ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿ ಎಂದ ಬಿ.ಎಸ್.ಯಡಿಯೂರಪ್ಪ

ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ರಾಜೀನಾಮೆ ಚರ್ಚೆಗೆ ತೆರೆ ಎಳೆದಿದ್ದಾರೆ.

ಹಾಸನದಲ್ಲಿ ಶುಕ್ರವಾರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ’ಬಿಜೆಪಿ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನ್ನ ಮೇಲೆ ಇರಿಸಿರುವ ವಿಶ್ವಾಸ ಉಳಿಸಿಕೊಳ್ಳಲು ಎರಡು ವರ್ಷ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಕಳೆದ ವಾರವಷ್ಟೇ ಹೈಕಮಾಂಡ್ ಸೂಚಿಸಿದರೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಹಲವು ಚರ್ಚೆಗೆ ಕಾರಣವಾಗಿದ್ದು, ಹೈಕಮಾಂಡ್ ಎಲ್ಲಿಯವರೆಗೆ ನನ್ನ ಮೇಲೆ ವಿಶ್ವಾಸ ಇಟ್ಟಿರುತ್ತಾರೋ ಅಲ್ಲಿಯವರೇಗು ಸ್ಥಾನದಲ್ಲಿ ಮುಂದುವರೆಯುತ್ತೇನೆ. ಯಾವಾಗ ರಾಜೀನಾಮೆ ನೀಡಲು ಹೇಳುತ್ತಾರೋ ಆಗಲೇ ಕೊಡುತ್ತೇನೆ’ ಎಂದಿದ್ದರು.

ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು

’ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಇಲ್ಲ ಎಂದು ನಾನು ಹೇಳುವುದಿಲ್ಲ. ದೇಶ, ರಾಜ್ಯದಲ್ಲಿ ಪರ್ಯಾಯ ನಾಯಕರು ಇರುತ್ತಾರೆ. ಆಯಾ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ, ಹೈಕಮಾಂಡ್ ಸೂಚನೆ ನೀಡಿದರೆ ಯಾವುದೇ ಗೊಂದಲವಿಲ್ಲದೆ ರಾಜೀನಾಮೆ ಕೊಡುತ್ತೇನೆ’ ಎಂದು ಹೇಳಿದ್ದರು.

ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಕಿತ್ತುಹಾಕಲು ಹೈಕಮಾಂಡ್, ರಾಜ್ಯದ ನಾಯಕರು ಸಿದ್ದರಿದ್ದಾರೆ. ಆದರೆ ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ. ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ ಎಂದು ಹೇಳಿದ್ದರು.

’ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆ ಇರುತ್ತವೆ. ಹಾಗೆಯೇ ಯಡಿಯೂರಪ್ಪನವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರಗಾರಿಕೆ ಇದೆ. ಯಡಿಯೂರಪ್ಪ ಗಟ್ಟಿ ಮನುಷ್ಯ, ಅವರ ಹೇಳಿಕೆಯನ್ನು ಎರಡು-ಮೂರು ರೀತಿಯಲ್ಲಿ ವಿಶ್ಲೇಷಿಸಬಹದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದರು.

ನಾನೇ ಮುಂದಿನ ಎರಡು ವರ್ಷಕ್ಕೆ ಸಿಎಂ ಎನ್ನುವ ಮೂಲಕ ಈಗ ಎಲ್ಲಾ ಚರ್ಚೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ.


ಇದನ್ನೂ ಓದಿ: ಹಿಂದೂ ಸಂಘಟನೆಗಳ ವಿರೋಧ: ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ

LEAVE A REPLY

Please enter your comment!
Please enter your name here