Homeಕರೋನಾ ತಲ್ಲಣಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

- Advertisement -
- Advertisement -

“ಸಾಲ ಮಾಡಿ ಬಂಡವಾಳ ತಂದು, ಉತ್ತು-ಬಿತ್ತಿ ಸುಗಂಧರಾಜ ಮತ್ತು ಕನಕಾಂಬರ ಹೂ ಬೆಳೆದಿದ್ದೇನೆ, ಮಾರುಕಟ್ಟೆಗೆ ಸಾಗಿಸಲು ವಾಹನಗಳಿಲ್ಲ, ಕೊಳ್ಳಲು ಜನ ಇಲ್ಲ, ಗಿಡದಲ್ಲಿ ಹಾಗೇ ಬಿಟ್ಟಿದ್ದೀನಿ”. ಹುಲುಸಾಗಿ ಬೆಳೆದ ಹೂವನ್ನು ಕಿತ್ತು ಮಾರಿದರೆ ಕೊಟ್ಟ ಕೂಲಿಯೂ ದಕ್ಕದೆಂಬ ಕಾರಣಕ್ಕೆ ಅವುಗಳನ್ನು ಗಿಡದಲ್ಲಿಯೇ ಒಣಗಲು ಬಿಟ್ಟು ತಲೆಮೇಲಿ ಕೈ ಹೊತ್ತು ಕುಳಿತ ರೈತನೊಬ್ಬನ ಅಳಲು. “ಕಲ್ಲಂಗಡಿ, ಕರಬೂಜ ಬೆಳೆದಿದ್ದೇನೆ, ಮಾರ್ಕೆಟ್‌ಗೆ ಒಯ್ಯೋಕ್ಕಾಗ್ತಿಲ್ಲ, ಇಲ್ಲೇ ಬಂದು ಕೊಳ್ಳೊರ್ ಕೇಳೋ ಬೆಲೆ ಏನೇನೂ ಸಾಲದು. ಆದ್ರೆ ಅವ್ರು ಮಾತ್ರ ಮಾರೋದ್ ಅದ್ರ ಡಬ್ಬಲ್ ಬೆಲೆಗೆ”. ಹಣ್ಣು ಬೆಳೆದು ಹಣ್ಣುಗಾಯಿಯಾದವನ ಅಳಲು. ರೈತರಿಂದ ಹಣ್ಣುಗಳನ್ನು ಕೊಂಡು ತಂದು ಮಾರುಕಟ್ಟೆಯಲ್ಲಿ ಮಾರುವವರನ್ನು ಕೇಳಿದರೆ, “ಹೌದು, ನಾವು ಮಾರೋದೇ ಹಂಗೆ. ಹೊಲದಿಂದ ಖರೀದಿಸಿ ಮಾರುಕಟ್ಟೆಗೆ ಸಾಗಿಸಲು ವಾಹನ ಸೌಲಭ್ಯ ಇಲ್ಲದಿರುವಾಗ, ಏನೇನೋ ಮಾಡಿ ಇಲ್ಲಿಗೆ ತಂದ್ರೆ ಒಂದೇ ದಿನ ಎಲ್ಲಾನೂ ಖರ್ಚಾಗೋಲ್ಲ. ಕಾಲ್ ಭಾಗ ಕೊಳ್‌ತ್ರೆ ಮಾಡೋದೇನು? ಇರೋವ್ನೆ ಜಾಸ್ತಿ ಬೆಲೆಗೆ ಮಾರ್‍ಬೇಕು. ಅದೂ ಗಿರಾಕಿಗಳು ಬಂದ್ರೆ. ಇಲ್ದಿದ್ರೆ ಇಲ್ಲ. ಹತ್ತು ಗಂಟೆಗೆಲ್ಲಾ ಪೊಲೀಸ್‌ನೋರ್ ಬಂದು ಕ್ಲೋಸ್ ಮಾಡ್‌ಸ್ತಾರೆ”, ಇದು ಮಾರುವರ ಕಷ್ಟ.

