್ಕುಗಳು, ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಬೆಂಬಲ, 6)ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ, 7) ಪ್ರಾಥಮಿಕ ಹಂತದಲ್ಲಿ ಎಲ್ಲರಿಗೂ ಶಿಕ್ಷಣ, ಸಮಾನ ಗುಣಮಟ್ಟದ ಶಿಕ್ಷಣ , ಉನ್ನತ ಶಿಕ್ಷಣದ ಹಂತದಲ್ಲಿ ರಾಜ್ಯ ಆರ್ಥಿಕ ಸ್ಥಿತಿಯ ಮೇಲೆ ಸಾಮಾಜಿಕ ನ್ಯಾಯವನ್ನಾಧರಿಸಿ ಸಮಾನ ಅವಕಾಶಗಳನ್ನು ಕಲ್ಪಿಸುವುದು, 8) ಹಕ್ಕುಗಳ ಸ್ವಾಯತ್ತತೆಗೆ ಬೇಕಾದ ಸಂಪನ್ಮೂಲಗಳ ಜೋಡಣೆ, 9)ದೇಶ, ಭಾಷಾ ಸಂಸ್ಕøತಿಗಳೊಂದಿಗೆ ಇರುವ ವೈವಿದ್ಯತೆಯನ್ನು ಗಮನಿಸುವುದು ಗೌರವಿಸುವುದು , ಪ್ರಜಾತಾಂತ್ರಿಕಗೊಳಿಸುವುದು. 10) ವ್ಯಕ್ತಿ ವಿಕಾಸ, ಸಾಮಾಜಿಕ ಪ್ರಗತಿಯ ಗುರಿಗಳೊಂದಿಗೆ ಶಿಕ್ಷಣ ವಸ್ತು, ಪ್ರಕ್ರಿಯೆ, ರೂಪಕಲ್ಪನೆ 11) ಸರ್ಕಾರಗಳು ಶಿಕ್ಷಣಕ್ಕೆ ಅವಶ್ಯಕವಾದ ಅನುದಾನವನ್ನು ಅಂದರೆ ಕನಿಷ್ಠ ಜಿಡಿಪಿಯಲ್ಲಿ 6%ರಷ್ಟನ್ನು ನಿಗಧಿಪಡಿಸಬೇಕು. ಮೇಲೆ ಹೇಳಿದ ಪ್ರಶ್ನೆಗಳಿಗೆ ನೇರ ಉತ್ತರಗಳು ಈ ವರದಿಯಲ್ಲಿ ಬರಿಸುವುದೇ ಕಷ್ಟ. ಶಿಕ್ಷಣ ವ್ಯಾಪಾರದ ಮೇಲೆ ಈ ವರದಿ ತೆಗೆದುಕೊಂಡ ವಿಧಾನವನ್ನು ಮೊದಲಿಗೆ ಪರಿಶೀಲಿಸೋಣ.

ಶಿಕ್ಷಣ ವ್ಯಾಪಾರವನ್ನು ಈ ವರದಿ ತೀವ್ರವಾಗಿ ಖಂಡಿಸಿದೆ. ಆದರೆ, ಶಿಕ್ಷಣ ವ್ಯಾಪಾರ ನಿಷೇದಕ್ಕೆ ಅವಶ್ಯವಾದ ಶಿಫಾರಸ್ಸುಗಳನ್ನು ಮಾಡಲಾಗಿಲ್ಲ. ಪ್ರಸ್ತುತ ವರದಿಯ ವಿಷಯಕ್ಕೆ ಬಂದರೆ ಲಾಭ ಮಾಡಿಕೊಳ್ಳುವುದನ್ನು ಸಹ ಈ ವರದಿ ವಿರೋಧಿಸುತ್ತದೆ. ಈ ವರದಿಯ ಪ್ರಕಾರ ಲಾಭಾಪೇಕ್ಷೆ ಇಲ್ಲದ ಸಂಸ್ಥೆಗಳು (ನಾಟ್ ಫಾರ್ ಪ್ರಾಫಿಟ್ ಸಂಸ್ಥೆಗಳು) ಮಾತ್ರವೇ ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕು. ಅಂದರೆ ಫೀಸು ವಸೂಲಿ ಮಾಡಬಾರದು ಅಥವಾ ವಸೂಲು ಮಾಡಿದರೂ ಲಾಭ ಮಾಡಿಕೊಳ್ಳಬಾರದು. ಈ ಪ್ರತಿಪಾದನೆಯನ್ನು ಸರ್ಕಾರ ಅನುಮೋದಿಸುತ್ತದೆ ಎಂದು ಅಂದುಕೊಳ್ಳಲಾರೆವು. ಈ ಶಿಫಾರಸ್ಸನ್ನು ಅನುಮೋದಿಸಿ ನೀತಿ ಪತ್ರದಲ್ಲಿ ಈ ಅಂಶವನ್ನು ಸೇರಿಸಿದರು, ಜಾರಿಯಾಗುವ ವೇಳೆಗೆ ಯಾವುದಕ್ಕೂ ಬಾರದಂತಾಗುವಂತಾಗುತ್ತದೆ ಎಂದು ರುಜುವಾಗುತ್ತದೆ.

ಲಾಭಕ್ಕಾಗಿ ಅಲ್ಲದೆ ನಿರ್ವಹಣೆಗಾಗಿ ಶುಲ್ಕಗಳನ್ನು ವಸೂಲು ಮಾಡಿಕೊಳ್ಳಬಹುದು ಎನ್ನುವ ಒಂದು ಸಡಿಲಿಕೆ ಸಾಕು, ನಮ್ಮ ಶಿಕ್ಷಣ ವರ್ತಕರು ಸಾಧಿಸದೆ ಇರುವುದು ಏನು ಉಳಿಯಲಾರದು. ಇವರು ಚಿಕ್ಕ ಕಟ್ಟಿಕೆ ತುಂಡು ಸಿಕ್ಕರೂ ಸಹ ಸಪ್ತ ಸಮುದ್ರಗಳನ್ನು ದಾಟುತ್ತಾರೆ. ಶಾಲಾ, ಕಾಲೇಜುಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ‘ಫರ್ ಫ್ರಾಫಿಟ್’ ಸಂಸ್ಥೆಗಳು ಸ್ಥಾಪಿಸಬಾರದೆಂದು, ಸ್ವಯಂಸೇವಕ ಸಂಸ್ಥೆಗಳು ಮಾತ್ರವೇ ನಿರ್ವಹಿಸಬೇಕೆಂದು ನಿಬಂಧನೆ ವಿದಿಸಿದರೂ, ಅವಶ್ಯಕತೆಗೆ ತಕ್ಕಂತೆ ಶುಲ್ಕು ವಸೂಲು ಮಾಡಬಹುದೆಂಬ ಸಡಲಿಕೆ ಅವರಿಗೆ ಸಾಕು.

ನಾರಾಯಣ, ಚೈತನ್ಯ ಅಂತಹ ಸಂಸ್ಥೆಗಳು ಸ್ವಯಂಸೇವಕ ಸಂಸ್ಥೆಗಳಾಗಿ ತಲೆ ಎತ್ತುತ್ತಿವೆ. ತಮ್ಮ ವ್ಯಾಪಾರವನ್ನು ಸಲೀಸಾಗಿ ಸಾಗಿಸಿಕೊಳ್ಳುತ್ತವೆ. ಶಿಕ್ಷಣ ವ್ಯಾಪಾರವನ್ನು ನಿಷೇಧಿಸಬೇಕೆಂದರೆ ವಿವಿಧ ರೂಪಗಳಲ್ಲಿರುವ ಶುಲ್ಕಗಳನ್ನು ಇತರ ವಸೂಲಿಗಳನ್ನು ನಿಷೇಧಿಸುವುದೊಂದೆ ಮಾರ್ಗ. ಅಂದರೆ ಯಾವುದೇ ಶುಲ್ಕಗಳನ್ನು ವಸೂಲು ಮಾಡದೆ ತಮ್ಮ ಸ್ವಂತ ಸಂಪನ್ಮೂಲಗಳಿಂದ ಉಚಿತವಾಗಿ ಶಿಕ್ಷಣ ನೀಡುವ ಸ್ವಯಂಸೇವಾ ಸಂಸ್ಥೆಗಳಿಗೆ ಮಾತ್ರವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ, ನಿರ್ವಹಿಸುವ ಅವಕಾಶ ನೀಡಬೇಕು. ಆದರೆ ಮೊದಲಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ಶುಲ್ಕಗಳನ್ನು ರದ್ದುಗೊಳಿಸಬೇಕು ಎನ್ನುವುದು ಸ್ಫಷ್ಟ. ನಂತರ ಯಾವ ರೂಪದಲ್ಲಿ ಶುಲ್ಕ ವಸೂಲಿ ಮಾಡಿದರು ಅದನ್ನು ಶಿಕ್ಷಣದ ವ್ಯಾಪಾರವೆಂದು ಪರಿಗಣಿಸಬೇಕು.

