Homeಅಂಕಣಗಳುನೇಪಾಳ ದಂಗೆ: ಒಂದೂವರೆ ದಿನದಲ್ಲಿ ಸರ್ಕಾರ ಪತನ- Gen Z ಮಾಡಿದ ಚಮತ್ಕಾರ

ನೇಪಾಳ ದಂಗೆ: ಒಂದೂವರೆ ದಿನದಲ್ಲಿ ಸರ್ಕಾರ ಪತನ- Gen Z ಮಾಡಿದ ಚಮತ್ಕಾರ

- Advertisement -
- Advertisement -

ನೇಪಾಳದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಬರೆಯಲ್ಪಟ್ಟಿದೆ. 2006ರ ‘ಜನ್ ಆಂದೋಲನ್ II’ಕ್ಕೆ 19 ದಿನಗಳು ಬೇಕಾಗಿದ್ದವು. ಆದರೆ 2025ರ ಸೆಪ್ಟೆಂಬರ್ 9ರಂದು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ಕೇವಲ 36 ಗಂಟೆಗಳ ಬೃಹತ್ ಪ್ರತಿಭಟನೆಯ ನಂತರ ರಾಜೀನಾಮೆ ನೀಡಿದರು. ಯುವಕರ ಅಕ್ರೋಶ ಎಷ್ಟಿತ್ತೆಂದರೆ, ಪೊಲೀಸರ ಗುಂಡಿಗೆ 19 ಜೀವಗಳು ಬಲಿಯಾದರೂ, 400 ಮಂದಿ ಗಾಯಗೊಂಡರೂ ಅವರು ಹಿಂದೆ ಸರಿಯಲಿಲ್ಲ. ಇದು ಭ್ರಷ್ಟಾಚಾರದ ವಿರುದ್ಧದ Gen Z ಆಕ್ರೋಶದ ಸ್ಪಷ್ಟ ಸಂದೇಶವಾಗಿತ್ತು. ನೇಪಾಳದಲ್ಲಿ ಯುವ ಶಕ್ತಿ ಹೊಸ ಇತಿಹಾಸ ಸೃಷ್ಟಿಸಿತು. Gen Z ಎಂದರೆ 1997-2012ರ ನಡುವೆ ಜನಿಸಿದ ಯುವ ತಲೆಮಾರು ಎಂದರ್ಥ.

ಈ ಬಾರಿಯ ಪ್ರತಿಭಟನೆಯು ಕೇವಲ ಸರ್ಕಾರದ ದಮನಕಾರಿ ನೀತಿಗಳು, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧದ ಆಕ್ರೋಶ ಮಾತ್ರವಲ್ಲದೆ, ಹತಾಶೆಗೊಂಡ ಯುವಕರ (Gen Z) ಬಲವಾದ ಧ್ವನಿಯನ್ನು ಎತ್ತಿ ತೋರಿಸಿದೆ. 2006ರ ಪ್ರಜಾಪ್ರಭುತ್ವ ಹೋರಾಟಕ್ಕಿಂತ ಭಿನ್ನವಾಗಿ, ಈ ಆಂದೋಲನವು ಭ್ರಷ್ಟಾಚಾರ ವಿರೋಧಿ ಆಕ್ರೋಶ ಮತ್ತು ರಾಜಪ್ರಭುತ್ವದ ಪುನರುತ್ಥಾನದ ಬೇಡಿಕೆಗಳ ಸಂಕೀರ್ಣ ಮಿಶ್ರಣವಾಗಿತ್ತು. ಹೊಸ ಪೀಳಿಗೆಗೆ, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಗೆ ರಾಜಪ್ರಭುತ್ವ ಒಂದು ಪರ್ಯಾಯವಾಗಿ ಕಂಡಿದೆ. ಆದರೆ, ಆ ವ್ಯವಸ್ಥೆಯ ಕ್ರೂರತೆಯನ್ನು ಅವರು ಇನ್ನೂ ಅರಿತುಕೊಳ್ಳಬೇಕಿದೆ, ಇದು ಈ ಚಳವಳಿಯ ಪ್ರಮುಖ ನಕಾರಾತ್ಮಕ ಅಂಶವಾಗಿದೆ.

ಯುವಕರ ಆಕ್ರೋಶ ಎಷ್ಟಿತ್ತೆಂದರೆ, ಬಹುತೇಕ ಎಲ್ಲಾ ಮಂತ್ರಿಗಳ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದ್ದಲ್ಲದೆ, ಸಂಸತ್ತಿಗೂ ಬೆಂಕಿ ಹಚ್ಚಲಾಗಿತ್ತು. ಓಲಿ ರಾಜೀನಾಮೆ ನೀಡಿದ ನಂತರ, ಪ್ರತಿಭಟನಾಕಾರರು ನಖ್ಖು ಜೈಲಿಗೆ ನುಗ್ಗಿ ಮಾಜಿ ಉಪಪ್ರಧಾನಿ ಮತ್ತು ರಾಷ್ಟ್ರೀಯ ಸ್ವತಂತ್ರ ಪಕ್ಷ (RSP)ದ ನಾಯಕ ರಬಿ ಲಮಿಚ್ಚಾನೆ ಅವರನ್ನು ಬಿಡುಗಡೆ ಮಾಡಿದರು.

ಸರ್ಕಾರ ಪತನಗೊಂಡ ನಂತರ, ನೇಪಾಳದ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ. ಈ ಆಕ್ರೋಶದ ಕಾರಣಗಳು ಆಳವಾಗಿ ಬೇರೂರಿದ್ದರೂ, ಈಗ ದೇಶದ ಮುಂದಿರುವ ಪ್ರಮುಖ ಸವಾಲು, ಈ ಆಕ್ರೋಶವನ್ನು ರಚನಾತ್ಮಕ ಸುಧಾರಣೆಗಳಾಗಿ ಪರಿವರ್ತಿಸುವುದಾಗಿದೆ. ಹೊಸ ನಾಯಕತ್ವವು ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತದೆಯೇ, ಅಥವಾ ದೇಶವು ಮತ್ತೆ ಅರಾಜಕತೆ ಮತ್ತು ಅಸ್ಥಿರತೆಗೆ ಸಿಲುಕಲಿದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಈ ಘಟನೆಯು ಆಕ್ರೋಶ ಮತ್ತು ಸುಧಾರಣೆಯ ನಡುವಿನ ತೂಗಾಟದ ಪ್ರಬಲ ಸಂಕೇತವಾಗಿದೆ.

ಈ ಸಂಪೂರ್ಣ ಚಳವಳಿ, ನಿರಂತರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಯುವ ಪೀಳಿಗೆಯ ದಂಗೆಯಾಗಿ ಪ್ರಾರಂಭವಾಯಿತು. ಈ ಘಟನೆಗೆ ಅಂತಿಮ ಪ್ರಚೋದನೆ ಎಂದರೆ, ಸರ್ಕಾರ ವಿಧಿಸಿದ್ದ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್ ಮೇಲಿನ ನಿಷೇಧ. ಆದರೆ ಓಲಿ ಸರ್ಕಾರದ ವಿರುದ್ಧ ಬಹಳ ಸಮಯದಿಂದ ಉದ್ವೇಗಗಳು ಹೆಚ್ಚಾಗುತ್ತಲೇ ಇದ್ದವು.

ನೇಪಾಳದ ಯುವಜನರು ಬೀದಿಗಿಳಿದು, ಕೇವಲ ಸೆನ್ಸಾರ್‌ಶಿಪ್‌ಗೆ ಮಾತ್ರವಲ್ಲದೆ, ಭ್ರಷ್ಟ ಮತ್ತು ದುರ್ಬಲ ವ್ಯವಸ್ಥೆಯ ವಿರುದ್ಧವೂ ಆಕ್ರೋಶಗೊಂಡರು. ರಾಜಕೀಯದಲ್ಲಿನ “ನೆಪೋ ಕಿಡ್ಸ್‌”ಗಳನ್ನು ಗುರಿಯಾಗಿಸಿಕೊಂಡಿದ್ದ ಆನ್‌ಲೈನ್ ಚಳವಳಿಯೊಂದು ವೇಗ ಪಡೆದುಕೊಳ್ಳುತ್ತಿದ್ದಾಗ ಈ ನಿಷೇಧವನ್ನು ವಿಧಿಸಲಾಗಿತ್ತು. (ನೆಪೋ ಕಿಡ್ಸ್ ಎಂದರೆ- ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿ, ಉದ್ಯಮಿಗಳ ಮಕ್ಕಳು) ಆದರೆ ಈ ಆಕ್ರೋಶ ವರ್ಷಗಳಿಂದಲೂ ಬೆಳೆಯುತ್ತಿತ್ತು. ಜನಸಂಖ್ಯೆಯ ಸುಮಾರು 40%ರಷ್ಟಿರುವ ಯುವಜನತೆಯ ಹತಾಶೆ ಕೊನೆಗೂ ಸ್ಫೋಟಗೊಂಡಿತು. ಕಳೆದ 16 ವರ್ಷಗಳಲ್ಲಿ ದೇಶವು 14 ಸರ್ಕಾರಗಳನ್ನು ನೋಡಿದ್ದರೂ, ಶಿಕ್ಷಣ, ಉದ್ಯೋಗ ಅಥವಾ ಮೂಲಸೌಕರ್ಯಗಳಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.

ಯುವ ಜನರ ಆಕ್ರೋಶ ಕೇವಲ ಹಳೆಯ ವ್ಯವಸ್ಥೆಯನ್ನು ಕೆಡವಲು ಮಾತ್ರವಲ್ಲ, ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟಿತು. ದಶಕಗಳ ಹತಾಶೆಯು ಹೊಸ ರಾಜಕೀಯ ಧ್ವನಿಗಳಿಗೆ ವೇದಿಕೆ ಸಿದ್ಧಪಡಿಸಿತು, ಅವರು ಸುಧಾರಣೆಗಾಗಿ ಹಂಬಲಿಸುತ್ತಿದ್ದರು. ಈ ಬಿರುಗಾಳಿಯ ಮಧ್ಯೆ, ಕಠ್ಮಂಡುವಿನ ಮೇಯರ್, ಒಬ್ಬ ಮಾಜಿ ರ್ಯಾಪರ್ ಮತ್ತು ಇಂಜಿನಿಯರ್ ಆಗಿದ್ದ ಬಾಲೇಂದ್ರ ಶಾ ಅವರು ದಂಗೆಯ ಹೊಸ ಮುಖವಾಗಿ ಹೊರಹೊಮ್ಮಿ ಜನರ ನಂಬಿಕೆ ಗಳಿಸಿದರು.

”ದೇಶ ನಿಮ್ಮ ಕೈಯಲ್ಲಿದೆ, ನೀವೇ ಅದನ್ನು ನಿರ್ಮಿಸುತ್ತೀರಿ. ಈಗ ಎಷ್ಟೇ ಹಾನಿಯಾದರೂ, ಅದು ನಮ್ಮದೇ”. ಇದನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು Gen Zಗೆ ನೀಡಿದ ಆಹ್ವಾನವಾಗಿತ್ತು. ತಮ್ಮ ಸಂದೇಶಗಳ ಮೂಲಕ ಅವರು ಯುವಜನರ ಹೋರಾಟವನ್ನು ದೇಶದ ಭವಿಷ್ಯದೊಂದಿಗೆ ಜೋಡಿಸಿದರು. ಮತ್ತೊಂದು ನಾಟಕೀಯ ಹೇಳಿಕೆಯಲ್ಲಿ, ಅವರು ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ಆರಂಭವಾಗಬೇಕಿದ್ದರೆ, “ಸಂಸತ್ತನ್ನು ಅಡ್ಡಿಪಡಿಸಬೇಕು” ಎಂದು ಕರೆ ನೀಡುವ ಮೂಲಕ, ದೇಶದ ಪ್ರಸ್ತುತ ರಾಜಕೀಯ ಸಂಸ್ಥೆಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬ ಕಟು ಸತ್ಯವನ್ನು ಸಾರಿದರು. ಈ ಮಾತುಗಳು ನೇಪಾಳದಲ್ಲಿ ದಂಗೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದವು.

ನಾವು ಹೇಳಿದ್ದು ಸ್ಪಷ್ಟ, ಇದು Gen Z ಯುದ್ಧ. ಪ್ರೀತಿಯ Gen Z, ನಿಮ್ಮ ಹಂತಕ ಅಧಿಕಾರದಿಂದ ಕೆಳಗಿಳಿದಿದ್ದಾನೆ. ಈಗ ನಮ್ಮ ಕೋಪವನ್ನು ತಣ್ಣಗೆ ಇಟ್ಟುಕೊಳ್ಳೋಣ. ಏಕೆಂದರೆ ದೇಶದ ಆಸ್ತಿಪಾಸ್ತಿಗಳು ಸುಟ್ಟು ಹೋಗುವುದು ನಮ್ಮದೇ ಭವಿಷ್ಯ ಸುಟ್ಟು ಹೋದಂತೆ. ಸಂಯಮದಿಂದ ಇರಿ. ಈ ದೇಶವನ್ನು ಮುನ್ನಡೆಸುವ ಹೊಣೆ ಈಗ ನಿಮ್ಮ ಮೇಲಿದೆ. ಸಿದ್ಧರಾಗಿ! ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆಗೆ ಸಿದ್ಧರಾಗಿ. ಆದರೆ, ಅಸ್ಥಿರವಾಗಿರುವ ಈ ರಾಜಕೀಯ ವ್ಯವಸ್ಥೆಯನ್ನು ಮೊದಲು ಸರಿಪಡಿಸಬೇಕು, ಅದಕ್ಕೆ ಸಂಸತ್ತನ್ನು ಅಡ್ಡಿಪಡಿಸುವುದು ಮೊದಲ ಹಂತ ಎಂದು ಬಾಲೇಂದ್ರ ಶಾ ತಮ್ಮ ಸಂದೇಶದಲ್ಲಿ ತಿಳಿಸಿದರು.

ಕೆ.ಪಿ. ಶರ್ಮಾ ಓಲಿ ಅವರ ವಿರುದ್ಧದ ಆಕ್ರೋಶ ಕೇವಲ 36 ಗಂಟೆಗಳಲ್ಲಿ ಸ್ಫೋಟಗೊಂಡ ಆಕ್ರೋಶವಾಗಿರಲಿಲ್ಲ. ಅದು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡ ದಂಗೆಯ ಪರಿಣಾಮವಾಗಿತ್ತು. 2024ರಲ್ಲಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಅವರ ಸರ್ಕಾರದ ಮೇಲೆ ಭ್ರಷ್ಟಾಚಾರದ ಕಪ್ಪು ಚುಕ್ಕೆಗಳು ಹೆಚ್ಚುತ್ತಲೇ ಹೋದವು. ಈ ವ್ಯವಸ್ಥೆಯ ವಿರುದ್ಧದ ಹತಾಶೆ ಎಷ್ಟು ಆಳವಾಗಿ ಬೇರೂರಿತ್ತೆಂದರೆ, ಜನತೆ ಹಳೆಯ ರಾಜಪ್ರಭುತ್ವಕ್ಕೆ ಮರಳಲು ಬಯಸಿದರು ಮತ್ತು ಪದಚ್ಯುತ ರಾಜ ಜ್ಞಾನೇಂದ್ರನಿಗೆ ಬೆಂಬಲ ಘೋಷಿಸಿದರು. ಈ ಪತನವು, ಕಳೆದ ಮೂರು ವರ್ಷಗಳಿಂದ ನೇಪಾಳ ಸರ್ಕಾರಗಳ ವಿರುದ್ಧ ಜನರ ಅಸಂತೋಷದ ಒಂದು ಸ್ಪಷ್ಟ ಪ್ರತಿಬಿಂಬವಾಗಿತ್ತು.

ನೇಪಾಳದಲ್ಲಿ ಬಿನ್ನಾಭಿಪ್ರಾಯಕ್ಕೆ ಜಾಗವಿಲ್ಲ ಎಂಬುದು ಸ್ಪಷ್ಟವಾಗಿತ್ತು. ಭಿನ್ನಾಭಿಪ್ರಾಯದ ಧ್ವನಿಗಳನ್ನು ದಮನ ಮಾಡಲಾಗುತ್ತಿತ್ತು. ಫೆಬ್ರವರಿ 2022ರಲ್ಲಿ, ಯುಎಸ್ ನೀಡಿದ $500 ಮಿಲಿಯನ್ ಅನುದಾನದ ವಿರುದ್ಧ ಪ್ರತಿಭಟಿಸಿದ ಜನರನ್ನು ಬಲವಂತವಾಗಿ ನಿಲ್ಲಿಸಲಾಯಿತು. ಸಾರ್ವಭೌಮತ್ವದ ಅಪಾಯವನ್ನು ಕಂಡು ಬೀದಿಗಿಳಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಈ ಆಕ್ರೋಶದ ಮುಂದುವರಿದ ಭಾಗವಾಗಿ, ನವೆಂಬರ್ 2023ರಲ್ಲಿ, ಸಾವಿರಾರು ಜನರು ಕಠ್ಮಂಡುವಿನಲ್ಲಿ ‘ರಾಜರು ಮರಳಿ ಬರಲಿ’ ಮತ್ತು ‘ಹಿಂದೂ ರಾಷ್ಟ್ರವಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು. ಇದು ಜನರ ಹತಾಶೆ ಯಾವ ಮಟ್ಟಕ್ಕೆ ತಲುಪಿತ್ತು ಎಂಬುದನ್ನು ತೋರಿಸುತ್ತದೆ.

ಡಿಜಿಟಲ್ ಜಗತ್ತಿನಲ್ಲಿಯೂ ನೇಪಾಳದ ಜನರ ಸ್ವಾತಂತ್ರ್ಯಕ್ಕೆ ಕತ್ತರಿ ಬೀಳುವ ಅಪಾಯ ಹೆಚ್ಚಾಗಿದೆ. ಆಗಸ್ಟ್ 2023ರಲ್ಲಿ ಜಾರಿಯಾದ ರಾಷ್ಟ್ರೀಯ ಸೈಬರ್ ಭದ್ರತಾ ನೀತಿಯಿಂದಾಗಿ, ಸರ್ಕಾರವು ಇಂಟರ್ನೆಟ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಹೊರಟಿದೆ. ಈ ನೀತಿಯು ನಾಗರಿಕರ ಚಲನವಲನಗಳನ್ನು ಗುಪ್ತವಾಗಿ ನೋಡಲು, ಮಾಹಿತಿಯನ್ನು ಅಳಿಸಿಹಾಕಲು ಮತ್ತು ಖಾಸಗಿ ಡೇಟಾವನ್ನು ಕದಿಯಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಆದರೆ, ಈ ನೀತಿಯಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ಯಾವುದೇ ಮಾತಿಲ್ಲ. ಇದರ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಗಂಭೀರ ಎಚ್ಚರಿಕೆ ನೀಡಿವೆ. ಇದು ನೇಪಾಳದ ಪ್ರಜಾಪ್ರಭುತ್ವದ ಹಾದಿಯಲ್ಲಿ ಒಂದು ಹಿನ್ನಡೆಯಾಗಿದೆ.

ಮಾರ್ಚ್‌ನಲ್ಲಿ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ರಾಜಪ್ರಭುತ್ವ ಪರ ಚಳವಳಿ ತೀವ್ರಗೊಂಡಿತು. ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (RPP) ಮತ್ತು ದುರ್ಗಾ ಪ್ರಸಾಯ್ ಅವರ ನಾಗರಿಕರ ಅಭಿಯಾನದ ನೇತೃತ್ವದಲ್ಲಿ, ಸಾವಿರಾರು ಜನರು ಹಳೆಯ ಗಣರಾಜ್ಯ ಪೂರ್ವ ಧ್ವಜಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಈ ಮೆರವಣಿಗೆಗೆ ಮಾಜಿ ರಾಜ ಜ್ಞಾನೇಂದ್ರ ಅವರಿಗೆ ವಿಮಾನ ನಿಲ್ದಾಣದಲ್ಲಿ ದೊರೆತ ಭವ್ಯ ಸ್ವಾಗತವೇ ಪ್ರೇರಣೆಯಾಗಿತ್ತು. ಈ ಕಾರ್ಯಕ್ರಮದಲ್ಲಿ “ರಾಜಾ ಹಿಂದಿರುಗಿ ಬಾ, ದೇಶವನ್ನು ರಕ್ಷಿಸು” ಎಂದು ಕೂಗಿದ ಘೋಷಣೆಗಳು, ಪ್ರಸ್ತುತ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನರಿಗೆ ರಾಜಪ್ರಭುತ್ವವೇ ಏಕೈಕ ಪರ್ಯಾಯ ಎಂಬ ಭಾವನೆ ಮೂಡುತ್ತಿರುವುದು ವಿಪರ್ಯಾಸವೇ ಸರಿ.

ಜ್ಞಾನೇಂದ್ರ ಅವರು 2001ರ ದುರಂತ ಹತ್ಯಾಕಾಂಡದ ನಂತರ ರಾಜನಾದರು. ಅವರು 2005ರಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ವಜಾಗೊಳಿಸಿ, ದೇಶದ ಸಂಪೂರ್ಣ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡು ನಿರಂಕುಶ ರಾಜರಾದರು. ಆದರೆ, ಅವರ ಆಳ್ವಿಕೆ ಹೆಚ್ಚು ಕಾಲ ಉಳಿಯಲಿಲ್ಲ. 2006ರಲ್ಲಿ ಪ್ರಜಾಪ್ರಭುತ್ವದ ಪರವಾಗಿ ನಡೆದ ಬೃಹತ್ ಜನ ಆಂದೋಲನದಿಂದ ಅವರು ಅಧಿಕಾರವನ್ನು ಕಳೆದುಕೊಂಡರು. ಆದರೂ, ಜನರ ಕಣ್ಣಿಗೆ ಬಿದ್ದಿರುವ ಅವರ ಈ ರಾಜಕೀಯ ಪ್ರಯಾಣ ಅಲ್ಲಿಗೆ ನಿಲ್ಲಲಿಲ್ಲ. ಪ್ರಜಾಪ್ರಭುತ್ವ ದಿನದ ಭಾಷಣದಲ್ಲಿ, “ಬಹಿಷ್ಕಾರದ ರಾಜಕೀಯ”ದ ಬಗ್ಗೆ ಮಾತನಾಡಿದ ಅವರು, ದೇಶವು “ತನ್ನ ಆತ್ಮವನ್ನು ಕಳೆದುಕೊಳ್ಳುತ್ತಿದೆ” ಎಂದು ಎಚ್ಚರಿಕೆ ನೀಡುವ ಮೂಲಕ, ಇನ್ನೂ ರಾಜಪ್ರಭುತ್ವದ ಪರ ಇರುವವರಿಗೆ ಭರವಸೆಯ ದನಿ ನೀಡಿದರು.