ಸೀಬೆಹಣ್ಣು ಬೆಳೆದ ರೈತನೊಬ್ಬ ಕೊಳ್ಳುವ ಸಗಟು ಖರೀದಿದಾರರಿಲ್ಲದ ಕಾರಣಕ್ಕೆ ಬೆಳೆದು ನಿಂತ ಗಿಡಗಳನ್ನೇ ಕಡಿದುರುಳಿಸಿರುವುದನ್ನ ಪತ್ರಿಕೆಗಳು ವರದಿ ಮಾಡಿವೆ. ದ್ರಾಕ್ಷಿ ಬೆಳೆದವರ ಪಾಡೂ ಕೂಡ ಕಳೆದ ವರ್ಷಕ್ಕಿಂತ ಬೇರಿಲ. “ಹೋದ ವರ್ಷ, ಇದೇ ಟೈಮಲ್ಲಿ ತೆಂಗಿನಕಾಯಿ ಒಂದಕ್ಕೆ ರೂ.17.50ಕ್ಕೆ ಮಾರಿದ್ದೆ. ಈಗ ಅದರ ಅರ್ಧ ಬೆಲೆಗೆ ಕೇಳ್ತಾರೆ. ಮರ ಹತ್ತಿ ಕಾಯಿ ಕೀಳೋ ಜನ ಇಲ್ಲ. ಇರೋರು ಕೇಳೋ ಡಬ್ಬಲ್ ಕೂಲಿಕೊಡೋಕಾಗಲ್ಲ. ತೋಟಕ್ಕೆ ಮಣ್ಣು-ಗೊಬ್ಬರ ಹೊಡಸಕ್ಕಾಗ್ತಿಲ್ಲ, ತೆಂಗು ಬೆಳೆಗಾರನೊಬ್ಬನ ನೋವು. “ಮಳೆ ಬಂದಿದೆ. ಶೇಂಗಾ ಬಿತ್ತಬೇಕು, ಬೀಜ ಗೊಬ್ಬರ ಸಿಗಂಗಿಲ್ಲ. ಕೃಷಿ ಇಲಾಖೆನೋರು ಕೊಡೋ ಅಷ್ಟೋ, ಇಷ್ಟೋ ಕೊಳ್ಳೋಣ ಅಂದ್ರೆ, ಬೆಳಿಗ್ಗೆ 9 ಗಂಟೆಗೆ ಹೋಗಿ ಕ್ಯೂ ನಿಂತ್ರೆ ಒಂದಷ್ಟು ಜನಕ್ಕೆ ಕೊಟ್ಟು ಟೈಮ್ ಆತು ಅಂತ ಬಾಗಲು ಹಾಕ್ತಾರೆ. ಈವಾಗ ಬಿತ್ಲಿಲ್ಲಾ ಅಂದ್ರೆ ಇನ್ನೇನೂ ಮಾಡಂಗಿಲ್ಲ”. ಶೇಂಗಾ ಬೆಳೆಯುವ ರೈತನ ಗೋಳು. “ಕಷ್ಟಪಟ್ಟು ಬೀಜ ಗೊಬ್ಬರ ಜೋಡ್‌ಸಿದೀನಿ, ಬಿತ್ತಾಕೆ ಎತ್ಗಳಿಲ್ಲ, ಬಿತ್ತೋ ಮಷಿನ್ ಬಂದಿದೆ, ಗಂಟೆಗೆ 1000 ರೂಪಾಯಿ ಕೇಳ್ತಾರೆ. ಹೋದವರ್ಷ 600 ರೂಪಾಯ್‌ಗೆಲ್ಲಾ ಬರ್‍ತಿದ್ರು. ಕೇಳಿದ್ರೆ ಡೀಸೆಲ್ ಬೆಲೆ ಜಾಸ್ತಿ ಆಗಿದೆ ಅಂತಾರೆ”. ಬಿತ್ತಲು ಎತ್ತುಗಳಿಲ್ಲದವರ ಕಷ್ಟ. ಒಂದು ಕಾಲಕ್ಕೆ ಪ್ರತಿ ರೈತ ಕುಟುಂಬಕ್ಕೂ ಒಂದು ಜೊತೆ ಎತ್ತುಗಳಿರುತ್ತಿದ್ದುದು ಸಾಮಾನ್ಯವಾಗಿತ್ತು.

ಈಗ ಊರೆಲ್ಲಾ ಹುಡುಕಿದರೂ ಹತ್ತಾರು ಜೊತೆ ಎತ್ತುಗಳನ್ನು ಕಾಣುವುದು ಕಷ್ಟ. ಹೆಸರು, ಉದ್ದು, ಹಲಸಂದೆ, ಎಳ್ಳು ಬೆಳೆಯುವ ಕೆಲವರಂತೂ ಹಾಗೇ ಹೊಲದಲ್ಲಿ ಶೂನ್ಯ ಬೇಸಾಯದ ರೀತಿ ಚೆಲ್ಲಿ ಬಂದಿದ್ದಾರೆ.

ಇದರ ಜೊತೆಗೆ, ಬಿತ್ತನೆಗಾಗಿ ಬೀಜ-ಗೊಬ್ಬರ ಕೊಳ್ಳಲು ಹಣಕಾಸಿನ ದುಃಸ್ಥಿತಿ ಬೇರೆ. ಕಡಲೆ, ರಾಗಿ ಮುಂತಾದವುಗಳನ್ನು ಕಳೆದ ವರ್ಷ ಬೆಂಬಲ ಬೆಲೆಗೆ ಮಾರಿದ ಹಣ ಇನ್ನೂ ಕೈ ಸೇರಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಳೆ ಪರಿಹಾರದ ಹಣ ಖಾತೆಗೆ ಜಮಾ ಅಗಿದ್ದನ್ನೂ ನಿಯಮ ಮೀರಿ ಕೆಲವು ಬ್ಯಾಂಕುಗಳು ಹಳೇ ಸಾಲದ ಕಡೆಗೆ ಜಮಾ ಮಾಡಿಕೊಂಡಿರುವುದನ್ನು ರೈತಸಂಘದ ಮುಖಂಡರೊಬ್ಬರು ದೂರುತ್ತಾರೆ. ನೀರಾವರಿ ಸೌಲಭ್ಯ ಹೊಂದಿರುವವರು ತಮಗೆ ಅತಿ ಅಗತ್ಯವಿರುವ ವಿದ್ಯುತ್ ವೈರು ಮತ್ತು ಪಿವಿಸಿ ಪಂಪುಗಳ ಬೆಲೆ ದುಪ್ಪಟ್ಟಾಗಿರುವುದನ್ನು ದೂಷಿಸುತ್ತಾರೆ. ಇವೆಲ್ಲವುಗಳ ಜೊತೆಗೆ, ಈಗ ಉಂಟಾಗಿರುವ ಬಿಡಿಸಲಾಗದ ಕಗ್ಗಂಟೆಂದರೆ, ಬಹುತೇಕ ಮೂರನೇ ಒಂದು ಭಾಗ ಹಳ್ಳಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ

ಕೃಷಿ ಕೆಲಸಗಳಲ್ಲಿ ನಿರತರಾದ ಕೆಲವಷ್ಟು ಜನ ಕೊರೊನಾ ಸೋಂಕಿಗೆ ಒಳಗಾಗಿರುವುದು. ಇದು ಬರೀ ನಮ್ಮ ಊರು, ಜಿಲ್ಲೆ ರಾಜ್ಯ ಒಂದಕ್ಕೆ ಸೀಮಿತವಾಗಿರದೆ, ಒಂದಲ್ಲಾ ಒಂದು ರೀತಿಯಲ್ಲಿ ಹೊರನೋಟಕ್ಕೆ ಗೋಚರಿಸುವ ಇಡೀ ದೇಶದ ಸ್ಥಿತಿಯೇ ಆಗಿದೆ. ಈ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದಿದ್ದರೆ, ಬರುವ ವರ್ಷದಲ್ಲಿ ಇದು ಆಹಾರ ಧಾನ್ಯಗಳ ಒಟ್ಟು ಉತ್ಪಾದನೆಯನ್ನು ತಗ್ಗಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೃಷಿ ಭಾರತದ ಬೆನ್ನೆಲುಬು, ರೈತ ದೇಶದ ಅನ್ನದಾತ ಎನ್ನುವ ಹೆಗ್ಗಳಿಕೆಯ ಮಾತು ಇವತ್ತಿಗೂ ಹುಸಿಯೇನಲ್ಲ. ಏಕೆಂದರೆ, ಸ್ವಾತಂತ್ರ್ಯಾನಂತರದ ದಶಕಗಳ ಹಸಿರುಕ್ರಾಂತಿಯ ಕ್ರಮಗಳಿಂದ, ಹಲವು ಮಿತಿಗಳ ನಡುವೆಯೂ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಭಾರತಕ್ಕೆ ಸಾಧ್ಯವಾಗಿದೆ. ಕಳೆದ ವರ್ಷದ ಹಿಂದಿನ ವರ್ಷ, ಅಂದರೆ 2019-2020ರಲ್ಲಿ ದಾಖಲೆ ಪ್ರಮಾಣದ 291.95 ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯನ್ನು ದಾಖಲಿಸಿದೆ.

