ಬಿಹಾರ ಉಪಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರತ್ಯೇಕ ಜಾಹೀರಾತುಗಳು ಪ್ರತಿಪಕ್ಷಗಳ ವ್ಯಂಗ್ಯಕ್ಕೆ ಕಾರಣವಾಗಿದ್ದವು. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಹೊರಡಿಸಿದ ಪ್ರತ್ಯೇಕ ಪೋಸ್ಟರ್ ಮತ್ತು ಜಾಹೀರಾತುಗಳ ಬಗ್ಗೆ ಲೇವಡಿ ಮಾಡಿದ್ದರು.
ಹೊಸ ಸರ್ಕಾರಕ್ಕೆ ಇಂದು ಮತದಾನ ಆರಂಭವಾಗಿರುವ ಬಿಹಾರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಇತ್ತೀಚಿನ ಪ್ರಚಾರ ಭಿತ್ತಿಪತ್ರಗಳು ಮತ್ತು ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಣಿಸಿಕೊಂಡು ಬಿಹಾರದಲ್ಲಿ ಜೆಡಿಯು, ಬಿಜೆಪಿ ನಡುವಿನ ಮುನಿಸಿಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದೆ.
ನಿತೀತ್ ಕುಮಾರ್ ಅವರ ರಾಜಕೀಯ ಪ್ರತಿಸ್ಪರ್ಧಿಗಳಾದ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಅವರು ’ಬಿಹಾರದಲ್ಲಿ ನಿತೀಶ್ ಕುಮಾರ್ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ. ಆಡಳಿತಾರೂಢ ಪಕ್ಷವು ಅವರನ್ನು ಜಾಹೀರಾತುಗಳಿಂದ ಕೈಬಿಟ್ಟಿದೆ’ ಎಂದು ವ್ಯಂಗ್ಯವಾಡಿದ್ದರು.
ಈ ವ್ಯಂಗ್ಯಗಳಿಗೆ ಉತ್ತರ ಕೊಡುವ ಪ್ರಯತ್ನದಲ್ಲಿ ಎನ್‌ಡಿಎ ಹೊಸ ಜಾಹೀರಾತುಗಳನ್ನ ಬಿಡುಗಡೆ ಮಾಡಿದೆ. ಈ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ಅಭ್ಯರ್ಥಿ ಹಾಲಿ ಸಿಎಂ ನಿತೀಶ್ ಕುಮಾರ್ ಜೊತೆಗಿರುವ ಜಾಹೀರಾತುಗಳು, ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಂದ ಪ್ರತ್ಯೇಕ ಜಾಹೀರಾತು!

ಇಂದು ಬೆಳಿಗ್ಗೆ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿರುವ ಹೊಸ ಜಾಹೀರಾತುಗಳಲ್ಲಿ, ಪಿಎಂ ಮೋದಿ ಮತ್ತು ನಿತೀಶ್ ಕುಮಾರ್ ಇಬ್ಬರು ಇದ್ದಾರೆ. ಆದರೆ, ಒಂದು ಜಾಹೀರಾತಿನಲ್ಲಿ, ನಿತೀಶ್ ಕುಮಾರ್ ಅವರನ್ನು ಏಕೈಕ ಎನ್‌ಡಿಎ ಮುಖವಾಗಿ ಗುರುತಿಸಲಾಗಿದ್ದು, ಉಳಿದವರೆಲ್ಲಾ ಬಿಜೆಪಿ ನಾಯಕರಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್ ಆದ ಬಿಜೆಪಿ ಪ್ರಣಾಳಿಕೆ!
“ಬಿಜೆಪಿ ಹೈ ತೋ ಭರೋಸಾ ಹೈ (ಬಿಜೆಪಿ ಇರುವಲ್ಲಿ, ನಂಬಿಕೆ ಇದೆ)” ಎಂಬ ಸಂದೇಶವನ್ನು ಹೊಂದಿರುವ ಜಾಹೀರಾತು ಕೇಂದ್ರ ಸರ್ಕಾರದ ಯೋಜನೆಗಳನ್ನು ಪಟ್ಟಿ ಮಾಡಿ, ಬಿಹಾರಕ್ಕೂ ಅದೇ ಭರವಸೆ ನೀಡುತ್ತದೆ ಎಂದಿದೆ.
ಈ ಹಿಂದಿನ ಜಾಹೀರಾತುಗಳಲ್ಲಿ ‘ಬಿಜೆಪಿ ಹೈ ತೊ ಭರೋಸಾ ಹೈ’ (ಬಿಜೆಪಿ ಇದ್ದೆಡೆ ನಂಬಿಕೆ ಇರುತ್ತೆ) ಎಂಬ ಸಾಲಿನ ಜೊತೆಗೆ, ನರೇಂದ್ರ ಮೋದಿ ಅವರ ಚಿತ್ರ ಎದ್ದು ಕಾಣುವಂತಿತ್ತು. ಬಿಹಾರದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಮತ್ತು 19 ಲಕ್ಷ ಉದ್ಯೋಗಾವಕಾಶಗಳು ಎಂಬ ಚುನಾವಣಾ ಭರವಸೆಗಳು ಕಾಣಿಸಿಕೊಂಡಿದ್ದವು, ಆದರೆ ಜಾಹೀರಾತಿನಲ್ಲಿ ಎಲ್ಲಿಯೂ ನಿತೀಶ್ ಕುಮಾರ್ ಬಗ್ಗೆ ಪ್ರಸ್ತಾಪವಿರಲಿಲ್ಲ.

ಇತ್ತ ಎನ್‌ಡಿಎ ಮೈತ್ರಿಕೂಟದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತುಗಳಲ್ಲಿ ಎಲ್ಲೂ ಪ್ರಧಾನಿ ಮೋದಿಯವರ ಭಾವಚಿತ್ರ ಉಲ್ಲೇಖವಿರಲಿಲ್ಲ. ಈ ಚಿತ್ರವನ್ನು ಆರ್‌ಜೆಡಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ವ್ಯಂಗ್ಯವಾಡಿತ್ತು.

ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಚುನಾವಣಾ ಕಾರ್ಯಕ್ರಮದ ದಿನದಂದು ಮುಖ್ಯಮಂತ್ರಿ ನಿತೀಶ್‌ಕುಮಾರ್ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ಕೂಡ ನಿತೀಶ್ ತಮ್ಮ ಚಿತ್ರವನ್ನಷ್ಟೇ ಹಾಕಿಸಿಕೊಂಡಿದ್ದರು.