ರಾಜಪ್ರಭುತ್ವದ ಮರು ಆಗಮನದ ಘೋಷಣೆಗಳನ್ನು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಮಾಜಿ ನಾಯಕ ಪುಷ್ಪ ಕಮಲ್ ದಹಲ್ ಸುಲಭವಾಗಿ ತಳ್ಳಿಹಾಕಿದರು. “ರಾಜ ಜ್ಞಾನೇಂದ್ರ ಅವರಿಗೆ ನಿಜವಾದ ಜನಬೆಂಬಲವಿದ್ದರೆ, ರಾಜಕೀಯಕ್ಕೆ ಬರಲಿ,” ಎಂದು ಸವಾಲೆಸೆದರು.

ಈ ಮಾತುಗಳ ನಂತರ, ದೇಶದ ರಾಜಕೀಯ ತಿರುವು ಮತ್ತಷ್ಟು ಆಶ್ಚರ್ಯ ತಂದಿತು. ಜುಲೈ 2024ರಲ್ಲಿ, 72ರ ಹರೆಯದ ಓಲಿ ಅವರು ನಾಲ್ಕನೇ ಬಾರಿಗೆ ಪ್ರಧಾನಿ ಗಾದಿಗೇರಿದರು. ಅವರ ರಾಜಕೀಯ ನಿಲುವು ಕೂಡ ಬದಲಾಗಿತ್ತು; ಈ ಹಿಂದೆ ಭಾರತಕ್ಕೆ ಹತ್ತಿರವಾಗಿದ್ದ ಓಲಿ, ಈ ಬಾರಿ ಚೀನಾಕ್ಕೆ ಹತ್ತಿರವಾಗುವ ಮೂಲಕ ತಮ್ಮ ಹೊಸ ಮಾರ್ಗವನ್ನು ಸ್ಪಷ್ಟಪಡಿಸಿದರು.

ಮಾಜಿ ಮಾವೋವಾದಿ ನಾಯಕ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರ ಸರ್ಕಾರ ಸಂಸತ್ತಿನಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ವಿಫಲವಾದಾಗ, ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಯಿತು. ಈ ಸಂದರ್ಭದಲ್ಲಿ, ಅಧ್ಯಕ್ಷ ಪೌಡೆಲ್ ಅವರು ರಾಜಕೀಯ ಬಿಕ್ಕಟ್ಟನ್ನು ನಿವಾರಿಸಲು ಸಂವಿಧಾನದ 76 (2)ನೇ ವಿಧಿಯನ್ನು ಬಳಸಿಕೊಂಡರು. ಈ ವಿಧಿಯು, ಬಹುಮತ ಹೊಂದಿರುವ ಅಥವಾ ಬಹುಮತದ ವಿಶ್ವಾಸ ಗಳಿಸಬಲ್ಲ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ನೇಮಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ. ಇದರ ಆಧಾರದ ಮೇಲೆ, ಅವರು CPN-UML ಮತ್ತು ನೇಪಾಳಿ ಕಾಂಗ್ರೆಸ್‌ಗೆ ಹೊಸ ಸಮ್ಮಿಶ್ರ ಸರ್ಕಾರ ರಚಿಸುವಂತೆ ಆಹ್ವಾನಿಸಿದರು. ಈ ಬೆಳವಣಿಗೆಯೇ ಓಲಿ ಅವರ ಪುನರಾಗಮನಕ್ಕೆ ವೇದಿಕೆ ಕಲ್ಪಿಸಿತು.

ಅಧ್ಯಕ್ಷರ ಆಹ್ವಾನದ ಬೆನ್ನಲ್ಲೇ, ನೇಪಾಳದ ರಾಜಕೀಯದಲ್ಲಿ ಒಂದು ಹೊಸ ಮೈತ್ರಿ ಮೂಡಿಬಂದಿತು. CPN-UML ನಾಯಕ ಓಲಿ ಅವರು ತಮ್ಮ ಹೊಸ ಪಾಲುದಾರರಾದ ನೇಪಾಳಿ ಕಾಂಗ್ರೆಸ್‌ನ ಅಧ್ಯಕ್ಷ ಶೇರ್ ಬಹದ್ದೂರ್ ದೇಉಬಾ ಅವರೊಂದಿಗೆ ಕೈ ಜೋಡಿಸಿ, ಸರ್ಕಾರ ರಚಿಸುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಬಹುಮತಕ್ಕೆ ಬೇಕಾಗಿದ್ದ 138 ಸ್ಥಾನಗಳ ವಿರುದ್ಧ, ಅವರು ತಮ್ಮ ಪಕ್ಷದ 78 ಮತ್ತು ನೇಪಾಳಿ ಕಾಂಗ್ರೆಸ್‌ನ 88 ಸ್ಥಾನಗಳನ್ನು ಸೇರಿಸಿ, ಭಾರಿ ಅಂತರದೊಂದಿಗೆ 166 ಶಾಸಕರ ಬೆಂಬಲ ಪಡೆದುಕೊಂಡರು. ಈ ಬೆಂಬಲವೇ ಓಲಿ ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಮತ್ತೊಮ್ಮೆ ಏರಿಸಲು ಕಾರಣವಾಯಿತು, ಈ ಮೂಲಕ ರಾಜಕೀಯ ಅನಿಶ್ಚಿತತೆಗೆ ತಾತ್ಕಾಲಿಕ ತೆರೆಬಿತ್ತು.

ಪ್ರಧಾನಿ ಓಲಿ ಅವರ ಅಧಿಕಾರಾವಧಿಯ ಒಂದು ಪ್ರಮುಖ ಅಂಶವೆಂದರೆ, ಅವರು ಭಾರತಕ್ಕೆ ಭೇಟಿ ನೀಡಲು ನಿರಾಕರಿಸಿದ್ದಾಗಿದೆ. ಈ ಹಿಂದೆ 2016 ಮತ್ತು 2018ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರೂ, ಈ ಬಾರಿಯ ಅವಧಿಯಲ್ಲಿ ಅವರು ಭಾರತಕ್ಕೆ ಭೇಟಿ ನೀಡದ ಏಕೈಕ ನೇಪಾಳಿ ಪ್ರಧಾನಿಯಾಗಿ ಉಳಿದುಕೊಂಡರು. ನೇಪಾಳದಿಂದ ಬಂದ ವರದಿಗಳು, ಅವರು ಚೀನಾ ಪ್ರವಾಸದ ನಂತರ ಸೆಪ್ಟೆಂಬರ್ 16ರಂದು ಭಾರತಕ್ಕೆ ಭೇಟಿ ನೀಡಬಹುದು ಎಂದು ಸೂಚಿಸಿದ್ದವು, ಆದರೆ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದು ಭಾರತ-ನೇಪಾಳದ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ.

ಇತ್ತೀಚೆಗೆ ಪುನರಾರಂಭಗೊಂಡ ಉತ್ತರಾಖಂಡದ ಲಿಪುಲೇಖ್ ಪಾಸ್ ವ್ಯಾಪಾರ ಮಾರ್ಗವು ಹೊಸ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಯಿತು. ನೇಪಾಳದ ಪ್ರಧಾನಿ ಓಲಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಈ ಲಿಪುಲೇಖ್ ಪಾಸ್ ನೇಪಾಳದ ಭೂಪ್ರದೇಶದಲ್ಲಿ ಇದೆ ಎಂದು ನೇರವಾಗಿ ಹೇಳಿದರು. ಇದು ಭಾರತದ ಕಠಿಣ ವಿರೋಧಕ್ಕೆ ಕಾರಣವಾಯಿತು, ಏಕೆಂದರೆ ಭಾರತ ಲಿಪುಲೇಖ್ ತನ್ನ ಅವಿಭಾಜ್ಯ ಸಾರ್ವಭೌಮ ಭಾಗವೆಂದು ಪರಿಗಣಿಸುತ್ತದೆ. ಈ ಹೇಳಿಕೆಯು ಕೇವಲ ಒಂದು ರಾಜತಾಂತ್ರಿಕ ಭಿನ್ನಾಭಿಪ್ರಾಯವಾಗಿರದೆ, 2015ರ ನಂತರ ನೇಪಾಳದ ನಾಯಕನೊಬ್ಬ ಚೀನಾದೊಂದಿಗೆ ಭಾರತದ ಭೂಪ್ರದೇಶದ ಬಗ್ಗೆ ಇಷ್ಟು ನೇರವಾಗಿ ಹಕ್ಕು ಮಂಡಿಸಿದ್ದು ಇದೇ ಮೊದಲು ಎಂಬ ಕಾರಣಕ್ಕೆ ಇದು ಹೆಚ್ಚು ಮಹತ್ವ ಪಡೆದಿದೆ.

ನೇಪಾಳ ಈಗ ಭೂರಾಜಕೀಯದ ಕುರುಕ್ಷೇತ್ರದಲ್ಲಿದೆ. ಒಂದು ಕಡೆ, ದೊಡ್ಡಣ್ಣನಂತೆ ಭಾರತ ನಿಂತಿದೆ, ಅದು ತನ್ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ $8.85 ಬಿಲಿಯನ್ ವ್ಯವಹಾರ ನಡೆಸುತ್ತದೆ. ಇನ್ನೊಂದು ಕಡೆ, ಚೀನಾ ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಮೂಲಕ ನೇಪಾಳಕ್ಕೆ ಭಾರಿ ಹೂಡಿಕೆ ಮಾಡುತ್ತಿದೆ. ಆದರೂ, ಆ ಹೆಚ್ಚುತ್ತಿರುವ ಸಾಲ ನೇಪಾಳದ ಮೇಲೆ ಕತ್ತಿಯಂತೆ ತೂಗಾಡುತ್ತಿದೆ. ಇದೇ ಸಮಯದಲ್ಲಿ, ಯುಎಸ್‌ನಿಂದ ಬಂದ $500 ಮಿಲಿಯನ್ MCC ನೆರವು ಕೂಡ ದೇಶೀಯ ರಾಜಕೀಯ ವಿರೋಧಕ್ಕೆ ಒಳಗಾಗಿ ಆತಂಕ ಸೃಷ್ಟಿಸಿದೆ. ನೇಪಾಳವು ಈ ಮೂರು ಶಕ್ತಿಗಳ ನಡುವಿನ ಸಂಘರ್ಷದಲ್ಲಿ ಸಿಲುಕಿದ್ದು, ಅದರ ಭವಿಷ್ಯ ಅನಿಶ್ಚಿತವಾಗಿದೆ.

ಪ್ರಧಾನಿ ಓಲಿ (ಮಾಜಿ) ಅವರ ನಿರ್ಧಾರಗಳು ನೇಪಾಳವನ್ನು ಅಂತರರಾಷ್ಟ್ರೀಯ ರಾಜಕೀಯದ ಒಂದು ಆಕರ್ಷಕ ಕೇಂದ್ರವನ್ನಾಗಿ ಮಾಡಿದೆ. ಒಂದು ಕಡೆ, ಅವರು ಡಿಸೆಂಬರ್ 2024ರಲ್ಲಿ ಚೀನಾದ ದೈತ್ಯ ಯೋಜನೆಯಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (BRI) ಗೆ ಸೇರಿಕೊಂಡು, ಚೀನಾಕ್ಕೆ ಹತ್ತಿರವಾದರು. ಆದರೆ ಅದೇ ಸಮಯದಲ್ಲಿ, ಯುಎಸ್‌ನಿಂದ ದೊರೆತ $500 ಮಿಲಿಯನ್ ಮಿಲೇನಿಯಮ್ ಚಾಲೆಂಜ್ ಕಾರ್ಪೊರೇಷನ್ (MCC) ಒಪ್ಪಂದದ ಮೂಲಕ ನೇಪಾಳದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ಹಣ ಹರಿದುಬರುವಂತೆ ನೋಡಿಕೊಂಡರು. ಈ ನಡೆ ನೇಪಾಳವು ಚೀನಾ ಮತ್ತು ಅಮೆರಿಕ ಎರಡರಿಂದಲೂ ಲಾಭ ಪಡೆಯಲು ಪ್ರಯತ್ನಿಸುತ್ತಿದೆಯೇ ಅಥವಾ ಈ ಎರಡು ಸೂಪರ್ ಪವರ್‌ಗಳ ನಡುವೆ ಅಪಾಯಕಾರಿ ಆಟವನ್ನು ಆಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೂಲ: ದೇಬದತ್ತ ಚಕ್ರವರ್ತಿ, ದಿ ಪ್ರಿಂಟ್

ನೇಪಾಳದ ನೆಪೋ ಕಿಡ್ಸ್ vs ಯುವ ಶಕ್ತಿ: ವ್ಯವಸ್ಥೆ ಬದಲಾವಣೆಯ ಹೋರಾಟ

ನೇಪಾಳ: ಮಂಗಳವಾರವೂ ಸಂಸತ್ತಿಗೆ ನುಗ್ಗಿದ ಪ್ರತಿಭಟನಾಕಾರರು; ಹಲವು ಉನ್ನತ ರಾಜಕೀಯ ನಾಯಕರ ಮನೆಗಳು ಬೆಂಕಿಗಾಹುತಿ

ನೇಪಾಳ ಪ್ರಧಾನಿ ಕೆ.ಪಿ.ಒಲಿ ರಾಜೀನಾಮೆ: ಕಾರಣವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...