ದೇಶದ ಇಡೀ ರಾಷ್ಟ್ರೀಯ ವರಮಾನ ದರ ಕಳೆದ ವರ್ಷ ಶೇ.(-)23ಕ್ಕೆ ಕುಸಿದಾಗ ಕೃಷಿ ಬೆಳವಣಿಗೆ ದರ ಶೇ.3.4 ಇತ್ತು. ಈ ಬೆಳವಣಿಗೆ ರಾತ್ರೋರಾತ್ರಿ ಆದದ್ದಲ್ಲ. ಹೊರನೋಟಕ್ಕೆ ದೇಶದ ಒಟ್ಟು ಉತ್ಪಾದನೆಯಲ್ಲಿ ಕೃಷಿಯ ಪಾಲು ಕಡಿಮೆಯಾಗುತ್ತಾ ಬಂದಿರುವುದು ನಿಜ. ಒಂದು ಕಾಲಕ್ಕೆ ಶೇ.60ರಷ್ಟಿದ್ದ ಇದು ಇಂದು ಶೇ.20ರಷ್ಟಿದೆ. ಇದು ಕೃಷಿ ಉತ್ಪಾದನೆಯ ಇಳಿಕೆಯಿಂದಾಗಿಲ್ಲ. ಬದಲಾಗಿ ಇತರೆ ವಲಯಗಳ, ಅದರಲ್ಲೂ ಸೇವಾವಲಯದ ಕ್ಷಿಪ್ರ ಗತಿಯ ಬೆಳವಣಿಗೆಯಿಂದಾಗಿದೆ. ಇವತ್ತಿಗೂ ಕೂಡ ಶೇ.70ರಷ್ಟು ಗ್ರಾಮೀಣ ಕುಟುಂಬಗಳಿಗೆ ಕೃಷಿ ಕ್ಷೇತ್ರ ಉದ್ಯೋಗಾಶ್ರಯವಾಗಿದೆ. ಇದರಲ್ಲಿ ಶೇ.82ರಷ್ಟು ಕುಟುಂಬಗಳು ಸಣ್ಣ ಮತ್ತು ಅತಿಸಣ್ಣ, ಅಂದರೆ ತುಂಡು ಭೂಮಿ ಮಾಲಿಕತ್ವದ ಕುಟುಂಬಗಳಾಗಿವೆ. ಇದು ಈ ದೇಶದ ಕೃಷಿ ವಲಯದ ಪ್ರಾಮುಖ್ಯತೆ ಮತ್ತು ಅಸ್ಮಿತೆ. ಇಷ್ಟಾಗಿಯೂ 2016ರ ಜಾಗತಿಕ ಪೌಷ್ಠಿಕಾಂಶ ವರದಿ ಪ್ರಕಾರ 132 ದೇಶಗಳ ಸಾಲಿನಲ್ಲಿ ಭಾರತ 114ನೇ ಸ್ಥಾನದಲ್ಲಿರುವುದು 1.4 ಬಿಲಿಯನ್ ಜನಸಂಖ್ಯೆಯ ಬಹುಪಾಲು ಜನ ಪೌಷ್ಠಿಕಾಂಶಗಳ ಕೊರತೆ ಅನುಭವಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.

ದೇಶದ ಬಹುಸಂಖ್ಯಾತ ಜನರಿಗೆ ಉದ್ಯೋಗ ಮತ್ತು ಅನ್ನವನ್ನು ಕೊಡುವ ಕೃಷಿ ವಲಯ ಪ್ರಭುತ್ವಗಳ ನಿರ್ಲಕ್ಷ್ಯದಿಂದಾಗಿ ದುಃಸ್ಥಿತಿ ತಲುಪುತ್ತಿದೆ. ಇದಕ್ಕೆ ನೇರವಾಗಿ ರೈತರನ್ನಷ್ಟೇ ದೂರುವುದು ಸರಿಯಲ್ಲ. ಇದು ಬಡತನಕ್ಕೆ ಕಾರಣ ಬಡವರೇ ಎಂದಂತೆ! ಭೂ ಮಾಲಿಕತ್ವ ಸಂಬಂಧೀ ಕಾನೂನುಗಳನ್ನು ಬದಲಾಯಿಸಿ ಕೃಷಿ ಭೂಮಿಯ ಮಾಲಿಕತ್ವವನ್ನು ಪಲ್ಲಟಗೊಳಿಸುವ ಮೂಲಕ ಮೇಲಿನ ಸಮಸ್ಯೆಗಳಿಗೆ ಪರಿಹಾರವಾಗಿಸುತ್ತೇವೆ ಎನ್ನುವುದು ಇವತ್ತಿನ ಒಕ್ಕೂಟ ಸರ್ಕಾರದ ಯೋಚನೆ. ಇದು ಎಷ್ಟರಮಟ್ಟಿಗೆ ಸರಿಯಾದೀತು? ಈ ಬಗ್ಗೆ ಆಲೋಚಿಸುವ ಮುನ್ನವೇ ಅವು ಕಾನೂನುಗಳಾಗಿ ಕುಳಿತಿವೆ. ಯಾವುದರ ವಿರುದ್ಧ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿಗೆ ಬಂದು ಆರು ತಿಂಗಳುಗಳಿಂದ ಮುಷ್ಕರ ಮಾಡುತ್ತಿದ್ದಾರೋ, ಆ ಕೃಷಿ ಕಾನೂನುಗಳಲ್ಲಿ ಈ ಸಮಸ್ಯೆಗಳಿಗೆ ಉತ್ತರಗಳಿವೆಯೇ? ಅವುಗಳ ಸಮರ್ಥಕರು ಕೊಡುತ್ತಿರುವ ಉತ್ತರ ಯಾರಿಗೂ ಸಮರ್ಪಕ ಅನ್ನಿಸುತ್ತಿಲ್ಲ. ದೆಹಲಿ ಗಡಿಗಳಲ್ಲಿ ಹೋರಾಟ ಮುಂದುವರೆದೇ ಇದೆ.

