ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿಗಳ ಬದಲಾವಣೆ, ರಾಜೀನಾಮೆ ವಿಚಾರಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರ ಮೇಲೆ ಹೈಕಮಾಂಡ್ಗೆ ವಿಶ್ವಾಸ ಇದೆ. ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಮುಂದಿನ ದಿನಗಳಲ್ಲೂ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಅರುಣ್ ಸಿಂಗ್ ಅವರನ್ನು ಕಳಿಸಲಾಗಿದೆ. ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿತ್ತು. ಆದರೆ, ಎಲ್ಲಾ ಶಾಸಕರು ಮತ್ತು ಸಚಿವರುಗಳನ್ನು ಭೇಟಿ ಮಾಡಿ ಖುದ್ದು ಮಾತನಾಡಿರುವ ಅರುಣ್ ಸಿಂಗ್, ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ.
“ಸರ್ಕಾರ, ಶಾಸಕರು, ಸಚಿವರು ಮತ್ತು ಸಿಎಂ ಯಡಿಯೂರಪ್ಪ ಹಗಲು ರಾತ್ರಿ ದುಡಿದಿದ್ದಾರೆ. ನಮಗೆ ಎಲ್ಲಾ ಶಾಸಕರು, ಸಂಸದರು ಒಂದೇ. ನಾಯಕತ್ವ ಬದಲಾವಣೆ ಬಗ್ಗೆ ಅವರು ಮಾತನಾಡುವುದು ಸಹಜ. ಆದರೆ, ಹೈಕಮಾಂಡ್ ಪ್ರತಿ ಬಾರಿಯೂ ಹೇಳಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮ್ಯಾಗಿ ಸೇರಿದಂತೆ ನೆಸ್ಲೆಯ 60% ಉತ್ಪನ್ನಗಳು ಆರೋಗ್ಯಕರವಲ್ಲ: ಸಂಸ್ಥೆಯ ಆಂತರಿಕ ವರದಿ
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹೆಚ್ಚುತ್ತಿರುವ ದೂರುಗಳ ಬಗ್ಗೆಯೂ ಅರುಣ್ ಸಿಂಗ್ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಅವರು ತಮ್ಮದೇ ಪಕ್ಷದ ಸಹೋದ್ಯೋಗಿಗಳಿಂದ ಟೀಕೆ ಮತ್ತು ದೂರುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ರಾಜ್ಯದಲ್ಲಿಯೂ ಉತ್ತರ ಪ್ರದೇಶದ ಮಾದರಿಯ “ವಿಮರ್ಶೆ ಸಭೆಗಳನ್ನು” ನಡೆಸಲಾಗುತ್ತಿದೆ ಎನ್ನಲಾಗಿದೆ.
ಒಂದು ಕಾಲದಲ್ಲಿ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದ್ದಾರೆ. ತಮ್ಮ ಖಾತೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದಾರೆಂದು ಆರೋಪಿಸಿ ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಪತ್ರ ಬರೆದಿದ್ದರು. ಐದು ಪುಟಗಳ ಪತ್ರದಲ್ಲಿ ಯಡಿಯೂರಪ್ಪ ಅವರ ಸರ್ವಾಧಿಕಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದರು.
“ಅರುಣ್ ಸಿಂಗ್ ಅವರು ಒಬ್ಬ ರಾಷ್ಟ್ರೀಯ ನಾಯಕ. ಅವರು ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ನಾಯರುಕ ಯಾವುದೇ ನಿರ್ಧಾರ ತೆಗೆದುಕೊಂಡರೂ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೇಳುತ್ತಾರೆ” ಎಂದು ಈಶ್ವರಪ್ಪ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ರಾಜ್ಯ ಬಿಜೆಪಿಯಲ್ಲಿಯೇ ಅನೇಕರು ಮುಂದಾಗಿದ್ದು, ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೈಕಮಾಂಡ್ ಹೇಳಿದರೇ ರಾಜೀನಾಮೆ ನಿಡುವುದಾಗಿ ತಿಳಿಸಿದ್ದ ಸಿಎಂ, ನಂತರ ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದಾರೆ. ಸದ್ಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜೀನಾಮೆ, ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿ ಎಂದ ಬಿ.ಎಸ್.ಯಡಿಯೂರಪ್ಪ


