ವಿವಾದಿತ ಕೃಷಿ ಕಾನೂನುಗಳ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಅವರನ್ನು ’ಪಂಜಾಬ್ ರಾಜಕೀಯದ ರಾಖಿ ಸಾವಂತ್’ ಎಂದು ಎಎಪಿಯ ರಾಘವ್ ಚಡ್ಡಾ ಕರೆದಿದ್ದಾರೆ.
ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಖಾಸಗಿ ಮಂಡಿಗಳಿಗೆ ಒಪ್ಪಿಗೆ ನೀಡಿದ್ದನ್ನು ಡಿನೋಟಿಫೈ ಮಾಡಿದ್ದಿರಾ ಅಥವಾ ನಿಮ್ಮ ಮುಖವಾಡ ಇನ್ನೂ ಹಾಗೆಯೇ ಮುಂದುವರೆಯುತ್ತಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ವಿಡಿಯೊವೊಂದರಲ್ಲಿ ಪ್ರಶ್ನೆ ಮಾಡಿದ್ದರು.
ಅರವಿಂದ್ ಕೇಜ್ರೀವಾಲ್ ಕೃಷಿ ಕಾನೂನುಗಳನ್ನು ವಿರೋಧಿಸುತ್ತಾ, ಅವುಗಳನ್ನು ಬೆಂಬಲಿಸುತ್ತಿದ್ದಾರೆ. ಎರಡು ಮುಖವಾಡ ಧರಿಸಿದ್ದಾರೆ ಎಂದು ನವಜೋತ್ ಸಿಂಗ್ ಸಿಧು ಆರೋಪಿಸಿದ್ದರು. ಇದನ್ನು ರೀ ಟ್ವೀಟ್ ಮಾಡಿ ಉತ್ತರ ನೀಡಿರುವ ರಾಘವ್ ಚಡ್ಡಾ, ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಹೋಲಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: 4 ರಾಜ್ಯಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
The Rakhi Sawant of Punjab politics -Navjot Singh Sidhu- has received a scolding from Congress high command for non stop rant against Capt. Therefore today,for a change, he went after Arvind Kejriwal. Wait till tomorrow for he shall resume his diatribe against Capt with vehemence https://t.co/9SDr8js8tA
— Raghav Chadha (@raghav_chadha) September 17, 2021
“ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು. ಕ್ಯಾಪ್ಟನ್ (ಮುಖ್ಯಮಂತ್ರಿ ಅಮರಿಂದರ್ ಸಿಂಗ್) ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಗದರಿಸಿದ್ದಾರೆ. ಆದ್ದರಿಂದ ಇಂದು ಬದಲಾವಣೆಗಾಗಿ, ಅವರು ಅರವಿಂದ ಕೇಜ್ರಿವಾಲ್ ಹಿಂದೆ ಬಿದ್ದಿದ್ದಾರೆ” ಎಂದಿದ್ದಾರೆ.
ಮುಂದುವರೆದು, “ನಾಳೆಯವರೆಗೆ ಕಾಯಿರಿ, ಅವರು ಕ್ಯಾಪ್ಟನ್ ವಿರುದ್ಧ ವೀರಾವೇಶದಿಂದ ಮತ್ತೆ ಹೇಳಿಕೆ ನೀಡುವುದನ್ನು ಪುನರಾರಂಭಿಸುತ್ತಾರೆ” ಎಂದು ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.
ರಾಜಕೀಯ ನಾಯಕರ ಹೇಳಿಕೆಗಳಲ್ಲಿ ನಟಿ ರಾಖಿ ಸಾವಂತ್ ಹೆಸರು ಬಳಸಿರುವುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟು ಕೀಳು ಮಟ್ಟದಲ್ಲಿ ಟ್ವೀಟ್ ಮಾಡುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಜ್ರಿವಾಲ್ ಮತ್ತು ಅವರ ಸರ್ಕಾರವು ಕೇಂದ್ರದ ಮೂರು ವಿವಾದಿತ ಕಾನೂನುಗಳಲ್ಲಿ ಒಂದನ್ನು ಪರಿಗಣಿಸಿ, ಇತರ ಎರಡು ಕಾನೂನುಗಳು “ಪರೀಕ್ಷೆಯಲ್ಲಿದೆ” ಎಂದು ಹೇಳಿ ಭಾರೀ ಟೀಕೆಗೆ ಒಳಗಾಗಿತ್ತು. ನಂತರ ರೈತರು ನಡೆಸಿದ ದೆಹಲಿ ಚಲೋ, ಅನಿರ್ಧಿಷ್ಠಾವಧಿ ಪ್ರತಿಭಟನೆಗೂ ಆಪ್ ಸರ್ಕಾರ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದೆ.
ಪಂಜಾಬ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಎರಡು ಕೂಡ ರೈತ ಪ್ರತಿಭಟನೆಯನ್ನು ಬೆಂಬಲಿಸುತ್ತಾ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಿವೆ.
ಇದನ್ನೂ ಓದಿ: ವಿಪಕ್ಷ ನಾಯಕರು ನಮ್ಮ ಕೆಲಸವನ್ನು ಹೊಗಳುತ್ತಿದ್ದಾರೆ-ಸಿಧು ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ


