ಬಾಲಿವುಡ್ ನಟ-ನಟಿಯರ ಮೇಲೆ ಸತತವಾಗಿ ಎನ್‌ಸಿಬಿ ದಾಳಿ ನಡೆಸುತ್ತಿರುವುದಕ್ಕೆ ಕಿಡಿ ಕಾರಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್, NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಸುಲಿಗೆ ಆರೋಪ ಮಾಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಅಸಹಜ ಸಾವಿಗೆ ತುತ್ತಾದ ಬಳಿಕ ಕೇಂದ್ರ ಸರ್ಕಾರ ಎನ್‌ಸಿಬಿಗೆ ಸಮೀರ್ ವಾಂಖೆಡೆ ಅವರನ್ನು ಕರೆ ತಂದಿದೆ ಎಂದು ಆರೋಪಿಸಿದ್ದಾರೆ. ಸುಶಾಂತ ಸಿಂಗ್ ಸಾವಿನ ಬಳಿಕ ಕೇಳಿ ಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ, ನಟಿಯರನ್ನು ಎನ್‌ಸಿಬಿ ಗುರಿ ಮಾಡಿತ್ತು.
ಮೃತ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ನಕಲಿ ಪ್ರಕರಣದಲ್ಲಿ ಸೇರಿಸಿದ್ದಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್
Here are the proofs! pic.twitter.com/ouq3nUXcs7
— Nawab Malik نواب ملک नवाब मलिक (@nawabmalikncp) October 21, 2021
“ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ, ವಿಶೇಷ ಅಧಿಕಾರಿಯನ್ನು ಎನ್‌ಸಿಬಿಗೆ ಕರೆತರಲಾಯಿತು. ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಅವರದ್ದು ಆತ್ಮಹತ್ಯೆ ಅಥವಾ ಕೊಲೆ ಎಂಬ ಬಗೆಗಿನ ರಹಸ್ಯವು ಬಗೆಹರಿದಿಲ್ಲ. ಆದರೆ, ಅದರ ನಂತರ ಎನ್‌ಸಿಬಿ ಚಿತ್ರೋದ್ಯಮದೊಂದಿಗೆ ಆಟವಾಡಲು ಆರಂಭಿಸಿತು” ಎಂದು ಮಲಿಕ್ ಹೇಳಿಕೊಂಡಿದ್ದಾರೆ.
“ಕೆಲವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಲಾಯಿತು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇಡೀ ಚಿತ್ರೋದ್ಯಮ ಮಾಲ್ಡೀವ್ಸ್‌ನಲ್ಲಿತ್ತು. ಈ ವೇಳೆ ಮಾಲ್ಡೀವ್ಸ್ ಮತ್ತು ದುಬೈನಲ್ಲಿ ಅಧಿಕಾರಿ ಮತ್ತು ಅವರ ಕುಟುಂಬ ಏನು ಮಾಡುತ್ತಿತ್ತು? ಇದನ್ನು ಸಮೀರ್ ವಾಂಖೆಡೆ ಸ್ಪಷ್ಟಪಡಿಸಬೇಕು” ಎಂದು ನವಾಬ್ ಮಲಿಕ್ ಒತ್ತಾಯಿಸಿದ್ದಾರೆ.
“ನಾವು ತುಂಬಾ ಸ್ಪಷ್ಟವಾಗಿದ್ದೇವೆ. ಈ ಎಲ್ಲಾ ಸುಲಿಗೆ ಮಾಲ್ಡೀವ್ಸ್ ಮತ್ತು ದುಬೈನಲ್ಲಿ ನಡೆದಿದೆ. ನಾನು ಆ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಹೇಳಿ ಸಮೀರ್ ವಾಂಖೆಡೆ ಅವರ ಕುಟುಂಬದವರು ಮಾಲ್ಡೀವ್ಸ್‌ನಲ್ಲಿರುವ ಪೋಟೋಗಳನ್ನು ಮಲಿಕ್ ಹಂಚಿಕೊಂಡಿದ್ದರು.
ಈ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿತ್ತು. ದಾಳಿ ಬಳಿಕ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಕೆಲವರನ್ನು ಎನ್‌ಸಿಬಿ ಬಂಧಿಸಿದೆ.
ಈ ಪ್ರಕರಣ ನಕಲಿ ಎಂದೇ ನವಾಬ್ ಮಲಿಕ್ ವಾದಿಸುತ್ತಿದ್ದಾರೆ. ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್‌ಸಿಬಿ ಗುರುವಾರ ಬಾಲಿವುಡ್ ನಟಿ ಅನನ್ಯ ಪಾಂಡೆ ಮನೆ ಮೇಲೆ ದಾಳಿ ನಡೆಸಿದ್ದು, ನಟಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಈ ಹಿಂದೆಯೂ ಡ್ರಗ್ಸ್ ಪ್ರಕರಣದಲ್ಲಿ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಒಕ್ಕೂಟ ಸರ್ಕಾರವು ಎನ್‌ಸಿಬಿ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ವಿರೋಧ ಪಕ್ಷಗಳ ವಿರುದ್ಧ ಬಳಸುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು


