ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಸತತ ಎರಡನೇ ದಿನವೂ ಒಂದೂ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಕೊರೊನಾದಿಂದ ತತ್ತರಿಸಿದ್ದ ಮಹಾರಾಷ್ಟ, ಅದರಲ್ಲೂ ಮುಂಬೈನಲ್ಲಿ ಸದ್ಯ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ.
ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕೃತ ಮಾಹಿತಿಯ ಪ್ರಕಾರ, “ಮುಂಬೈನ ಧಾರಾವಿ ಎರಡನೇ ದಿನವೂ ಸೊನ್ನೆ ಪ್ರಕರಣಗಳನ್ನು ದಾಖಲಿಸಿದೆ. ಸಕ್ರಿಯ ಪ್ರಕರಣಗಳು 11 ಕ್ಕೆ ನಿಂತಿದ್ದು, ಸದ್ಯ ಧಾರವಿಯಲ್ಲಿರುವ ಒಟ್ಟು ಪ್ರಕರಣಗಳು 6,861” ಎಂದು ಮಾಹಿತಿ ನೀಡಿದೆ.
ಈ ವರ್ಷದ ಫೆಬ್ರವರಿ 2 ರ ನಂತರ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ ಧಾರವಿಯಲ್ಲಿ ಸೋಮವಾರ ಒಂದು ಕೊರೊನಾ ಪ್ರಕರಣಗಳು ವರದಿಯಾಗಿರಲಿಲ್ಲ. ಮಂಗಳವಾರವು ಒಂದು ಪ್ರಕರಣ ವರದಿಯಾಗಿಲ್ಲ.
ಧಾರವಿಯ ಸಹಾಯಕ ಮುನ್ಸಿಪಲ್ ಕಮಿಷನರ್ ಕಿರಣ್ ದಿಘಾವ್ಕರ್, “ಈ ವರ್ಷದ ಫೆಬ್ರವರಿಯಲ್ಲಿ ಕೊನೆಯದಾಗಿ ಧಾರಾವಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿದ್ದವು. ಇದಾದ ಬಳಿಕ ಈಗ ಮತ್ತೆ ಯಾವುದೇ ಪ್ರಕರಣ ವರದಿಯಾಗಿಲ್ಲ.ಕೊರೊನಾ ಆರಂಭದಲ್ಲಿ ಈ ಪ್ರದೇಶದಲ್ಲಿ ಅದನ್ನು ನಿಯಂತ್ರಿಸುವುದು ಕಠಿಣವಾಗಿತ್ತು. ಇಲ್ಲಿ ಕಿರಿದಾದ ಪ್ರದೇಶದಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಜೊತೆಗೆ ಈ ಪ್ರದೇಶದಲ್ಲಿ ಹಲವಾರು ಸಣ್ಣ ಪ್ರಮಾಣದ ಕೈಗಾರಿಕೆಗಳು, ಜವಳಿ ಕಾರ್ಖಾನೆಗಳು ಇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಜನ್ಮಭೂಮಿ ಹಗರಣ ಬಯಲಿಗೆಳೆದ ಸಂಜಯ್ ಸಿಂಗ್ ಮನೆ ಮೇಲೆ ದಾಳಿ, ಧ್ವಂಸ ಆರೋಪ
“ಧಾರವಿ ನಿವಾಸಿಗಳು ಸಾರ್ವಜನಿಕ ಶೌಚಾಲಯಗಳನ್ನು ಸಹ ಬಳಸುತ್ತಾರೆ, ಆದ್ದರಿಂದ ಕೊರೊನಾ ನಿಯಂತ್ರಣ ನಿಜವಾಗಿಯೂ ಸವಾಲಿನದ್ದಾಗಿತ್ತು. ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ ನಾವು ಕ್ವಾರಂಟೈನ್ ಕೇಂದ್ರಗಳು ಮತ್ತು ಐಸೋಲೇಷನ್ ಸೌಲಭ್ಯಗಳ ವ್ಯವಸ್ಥೆ ಮಾಡಿದ್ದೇವೆ. ಮನೆ ಮನೆಗೆ ತೆರಳಿ ನಿಯಮಿತವಾಗಿ ಕೊರೊನಾ ಪರೀಕ್ಷೆ ನಡೆಸುತ್ತಿದ್ದೇವು “ಎಂದು ಹೇಳಿದ್ದಾರೆ.
ಸುಮಾರು 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಧಾರವಿ ಕೊಳೆಗೇರಿ ಇರುವುದು 2.1 ಚದರ ಕಿಲೋಮೀಟರ್ ಪ್ರದೇಶದಲ್ಲಿ. ಕಳೆದ ವರ್ಷ ಏಪ್ರಿಲ್ 1 ರಂದು ಧಾರಾವಿಯಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ಎರಡನೇ ಅಲೆಯಲ್ಲಿ ಈ ವರ್ಷದ ಏಪ್ರಿಲ್ 8 ರಂದು ಏಕಾಏಕಿ 99 ಪ್ರಕರಣಗಳು ವರದಿಯಾಗಿ ಆತಂಕಕ್ಕೆ ಕಾರಣವಾಗಿತ್ತು.
“ಧಾರವಿ ಏಷ್ಯಾದ ಅತಿದೊಡ್ಡ ಕೊಳೆಗೇರಿ. ಒಂದೇ ದಿನದಲ್ಲಿ ಕೊರೊನಾ ಶೂನ್ಯ ಪ್ರಕರಣಗಳನ್ನು ದಾಖಲಿಸಿದ್ದು, ಮುಂಬೈ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ರಾಜ್ಯ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯಲ್ಲಿ 2020 ರ ಸೆಪ್ಟೆಂಬರ್ ನಂತರ ದೈನಂದಿನ ಪ್ರಕರಣಗಳ ಸಂಖ್ಯೆ 30 ಕ್ಕಿಂತ ಕಡಿಮೆಯಾಗಿದೆ. ಧಾರಾವಿಯಲ್ಲಿ ಆರು ಬಾರಿ 24 ಗಂಟೆಗಳ ಅವಧಿಯಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. 2020 ರ ಡಿಸೆಂಬರ್‌ನಲ್ಲಿ ಒಂದು ದಿನ, ಜನವರಿಯಲ್ಲಿ ನಾಲ್ಕು ದಿನಗಳು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಒಮ್ಮೆ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿರಲಿಲ್ಲ. ಸೋಮವಾರ ಮತ್ತು ಮಂಗಳವಾರ ಸತತ ಎರಡು ದಿನಗಳು ಶೂನ್ಯ ಪ್ರಕರಣಗಳು ವರದಿಯಾಗಿರುವುದು ಅಧಿಕಾರಿಗಳಲ್ಲಿ ಸಂತೋಷಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತರಬೇತಿ ಪಡೆದ ಮಹಿಳೆಯರನ್ನು ಅರ್ಚಕರಾಗಿ ನೇಮಿಸಲಾಗುತ್ತದೆ: ತಮಿಳುನಾಡು ಸಚಿವ