ಶಿಕ್ಷಣವ್ಯಾಪಾರ ಮಾಡುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಮುಚ್ಚಿ ಹಾಕಬೇಕು ಇಲ್ಲ ಅವಶ್ಯಕತೆ ಬಿದ್ದರೆ , ಸಂಧರ್ಭ ಬಂದರೆ ಭಾರತ ಸಂವಿಧಾನ 19(6) ಅಧಿಕಾರವನ್ನು ಉಪಯೋಗಿಸಿ ರಾಷ್ಟ್ರೀಯತೆ ಮಾಡಬೇಕು. ಮತಪರವಾದ, ಭಾಷಾಪರವಾದ ಅಲ್ಪಸಂಖ್ಯಾತರಿಗೆ ಸಂವಿಧಾನ ಕಲ್ಪಿಸಿದ ರಕ್ಷಣೆಗಳಿಗೆ ಅನುಗುಣವಾಗಿ ರಿಯಾಯಿತಿ ಕಲ್ಪಿಸಬೇಕು. ಆದರೆ ಶಿಕ್ಷಣ ಸಂಸ್ಥೆಗಳನ್ನು ಲಾಭಾಪೇಕ್ಷತೆ ಇಲ್ಲದ ವ್ಯವಸ್ಥೆಗಳಾಗಿ ನಡೆಸುವುದಕ್ಕಾಗಿ ಮಾತ್ರವೆ ಅನುಮತಿ ನೀಡಬೇಕು. ಪರಿಶೀಲಿಸಿ ನೋಡಿದಾಗ ನಮಗೆ ತಿಳಿಯುವುದೇನೆಂದರೆ , ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಮಾತ್ರವೇ ಕೊಡಬೇಕಾದ ರಿಯಾಯತಿಗಳನ್ನು ಈ ವರದಿ ಎಲ್ಲರಿಗೂ ನೀಡಿದೆ. ಸೇವಾ ಮನೋಭಾವದಿಂದ ನಡೆಯುವ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಮುಂದೆ ಬಂದು ಶಾಲೆಗಳನ್ನು ನಿರ್ವಹಿಸುತ್ತವೆಂದು ವರದಿ ಭಾವಿಸಿದೆ. ಇದು ಒಂದು ವಾಸ್ತವಕ್ಕೆ ದೂರವಾದ ವಾದ. ಈ ವಾದದ ಮೇಲೆ ನೀಡಿದ ರಿಯಾಯಿತಿ ನಿಜಕ್ಕೂ ವ್ಯಾಪಾರ ಸಂಸ್ಥೆಗಳು ತಮ್ಮ ಸಂಕುಚಿತ ಪ್ರಯೋಜನಗಳಿಗೆ, ಲಾಭಗಳ ಬೇಟೆಗೆ ಉಪಯೋಗಿಸುತ್ತವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ.

ರಮೇಶ್ ಪಟ್ನಾಯಕ್

ಅಖಿಲ ಭಾರತ ಶಿಕ್ಷಣಹಕ್ಕು ವೇದಿಕೆಯ ಸಂಚಾಲಕರು

ಅನುವಾದ; ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಕೃಪೆ-ಪ್ರಜಾಶಕ್ತಿ ದಿನಪತ್ರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...