ನಟಿ, ನಿರ್ದೇಶಕಿ, ಬರಹಗಾರ್ತಿ ಶೈಲಜಾ ಪಡಿಂದಲ ನಿರ್ದೇಶಿಸಿರುವ ಕನ್ನಡದ ಮೊದಲ ಲೆಸ್ಬಿಯನ್ ಪ್ರೇಮಕಥೆಯ ಚಿತ್ರ ‘ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ದೊರೆತಿದೆ.
ಲೆಸ್ಬಿಯನ್ ಪ್ರೇಮಕಥೆಯನ್ನು ಆಧರಿಸಿರುವ ಕನ್ನಡದ ಚಿತ್ರ ‘ನಾನು ಲೇಡಿಸ್’ ಅಕ್ಟೋಬರ್ 1 ರಿಂದ 16 ರವರೆಗೆ ಅಮೆರಿಕದ ಸಿಯಾಟಲ್‌ನಲ್ಲಿ ನಡೆದ 16 ನೇ ತಸ್ವೀರ್ ದಕ್ಷಿಣ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗಿತ್ತು.
’ನಾನು ಲೇಡಿಸ್’ ಚಲನಚಿತ್ರವು ಇಬ್ಬರು ಯುವತಿಯರು ಈ ಸಮಾಜದಲ್ಲಿ ತಮ್ಮ ಪ್ರೇಮವನ್ನು ಉಳಿಸಿಕೊಳ್ಳಲು ಹೆಣಗಾಡುವ ಕಥೆಯ ಜೊತೆಗೆ ಮಧ್ಯಮ ವರ್ಗದ ಆರ್ಥಿಕ ಸಮಸ್ಯೆಗಳು, ಸಮಾಜ, ಆರ್ಥಿಕ ವ್ಯವಸ್ಥೆ, ಲಿಂಗತ್ವ, ಮದುವೆ, ಸಲಿಂಗಿಗಳ ಸಮುದಾಯದ ಸಂತಾನೋತ್ಪತ್ತಿ ಹಕ್ಕುಗಳಂತಹ ಅನೇಕ ಅಂಶಗಳ ಕುರಿತು ಮಾತನಾಡುತ್ತದೆ ಎಂದು ಶೈಲಜಾ ಪಡಿಂದಲ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಐದು ವರ್ಷದ ಕೆಳಗೆ ಶೈಲಜಾ ‘ಮೆಮೋರೀಸ್ ಆಫ್ ಮೆಷೀನ್’ ಎಂಬ ಕಿರುಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಆ ಕಿರುಚಿತ್ರ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು.

ಚಿತ್ರದಲ್ಲಿ ಶೈಲಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೇದಿನಿ ಕೆಳಮನೆ, ಗುರು ಸೋಮಸುಂದರಮ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಹೊಸಬರಾದ ಕೋಮಲ್ ಖಿಯಾನಿ ಮತ್ತು ಚೆಹೆಕ್ ಬಿಲ್ಗಿ ಹೊತ್ತಿದ್ದಾರೆ. ಹರಿಣಿ ದಡ್ಡಲ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಚಿತ್ರದ ಪ್ರಮುಖ ಕೆಲಸಗಳನ್ನು ಮಹಿಳೆಯರೇ ಮಾಡಿರುವುದು ಈ ಚಿತ್ರದ ಗರಿಮೆ ಎನ್ನುತ್ತಾರೆ ಶೈಲಜಾ. ಈ ವರ್ಷದ ಡಿಸೆಂಬರ್‌ನಲ್ಲಿ ಒಟಿಟಿಗೆ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಆಗಿದೆ. ಜೊತೆಗೆ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಡುವ ಬಗ್ಗೆ ಚರ್ಚೆ ನೆಡಸುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕಿ ಶೈಲಜಾ ಪಡಿಂದಲ.

ನಾನು ಲೇಡಿಸ್ ಚಿತ್ರದ ಬಗ್ಗೆ ಶೈಲಜಾ ಪಡಿಂದಲ ಅವರ ಮಾತು ಕೇಳಲು ಇಲ್ಲಿ ಕ್ಲಿಕ್ ಮಾಡಿ.
ನಾನು ಲೇಡಿಸ್ ಚಿತ್ರದ ಟ್ರೈಲರ್ ಇಲ್ಲಿದೆ.
ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ


