ಕೇಂದ್ರ ಸರ್ಕಾರದ ವ್ಯಾಕ್ಸಿನೇಷನ್ ನೀತಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಕೇಂದ್ರದ ಲಸಿಕಾ ನೀತಿ, ವಿಭಿನ್ನ ದರ ನಿಗದಿ, ಲಸಿಕೆಗಳ ಕೊರತೆ ಮತ್ತು ನಿಧಾನಗತಿಯ ಲಸಿಕಾ ಅಭಿಯಾನಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕಳೆದ ವಾರ ಉನ್ನತ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಲಸಿಕಾ ನೀತಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರವು ಅಫಿಡವಿಟ್ ಸಲ್ಲಿಸಿತ್ತು. ಅಫಿಡವಿಟ್‌ನಲ್ಲಿ ತನ್ನ ಲಸಿಕಾ ನೀತಿಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದು, ಇದರಲ್ಲಿ ನ್ಯಾಯಾಂಗದ ಹಸ್ತಕ್ಷೇಪವನ್ನು ವಿರೋಧಿಸಿದೆ.
ಕೇಂದ್ರ ಸರ್ಕಾರದ ವ್ಯಾಕ್ಸಿನೇಷನ್ ನೀತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪವುವನ್ನು ವಿರೋಧಿಸಿರುವ ಕೇಂದ್ರ, ಇದು ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಾನು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯ ತುರ್ತು ಬಳಕೆಗೆ ಅನುಮೋದಿಸಿದ ಡಿಸಿಜಿಐ!
ಸೋಮವಾರ ಬೆಳಗ್ಗೆ ಕೇಂದ್ರ ಸರ್ಕಾರದ ಅಫಿಡವಿಟ್ ಬಗ್ಗೆ ವಿಚಾರಣೆ ವೇಳೆ ಹಲವು ತಾಂತ್ರಕ ಸಮಸ್ಯೆಗಳು ಕಂಡು ಬಂದಿದ್ದು, ವಿಚಾರಣೆ ತಡವಾಗಿ ಆರಂಭವಾಗಿತ್ತು. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ಎಸ್ ರವೀಂದ್ರ ಭಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
“ಸರ್ವರ್ ಇಂದು ಸ್ಥಗಿತಗೊಂಡಿದೆ. ನಾವು ನ್ಯಾಯಾಧೀಶರು ನಮ್ಮ ನಡುವೆ ಚರ್ಚೆ ನಡೆಸಿದ್ದೇವೆ ಮತ್ತು ಗುರುವಾರ ಈ ವಿಷಯವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ” ಎಂದು ನ್ಯಾಯಾಲಯ ತಿಳಿಸಿದೆ.
ಕೊರೊನಾ ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕೇಂದ್ರಗಳು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಿಭಿನ್ನ ಬೆಲೆಗಳನ್ನು ಘೋಷಿಸಿದ ನಂತರ ಈ ಲಸಿಕಾ ನೀತಿಯ ಬಗ್ಗೆ ಹಲವು ಟೀಕೆಗಳು, ಆಕ್ರೋಶ ದೇಶಾದ್ಯಂತ ಆರಂಭವಾಗಿದ್ದವು. ಸಾರ್ವಜನಿಕ ವಲಯದ ಆಕ್ರೋಶದ ನಂತರವೇ ಬೆಲೆಗಳು ಕಡಿಮೆಯಾದವು.
ಬೆಲೆಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರಕ್ಕೆ ನಿರ್ದೇಶನ ನೀಡಿ, “ಇದು ಆರ್ಟಿಕಲ್ 14 (ಕಾನೂನಿನ ಮುಂದೆ ಸಮಾನತೆ) ಮತ್ತು ಆರ್ಟಿಕಲ್ 21 (ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ)ವನ್ನು ಪಾಲಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಹೇಳಿತ್ತು.
ಭಾರತವು ಜನವರಿಯಲ್ಲಿ ವ್ಯಾಕ್ಸಿನೇಷನ್ ಪ್ರಾರಂಭಿಸಿದೆ. ಇದುವರೆಗೆ 17 ಕೋಟಿ ಡೋಸ್‌ಗಳನ್ನು ನೀಡಿದೆ ಎನ್ನಲಾಗಿದೆ. ಆದರೆ ಲಸಿಕಾ ಅಭಿಯಾನದ ವೇಗವನ್ನು ಪ್ರಶ್ನಿಸಲಾಗಿದೆ, ಜೊತೆಗೆ ರಾಜ್ಯಗಳಲ್ಲಿ ಸ್ಟಾಕ್ ಮುಗಿದು ಲಸಿಕಾ ಕೇಂದ್ರಗಳನ್ನು ಮುಚ್ಚುತ್ತಿವೆ.
ರಾಷ್ಟ್ರ ರಾಜಧಾನಿ ದೆಹಲಿ, ಮಧ್ಯಪ್ರದೇಶ, ಕರ್ನಾಟಕ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಡೋಸೇಜ್‌ಗಳ ಕೊರತೆಯಿಂದಾಗಿ ಮೂರನೇ ಹಂತದ ಲಸಿಕೆ ಅಭಿಯಾನದ ಆರಂಭವನ್ನು ಮುಂದೂಡಿದೆ.
ವ್ಯಾಕ್ಸಿನೇಷನ್ ಮತ್ತು ವೈದ್ಯಕೀಯ ಸಂಪನ್ಮೂಲಗಳ ಲಭ್ಯತೆ, ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಸುತ್ತಲಿನ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಆಮ್ಲಜನಕ ಮತ್ತು ವ್ಯಾಕ್ಸಿನೇಷನ್ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ತನ್ನಿ: ಕೇಂದ್ರಕ್ಕೆ ಸುಪ್ರೀಂ