ದೇಶದ ಜನರ ಅನುಭೋಗದ ಅಗತ್ಯಗಳನ್ನು ಲೆಕ್ಕಾಚಾರ ಹಾಕದೆ, ಯಾರ ಯಾರದೋ ಮಾತು ಕೇಳಿ ಏನನ್ನೋ ಬೆಳೆದು ರಾತ್ರೋರಾತ್ರಿ ಅಧಿಕ ಆದಾಯ ಗಳಿಸಿದರು ಎನ್ನುವುದನ್ನೇ ಮುಂದಿಟ್ಟುಕೊಂಡು, ಎಲ್ಲರೂ ಅದೇ ಬೆಳೆಯನ್ನು ಬೆಳೆದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಹಾದಿ ಬೀದಿಯಲ್ಲಿ ಸುರಿದು ಸಂಕಟ ವ್ಯಕ್ತಪಡಿಸಿರುವುದು ಈ ದೇಶಕ್ಕೆ ಹೊಸದೇನೂ ಅಲ್ಲ. ಇದನ್ನು ಕಂಡವರು ಆ ರೈತರನ್ನು ದೂರುತ್ತಾರೆಯೇ ಹೊರತು, ಅವರ ಈ ವರ್ತನೆಗೆ ಕಾರಣವಾದ ಪ್ರಭುತ್ವಗಳ ಜವಾಬ್ದಾರಿ ಕುರಿತಂತೆ ಯಾರೂ ಮಾತನಾಡುವುದಿಲ್ಲ. ನಮ್ಮದೊಂದು ಯೋಜಿತ ಅರ್ಥವ್ಯವಸ್ಥೆ ಎಂದು ಸಾರಿಕೊಂಡು ಬರುತ್ತಿರುವ ಈ ದೇಶದಲ್ಲಿ ಯಾರು, ಎಲ್ಲಿ, ಯಾವಾಗ, ಯಾವ ಬೆಳೆಯನ್ನು, ಹೇಗೆ, ಎಷ್ಟು ಎಕರೆ ಪ್ರದೇಶದಲ್ಲಿ, ಯಾರ ಅನುಭೋಗಕ್ಕಾಗಿ ಅಥವಾ ಮರಾಟಕ್ಕಾಗಿ ಬೆಳೆಯುತ್ತಿದ್ದಾರೆನ್ನುವ ಮಾಹಿತಿ ಇವತ್ತಿಗೂ ಯಾರಿಗೂ ಸರಿಯಾಗಿ ಸಿಗುತ್ತಿಲ್ಲ. ದೂರದೃಷ್ಟಿಯ ಅಥವಾ ಸಣ್ಣ ಅವಧಿಯ ಯೋಜನೆಗಳಿಲ್ಲ. ಕೃಷಿ ಅಭಿವೃದ್ಧಿಗೆ ಮಾದರಿಯಾಗಿ ಇವತ್ತು ಚೀನಾ ಮತ್ತು ಇಸ್ರೇಲ್ ದೇಶಗಳನ್ನು ಉದಾಹರಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಅಲ್ಲಿ ಇರುವ ಸರ್ಕಾರಗಳ ಕಾಳಜಿ ಮತ್ತು ಯೋಜನೆಗಳ ನಿರ್ವಹಣೆಯಲ್ಲಿನ ದಕ್ಷತೆಯ ಬಗ್ಗೆ ಮೌನವಹಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಎಂದರೆ ತೋಚಿದ್ದನ್ನು ಮಾಡುವುದಲ್ಲ. ಮಾರುಕಟ್ಟೆಯನ್ನು ಗೂಳಿಯಂತೆ ಸ್ವೇಚ್ಛೆಯಾಗಿ ಬಿಡುವುದರ ಬದಲು ಅದಕ್ಕೆ ಮೂಗುದಾರ ಹಾಕಿ ವ್ಯವಸಾಯಕ್ಕೆ ಬಳಸಿಕೊಳ್ಳುವ ವಿವೇಚನೆ ಸಕಾರಗಳದ್ದು. ಇಲ್ಲಿ ಸರ್ಕಾರದ ಪಾತ್ರ ಬೇಡವೇ ಬೇಡ ಎನ್ನುವುದಾದರೆ, ಆ ಜಾಗದಲ್ಲಿ ಶೋಷಕನೊಬ್ಬ ಸ್ಥಾಪನೆಗೊಳ್ಳುವುದು ನಿಸ್ಸಂಶಯ.

