ಜಾರ್ಖಂಡ್ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಲು ಮಿಲಿಟರಿಯ ಸಹಾಯ ಬೇಕಾಗಬಹುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸುಳಿವು ನೀಡಿದ್ದಾರೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ ಜನರಲ್ಲಿ ಉಂಟಾಗಿರುವ ಭಯದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ನಾವು ಪ್ರಧಾನ ಮಂತ್ರಿ, ಗೃಹ ಸಚಿವರು, ರಕ್ಷಣಾ ಸಚಿವರಿಗೆ ಪತ್ರ ಬರೆಯುತ್ತೇವೆ. ಅವರ ಮಿಲಿಟರಿ ಶಕ್ತಿ ಮತ್ತು ಸೌಲಭ್ಯಗಳನ್ನು ನಮ್ಮ ರಾಜ್ಯದಲ್ಲಿ ಬಳಸಲು ನಾವು ಬಯಸುತ್ತೇವೆ” ಎಂದು ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದರು.
ಕಳೆದ 24 ಗಂಟೆಗಳಲ್ಲಿ ಜಾರ್ಖಂಡ್ 3,838 ಹೊಸ ಪ್ರಕರಣಗಳನ್ನು ಮತ್ತು 30 ಸಾವುಗಳನ್ನು ವರದಿ ಮಾಡಿದೆ. ಇದರಿಂದ ಒಟ್ಟಾರೆ ರಾಜ್ಯದಲ್ಲಿ ಸುಮಾರು 1.6 ಲಕ್ಷ ಸೋಂಕಿತರು ವರದಿಯಾಗಿದ್ದರೆ, 1,400 ಕ್ಕೂ ಹೆಚ್ಚು ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ರೈತರೊಂದಿಗೆ ಮಾತುಕತೆ ನಡೆಸಿ ಎಂದು ಪ್ರಧಾನಿಗೆ ಪತ್ರ ಬರೆದ ಹರಿಯಾಣ ಡಿಸಿಎಂ
“ನಾನು ಉಪಚುನಾವಣೆ ಕಾರ್ಯಕ್ರಮದಿಂದ ಈಗಷ್ಟೇ ಹಿಂದಿರುಗಿದ್ದೇನೆ. ಜನರು ಮಾಸ್ಕ್‌ಗಳನ್ನು ಧರಿಸುವುದಿಲ್ಲ, ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ ಇದನ್ನೆಲ್ಲಾ ನೋಡಿ ನಾನು ಬೆಚ್ಚಿಬಿದ್ದಿದ್ದೇನೆ. ಜನರು ಸಂಪೂರ್ಣವಾಗಿ ಭಯವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಗಟ್ಟಿಯಾದ ಸಂದೇಶ ನೀಡುವ ಅಗತ್ಯವಿದೆ’’ ಎಂದು ಹೇಮಂತ್ ಸೊರೆನ್ ಎನ್‌ಡಿಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಜನರು ಕೊರೊನಾ ನಿಯಮಗಳನ್ನು ಮೀರದಂತೆ, ಅವುಗಳನ್ನು ಅನುಸರಿಸುವಂತೆ ನಿರ್ದೇಶನಗಳನ್ನು ನೀಡುವಂತೆ ಜಾರ್ಖಂಡ್ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡುವುದು ಮತ್ತು ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವುದು ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆ ಕೈಬಿಟ್ಟ ಕೇಂದ್ರ!
ಜಾರ್ಖಂಡ್‌ನಲ್ಲಿ ಸಾಕಷ್ಟು ಆಮ್ಲಜನಕ ಘಟಕಗಳಿವೆ ಆದರೂ, ಆರೋಗ್ಯ ರಕ್ಷಣಾ ವ್ಯವಸ್ಥೆಯು ಇನ್ನೂ ಕೊರತೆಯನ್ನು ಎದುರಿಸಬೇಕಾಗುತ್ತದೆ. ನಮಗೆ ಹೆಚ್ಚಿನ ರೆಮ್‌ಡೆಸಿವಿರ್ ಚುಚ್ಚುಮದ್ದುಗಳು ಬೇಕಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ದಂಡ ಹೆಚ್ಚಳದ ಬಗ್ಗೆ ಮಾತನಾಡಿರುವ ಅವರು, “ದಿನಕ್ಕೆ 200 ರೂಪಾಯಿ ಮಾತ್ರ ಗಳಿಸುವ ವ್ಯಕ್ತಿಯ ಮೇಲೆ ಮಾಸ್ಕ್ ಧರಿಸದಿದ್ದಕ್ಕಾಗಿ 1,000 ರೂಪಾಯಿ ದಂಡ ವಿಧಿಸುವ ಮೂಲಕ ನಾವು ಏನು ಸಾಬೀತುಪಡಿಸುತ್ತಿದ್ದೇವೆ?” ಅವನು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ಹೊಸ ಕಠಿಣ ನಿಯಮಗಳ ಭಾಗವಾಗಿ ಮಾಸ್ಕ್ ಇಲ್ಲದೇ ಮೊದಲ ಸಲ ಸಿಕ್ಕಿಬಿದ್ದ ಜನರಿಗೆ ಒಂದು ಸಾವಿರ ರೂಪಾಯಿ ಮತ್ತು ಎರಡನೇ ಸಲವೂ ಆ ತಪ್ಪು ಮಾಡಿದರೆ 10 ಸಾವಿರ ರೂ ದಂಡ ದಂಡ ವಿಧಿಸಲಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಸೋನು ಸೂದ್‌ಗೆ ಕೊರೊನಾ, ನಿಮ್ಮ ಸಮಸ್ಯೆ ಬಗೆಹರಿಸಲು ಹೆಚ್ಚಿನ ಸಮಯ ಸಿಗಲಿದೆ ಎಂದ ನಟ