ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ’ಮೂಕಜ್ಜಿಯ ಕನಸುಗಳು’ ಕೃತಿ ಆಧಾರಿತ ಸಿನಿಮಾವು ಕನ್ನಡ ಚಿತ್ರರಂಗದ ನೂತನ ಪ್ರಯೋಗ ‘FUC‘ (ದಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್) ವೆಬ್‌ಸೈಟ್‌ನಲ್ಲಿ ಮುಂದಿನ ತಿಂಗಳು ಮರು ಬಿಡುಗಡೆಯಾಗಲಿದೆ.
ಈ ಸಿನಿಮಾ 2019ರ ನವೆಂಬರ್ 29 ರಂದು ಟಾಕಿಸುಗಳಲ್ಲಿ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈ ನಡುವೆ ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿಯವರು ಹೆಚ್ಚಿನ ಜನರಿಗೆ ಸಿನಿಮಾ ತಲುಪಿಸಲು ಹೊಸ ದಾರಿಯನ್ನು ಕಂಡು ಕೊಂಡಿದ್ದು, ’FUC’ ವೆಬ್‌ಸೈಟ್‌ನಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಇದನ್ನೂಓದಿ: ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್: ಕನ್ನಡಕ್ಕೆ ದಾಖಲೆಯ 11 ರಾಷ್ಟ್ರಪ್ರಶಸ್ತಿಗಳು
“ಸಿನಿಮಾ ನೋಡಲು ಆಸಕ್ತಿ ಇರುವವರು ’FUC’ ವೆಬ್‌ಸೈಟ್‌ನಲ್ಲಿ 300 ರೂಪಾಯಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. 3000ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದರೆ ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಈ ಸಿನಿಮಾ ಲಭ್ಯವಾಗಲಿದೆ. ಒಂದು ವೇಳೆ 3000 ಮಂದಿ ಹೆಸರು ನೋಂದಾಯಿಸದೆ ಇದ್ದರೆ ಸಿನಿಮಾ ಬಿಡುಗಡೆ ಆಗುವುದಿಲ್ಲ. ಆಗ ಯಾರು ಹೆಸರು ನೋಂದಾಯಿಸಿಕೊಂಡಿರುತ್ತಾರೋ ಅವರಿಗೆ ಹಣ ಮರಳಿಸಲಾಗುವುದು” ಎಂದು ನಿರ್ದೇಶಕ ಪಿ. ಶೇಷಾದ್ರಿ ತಿಳಿಸಿದ್ದಾರೆ.
ಪ್ರಸ್ತುತ ‘FUC’ ವೆಬ್‌ಸೈಟ್‌ನಲ್ಲಿ ಬುಕಿಂಗ್ ಚಲಾವಣೆಯಲ್ಲಿದ್ದು 09 ಅಕ್ಟೋಬರ್ 2020 ರಂದು ಈ ಅಭಿಯಾನ ಮುಕ್ತಾಯವಾಗಲಿದೆ.
ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ
‘FUC’ ಸಿನಿಮಾ ಬಗೆಗಿನ ಜ್ಞಾನ, ಮಾಹಿತಿ ವಿನಿಮಯ ಹಾಗೂ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಕಟ್ಟಿಕೊಂಡಿರುವ ಕ್ಲಬ್ ಆಗಿದೆ. ಇದು ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪ್ರಾರಂಭವಾಗಿದ್ದು ಕ್ಲಬ್‌ಗೆ ನಿರ್ದೇಶಕರಾದ ಕೆ.ಎಂ. ಚೈತನ್ಯ, ಜಯತೀರ್ಥ, ಬಿ.ಎಂ. ಗಿರಿರಾಜ್, ಅರವಿಂದ ಶಾಸ್ತ್ರಿ, ಮಂಸೋರೆ, ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ, ಪಿ.ಶೇಷಾದ್ರಿ, ಯೋಗರಾಜ್ ಭಟ್ ಸೇರಿದಂತೆ ಹಲವು ಮಂದಿ ಕನ್ನಡ ನಿರ್ದೇಶಕರು ಬೆಂಬಲ ನೀಡಿದ್ದಾರೆ.
ಪ್ರಸ್ತುತ ಇದಕ್ಕೆ ಕನ್ನಡದ ನಿರ್ದೇಶಕರು ಮಾತ್ರವಲ್ಲದೆ ತೆಲುಗಿನ ತರುಣ್ ಭಾಸ್ಕರ್, ನಂದಿನಿ ರೆಡ್ಡಿ, ತಮಿಳಿನ ವಸಂತ ಬಾಲನ್ ಹಾಗೂ ಮಲಯಾಳದ ಲಿಜೊ ಸೇರಿದಂತೆ ಹಲವರು ಸಹ ‘FUC’ ಸೇರಿದ್ದಾರೆ.
ಇದನ್ನೂ ಓದಿ: ’ಜಾಫರ್ ಪನಾಹಿ’ ಸಿನಿಮಾ ಜಗತ್ತಿನ ಬಂಡುಕೋರ: ಕೀಲಾರ ಟೆಂಟ್ ಹೌಸ್-5