ತಜ್ಞರ ವರದಿ ಉಲ್ಲೇಖಿಸಿ ಹೇಳುವುದಾದರೆ, ಇದೀಗ ಜಾರಿಯಲ್ಲಿರುವ ಲಾಕಡೌನ್ ಇನ್ನೂ ಕೆಲ ವಾರಗಳಾದರೂ ಮುಂದುವರೆಯುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಗಳು ಇನ್ನಷ್ಟು ಮುಂಜಾಗ್ರತೆ ವಹಿಸಿ ರೈತರ ಪ್ರಸ್ತುತ ಮುಂಗಾರಿನ ಬಿತ್ತನೆಗೆ ಅನುಕೂಲ ಮಾಡಿಕೊಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ರೈತರನ್ನಷ್ಟೇ ಅಲ್ಲ, ಕೃಷಿ ಉತ್ಪನ್ನಗಳ ಬಳಕೆದಾರರನ್ನೂ ದುಃಸ್ಥಿತಿಗೆ ತಳ್ಳಿದಂತಾಗುತ್ತದೆ. ಮೊದಲನೆಯದಾಗಿ, ಈಗ ಜಾರಿಗೊಳಿಸುತ್ತಿರುವ ಕ್ರಮಗಳ ಜೊತೆಗೆ, ರೈತರು ಬೀಜ-ಗೊಬ್ಬರಗಳಿಗಾಗಿ ಇಲಾಖೆ ಮತ್ತು ಅಂಗಡಿಗಳಿಗೆ ಅಲೆಯುವುವುದರ ಬದಲಿಗೆ ಸಂಚಾರಿ ಮಾರಾಟ ವ್ಯವಸ್ಥೆ ಮಾಡುವುದು ಕಷ್ಟವೇನಲ್ಲ. ಕೃಷಿ ಇಲಾಖೆಯಲ್ಲಿ ಈಗಿರುವ ಸಿಬ್ಬಂದಿ ಮತ್ತು ಗ್ರಾಮೀಣ ಸಹಕಾರಿ ಸಂಘಗಳ ಸಿಬ್ಬಂದಿಯನ್ನು ಬಳಸಿಕೊಂಡು ಯಾವ ರೈತರಿಗೆ ಎಷ್ಟು ಬೀಜ-ಗೊಬ್ಬರಗಳು ಬೇಕು ಎನ್ನುವ ಮುಂಬೇಡಿಕೆ ಪಡೆದು ಹಳ್ಳಿಗಳಿಗೆ ಹೋಗಿ ತಲುಪಿಸಲು ಕಾರ್ಯಪಡೆ ರಚಿಸಬೇಕು. ಕೊನೇ ಪಕ್ಷ ಪ್ರಮುಖ ಬೆಳೆಗಳಿಗೆ ಸಂಬಂಧಿಸಿದಂತೆಯಾದರೂ ಈ ವ್ಯವಸ್ಥೆ ಬೇಕಿದೆ. ಇದಕ್ಕೆ ಈ ಸರಕುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥ ಸಂಘಗಳ ನೆರವು ಪಡೆಯಬಹುದು. ವೆಚ್ಚವನ್ನು ಭರಿಸಲು ರೈತರು ಇಲ್ಲಾ ಎನ್ನಲು ಸಧ್ಯವೇ ಇಲ್ಲ.

ಎರಡನೆಯದಾಗಿ, ಈ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಗೆ ಅನುಕೂಲವಾಗುವಂತೆ ಈ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು. ಮೂರನೆಯದಾಗಿ, ಕೊರೊನಾ ಸೋಂಕಿನಿಂದ ಬಿತ್ತನೆ, ಕಳೆಕೀಳುವುದು ಮುಂತಾದ ಕೆಲಸಗಳಿಗೆ ಕೃಷಿ ಕಾರ್ಮಿಕರ ಕೊರತೆಯುಂಟಾಗುತ್ತಿದ್ದು ಅದನ್ನು ಸರಿದೂಗಿಸಲು ಇದೊಂದು ಬಾರಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪೂರ್ಣವಾಗಿಯಲ್ಲದಿದ್ದರೂ ಪೂರಕವಾಗಿಯಾದರೂ, ನೋಂದಾಯಿತ ಕಾರ್ಮಿಕರ ನೆರವು ಕೊಟ್ಟರೆ ತಪ್ಪೇನಿಲ್ಲ. ತುರ್ತು ಸಂದರ್ಭಗಳಲ್ಲಿ ನಿಯಮಾವಳಿಗಳಿಗೆ ಬದಲಾವಣೆ ತಂದು ಯಾರಿಗೆ, ಯಾವ ಬೆಳೆಗಳಿಗೆ, ಯಾವ ಚಟುವಟಿಕೆಗಳಿಗೆ ಈ ನೆರವು ಅನಿವಾರ್ಯವಾಗಿದೆ ಎಂದು ವಿವೇಚಿಸಿ ಕಾರ್ಯೋನ್ಮುಖವಾಗಬಹುದು. ಬೇಕಾದಲ್ಲಿ ಇಂಥ ನೆರವು ಪಡೆದವರಿಂದ ನಿಗದಿತ ಮೊತ್ತವನ್ನು ಸಂಬಂಧಿಸಿದ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು. ಜೊತೆಗೆ, ಉಳುಮೆ ಮತ್ತು ಬಿತ್ತನೆ ಕೆಲಸಗಳಿಗೆ ಬಳಸುವ ಯಂತ್ರಗಳ ಸೇವೆ ಬೇಕಾದಲ್ಲಿ ಸಕಾಲಕ್ಕೆ ಸಿಗುವಂತೆ ಖಾಸಗಿ ವಲಯದಿಂದಲೋ ಅಥವಾ ಸರ್ಕಾರದ ವತಿಯಿಂದಲೋ ವ್ಯವಸ್ಥೆ ಮಾಡಬಹುದು. ರೈತರಿಗೆ ಬೇಕಾಗಿರುವ ಇಂಥ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕಿಗೊಂದರಂತೆ ಸಹಾಯವಾಣಿ ಸೌಲಭ್ಯ ಒದಗಿಸಬೇಕು ಮತ್ತು ಅವುಗಳನ್ನು ತುರ್ತು ಸೇವೆ ಎಂದು ನಿರ್ವಹಿಸಲು ಸಜ್ಜುಗೊಳಿಸಬೇಕು. ಸರ್ಕಾರ ಮನಸ್ಸು ಮಾಡಿದರೆ ಇದೇನು ಕಷ್ಟದ ಕೆಲಸವಲ್ಲ.

ಕೊನೆಯದಾಗಿ ನೊಂದವರ ಕಷ್ಟಗಳಿಗೆ, ಅಭಿವೃದ್ಧಿಯ ತುರ್ತು ಅಗತ್ಯಗಳಿಗೆ ಕೂಡಲೆ ಸ್ಪಂದಿಸುವ ಮನೋಧರ್ಮವನ್ನು ಹೊಂದುವುದೂ ಕೂಡ ಉತ್ಕೃಷ್ಟ ಸಂಪನ್ಮೂಲವೇ ಆಗಿದೆ. ಪ್ರಭುತ್ವದ ಕ್ರಿಯಾಶೀಲತೆಯಲ್ಲಿ ಯಾವುದು ಸರಿ ಮತ್ತು ಯಾವುದು ಸರಿಯಲ್ಲ ಎನ್ನುವುದಕ್ಕೆ ಇಬ್ಬರು ಶರಣರ ವಚನಗಳ ಸಾಲುಗಳನ್ನು ಉದಾಹರಿಸಬಹುದು. ಒಂದು, ಬಸವಣ್ಣನವರ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ, ಮೇಲೆ ಪಲ್ಲವಿಸಿತ್ತು ನೋಡಾ”, ಎನ್ನುವುದು. ಮತ್ತೊಂದು, ಮೋಳಿಗೆ ಮಹದೇವಮ್ಮನ “ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೇ ದಿಟದ ಬೀಜದ ವೃಕ್ಷದಂತೆ” ಎಂಬುದು. ಇಲ್ಲಿ ನೀರೆರೆವ ಮತ್ತು ಬಿತ್ತುವ ಬೀಜದ ವಿವೇಚನೆ ಮತ್ತು ಕರ್ತವ್ಯ, ಪ್ರಭುತ್ವದ್ದು ಮೊದಲು, ಪ್ರಜೆಗಳದ್ದು ನಂತರದ್ದು.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...